ಮಹಿಳಾ ದಿನ ವಿಶೇಷ | ವೆನ್ನೆಲ‌ ಗದ್ದರ್‌ ಮತ್ತು ಅರುಳ್ ಮೌಳಿ ಎಂಬ ಹೋರಾಟಗಾರ್ತಿಯರು

Most read

ಸಿಕಂದರಾಬಾದಿನಲ್ಲಿ ವಾಸಿಸುತ್ತಿರುವ ಡಾ. ಜಿ. ವಿ. ವೆನ್ನೆಲ (ಗುಮ್ಮಾಡಿ ವಿಠ್ಠಲರಾವ್ ವೆನ್ನೆಲ) ಉದಯೋನ್ಮುಖ ರಾಜಕಾರಣಿಯಾಗಿದ್ದಾರೆ. ಹೋರಾಟಗಾರರ, ಜನಸಮುದಾಯಗಳ ಮನದಲ್ಲಿ ‘ಗದ್ದರ್’ ಎಂದು ಜನಪ್ರಿಯರಾಗಿರುವ ಜನಕವಿ, ಕ್ರಾಂತಿಕಾರಿ ಹಾಡುಗಾರ ಗದ್ದರ್ ಮತ್ತು ವಿಮಲಾ ಅವರ ಮಗಳು ವೆನ್ನೆಲ. ಕ್ರಾಂತಿಯ ಕನಸಿನ ತಂದೆ ಆಳುವವರ ಕೆಂಗಣ್ಣಿಗೆ ಗುರಿಯಾಗಿ, ಭೂಗತರಾಗಿ, ಕುಟುಂಬದವರಿಗೂ ಎಲ್ಲಿರುವರೆಂಬ ಸುಳಿವು ಸಿಗದಂತೆ ಬದುಕಬೇಕಿದ್ದ ದಿನಗಳಲ್ಲಿ ತಾಯಿ ವಿಮಲಾ ತಮ್ಮ ಮಕ್ಕಳನ್ನು ಅತ್ಯಂತ ಕಷ್ಟದಿಂದ, ಜತನದಿಂದ ಬೆಳೆಸಿದರು. ಪದೇಪದೇ ಮನೆ, ವಿಳಾಸ, ಉದ್ಯೋಗ ಬದಲಿಸುತ್ತ ತಮ್ಮ ಮತ್ತು ಮಕ್ಕಳ ಪತ್ತೆ ಸಿಗದಂತೆ ಸುರಕ್ಷಿತವಾಗಿರುವಂತೆ ನೋಡಿಕೊಂಡರು. ಪ್ರತಿದಿನವೂ ನೋಡಲು, ಮಾತನಾಡಲು ತಂದೆ ಸಿಗದಿದ್ದರೂ  ಅವರ ಪ್ರಭಾವದಲ್ಲಿ ವೆನ್ನೆಲ ಮತ್ತು ಸೋದರರು ಬೆಳೆದರು. 

ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಅಭದ್ರ ಪರಿಸ್ಥಿತಿ ಎದುರಿಸುತ್ತ ಬೆಳೆದರೂ ವೆನ್ನೆಲ ಓದಿನಲ್ಲಿ ಸದಾ ಮುಂದಿದ್ದರು. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪದವಿಯನ್ನೂ, ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಪಿಎಚ್‌ಡಿಯನ್ನೂ, ಸ್ಕೂಲ್ ಮ್ಯಾನೇಜ್‌ಮೆಂಟಿನಲ್ಲಿ ಪಿಜಿ ಡಿಪ್ಲೊಮಾವನ್ನೂ ಪಡೆದರು. ಸಮಸಮಾಜದ ಸಾಕಾರಕ್ಕಾಗಿ ತಂದೆ ಗದ್ದರ್ ಸಿಕಂದರಾಬಾದಿನ ಅಲವಾಳದಲ್ಲಿ ಬಡಮಕ್ಕಳಿಗೆ ಉಚಿತ, ಉತ್ತಮ ಶಿಕ್ಷಣ ನೀಡುವ ಕನಸಿನಿಂದ ಆರಂಭಿಸಿದ ಮಹಾಬೋಧಿ ವಿದ್ಯಾಲಯದಲ್ಲಿ 18 ವರ್ಷಗಳ ಹಿಂದಿನಿಂದ ಬೋಧಿಸುತ್ತಿದ್ದಾರೆ. 10 ವರ್ಷಗಳಿಂದ ಶಾಲೆಯ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 

ಕಳೆದ ವರ್ಷ ತಮ್ಮ ತಂದೆಯ ಮರಣಾನಂತರ ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದ ವೆನ್ನೆಲ, ಸಿಕಂದರಾಬಾದಿನ ಕಂಟೋನ್ಮೆಂಟ್ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಅವರ ಎದುರು ಐದು ಬಾರಿ ಎಂಎಲ್‌ಎ ಆಗಿದ್ದ ಸಾಯಣ್ಣ ಅವರ ಮಗಳು ಲಾಸ್ಯ ನಂದಿತಾ ಎಂಬ ಇಂಜಿನಿಯರ್ ಬಿಆರೆಸ್‌ನಿಂದ ಸ್ಪರ್ಧಿಸಿದರು. ಸಿಕಂದರಾಬಾದ್ ಎಂಬ ಮಹಾನಗರದಲ್ಲಿದ್ದರೇನು, ಕಂಟೋನ್ಮೆಂಟ್ ಪ್ರದೇಶದಲ್ಲಿ ಆಗಬೇಕಾದ ಕೆಲಸಗಳು ಸಾಕಷ್ಟಿವೆ ಎಂದರಿತ ವೆನ್ನೆಲ, ‘ಶಿಕ್ಷಣ, ಆರೋಗ್ಯ, ಉದ್ಯೋಗ’ ಎಂಬ ಮೂರಂಶಗಳನ್ನಿಟ್ಟುಕೊಂಡು ಚುನಾವಣೆಗಿಳಿದರು. ಕ್ಷೇತ್ರದ ತುಂಬ ಪಾದಯಾತ್ರೆ ಮಾಡಿ ಜನರ ನಾಡಿ ಮಿಡಿತ ಅರಿಯಲೆತ್ನಿಸಿದರು. ಆದರೂ 17 ಸಾವಿರಕ್ಕೂ ಮಿಕ್ಕಿ ಮತಗಳ ಅಂತರದಿಂದ ಲಾಸ್ಯ ಗೆದ್ದರು. (ಆದರೆ ಅವರು ಭೀಕರ ರಸ್ತೆ ಅಪಘಾತದಲ್ಲಿ ಇದೇ ಫೆಬ್ರುವರಿ 23ರಂದು ತೀರಿಕೊಂಡರು.) 43 ವರ್ಷದ ಎರಡು ಮಕ್ಕಳ ತಾಯಿ ವೆನ್ನೆಲ ತನ್ನ ತಂದೆಯ ಕನಸುಗಳನ್ನು ಸಾಕಾರಗೊಳಿಸಲು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವುದು ತನ್ನ ಗುರಿ ಎನ್ನುತ್ತಾರೆ. ಭ್ರಷ್ಟ, ಮೇಲ್ಜಾತಿಗಳ ಯಜಮಾನಿಕೆಗೆ ತುತ್ತಾಗಿರುವ, ಅಪರಾಧಿಗಳಿಂದ ತುಂಬಿ ಹೋಗಿರುವ ರಾಜಕೀಯ ರಂಗವನ್ನು ಸ್ವಚ್ಛಗೊಳಿಸಿ, ಬದಲಿಸುವುದೇ ತನ್ನ ಆಶಯ ಎನ್ನುತ್ತಾರೆ. ಅವರಿಗಿರುವ ಕೌಟುಂಬಿಕ, ಸಾಮಾಜಿಕ ಹಿನ್ನೆಲೆ, ಶಿಕ್ಷಣಗಳ ಜೊತೆಗೆ ಜನಬೆಂಬಲವೂ ಒದಗಿ ಬಂದರೆ ಭವಿಷ್ಯದ ಉಜ್ವಲ ಜನ ನಾಯಕಿಯಾಗುವ, ಹೋರಾಟಗಾರ್ತಿಯಾಗವ ಸಾಧ್ಯತೆಗಳು ದಟ್ಟವಾಗಿವೆ. 

ಡಾ. ಜಿ. ವಿ. ವೆನ್ನೆಲ ಇದೇ ಮಾರ್ಚ್ 9ರಂದು ಉಡುಪಿಯಲ್ಲಿ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ವತಿಯಿಂದ ನಡೆಯಲಿರುವ ಮಹಿಳಾ ಚೈತನ್ಯ ದಿನ’ ಮೆರವಣಿಗೆ, ಹಕ್ಕೊತ್ತಾಯ ಜಾಥಾದಲ್ಲಿ ಪಾಲ್ಗೊಳ್ಳಲು ಸಿಕಂದರಾಬಾದಿನಿಂದ ಬರಲಿದ್ದಾರೆ.

ಇದನ್ನೂ ಓದಿ- ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟ : ಹಿನ್ನೋಟ

*****

ಎ. ಅರುಳ್ ಮೌಳಿ, ಚೆನ್ನೈ

ಮದರಾಸು ಉಚ್ಚ ನ್ಯಾಯಾಲಯದಲ್ಲಿ 1988ರಿಂದ ನ್ಯಾಯವಾದಿಯಾಗಿರುವ ಎ. ಅರುಳ್ ಮೌಳಿ ಖ್ಯಾತ ವಕೀಲೆ, ಮಾನವಹಕ್ಕು ಹೋರಾಟಗಾರ್ತಿ, ಬರಹಗಾರ್ತಿ ಮತ್ತು ವಾಗ್ಮಿ. ತಮಿಳುನಾಡಿನ ಸೇಲಂ ಪಟ್ಟಣದಲ್ಲಿ ಹುಟ್ಟಿ ಬೆಳೆದ ಅರುಳ್, ಸಾಮಾಜಿಕ ಚಿಂತನೆಗಳ ಕೌಟುಂಬಿಕ ಹಿನ್ನೆಲೆಯವರು. ಅವರ ತಂದೆ ತಮಿಳು ಭಾಷಾ ಪಂಡಿತರು. ತಾಯಿ ಮುದ್ರಣಾಲಯವನ್ನು ನಡೆಸುತ್ತಿದ್ದರು. ಅವರಿಬ್ಬರೂ ಪೆರಿಯಾರ್ ಅವರ ಕಟ್ಟಾ ಅನುಯಾಯಿಗಳು. ತಮಿಳ್ ನಾಡನ್ ಎನ್ನುವವರು ತಮಿಳಿಗೆ ಅನುವಾದಿಸಿದ್ದ ಮನುಸ್ಮೃತಿಯನ್ನು ಪ್ರಕಟಿಸಿದ್ದರು. 

1968ರಲ್ಲಿ ನಾಲ್ಕು ವರ್ಷವಾಗಿದ್ದಾಗಲೇ ಸೇಲಂನಲ್ಲಿ ನಡೆದ ದ್ರಾವಿಡ ಕಳಗಂ ಸಭೆಯಲ್ಲಿ ಪೆರಿಯಾರರ ಎದುರು ಬಾಲೆ ಅರುಳ್ ಭಾಷಣ ಮಾಡಿದ್ದರು. 1978ರ ನಂತರ, 14 ವರ್ಷ ತುಂಬಿದ ಹುಡುಗಿಯಿರುವಾಗಲಿಂದ ದ್ರಾವಿಡ ಕಳಗಂ ಸಭೆಗಳಲ್ಲಿ ಅವರು ಮಾತನಾಡುತ್ತ ಬಂದಿದ್ದಾರೆ. ಅಷ್ಟೇ ಅಲ್ಲ, ಸಮಾನ ಮನಸ್ಕರ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ರಾಜಕೀಯ ಚರ್ಚೆಗಳಲ್ಲೂ ಪಾಲ್ಗೊಂಡಿದ್ದಾರೆ. ಪ್ರಸ್ತುತ ದ್ರಾವಿಡ ಕಳಗಂ ವಕ್ತಾರರಾಗಿ ಮಾಧ್ಯಮದ ಡಿಬೇಟುಗಳಲ್ಲೂ ಪಾಲ್ಗೊಳ್ಳುವ ಅರುಳ್, ಲಿಂಗಸೂಕ್ಷ್ಮತೆ, ಸ್ತ್ರೀವಾದಿ ಚಿಂತನೆ, ದ್ರಾವಿಡ ಚಿಂತನೆಗಳ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ. ಈಗ ದ್ರಾವಿಡ ಕಳಗಂನ ಪ್ರಚಾರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು, ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಸಾಮಾಜಿಕ ನ್ಯಾಯ ಕುರಿತು ನಡೆಯುವ ಹಲವಾರು ಸಭೆ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಅಮೆರಿಕ, ಕೆನಡ, ಆಸ್ಟ್ರೇಲಿಯಾ, ಜರ್ಮನಿ, ಮಲೇಷ್ಯಾ, ಸಿಂಗಾಪುರಗಳಿಗೂ ಇದೇ ಉದ್ದೇಶಗಳಿಗೆ ಭೇಟಿ ನೀಡಿದ್ದಾರೆ. 

ಉಚ್ಚ ನ್ಯಾಯಾಲಯದಲ್ಲೂ ಪ್ರಕರಣಗಳನ್ನು ತಮಿಳಿನಲ್ಲೇ ವಾದಿಸಬಯಸುವ ಅರುಳ್, ರಿಟ್, ಸೇವಾ ವಿಷಯಗಳು, ಸಿವಿಲ್ ಮತ್ತು ಕೌಟುಂಬಿಕ ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ ಯಾವುದೇ ಪ್ರಕರಣವು ಸಾಮಾಜಿಕವಾಗಿ ಪ್ರಮುಖವೆನಿಸಿದರೆ ಅದನ್ನು ತೆಗೆದುಕೊಂಡು ವಾದಿಸುತ್ತಾರೆ. 

ಸಮಾಜದಲ್ಲಿ ಎಲ್ಲ ತರಹದ ಅಸಮಾನತೆ ಅಳಿಯಲು, ಲಿಂಗ ಸಮಾನತೆ ನೆಲೆಯಾಗಲು, ಕಂಪ್ಯೂಟರ್ ಬಂದರೂ ಅದರಲ್ಲೂ ಜಾತಕ ನೋಡುವ ಮೌಢ್ಯ ಅಳಿಯಲು ಪೆರಿಯಾರ್ ಚಿಂತನೆಗಳು ಅತ್ಯಗತ್ಯ; ಬದುಕಿಗೆ ಬೇಕಿರುವುದು ಶಿಸ್ತೇ ಹೊರತು ಭಕ್ತಿಯಲ್ಲ ಎಂದು ನಂಬಿರುವ ಅರುಳ್ ಮೌಳಿ, ಇದೇ ಮಾರ್ಚ್ 8ರಂದು ಉಡುಪಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ‘ಮಹಿಳಾ ಚೈತನ್ಯ ದಿನ’ದ ಭಾಗವಾಗಿ ನಡೆಯಲಿರುವ ‘ಮಹಿಳಾ ಪ್ರಾತಿನಿಧ್ಯ: ಆಶಯ, ವಾಸ್ತವ’ ಎಂಬ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲು ಚೆನ್ನೈನಿಂದ ಬರಲಿದ್ದಾರೆ. 

ಬನ್ನಿ, ನಮ್ಮ ಅತಿಥಿಗಳ ದನಿಗೆ ದನಿಗೂಡಿಸೋಣ.

ಡಾ. ಎಚ್‌ ಎಸ್‌ ಅನುಪಮಾ

ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ

More articles

Latest article