ನಮ್ಮ ಬದುಕಿನ ಖಾಸಗಿ ಕ್ಷಣಗಳನ್ನು ಕೂಡಾ ಸಮಾಜದಲ್ಲಿ ಹಾಸುಹೊಕ್ಕಿರುವ ಲಿಂಗತಾರತಮ್ಯವು ಹೇಗೆ ಗಾಢವಾಗಿ ಆವರಿಸಿಕೊಂಡಿದೆ ಎನ್ನುವುದನ್ನು ನಾನು ಅರಿತೆ. ಲಿಂಗತ್ವ ಪರಿಕಲ್ಪನೆಗಳಿಂದಾಗಿ ಹೆಂಗಸರು ಹೊತ್ತುಕೊಂಡಿರುವ ಭಾರವನ್ನು ಗಂಡಸರು ಹಾಗೂ ಗಂಡಸರು ಹೊತ್ತಿರುವುದನ್ನು ಹೆಂಗಸರು ಅರಿಯದವರಾಗಿದ್ದಾರೆ. ಲಿಂಗತ್ವದ ಪರದೆ ಸರಿದಾಗ ಮಾತ್ರ ನಮ್ಮ ಬದುಕು, ಧೋರಣೆ, ಮೌಲ್ಯಗಳನ್ನು ಹೊಸದಾಗಿ ಕಟ್ಟುವುದಕ್ಕೆ ಸಾಧ್ಯ ಎಂಬ ಸರಳ ಸತ್ಯವನ್ನು ಅರಗಿಸಿಕೊಂಡೆ. ಹೀಗೆ ಹೊಸದಾಗಿ ಕಟ್ಟಲು ಹೆಣ್ಣು ಗಂಡಿನ ಸಮಾನ ಸಹಭಾಗಿತ್ವದ ಹಲವು ಸುಂದರ ಮಾದರಿಗಳನ್ನು ಪ್ರೀತಿಯಿಂದ ಗೌರವದಿಂದ ಸ್ವೀಕರಿಸುವುದು ಅವಶ್ಯ. ಇಂದಿನ ಗಂಡುತನದ ಸಮಾಜದಲ್ಲಿ ಅಂತಹ ಒಂದು ಮಾದರಿಯಾಗಿ ಗುರುತಿಸಿಕೊಳ್ಳಲು ನಾನು ಹೆಮ್ಮೆ ಪಡುತ್ತೇನೆ- ಶ್ರೀನಿವಾಸ ಕಾರ್ಕಳ
ಸಾಯಂಕಾಲದ ಐದೂವರೆ ಗಂಟೆಯಾಗುತ್ತಾ ಬಂತು. ಆಕೆ ಇನ್ನೇನು ಬರುವ ಹೊತ್ತಾಯಿತು. ಬಾಗಿಲ ಬಳಿ ಹೋಗಿ, ಕತ್ತು ಉದ್ದಮಾಡಿ ರಸ್ತೆಯ ಕಡೆಗೇ ನೋಡುತ್ತೇನೆ. ಇಲ್ಲ, ಆಫೀಸಿನಿಂದ ಐದೂವರೆಗೆ ಹೊರಟು, ಅಲ್ಲಿಂದ ಕೊಂಕಣಿ ಅಂಗಡಿಗೆ ಹೋಗಿ ಹಾಲು ತರಕಾರಿ ಇತ್ಯಾದಿ ಖರೀದಿಸಿ ಬರುವಾಗ ಏನಿಲ್ಲವೆಂದರೂ ಆರು ಗಂಟೆಯಾದರೂ ಆದೀತು. ಅಷ್ಟು ದೂರವನ್ನು ನಡೆದುಕೊಂಡೇ ಬರಬೇಕಲ್ಲವೇ?
ಐದೂಮುಕ್ಕಾಲು ಕಳೆದು ಆರೂಕಾಲು ಆಗುತ್ತಾ ಬಂತು. ಯಾಕೆ ಇನ್ನೂ ಕಾಣಿಸುತ್ತಿಲ್ಲ? ಹಾಲು ಕೆಡಬಾರದಲ್ಲ, ಅದನ್ನು ಒಲೆಯ ಮೇಲೆ ಇಟ್ಟು ಮತ್ತೆ ಬಾಗಿಲ ಬಳಿ ಬಂದು ರಸ್ತೆಯ ಕಡೆಗೇ ನೋಡುತ್ತೇನೆ. ಸರಿ ಸುಮಾರಾಗಿ ಈ ಹೊತ್ತು ಬರುತ್ತಿರುತ್ತಾಳಲ್ಲ… ನಿಮಿಷಗಳು ಗಂಟೆಗಳಾಗುತ್ತಿವೆ. ಎದೆಬಡಿತ ಹೆಚ್ಚುತ್ತಿದೆ. ಏನೇನೋ ಕೆಟ್ಟ ಯೋಚನೆಗಳು. ಅಲ್ಲಿ ಇಲ್ಲಿ ಅಪಘಾತಗಳಾಗುವ ಸುದ್ದಿ ಗಳು. ರಸ್ತೆಯಲ್ಲಿ ನಡೆದಾಡುವವರೂ ಸುರಕ್ಷಿತರಲ್ಲ. ಅದೇ ಹೊತ್ತಿನಲ್ಲಿ ಅಕಸ್ಮಾತ್ ಫೋನ್ ರಿಂಗಣಿಸಿದರಂತೂ ಎದೆ ನಿಂತು ಹೋಗು ವಂತಹ ಆತಂಕ. ಏನೂ ಆಗದಿರಲಿ ಹಾರೈಸುತ್ತೇನೆ. “ನಿಮಗೆ ಗಾಬರಿಯಾಗಬಹುದು ಎಂದು ನಿಮ್ಮಲ್ಲಿ ಹೇಳಿರಲೇ ಇಲ್ಲ, ಮೊನ್ನೆ ಏನಾಯಿತು ಗೊತ್ತುಂಟಾ? ನಾನು ಬಸ್ ಕಾಯುತ್ತಾ ನಿಂತಿದ್ದೆ, ಭಯಂಕರ ಬಿಸಿಲು ಅಲ್ವಾ, ಹಾಗಾಗಿ ನೆರಳಿಗೆಂದು ತೆಂಗಿನ ಮರದ ಕೆಳಗೆ ನಿಂತಿದ್ದೆ. ಇನ್ನೂ ಬಸ್ ಬಂದಿರಲಿಲ್ಲ. ಅಷ್ಟಾಗುವಾಗ ಧಡಾರನೆ ಒಂದು ತೆಂಗಿನಕಾಯಿ ಬೀಳಬೇಕಾ! ಒಂದಿಷ್ಟೇ ಇಷ್ಟು ಮಾರಾಯ್ರೆ, ತಲೆಗೆ ಬೀಳುತ್ತಿದ್ರೆ ಪಡ್ಚ!” ಎಂದು ಯಾವತ್ತೋ ಹೇಳಿದ್ದು ನೆನಪಾಗುತ್ತಿದೆ. ಯಾಕೆ ಹೇಳಿದಳೋ ಏನೋ. ಹಾಗೇನೂ ಆಗದಿರಲಿ. ಎಷ್ಟೇ ಸಮಾಧಾನ ಹೇಳಿಕೊಂಡರೂ ಸಮಾಧಾನ ಆಗುತ್ತಿಲ್ಲ.
ಹಾಲು ಬಿಸಿಯಾದುದನ್ನು ನೆನಪಿಸಲು ಕುಕ್ಕರ್ ಶಿಳ್ಳೆ ಹೊಡೆಯುತ್ತಿದೆ. ಸ್ಟೌ ನತ್ತ ಮುಂದೆ ಮುಂದೆ ಹೋಗುತ್ತೇನೆ ಮನಸ್ಸು ಹಿಂದೆ ಹಿಂದೆ ಓಡುತ್ತದೆ –
ಪ್ರೀತಿಸಿ ಮದುವೆಯಾಗಿ 11 ವರ್ಷ ನಾನು ಆಕೆಯನ್ನೂ ನನ್ನ ಮಗನನ್ನೂ ಪ್ರೀತಿಯಿಂದ ಕಾಳಜಿಯಿಂದ ಸಾಕಿದ್ದೆ. ತುಂಬ ಸಂತಸದ ದಿನಗಳವು. ಆಕೆ ಪ್ರತಿಭಾವಂತೆಯಾಗಿದ್ದರೂ ನನಗಾಗಿ ಮನೆಯಲ್ಲೇ ಉಳಿದಿದ್ದಳು. ನನ್ನದು ಶಿಫ್ಟ್ ಕೆಲಸಗಳು. ಅಲ್ಲದೆ ಮಗ ಚಿಕ್ಕವನು. ಮನೆ ಖರ್ಚಿನ ಹಣ ನಾನು ಕೊಡುತ್ತಿದ್ದೆ ಎನ್ನುವುದನ್ನು ಬಿಟ್ಟರೆ ಮನೆಯನ್ನೆಲ್ಲ ಆಕೆಯೇ ನೋಡಿಕೊಳ್ಳುತ್ತಿದ್ದಳು. ನನಗಾದರೋ ಹತ್ತಾರು ಹವ್ಯಾಸಗಳು (ಚಟಗಳು ಎಂದರು ಸರಿಯೇ). ನಾಟಕ, ಸಾಹಿತ್ಯ, ಚಾರಣ, ಅದೂ ಇದೂ ಎಂದು ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಓಡಾಡುತ್ತಿದ್ದೆ. ಬದುಕು ಅತ್ಯಂತ ಸಂತಸಮಯವಾಗಿದ್ದ ದಿನಗಳವು. ಅಂತಹ ಒಂದು ದಿನವೇ ಅವಘಡವೊಂದು ಸಂಭವಿಸಿ ಬಿಟ್ಟಿತು. ಬೆನ್ನು ಮೂಳೆಗೆ ತೀವ್ರ ಜಖಂ ಆಗಿ ಹಾಸಿಗೆ ಹಿಡಿದೆ. ನನ್ನನ್ನು ಆಕೆ ಆಸ್ಪತ್ರೆಗೆ ಒಯ್ದಳು, ಚಿಕಿತ್ಸೆ ಕೊಡಿಸಿದಳು, ಮಗನನ್ನೂ ಮನೆಯನ್ನೂ ನೋಡಿಕೊಂಡಳು. ನಾನು ಮೊದಲಿನಂತೆ ಓಡಾಡಲಾರೆ, ಮೊದಲಿನ ಕೆಲಸ ಮಾಡಲಾರೆ ಎನ್ನುವ ಪರಿಸ್ಥಿತಿ ನಿರ್ಮಾಣವಾದಾಗ ತಾನೇ ದುಡಿಮೆಗೆ ಹೋಗಲಾರಂಭಿಸಿದಳು. ನಮ್ಮನ್ನು ಆಕೆಯೇ ಸಾಕಲಾರಂಭಿಸಿದಳು.
ಪರಿಸ್ಥಿತಿ ಪೂರ್ತಿ ತಿರುವು ಮುರುವಾಯಿತು. ಹೊರಗೆ ಹೋಗಿ ದುಡಿಯುತ್ತಿದ್ದ ನಾನು ಮನೆಯಲ್ಲಿ ನಿಲ್ಲುವಂತಾಯಿತು. ಮನೆಯಲ್ಲಿ ಇದ್ದ ಆಕೆ ಹೊರಗಡೆ ದುಡಿಯುವಂತಾಯಿತು. ‘ಹೊರಬೇಕಾದವನೇ ಹೊರೆಯಾದೆನಲ್ಲ’ ಎಂದು ಸಂಕಟಪಡುತ್ತಿದ್ದೆ. ನಾನು ದುಡಿಯ ಹೋಗುವಾಗ ಮನೆಯ ಬಗ್ಗೆ ನನಗೆ ಯಾವ ಚಿಂತೆಯೂ ಇರಲಿಲ್ಲ. ಆಕೆಯಾದರೋ ಹೊರಗಡೆಯೂ ದುಡಿಯಬೇಕು, ಮನೆಯಲ್ಲಿಯೂ ದುಡಿಯಬೇಕು, ಮಗನ ಶಾಲಾ ಚಟುವಟಿಕೆಯನ್ನೂ ನೋಡಿಕೊಳ್ಳಬೇಕು, ನನ್ನ ಚಿಕಿತ್ಸೆ ಇತ್ಯಾದಿ ಆರೈಕೆಯನ್ನೂ ಮಾಡಬೇಕು. ಬಹುಪಟ್ಟು ದುಡಿಮೆ ಆಕೆಯದು.
ಇದನ್ನೂ ಓದಿ-ಮಹಿಳಾ ದಿನ ವಿಶೇಷ | ವೆನ್ನೆಲ ಗದ್ದರ್ ಮತ್ತು ಅರುಳ್ ಮೌಳಿ ಎಂಬ ಹೋರಾಟಗಾರ್ತಿಯರು
ಇಷ್ಟೂ ಸಾಲದೆಂಬಂತೆ, ಅಂತಿಮವಾಗಿ ಕಂಪೆನಿಯ ವಸತಿಗೃಹವನ್ನೂ ತೊರೆಯುವುದು ಅನಿವಾರ್ಯವಾಯಿತು. ಆಗ ಗೆಳೆಯರ ಮತ್ತು ನನ್ನ ಉಳಿತಾಯದ ಹಣದ ಸಹಾಯದಿಂದ ಮನೆಯೊಂದನ್ನು ಕಟ್ಟಿಸಲು ಆರಂಭಿಸಿದೆವು. ಕಚೇರಿ ಕೆಲಸಗಳ ನಡುವೆಯೇ ಆಗ ಈ ಮನೆ ಕಟ್ಟಿಸುವ ಜವಾಬ್ದಾರಿಯನ್ನೂ ಆಕೆಯೇ ನೋಡಿಕೊಳ್ಳಬೇಕಾಯಿತು. ನೋಡು ನೋಡುತ್ತಿದ್ದಂತೆ ಮನೆ ಕಟ್ಟಿ ಒಂದು ದಿನ ನಮ್ಮನ್ನು ಹೊಸ `ನೆಲೆ’ಗೆ ಒಯ್ದೇಬಿಟ್ಟಳು; ಏನೂ ಆಗಿಯೇ ಇಲ್ಲವೆಂಬಂತೆ.
ಆಕೆ ಇಲ್ಲದಿದ್ದಾಗ ನಾನು ಸುಮ್ಮನೆ ಯೋಚಿಸುತ್ತಿದ್ದೆ. ನನ್ನ ಕಷ್ಟವನ್ನು ನೆನೆ ನೆನೆದು ಅದೆಷ್ಟೋ ಬಾರಿ ಮೌನವಾಗಿ ಕಣ್ಣೀರು ಹಾಕಿದ್ದೆ. ಅವಮಾನದಿಂದ ಕುಗ್ಗಿ ಹೋಗಿದ್ದೆ. ಆದರೆ ಆಕೆ ಒಮ್ಮೆಯೂ ಕಣ್ಣೀರು ಹಾಕಿದ್ದು ನಾನು ಕಂಡಿಲ್ಲ. ತಲೆ ತಗ್ಗಿಸಿ ನಡೆದದ್ದು ನಾನು ನೋಡಿಯೇ ಇಲ್ಲ. ಈ ಧೈರ್ಯ ಆಕೆಗೆ ಎಲ್ಲಿಂದ ಬಂತು! ಈ ಎನರ್ಜಿ ಎಲ್ಲಿಂದ ಬಂತು! ಎಲ್ಲ ಮಹಿಳೆಯರೂ ಹೀಗೆಯೇ ಅಥವಾ ಈಕೆ ಮಾತ್ರ ಹೀಗೆಯೇ! ನನ್ನ ಜಾಗದಲ್ಲಿ ನನ್ನಾಕೆ ಇರುತ್ತಿದ್ದರೆ ಇಷ್ಟೊಂದು ಅಚ್ಚುಕಟ್ಟಾಗಿ ಸಮರ್ಥವಾಗಿ ಪರಿಸ್ಥಿತಿಯನ್ನು ನಿಭಾಯಿಸಲು ನನಗೆ ಸಾಧ್ಯವಾಗುತ್ತಿತ್ತೇ? ಅನುಮಾನ.
ಮನೆಯಲ್ಲಿನ ಪಾತ್ರ ಬದಲಾಯಿತು. ನನ್ನನ್ನು ಈಗ ಎಲ್ಲಾ ರೀತಿಯಲ್ಲಿಯೂ ನೋಡಿಕೊಳ್ಳುವುದು ಆಕೆ. ಹಾಗಾದರೆ ಮನೆಯ ಯಜಮಾನ ಈಗ ಯಾರು? ನಾನೋ ಆಕೆಯೋ? ‘ಅದೆಷ್ಟೋ ಮನೆಗಳಲ್ಲಿ ಇಡೀ ಮನೆಯನ್ನು ನೋಡಿಕೊಳ್ಳುವುದು ಆ ಮನೆಯ ಹೆಂಗಸರು. ಗಂಡಸರು ಲೆಕ್ಕಕ್ಕೆ ಮಾತ್ರ. ಅವರು ಯಜಮಾನ ಅಂತ ಹೆಸರಿಸಲ್ಪಡುವುದು ಪಡಿತರ ಚೀಟಿಯಲ್ಲಿ ಮಾತ್ರ. ಅಲ್ಲಿ ಯಜಮಾನ ಅನ್ನುವ ಕಾಲಂನಲ್ಲಿ ಆ ಮನೆಯ ಗಂಡಸಿನ ಹೆಸರಿರುತ್ತದೆ ಅಷ್ಟೆ’ ಎಂದು ನನ್ನಾಕೆ ತಮಾಷೆಯಾಗಿ ಕಟು ವಾಸ್ತವವೊಂದರತ್ತ ಬೆಟ್ಟುಮಾಡುತ್ತಿದ್ದುದು ನೆನಪಾಗುತ್ತಿದೆ.
ಗಂಡಿನ ಸಮಸ್ಯೆ ನೋಡಿ- ನಾನು ಹೆಣ್ಣಿಗಿಂತ ಮೇಲು ಎಂಬುದು ನಮ್ಮ ವಂಶವಾಹಿಯಲ್ಲಿಯೇ ಇರುತ್ತದೆ. ಬೇರೆ ಉದಾಹರಣೆ ಯಾಕೆ? ನನ್ನ ಕತೆಯನ್ನೇ ನೋಡಿ. ನನ್ನಾಕೆ ನನಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಯಾರಲ್ಲೂ ಹೇಳಿಕೊಳ್ಳಲಾಗದ ನನ್ನ ಸಮಸ್ಯೆ ಗೊತ್ತಿರುವುದು ಆಕೆಗೆ ಮಾತ್ರ. ಆಕೆ ನನ್ನನ್ನು ತೊರೆದು ಹೋದರೆ ನಾನು ಕ್ಷಣಕಾಲವೂ ಬದುಕಿರಲಾರೆ ಎನ್ನುವಂತಹ ಅವಲಂಬನೆಯ ಸ್ಥಿತಿ ನನ್ನದು. ಆದರೂ ಆಕೆಯ ಮೇಲೆ ಹರಿಹಾಯುತ್ತಿರುತ್ತೇನೆ. ನಾನು ಜಗಳಾಡಿದ ಪರಿಗೆ ದ್ವೇಷ ಸಾಧಿಸುವುದಾದರೆ ಆಕೆ ಊಟ ಕೊಡದೆ ನನ್ನನ್ನು ನೋಡಿಕೊಳ್ಳದೆ ಸತಾಯಿಸಬಹುದಿತ್ತು. ಆದರೆ ಆಕೆ ಎಂದೂ ಹಾಗೆ ಮಾಡಿದ್ದೇ ಇಲ್ಲ. ನಾನು ಸಿಟ್ಟು ಬಂದು ಜಗಳಾಡಿದರೆ ಮತ್ತೆ ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ ಮಾತನಾಡುವುದಿಲ್ಲ (ಆಕೆ ಜಗಳವಾಡಿದರೆ ಒಂದರ್ಧ ಗಂಟೆಯಲ್ಲಿ ಹತ್ತಿರವಾಗುತ್ತಾಳೆ). ನನಗೋ ಒಣ ಜಂಬ. ನನಗೆ ಗೊತ್ತು, ತಪ್ಪು ನನ್ನದೇ ಎಂದು. ಆದರೂ ತಪ್ಪೊಪ್ಪಿಕೊಳ್ಳಲು, ತಗ್ಗಲು ಮನಸು ಬಾರದು. ಆಗೆಲ್ಲ ನನ್ನ ಒಳ ಮನಸ್ಸು ಹೇಳುತ್ತದೆ- ನೀನು ಗಂಡಸಲ್ಲವೇ? ಗಂಡಸರು ಹೆಂಗಸರಿಗೆ ತಲೆಬಾಗುವುದು ಸರಿಯೇ?! ಕೊನೆಗೂ ನನ್ನೊಳಗಿನ ಗಂಡಸುತನವೇ ಗೆದ್ದುಬಿಡುತ್ತದೆ.
ಇದನ್ನೂ ಓದಿ- ಸಬಾ ನಖ್ವಿ – ‘ತಟಸ್ಥ’, ವಸ್ತುನಿಷ್ಟ ಪತ್ರಕರ್ತೆ
ನಾವು ಹೊಸ ಮನೆ ಕಟ್ಟಿಸಿದೆವೆಂದೆನಲ್ಲ. ಹಣ ಬಿಟ್ಟರೆ ಅದರಲ್ಲಿ ನನ್ನ ಪಾಲು ಏನೂ ಇಲ್ಲ. ಎಲ್ಲವೂ ಆಕೆಯ ಶ್ರಮ. ಆ ಮೇಲೆ ಮಗನನ್ನು ಎಂಜೀನಿಯರಿಂಗ್ ಶಿಕ್ಷಣ ಓದಿಸಬೇಕಾಗಿತ್ತು. ಅದಕ್ಕೆ ವರ್ಷಕ್ಕೆ ಐವತ್ತು ಸಾವಿರ ಖರ್ಚು ಬರುತ್ತಿತ್ತು. ಆದನ್ನೂ ನಿಭಾಯಿಸಿದಳು. ಆತ ಒಳ್ಳೆಯ ಸಂಸ್ಥೆಯೊಂದಕ್ಕೆ ಉದ್ಯೋಗಿಯಾಗಿ ಸೇರುವಲ್ಲಿಯೂ ಆಕೆಯದೇ ಪಾತ್ರ. ನನಗೂ ಕಂಪ್ಯೂಟರ್ ಒದಗಿಸಿಕೊಟ್ಟು ನಾನೂ ಮನೆಯಲ್ಲಿಯೇ ಅನುವಾದ ಕಾರ್ಯಗಳನ್ನು ಮಾಡುತ್ತ ಅಲ್ಪಸ್ವಲ್ಪ ಸಂಪಾದಿಸುವಂತೆ ಮಾಡಿದಳು.
ಇಷ್ಟಾದರೂ ಆಕೆಗೆ ಬಿಡುವು ಎನ್ನುವುದಿದೆಯೇ? ಬೆಳ್ಳಂಬೆಳಗ್ಗೆ ಆರೂವರೆಯಿಂದಲೇ ಆಕೆಯ ದಿನಚರಿ ಶುರುವಾಗುತ್ತದೆ. ಎದ್ದು ಮಗನಿಗೆ ತಿಂಡಿ ಮಾಡಿ ಕಳುಹಿಸಬೇಕು. ಆಕೆಯ `ಇತರ ಮಕ್ಕಳಾದ’ ಐದಾರು ಬೆಕ್ಕುಗಳನ್ನೆಲ್ಲ ಸಮಾಧಾನ ಪಡಿಸಬೇಕು. ಮಧ್ಯಾಹ್ನಕ್ಕೆ ರಾತ್ರಿಗೆ ಊಟದ ವ್ಯವಸ್ಥೆ ಮಾಡಬೇಕು. ಸ್ನಾನ ಮುಗಿಸಿ ಆಫೀಸಿಗೆ ಹೊರಡಬೇಕು. ಈ ಗಡಿಬಿಡಿಯಲ್ಲಿ ಕೆಲವೊಮ್ಮೆ ಆಕೆಗೆ ತಿನ್ನಲೂ ಪುರುಸೊತ್ತಿರುವುದಿಲ್ಲ.
ಆಕೆ ಹೊರಟು ಹೋಗುತ್ತಲೇ ಇತರ ಅನೇಕ ಮನೆಗಳಲ್ಲಿ ಹೆಂಗಸರು ಮಾಡುವ ಪಾತ್ರ ನನ್ನದಾಗುತ್ತದೆ. ಇವತ್ತು ಏನಾದರೂ ಒಂದು ಲೇಖನ ಬರೆಯಬೇಕು ಎಂದು ಲೆಕ್ಕ ಹಾಕುತ್ತೇನೆ. ಆಕೆ ಹೋದ ತಕ್ಷಣ ಕಂಪ್ಯೂಟರ್ ಚಾಲೂ ಮಾಡುತ್ತೇನೆ. ಆಗ ಮೀನು ಮಾರುವಾತ ಬರುತ್ತಾನೆ. ಬೆಕ್ಕುಗಳೆಲ್ಲವೂ ‘ಮೀನು ತಗೋ ಮೀನು ತಗೋ…’ ಎಂದು ದುಂಬಾಲು ಬೀಳುತ್ತವೆ. ಅವರಿಗಾಗಿ ಮೀನು ಕೊಂಡು ಹಂಚಿಕೊಡುತ್ತೇನೆ. ಮೀನಿನಿಂದಾಗಿ ಗಲೀಜಾದ ನೆಲ ಸ್ವಚ್ಛಗೊಳಿಸುವಾಗ ಗಂಟೆ ಹನ್ನೊಂದಾಗುತ್ತದೆ. ಅಷ್ಟಾಗುವಾಗ ಯಾರದೋ ಫೋನ್ ಬರುತ್ತದೆ. ಫೋನ್ ಮಾಡಿದವರೊಂದಿಗೆ ಮಾತನಾಡಿ ಫೋನ್ ಇಡುವಾಗ ಹನ್ನೊಂದೂವರೆಯಾಗುತ್ತದೆ. ಊಟಕ್ಕೆ ಪಲ್ಯವೇನೂ ಇಲ್ಲದಿದ್ದರೆ ಅಥವಾ ಇವತ್ತೊಂದು ಅಡುಗೆ ಮಾಡುವ ಅನಿಸಿದಾಗ ನಾನೇ ಮೀನು ಸಾರು ಮಾಡಹೊರಡುತ್ತೇನೆ. ಯಾವುದನ್ನು ಎಷ್ಟು ಹಾಕಬೇಕು ಎನ್ನುವುದು ನೆನಪಿನಲ್ಲಿ ಉಳಿಯುವುದಿಲ್ಲವಲ್ಲ, ಅದಕ್ಕೆ ಒಂದು ಪುಸ್ತಕದಲ್ಲಿ ಎಲ್ಲವನ್ನೂ ಬರೆದಿಟ್ಟುಕೊಂಡಿದ್ದೇನೆ. ಒಲೆಯಲ್ಲಿ ಬಾಣಲೆ ಇಟ್ಟು ಎಡಗೈಯಲ್ಲಿ ಪುಸ್ತಕ ತೆರೆದು ಮೆಣಸು, ಕೊತ್ತಂಬರಿ, ಜೀರಿಗೆ, ಮೆಂತೆ ಎಲ್ಲ ಹಾಕಿ ಹುರಿಯುತ್ತೇನೆ. ಮಿಕ್ಸಿಯಲ್ಲಿ ಹಾಕಿ ಮಸಾಲೆ ಅರೆದು ಮೀನು ಸಾರು ಮುಗಿಸುವಾಗ ಗಂಟೆ ಒಂದಾಗಿರುತ್ತದೆ.
ಅಡುಗೆ ಮಾಡುವುದು ಎಷ್ಟೊಂದು ಸುಲಭ, ಈ ಹೆಂಗಸರು ಏನು ಮಹಾ ದೊಡ್ಡ ಕೆಲಸ ಮಾಡಿದಂತೆ ವರ್ತಿಸುತ್ತಾರಪ್ಪ ಎಂದು ನನ್ನಷ್ಟಕ್ಕೆ ಹೇಳಿಕೊಳ್ಳುತ್ತೇನೆ. ಆಗ ಅಲ್ಲಿ ರಾಶಿ ರಾಶಿ ಬಿದ್ದ ಈರುಳ್ಳಿ ಸಿಪ್ಪೆ, ಮೆಣಸಿನ ತ್ಯಾಜ್ಯ ಸಾಲದೆಂಬಂತೆ ಸಿಂಕ್‌ನ ತುಂಬ ಗುಡ್ಡೆ ಬಿದ್ದ ಪಾತ್ರೆಗಳು, ಕೊಳೆಯಾದ ನೆಲ ನನ್ನನ್ನು ಅಣಕಿಸುತ್ತವೆ. ಅವೆಲ್ಲವನ್ನೂ ಸ್ವಚ್ಛಗೊಳಿಸಿ ಅಡುಗೆ ಮನೆಯ ಎಲ್ಲ ಕೆಲಸ ಮುಗಿಯುವಾಗ ಗಂಟೆ ಎರಡಾಗಿರುತ್ತದೆ.
ಕಂಪ್ಯೂಟರ್ ಆನ್ ಆದುದು ಅಲ್ಲೇ ಇರುತ್ತದೆ. ಒಂದಕ್ಷರವನ್ನೂ ಟೈಪ್ ಮಾಡಿಲ್ಲ. ಲೇಖನ ಅಲ್ಲೇ ಉಳಿಯುತ್ತದೆ. ನನ್ನ ಸಂಗಾತಿ ಚೆನ್ನಾಗಿ ಬರೆಯಬಲ್ಲವಳಾಗಿದ್ದರೂ ಅವಳಿಗೇಕೆ ಬರೆಯಲಾಗುತ್ತಿಲ್ಲ ಎಂಬುದಕ್ಕೆ ಉತ್ತರ ಸಿಕ್ಕಂತಾಗಿ ಒಳಗೊಳಗೇ ನೊಂದುಕೊಳ್ಳುತ್ತೇನೆ. ಹಾಗೆಯೇ ನಮ್ಮ ಮೇರು ಸಾಹಿತಿಗಳ ನೆನಪಾಗುತ್ತದೆ. ಅವರಿಗೆ ಅಡುಗೆ ಸಹಿತ ಮನೆವಾರ್ತೆಯ ಜವಾಬ್ದಾರಿಗಳಿರಲಿಲ್ಲ. ಕಾಲಕಾಲಕ್ಕೆ ಆ ಎಲ್ಲ ಕೆಲಸಗಳನ್ನೂ ಮಾಡಿಕೊಡುತ್ತಾ ಅವರ ಬೇಕು ಬೇಡಗಳನ್ನು ಅವರ ಸಂಗಾತಿ ಪೂರೈಸುತ್ತಿದ್ದರು. ಈ ಸಾಹಿತಿಗಳು ಅಡುಗೆ ಸಹಿತ ಮನೆಯ ಕೆಲಸವನ್ನೂ ಮಾಡಿಕೊಂಡು ಸಾಹಿತ್ಯ ರಚನೆ ಮಾಡುತ್ತಿದ್ದರೆ ಎಷ್ಟು ಸಾಹಿತ್ಯ ರಚನೆಯಾಗುತ್ತಿತ್ತು?! ಈ ಪ್ರಶ್ನೆಗೆ ಉತ್ತರದ ಅಗತ್ಯವಿಲ್ಲ.
ಇದನ್ನೂ ಓದಿ- ಸಂಸ್ಕೃತಿ ಮತ್ತು ದೇಹ ರಾಜಕಾರಣ
ನಾವೇ ಮಾಡಿದ ಅಡುಗೆ ತಿನ್ನಲು ಯಾಕೋ ಆಸಕ್ತಿಯೇ ಇಲ್ಲ. ಬೇರೆಯವರು ಮಾಡಿದರೆ ಅದೆಷ್ಟು ರುಚಿ! ತಿನ್ನುವ ಶಾಸ್ತ್ರ ಮುಗಿಸಿ ಇನ್ನು ಕೊಂಚ ಹಾಸಿಗೆಯಲ್ಲಿ ಅಡ್ಡಾಗೋಣವೇ ಎಂದು ಹಾಸಿಗೆಯಲ್ಲಿ ಉರುಳುತ್ತೇನೆ. ಅಷ್ಟಾಗುವಾಗ ಅಡುಗೆ ಗ್ಯಾಸ್‌ನ ಲಾರಿಯೋ, ಸೇಲ್ಸ್ ನವರೋ, ಕೊರಿಯರಿನವರೋ ಬರುತ್ತಾರೆ. ಅರ್ಧ ಗಂಟೆಯೂ ನಿದ್ದೆಯಾಗಿರುವುದಿಲ್ಲ. ಏಳುತ್ತೇನೆ. ಇನ್ನು ಸಣ್ಣಪುಟ್ಟ ಕೆಲಸ ಎನ್ನುತ್ತಲೇ ಗಂಟೆ ಐದರತ್ತ ಓಡುತ್ತದೆ. ಮತ್ತೆ ಅಡುಗೆ ಮನೆಯಲ್ಲಿ ಬೆಳಗಿನ ಸಾರು ಸಾಂಬಾರು, ಹಾಲು ಮತ್ತೆ ಬಿಸಿಮಾಡಲು ಒಲೆಗಿಡುತ್ತೇನೆ.
ಅಲ್ಲ, ನಾವು ಗಂಡಸರು ಎಲ್ಲೋ ಅಪರೂಪಕ್ಕೊಮ್ಮೆ ಇಂಥ ಕೆಲಸ ಮಾಡಿದರೆ ಹೆಚ್ಚು. ಆದರೆ ಮನೆಯ ಹೆಂಗಸರು ಇದನ್ನು ನಿತ್ಯ ಮಾಡುತ್ತಾರಲ್ಲ. ನಾವು ಗಂಡಸರು ತಿನ್ನುವ ಬಗ್ಗೆ ಮಾತ್ರ ಯೋಚಿಸುವುದು. ಆ ಮೇಲೆ ಗಡದ್ದಾಗಿ ಮಲಗುವುದು. ಆದರೆ ಮನೆಯ ಹೆಂಗಸರು ಹಾಸಿಗೆಗೆ ಒರಗುವಾಗಲೂ ನಾಳೆ ಬೆಳಿಗ್ಗೆ ಏನು ತಿಂಡಿ ಮಾಡುವುದಪ್ಪ, ನಾಳೆ ಪಲ್ಯ ಏನು ಮಾಡುವುದಪ್ಪ ಎಂದು ಯೋಚಿಸುತ್ತಲೇ ನಿದ್ದೆ ಹೋಗುತ್ತಾರೆ ಎಂದು ಎಷ್ಟು ಜನ ಗಂಡಸರಿಗೆ ಗೊತ್ತು? ನಮ್ಮ ತಾಯಂದಿರು ಹೇಗೆ ನಮ್ಮನ್ನು ಸಾಕಿರಬಹುದು! ಒಮ್ಮೆಯಾದರೂ ಆಕೆಯ ಕಷ್ಟವನ್ನು ನಾವು ಯೋಚಿಸಿದ್ದೇವೆಯೇ? ಅಮ್ಮಾ ನೀನು ತಿಂಡಿ ತಿಂದಿಯಾ? ನಿನಗೆ ತಿನ್ನುವಷ್ಟು ಉಳಿದಿತ್ತೇ? (ಉಳಿಸಿದ್ದೇವೆಯೇ) ಎಂದು ಯಾವತ್ತಾದರೂ ನಾವು ಕೇಳಿದ್ದೇವೆಯೇ? ನಾವೇನೋ ಒಂದು ದಿನ ಕೆಲಸ ಮಾಡಿದರೆ ಅದೇನು ಮಹಾ ದಣಿವು, ಅದೇನೋ ಮಹಾ ಕೆಲಸ ಮಾಡಿದೆವೆಂಬ ಹೆಮ್ಮೆ! ಆದರೆ ಮನೆಯ ಹೆಂಗಸರು ಇದನ್ನು ನಿತ್ಯವೂ ಮಾಡುತ್ತಾರಲ್ಲ. ಅವರ ಕಷ್ಟವನ್ನು ಯಾರಾದರೂ ಅರಿತುಕೊಂಡಿದ್ದಾರೆಯೇ?
ಗಂಟೆ ಆರೂ ಕಾಲಾಗುತ್ತಾ ಬಂತು. ನಿಮಿಷಗಳು ಗಂಟೆಗಳಂತಾಗುತ್ತಿದ್ದುದು ಬದಲಾಗಿ, ಈಗ ಸೆಕೆಂಡುಗಳು ಗಂಟೆಗಳಾಗುತ್ತಿರುವ ಅನುಭವವಾಗುತ್ತಿದೆ. ಮತ್ತೆ ಬಾಗಿಲ ಬಳಿ ನಿಂತು ರಸ್ತೆಯ ತಿರುವಿನತ್ತಲೇ ನೋಡುತ್ತೇನೆ. ಕಂಪೌಂಡಿನ ಮರೆಯಲ್ಲಿ ತಲೆಯೊಂದು ಚಲಿಸಿದ ದೃಶ್ಯ ಕಾಣಿಸುತ್ತಿದೆ. ಆಕೆಯೇ ಬಂದು ಬಿಟ್ಟಳು ಎಂದು ಸಮಾಧಾನಗೊಳ್ಳುತ್ತೇನೆ. ಇಲ್ಲ.. ಇಲ್ಲ.. ಅದು ಬೇರೆ ಯಾರೋ.. ಇತ್ತ ತಿರುಗಬೇಕಾದವರು ನೇರ ಹೋಗಿ ಬಿಟ್ಟರು… ಮತ್ತೆ ಕಾಯುತ್ತೇನೆ.. ಈಗ ಶಾಲಾಮಕ್ಕಳಂತಿರುವ ದೇಹವೊಂದು ನಿಧಾನವಾಗಿ ನಡೆದು ಬಂದಂತೆ ಕಾಣಿಸುತ್ತದೆ. ಹಾಂ.. ಆಕೆಯೇ ಬಂದದ್ದು. ಈಗ ಸಮಾಧಾನವಾಗುತ್ತದೆ. ಕೊನೆಗೂ ಕಣ್ಣಿಗೆ ಬಿದ್ದಳಲ್ಲ.
ಇಷ್ಟೂ ಹೊತ್ತು ನನ್ನೊಳಗಿದ್ದ ಭಯ, ಆತಂಕ, ಕಾತರ ಎಲ್ಲವೂ ಮೇಲೆ ಬಂದಂತಾಗಿ ‘ನಿನ್ನ ಕೈಯಲ್ಲಿ ಫೋನ್ ಯಾಕಿರುವುದು? ತಡವಾಗುವುದೆಂದು ತಿಳಿಸಬಾರದಿತ್ತಾ?’ ಎಂದು ದೊಡ್ಡ ದನಿಯಲ್ಲಿ ಸಿಡಿದೇ ಬಿಡುತ್ತೇನೆ…. ನನ್ನೊಳಗಿನ ಗಂಡಸುತನದ ಧಿಮಾಕು ನನಗೇ ತಿಳಿಯದಂತೆ ಹೊರಬೀಳುತ್ತದೆ. `ಬಸ್ಸು ತುಂಬಾ ರಶ್, ಎರಡು ಬಸ್ ಬಿಟ್ಟು ಮೂರನೆಯದರಲ್ಲಿ ಬಂದೆ. ನಾನು ರಸ್ತೆಯಲ್ಲಿ ಫೋನ್ ಬಳಸುವುದಿಲ್ಲ ಎಂದು ನಿಮಗೆ ಗೊತ್ತಲ್ಲ…’ ಎಂದು ತಣ್ಣಗೆ ಹೇಳಿ ಮುಂದಿನ ಕೆಲಸಕ್ಕೆ ಒಳ ನಡೆಯುತ್ತಾಳೆ.
ಅಬ್ಬಾ!.. ಎಂತಹಾ ಸಹನೆ. ಅವಳೆದುರು ನಾನೆಷ್ಟು ಕುಬ್ಜನಾಗಿಬಿಟ್ಟೆ, ಮತ್ತೆ ಅದೇ ಗಂಡಸುತನದ ಅಹಂ. ಕುಬ್ಜವಾದರೆ ಏನಾಯಿತು ಎಂದು ಪ್ರಶ್ನಿಸಿಕೊಳ್ಳುವುದೇ ಇಲ್ಲ. ಶತಮಾನಗಳಿಂದ ಮಹಿಳೆಯರು ತಮ್ಮ ಸಂಗಾತಿಗಳಿಗೆ ಕಾದು ಕಾದು, ಬಂದ ಕೂಡಲೇ `ಯಾಕೆ ತಡಮಾಡಿದಿರಿ?’ ಅಂದರೆ ಆಕಾಶ ಭೂಮಿ ಒಂದು ಮಾಡಿ ಗದರಿ ಅವರನ್ನು ಮೌನವಾಗಿಸುತ್ತಲೇ ಬಂದಿದ್ದೇವಲ್ಲ… ಛೆ ಇದೆಂಥ ಪೌರುಷ! ಈ ಪೌರುಷ ಯಾಕಾದರೂ ಬೇಕು? ಪ್ರಶ್ನೆಗಳು ಅಂತಃಸಾಕ್ಷಿಯನ್ನು ತಟ್ಟುತ್ತವೆ.
ನಾನು ಅನಿವಾರ್ಯವಾಗಿ ಮನೆವಾಳ್ತೆಯ ಜವಾಬ್ದಾರಿಯಲ್ಲಿ ಪಾಲುದಾರನಾಗಿರಬಹುದು. ಅದರೆ, ಈಗ ನನಗೆ ಇದು ಅನಿವಾರ್ಯ ಎಂದು ಅನಿಸುತ್ತಿಲ್ಲ. ಅದು ಬದುಕಿನ ಒಂದು ಭಾಗವಾಗಿ ನನ್ನೊಳಗೆ ಅಂತರ್ಗತವಾಗಿದೆ; ಸಾಂಗತ್ಯವನ್ನು ಅಪ್ಯಾಯಮಾನವಾಗಿಸಿದೆ. ಅಂದರೆ ಈ ಅನಿವಾರ್ಯತೆಯೇ ನನಗೆ ಕಲಿಸಿದ ಪಾಠ ಮತ್ತು ನನ್ನನ್ನು ಪ್ರಭಾವಿಸಿದ ರೀತಿ ಅದ್ಭುತವಾದುದು. ನಮ್ಮ ಬದುಕಿನ ಖಾಸಗಿ ಕ್ಷಣಗಳನ್ನು ಕೂಡಾ ಸಮಾಜದಲ್ಲಿ ಹಾಸುಹೊಕ್ಕಿರುವ ಲಿಂಗತಾರತಮ್ಯವು ಹೇಗೆ ಗಾಢವಾಗಿ ಆವರಿಸಿಕೊಂಡಿದೆ ಎನ್ನುವುದನ್ನು ನಾನು ಅರಿತೆ. ಲಿಂಗತ್ವ ಪರಿಕಲ್ಪನೆಗಳಿಂದಾಗಿ ಹೆಂಗಸರು ಹೊತ್ತುಕೊಂಡಿರುವ ಭಾರವನ್ನು ಗಂಡಸರು ಹಾಗೂ ಗಂಡಸರು ಹೊತ್ತಿರುವುದನ್ನು ಹೆಂಗಸರು ಅರಿಯದವರಾಗಿದ್ದಾರೆ. ಲಿಂಗತ್ವದ ಪರದೆ ಸರಿದಾಗ ಮಾತ್ರ ನಮ್ಮ ಬದುಕು, ಧೋರಣೆ, ಮೌಲ್ಯಗಳನ್ನು ಹೊಸದಾಗಿ ಕಟ್ಟುವುದಕ್ಕೆ ಸಾಧ್ಯ ಎಂಬ ಸರಳ ಸತ್ಯವನ್ನು ಅರಗಿಸಿಕೊಂಡೆ. ಹೀಗೆ ಹೊಸದಾಗಿ ಕಟ್ಟಲು ಹೆಣ್ಣು ಗಂಡಿನ ಸಮಾನ ಸಹಭಾಗಿತ್ವದ ಹಲವು ಸುಂದರ ಮಾದರಿಗಳನ್ನು ಪ್ರೀತಿಯಿಂದ ಗೌರವದಿಂದ ಸ್ವೀಕರಿಸುವುದು ಅವಶ್ಯ ಆಗಬೇಕಾಗಿರುವ ಇಂದಿನ ಗಂಡುತನದ ಸಮಾಜದಲ್ಲಿ ಅಂತಹ ಒಂದು ಮಾದರಿಯಾಗಿ ಗುರುತಿಸಿಕೊಳ್ಳಲು ನಾನು ಹೆಮ್ಮೆ ಪಡುತ್ತೇನೆ.
ಶ್ರೀನಿವಾಸ ಕಾರ್ಕಳ
ಸಾಮಾಜಿಕ ಚಿಂತಕರು
ಇದನ್ನೂ ಓದಿ- ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟ : ಹಿನ್ನೋಟ