ಸಮತೆಯ ಹಾದಿಗೆ ಬೇಕಾದ ಗಂಡುಮಕ್ಕಳಲ್ಲಿನ ಸಂವೇದನಾಶೀಲತೆ ನೋಡಿ ನೆಮ್ಮದಿಯ ಉಸಿರು ಬಿಡುವಷ್ಟರಲ್ಲಿ ಸಾಲು ಸಾಲು ಅಪರಾಧಗಳು ಬೆಚ್ಚಿ ಬೀಳಿಸುವಂತಿವೆ. ಧರ್ಮ, ಜಾತಿ ಅಥವಾ ಪ್ರೀತಿ ಎನ್ನುವ ಹೆಸರಲ್ಲಿ ನಡೆಯುತ್ತಿರುವ ಇಂತಹಾ ಘಟನೆಗಳು ಕುಟುಂಬಗಳನ್ನೇ ನಾಶ ಮಾಡುತ್ತಿರುವುದರ ಅರಿವೇ ಇಲ್ಲದೆ ಯುವಕರು ಸಾಗುತ್ತಿದ್ದಾರೆ- ಸಮುದ್ಯತಾ ಕಂಜರ್ಪಣೆ
ಸಾಲು ಸಾಲಾಗಿ ಹೆಣ್ಣು ಮಕ್ಕಳ ಸಾವಿನ ಸುದ್ದಿಗಳು ಕೇಳಿಬರುತ್ತಿರುವುದು ಒಂದಿಡೀ ಪೀಳಿಗೆಯ ಭವಿಷ್ಯದ ಕುರಿತಾಗಿಯೇ ಆತಂಕ ಹುಟ್ಟಿಸುವಂತಿದೆ. ಸಾವು, ಕೊಲೆ, ದೌರ್ಜನ್ಯ ಅನ್ನುವುದು ಅಷ್ಟು ಸುಲಭದ ಸರಕಾಗಿ ಹೋಗುತ್ತಿದೆಯಾ, ಎಲ್ಲೋ ಕೇಳಿಬರುತ್ತಿದ್ದ ಸುದ್ದಿಗಳು ಈಗ ನಮ್ಮ ಕಾಲೇಜು, ನಮ್ಮ ಪಕ್ಕದ ಮನೆ, ನಮ್ಮ ಗೆಳತಿಯ ಮನೆ ಅನ್ನುವಷ್ಟು ಸಲೀಸಾಗಿದೆಯಾ ಅನಿಸುತ್ತಿದೆ. ಇಷ್ಟು ವರ್ಷ ಅಪರಿಚಿತರ ಭಯ ಕಾಡುತ್ತಿತ್ತು. ಯಾರೋ ಕಳ್ಳರು ಬರುತ್ತಾರೆ, ಬಾಗಿಲು ಹಾಕಿಕೊಳ್ಳಬೇಕು ಅನ್ನುವಷ್ಟು ಮಾತ್ರ ಭಯ ಇತ್ತು. ಈಗ ಕೋಪದಲ್ಲಿಯೋ, ತಮಾಷೆಗಾಗಿಯೋ ಹೇಳಿದ ಮಾತುಗಳಿಗೆ ಪರಿಚಿತರೇ ಏನಾದರೂ ಮಾಡಿ ಬಿಟ್ಟರೆ ಎನ್ನುವಷ್ಟು ಅಭದ್ರತೆ ಕಾಡಲಾರಂಭಿಸಿದೆ.
ಅಪರಾಧ, ಹೆಣ್ಣಿನ ಮೇಲಿನ ದೌರ್ಜನ್ಯ ಅನ್ನುವುದು ಹೀರೋಯಿಸಂ ಆಗಿ ಬದಲಾಗಿರುವುದು ವಿಷಾದನೀಯ. ಎಷ್ಟೋ ವರ್ಷಗಳಿಂದಲೂ ಹೆಣ್ಣಿನ ಮೇಲಿನ ದೌರ್ಜನ್ಯ, ಪುರುಷ ಪ್ರಧಾನ ಮನಸ್ಥಿತಿಗಳ ಆಳ್ವಿಕೆಗಳನ್ನು ಮೀರಿ ಹೆಣ್ಣು ಮುಂದುವರೆಯಲು ಪ್ರಯತ್ನ ಪಡುತ್ತಲೇ ಇದ್ದಾಳೆ. ಹೆಜ್ಜೆ ಮುಂದಿಟ್ಟಷ್ಟೂ ಮತ್ತೆ ಶಿಲಾಯುಗಕ್ಕೇ ಹೋಗುತ್ತಿದ್ದೇವೆ ಎನ್ನುವಷ್ಟರ ಮಟ್ಟಿಗಿನ ಅಪರಾಧಗಳು ಕಂಡುಬರುತ್ತಿವೆ.
ಸಮತೆಯ ಹಾದಿಗೆ ಬೇಕಾದ ಗಂಡುಮಕ್ಕಳಲ್ಲಿನ ಸಂವೇದನಾಶೀಲತೆ ನೋಡಿ ನೆಮ್ಮದಿಯ ಉಸಿರು ಬಿಡುವಷ್ಟರಲ್ಲಿ ಸಾಲು ಸಾಲು ಅಪರಾಧಗಳು ಬೆಚ್ಚಿ ಬೀಳಿಸುವಂತಿವೆ. ಧರ್ಮ, ಜಾತಿ ಅಥವಾ ಪ್ರೀತಿ ಎನ್ನುವ ಹೆಸರಲ್ಲಿ ನಡೆಯುತ್ತಿರುವ ಇಂತಹಾ ಘಟನೆಗಳು ಕುಟುಂಬಗಳನ್ನೇ ನಾಶ ಮಾಡುತ್ತಿರುವುದರ ಅರಿವೇ ಇಲ್ಲದೆ ಯುವಕರು ಸಾಗುತ್ತಿದ್ದಾರೆ.
ದೃಶ್ಯ ಮಾಧ್ಯಮಗಳಲ್ಲಿನ ರಕ್ತಪಾತ, ಗಂಡಾಳ್ವಿಕೆಗಳನ್ನು ವೈಭವೀಕರಿಸುತ್ತಿರುವುದು ಇದರ ಒಂದು ಮುಖ್ಯ ಕಾರಣ. ಅಪರಾಧದ ನಂತರ ಅದು ತಪ್ಪು ಎನ್ನುವುದಕ್ಕಿಂತಲೂ ಅದನ್ನೇ ವೈಭವೀಕರಿಸುವುದರಿಂದ ಅದರಲ್ಲಿ ಕಾಣುವ ಹೀರೋಯಿಸಂ ಅನ್ನು ತಮ್ಮೊಳಗಿಸಿಕೊಳ್ಳುವಂತಹಾ ಮನಸ್ಥಿತಿ ಸೃಷ್ಟಿಯಾಗಿದೆ. ಮೊದಲಿನಿಂದಲೂ ನಾಯಕಿ ಕೋಪದಲ್ಲಿ ನಾಲ್ಕು ಮಾತಾಡುತ್ತಿದ್ದರೆ ನಾಯಕ ಕಪಾಳಕ್ಕೆ ಹೊಡೆಯುವುದು ಮತ್ತು ಅದೇ ಸರಿ ಎಂಬಂತೆ ಬಿಂಬಿಸಿ ನಾಯಕಿ ಎಂಬ ಹೆಣ್ಣಿಗೆ ಚೌಕಟ್ಟನ್ನು ಸೃಷ್ಟಿ ಮಾಡುವುದು ಕೂಡಾ ಪುರುಷ ಪ್ರಧಾನ ವ್ಯವಸ್ಥೆಯ ಭಾಗ. ಕೊನೆಗೆ ವಿಲನ್ ಕೂಡ ಪ್ರತಿ ಸಿನೆಮಾದಲ್ಲು ವಿಧವಿಧವಾದ ಹೊಸ ಹೊಸ ರೀತಿಯಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ನಡೆಸುವುದು, ಕೊಲ್ಲುವುದು, ಅದರ ತೀವ್ರತೆಗಳನ್ನು ವಿಜೃಂಭಿಸುವುದರ ಪರಿಣಾಮವಾಗಿ ಈಗ ಅಪರಾಧದ ರೀತಿಗಳು ಬದಲಾಗಿವೆ. ಒಬ್ಬ ಚಾಕುವಿನಿಂದ ಇರಿದು ಕೊಂದರೆ, ಒಬ್ಬ ದೇಹವನ್ನು ತುಂಡು ತುಂಡು ಮಾಡುತ್ತಾನೆ, ಒಬ್ಬ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಮತ್ತೊಬ್ಬ ರುಂಡವನ್ನು ತೆಗೆದುಕೊಂಡು ಮೆರವಣಿಗೆ ಮಾಡುತ್ತಾನೆ.
ಮನುಷ್ಯನಲ್ಲಿ ಸಹಜವಾಗಿ ಬಂದಿರುವ ಒಂದು ವಿಕೃತಿಯನ್ನು ತಡೆಗಟ್ಟುವ ಕಾರಣದಿಂದಲೇ ನಾವಿನ್ನೂ ಮನುಷ್ಯರಾಗಿರುವುದು. ಆ ವಿಕೃತಿಗೆ ನೀರೆರೆದು ಪೋಷಿಸಿ ಬೆಳೆಸಿ ಮನುಷ್ಯತ್ವವನ್ನು ಮೀರಿದ ರಾಕ್ಷಸ ಗುಣಗಳನ್ನು ವೈಭವೀಕರಿಸುವುದರಲ್ಲಿ ಸಿನಿಮಾಗಳ ಪಾತ್ರ ಎಷ್ಟಿದೆಯೋ ಸುದ್ದಿ ಮಾಧ್ಯಮಗಳ ಪಾತ್ರ ಅದಕ್ಕಿಂತ ಹೆಚ್ಚಿದೆ. ರುಂಡವನ್ನು ಹಂತಕ ಏನೆಲ್ಲಾ ಮಾಡಿದ ಗೊತ್ತಾ ಎನ್ನುವ ಒಂದು ತಲೆಬರಹದೊಂದಿಗೆ, ಅವನು ಮಾಡಿರುವುದು ಜೀವಮಾನದ ಅಭೂತಪೂರ್ವ ಸಾಧನೆ ಎನ್ನುವ ಮಟ್ಟಿಗೆ ಆತನನ್ನು ತೋರಿಸಲಾಗುತ್ತದೆ. ಒಂದು ಕೊಲೆ ಮಾಡಿದರೆ ಕಾನೂನು ಕೊಡುವ ಶಿಕ್ಷೆ ಮತ್ತು ಅದರ ಪರಿಣಾಮಗಳ ಬಗ್ಗೆ ಒಂದು ಮಾತೂ ಆಡದೆ ಅಪರಾಧದಲ್ಲಿನ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸುತ್ತಾ ಹೋದರೆ ಅದೇ ಮನಸ್ಥಿತಿಯಲ್ಲಿನ ಇನ್ನಷ್ಟು ಜನಕ್ಕೆ ಅದು ಮಾದರಿಯಾಗುತ್ತಾ ಹೋಗುತ್ತದೆ.
ಸಂಸ್ಕೃತಿ, ಧರ್ಮ ಮತ್ತು ಜಾತಿ ಇದರ ಇನ್ನೊಂದು ಆಯಾಮ. ಧರ್ಮದ ಹೆಸರಲ್ಲಿ, ಸಂಸ್ಕೃತಿ ಹೆಸರಲ್ಲಿ ಏನೇ ಮಾಡಿದರೂ ಅದು ಸರಿ ಎನ್ನುವ ಭಾವನೆ ಮತ್ತು ಅದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡುವ ಜನಪ್ರತಿನಿಧಿಗಳು, ಮತ್ತು ಸುತ್ತ ಮುತ್ತಲಿನವರು ಇದ್ದಷ್ಟೂ ಈ ನಶೆ ಇಳಿಯುವುದಿಲ್ಲ. ಬೇರೆ ಧರ್ಮದವನನ್ನು ಪ್ರೀತಿಸಿದಳು, ಅಥವಾ ಬೇರೆ ಜಾತಿಯವನನ್ನು ಪ್ರೀತಿಸಿದಳು ಅನ್ನೋದು ಒಂದು ನೆಪವಾದರೆ, ನಮ್ಮ ಸಂಸ್ಕೃತಿಗೆ ಬೆಲೆ ಕೊಡಲಿಲ್ಲ ಅನ್ನೋದು ಇನ್ನೊಂದು ಕಾರಣ. ತಮ್ಮ ದೌರ್ಬಲ್ಯಗಳಿಗಾಗಿ ಹೆಣ್ಣಿನ ಮೇಲೆ ನಡೆಸುವ ಅಪರಾಧಗಳಿಗೆ ಕೊಡೋ ನೆಪಗಳು ಇದೆಲ್ಲಾ.
ಮಾನಸಿಕ ಸ್ಥಿಮಿತತೆ ಇದರ ಮತ್ತೊಂದು ಆಯಾಮ. ಒಪ್ಪಿಕೊಳ್ಳುವ ಸ್ಥಿತಿ ಇಲ್ಲದಿರುವುದು. ಈ ಎಲ್ಲಾ ವೈಭವೀಕರಣಗಳ ಪರಿಣಾಮ ಅರ್ಥವಿಲ್ಲದ ಈಗೋ. ತಾನು ಹೇಳಿದ್ದನ್ನು ಆಕೆ ಒಪ್ಪಿಕೊಳ್ಳಬೇಕು, ತನ್ನನ್ನು ಆಕೆ ಒಪ್ಪಿಕೊಳ್ಳಲೇಬೇಕು ಎನ್ನುವುದು ಅತಿ ದೊಡ್ಡ ದೌರ್ಬಲ್ಯ. ಪ್ರೀತಿಸಲು ಒಂದು ಕಾರಣವಾದರೆ, ಪ್ರೀತಿ ನಿರಾಕರಣೆಗೂ ಹಲವಾರು ಕಾರಣಗಳಿರುತ್ತವೆ. ಒಂದು ಸ್ವಭಾವ ನೋಡಿ ಪ್ರೀತಿಯಲ್ಲಿ ಬೀಳುವ ಹುಡುಗಿ ಅದೇ ಹುಡುಗನಲ್ಲಿ ನಿಧಾನವಾಗಿ ಕಾಣಬರುವ ಎಷ್ಟೋ ಸ್ವಭಾವಗಳಿಂದ ಬೇಸತ್ತು ತಿರಸ್ಕರಿಸಲೂ ಬಹುದು. ಅದರ ಅರ್ಥ ಒಬ್ಬರು ಸರಿ, ಮತ್ತೊಬ್ಬರು ತಪ್ಪು ಅನ್ನುವುದಲ್ಲ. ಅದಕೂ ಮೀರಿದ್ದು ಆ ಸ್ಥಿತಿಯನ್ನು ಒಪ್ಪಿಕೊಳ್ಳುವುದು. ಆ ನಿರಾಕರಣೆಯನ್ನು ಒಪ್ಪಿಕೊಳ್ಳಲಾಗದಷ್ಟು ಮನಸ್ಸು ದುರ್ಬಲವಾದಾಗ ತಮ್ಮದೇ ಶಿಕ್ಷೆ, ತಮ್ಮದೇ ನ್ಯಾಯ ಎಂದು ಅರ್ಥಹೀನ ಸಮರ್ಥನೆಗಿಳಿಯುವುದು.
ಹೆಣ್ಣಿನ ಮೇಲಾಗುವ ಯಾವುದೇ ಅಪರಾಧಕ್ಕೂ ಎಷ್ಟೇ ಆಯಾಮಗಳನ್ನು ಕೊಟ್ಟರೂ ಅದಕ್ಕೆ ಮುಖ್ಯ ಕಾರಣ ಆಕೆ ಹೆಣ್ಣು ಎನ್ನುವುದು. ಹೆಣ್ಣು ಹೇಗಿರಬೇಕು ಎನ್ನುವುದನ್ನು ನಿರ್ಧರಿಸುವುದು ಮತ್ತು ಆ ನಿರ್ಧಾರ ಮಾಡುವ ಅಧಿಕಾರ ತನಗಿದೆ ಎನ್ನುವ ಪುರುಷ ಪ್ರಧಾನ ಮನಸ್ಥಿತಿ ಅಳಿಯುವುದು ಎಲ್ಲಕ್ಕಿಂತ ಮುಖ್ಯ. ಹಿಂಸೆಯ ವೈಭವೀಕರಣ ಮತ್ತು ಹೆಣ್ಣನ್ನು ಸರಕಾಗಿ ನೋಡುವ ಮನಸ್ಥಿತಿ ಕಡಿಮೆಯಾಗುವವರೆಗೂ ಈ ಆತಂಕಗಳು ತಪ್ಪಿದ್ದಲ್ಲ. ಸಮಾಜ, ಸರ್ಕಾರ ಮತ್ತು ಮಾಧ್ಯಮ ಎಲ್ಲವೂ ಈ ನಿಟ್ಟಿನಲ್ಲಿ ಸಂವೇದನೆ, ಸೂಕ್ಷ್ಮತೆ ಬೆಳೆಸಿಕೊಳ್ಳುವುದು ಈ ಹೊತ್ತಿನ ಅಗತ್ಯ.
ಸಮುದ್ಯತಾ ಕಂಜರ್ಪಣೆ