Sunday, September 8, 2024

ವರ್ತಮಾನದ ಒಡಲಿನಲ್ಲಿ ಮಹಿಳೆಯರು ಮತ್ತು ಮಕ್ಕಳು‌

Most read

ಲಿಂಗಸಮಾನತೆಯನ್ನು ಒಳಗೊಂಡಂತೆ ಅಭಿವೃದ್ಧಿಯ ವಿವಿಧ ಆಯಾಮಗಳನ್ನು ಮನೆ, ಕುಟುಂಬ, ಸಮುದಾಯ ಹಾಗೂ ಸಮಾಜದ ವಿವಿಧ ಅಂಗಗಳಿಗೆ ವಿಸ್ತರಿಸುವ, ನೆಲೆಗೊಳಿಸುವ ಕ್ರಿಯೆ ತಕ್ಷಣದಿಂದಲೇ ಪ್ರಾರಂಭವಾಗಬೇಕು. ಇದು ಆರೋಗ್ಯ, ಸಾಮಾಜಿಕ, ಶೈಕ್ಷಣಿಕ, ವ್ಯವಸ್ಥೆಯಿಂದ ತೊಡಗಿ ಜನಜೀವನದ ಪ್ರತಿ ಹಂತಗಳಲ್ಲೂ ಕಾರ್ಯ ರೂಪಕ್ಕೆ ಬರಬೇಕು. – ದೇವಿಕಾ ನಾಗೇಶ್, ಸಾಮಾಜಿಕ ಹೋರಾಟಗಾರರು.

“ಮಹಿಳೆಯರನ್ನು ಮನೆಯ ಮಹಾರಾಣಿಯರು” ಎಂದು ಕ್ರಿ.ಶ. 1909ರ ಹಿಂದೂ ಸ್ವರಾಜ್ ಪತ್ರಿಕೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಉಲ್ಲೇಖಿಸಿದ್ದರು. ಆದರೆ ಅವರೇ ದೇಶದ ಸ್ವಾತಂತ್ರ್ಯಕ್ಕೆ ಪುರುಷರಷ್ಟೇ ಮಹಿಳೆಯರ ಸಮಾನ ಭಾಗಿದಾರಿಕೆ ಅವಶ್ಯ ಎನ್ನುವುದನ್ನು ಕ್ರಿ.ಶ. 1945ರಲ್ಲಾಗುವಾಗ ಮನಗಂಡಿದ್ದರು. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರ ಜೊತೆಜೊತೆಗೆ ಮಹಿಳೆಯರ ಮತ್ತು ಮಕ್ಕಳ ಭಾಗವಹಿಸುವಿಕೆ ಕೂಡ ನಿರ್ಣಾಯಕ ಪಾತ್ರ ವಹಿಸಿತ್ತು.

ಆ ಕಾಲದ ಸ್ವಾತಂತ್ರ್ಯ ದಿನಾಚರಣೆಯ ಘಟನೆಯೊಂದು ನೆನಪಾಗುತ್ತದೆ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡ ಪುಟ್ಟ ಹುಡುಗನೊಬ್ಬ ಓಡೋಡಿ ಮನೆಗೆ ಬಂದ. ಮನೆಯೊಳಗಿದ್ದ “ಅಜ್ಜಿಯನ್ನು ಕರೆದು ಅಜ್ಜಿ ನಮಗೆ ಸ್ವಾತಂತ್ರ್ಯ ಸಿಕ್ಕಿತು” ಎಂದ. ಮನೆಯೊಳಗಿನಿಂದಲೇ ಅಜ್ಜಿ ಮೊಮ್ಮಗನಿಗೆ “ಹೌದ ಮಗ.. ಸ್ವಾತಂತ್ರ್ಯ ಅಂದರೆ ಏನು, ಹೇಗಿರುತ್ತದೆ?” ಎಂದು ಪ್ರಶ್ನಿಸಿದಳು. ಮೊಮ್ಮಗನಿಗೂ ಸ್ವಾತಂತ್ರ್ಯ ಎಂದರೆ ಏನು ಎಂಬುದು ಗೊತ್ತಿರಲಿಲ್ಲ. “ಅಜ್ಜಿ ಇದೇ ಸ್ವಾತಂತ್ರ್ಯ” ಎಂದು ಕೈಯಲ್ಲಿದ್ದ ಸಿಹಿ ತಿಂಡಿಗಳನ್ನು ಅವಳಿಗೆ ಕೊಟ್ಟ. ಈಗ ನಾವು ಮಹಿಳೆಯರು ನಮ್ಮೊಳಗೆ ಪ್ರಶ್ನಿಸಿ ಕೊಳ್ಳಬೇಕು. ಸ್ವಾತಂತ್ರ್ಯ ಎಂದರೇನು? ಮಾನಸಿಕ ಸ್ವಾತಂತ್ರ್ಯವೇ? ಭೌತಿಕ ಸ್ವಾತಂತ್ರ್ಯವೇ? ಇದಕ್ಕೆ ಸಮರ್ಪಕವಾಗಿ ಉತ್ತರ ಹೇಳುವ ಸ್ಥಿತಿ ನಮ್ಮಲ್ಲಿದೆಯೇ?. ಮಾನಸಿಕವಾಗಿ ಎಷ್ಟೋ ಮಂದಿ ಮಹಿಳೆಯರು ಇನ್ನೂ ಸ್ವತಂತ್ರರಾಗಿಲ್ಲ ಎಂಬುದಕ್ಕೆ ಇಂತಹ ಎಷ್ಟೋ ಘಟನೆಗಳು ನಮಗೆ ಸಾಕ್ಷಿ ನೀಡುತ್ತವೆ.

ಫೋಟೋ: ಗೂಗಲ್

ಸಂಪ್ರದಾಯದ ಕಪಿ ಮುಷ್ಟಿಯಲ್ಲಿ ಒದ್ದಾಡುತ್ತಿರುವಷ್ಟು ಕಾಲವೂ ಮಹಿಳೆ ಅಕ್ಷರ ಕಲಿತರೂ ಅವಳ ಸಬಲೀಕರಣ ಆಗುವುದಿಲ್ಲ. ಆಕೆ ಮನೆಯೊಳಗೆ ಇರಲಿ ಸಾಮಾಜಿಕ ವ್ಯವಸ್ಥೆಯೊಳಗೆ ಇರಲಿ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಗಳಿಸುವುದಿಲ್ಲ. ಇದು ಅವಳ ಸೋಲು ಎಂದು ಅರಿವಾಗುವ ಸ್ಥಿತಿಯಲ್ಲಿ ಅವಳಿರುವುದಿಲ್ಲ. ದೇಶದ ಒಟ್ಟು ಜನಸಂಖ್ಯೆಯ ಸರಿಸುಮಾರು ಅರ್ಧದಷ್ಟಿರುವ ಮಹಿಳೆಯರ ಹಿನ್ನಡೆ ಸಮಾಜದ, ದೇಶದ ಅಭಿವೃದ್ಧಿಗೆ ದೊಡ್ಡ ಕಂಟಕವಾಗಿ ಪರಿಣಮಿಸುತ್ತದೆ.

ಸಮುದಾಯದ ಅಭಿವೃದ್ಧಿಯಲ್ಲಿ ಪ್ರಜ್ಞಾವಂತ ನಾಗರಿಕರೆಲ್ಲರ ಪಾಲು ಲಿಂಗಾತೀತವಾಗಿ ಮುಖ್ಯವಾಗುತ್ತದೆ. ಇಲ್ಲಿ ಮಹಿಳೆಯರು, ಮಕ್ಕಳು ಹಾಗೂ ದಮನಿತರೆಲ್ಲರೂ ಮಾನವ ಘನತೆಯೊಂದಿಗೆ ಬದುಕಬೇಕು ಎನ್ನವ ಆಶಯ ಇಂದು ನಿನ್ನೆಯದಲ್ಲ. ಆದರೆ ಇತಿಹಾಸ ಹೇಳುವ ಕಥೆಗಳು ಬೇರೆಯೇ ಆಗಿವೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನಸಂಖ್ಯೆಯ  ಮುಕ್ಕಾಲು ಪಾಲು ಮೌನವನ್ನೇ ಹಾಸು ಹೊದ್ದು ಕೂತಿದೆ. ಶೋಷಿತರ ನಿರ್ಲಕ್ಷ್ಯಕ್ಕೆ ಒಳಗಾದವರ ಧ್ವನಿಯಾಗಿ ಮೂಡಿ ಬರಬೇಕಿದ್ದ ಚುನಾಯಿತ ಸರಕಾರಗಳು ಅವರಿಗೆ ಆಹಾರ, ಶಿಕ್ಷಣ, ಸಾಮಾಜಿಕ ನ್ಯಾಯ ನೀಡಬೇಕು ಎನ್ನುವುದನ್ನು ಮರೆತಿವೆ. ಮಾನವ ಕಳ್ಳಸಾಗಣೆ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿಗಳು ನಿರಂತರ ನಡೆಯುತ್ತಿರುತ್ತವೆ. ಕ್ರಿ.ಶ.2018ರ ರಾಷ್ಟ್ರೀಯ ಅಪರಾಧ ಪತ್ತೆ ವರದಿಯ ಪ್ರಕಾರ ದೇಶದಲ್ಲಿ ಪ್ರತಿದಿನ 109 ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಕೋವಿಡ್ 19 ಬಂದ ನಂತರವಂತೂ ಮಹಿಳೆಯರ, ಹೆಣ್ಣುಮಕ್ಕಳ ಸ್ಥಿತಿ ಕೇಳುವವರೇ ಇಲ್ಲ ಎನ್ನುವಂತಾಗಿದೆ. ಮುಗಿಲು ಮುಟ್ಟಿರುವ ಜಾತಿ, ವರ್ಗ, ಲಿಂಗ ತಾರತಮ್ಯಗಳು ಜನಸಾಮಾನ್ಯರ ಬದುಕನ್ನು ಕಂಗೆಡಿಸಿವೆ. 2020 ರ ಸರಕಾರದ ಸಮೀಕ್ಷೆಯೊಂದರಂತೆ ಹೆಣ್ಣು ಮಕ್ಕಳ ಶಿಕ್ಷಣ ಪ್ರಗತಿ 53.7% ಆದರೆ ಇದರಲ್ಲಿ ಉನ್ನತ ಶಿಕ್ಷಣದ  ಅವಕಾಶ ಲಭ್ಯವಾಗಿರುವುದು ಕೇವಲ 1% ಹೆಣ್ಣು ಮಕ್ಕಳಿಗೆ ಮಾತ್ರ. ನಮ್ಮ ದೇಶದಲ್ಲಿ ಮಹಿಳೆಯರ ಹಾಗೂ ಹೆಣ್ಣುಮಕ್ಕಳ ಸುರಕ್ಷತೆಗಾಗಿ ಸಾಕಷ್ಟು ಉತ್ತಮ ಕಾನೂನುಗಳಿವೆ. ಆದರೆ ಈ ಕಾನೂನುಗಳ ಬಗ್ಗೆ ಹೆಚ್ಚಿನ ಜನರಿಗೆ ಅರಿವೇ ಇರುವುದಿಲ್ಲ, ಮಾತ್ರವಲ್ಲ ಇವುಗಳ ಅನುಷ್ಠಾನದಲ್ಲೂ ಲೋಪದೋಷಗಳಿವೆ.

ಲಿಂಗತ್ವ ಸಮನ್ಯಾಯದ ಬಗ್ಗೆ ಚರ್ಚೆಗಳು ಪ್ರಾರಂಭವಾಗಿ ಈಗಾಗಲೇ ಶತಕವೇ ಕಳೆದಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಎನ್ನುವ ಹಂತದಿಂದ ರಾಜಕೀಯ ಪ್ರಾತಿನಿಧ್ಯದ ಅಗತ್ಯದ ಬಗ್ಗೆ ಮಹಿಳೆಯರು ಮಾತನಾಡುವ ಹಂತ ತಲುಪಿದ್ದಾರೆ. ಸ್ಥಳೀಯವಾಗಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೀಸಲಾತಿಯಡಿ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಅಧಿಕಾರದ ಗದ್ದುಗೆ ಏರಿದ್ದಾರೆ. ಅಧಿಕಾರ ಎನ್ನುವಾಗ ನಮ್ಮಲ್ಲಿರುವ ಮಾದರಿಗಳು ಪುರುಷ ಪ್ರಧಾನ ಸಮಾಜದ ಪಡಿಯಚ್ಚುಗಳು. ಲಿಂಗಾಧರಿತ ಅಸಮಾನತೆಯನ್ನು ಅಳಿಸುವ, ಸಮಾನತೆ ಸಾಮಾಜಿಕ ನ್ಯಾಯ ಸಾಧಿಸುವ ಗುರಿ ಸವಾಲುಗಳು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಬಂದವರಿಗಿದೆ. ಮೀಸಲಾತಿಯಡಿ ದೊರೆತ  ಅಧಿಕಾರವನ್ನು ದುರುಪಯೋಗ ಆಗದಂತೆ ಕಾಪಾಡಿಕೊಳ್ಳುವ ಎಚ್ಚರ ಮಹಿಳೆಯರಿಗೂ ಇರಬೇಕಾಗುತ್ತದೆ.

ನಮ್ಮ ಸಂವಿಧಾನದ 39ನೇ ಪರಿಚ್ಛೇದದಲ್ಲಿ ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳು ಲಿಂಗಾತೀತವಾಗಿ ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಸ್ವತಂತ್ರ ಭಾರತದ 74 ವರುಷಗಳ ಈ ಪಯಣದಲ್ಲಿ ಅವರ ಸ್ಥಿತಿಗತಿ ಹಾಗೂ ಸಮಾಜದಲ್ಲಿ ಅವರ ಸ್ಥಾನಮಾನಗಳ ಸ್ಪಷ್ಟ ಚಿತ್ರಣ ನೀಡಲು ಅಂಕಿ ಅಂಶಗಳು ಮುಖ್ಯವಾಗುತ್ತವೆ. ಸುಸ್ಥಿರ ಅಭಿವೃದ್ಧಿ  ಗುರಿಸಾಧನೆಯ ಪಟ್ಟಿಯಲ್ಲಿ ವಿಶ್ವ ಸಂಸ್ಥೆಯ 198 ಸದಸ್ಯ ರಾಷ್ಟ್ರಗಳ ಪೈಕಿ ಭಾರತ 115ರಿಂದ 117ನೆಯ ಸ್ಥಾನಕ್ಕೆ ಕುಸಿದಿದೆ. ಲಿಂಗ ಅಸಮಾನತೆ, ಆಹಾರ ಭದ್ರತೆ, ಸುಸ್ಥಿರ ಕೈಗಾರಿಕೀಕರಣ ಹಾಗೂ ಮೂಲಭೂತ ಸೌಕರ್ಯ ಇತ್ಯಾದಿ ದೇಶಕ್ಕೆ ಸವಾಲಾಗಿರುವ ಅಂಶಗಳು. ದೇಶದಲ್ಲಿ 5ವರುಷಗಳೊಳಗಿನ ಗಂಡು-ಹೆಣ್ಣು ಮಕ್ಕಳ ನಡುವಿನ ಲಿಂಗಾನುಪಾತವು 1000:924 ಇರುವುದು ಸುಸ್ಥಿರ ಅಭಿವೃದ್ಧಿಯಲ್ಲಿ ಇಳಿಕೆಗೆ ಒಂದು ಮುಖ್ಯ ಕಾರಣ ಎನ್ನುವುದು ಮತ್ತೊಂದು ಗಮನಿಸಲೇಬೇಕಾದ  ಅಂಶ.

ಫೋಟೋ ಕೃಪೆ: ಗೂಗಲ್

ಕುಟುಂಬವೆಂದರೆ ಜೀವನ ಪ್ರೀತಿ ಅರಳುವ, ಕೂಡಿ ಆಡಿ ಕಲೆಯುವ, ಸಾಮರಸ್ಯದ ಬದುಕು ನಡೆಸುವ ಕರ್ಮ ಶಾಲೆ. ಸಮಾನತೆಯೆಂದರೆ ಮಾನವೀಯತೆ. ಎಲ್ಲಿ ಅಂತಃಕರಣವಿರುತ್ತದೆಯೋ ಅಲ್ಲಿ ಸಮಾನತೆ ಇದ್ದೇ ಇರುತ್ತದೆ. ಗಂಡಿರಲಿ ಹೆಣ್ಣಿರಲಿ ಸಮಬಾಳು ಸಮಪಾಲು ಎಂಬ ನೆಲೆಯಲ್ಲಿ ಕಟ್ಟಿಕೊಂಡ ಬದುಕು ಜೀವನ ಪದ್ಧತಿಯಾಗಿ ಸಮಾಜಕ್ಕೂ ವಿಸ್ತರಿಸಿದಾಗ ಅಲ್ಲಿ ಸಹಜ ಸೌಂದರ್ಯವಿರುತ್ತದೆ. ಲಿಂಗ ಸಮಾನತೆಯ ಪ್ರಾಥಮಿಕ ಪಾಠಗಳನ್ನು ಮಗು ಕಲಿಯ ಬೇಕಿರುವುದು ಕುಟುಂಬದೊಳಗೆ. ನೋಡಿ, ಆಡಿ ಕಲಿಯುವ ಮಗು ಹೆತ್ತವರಿಂದ ಹಿರಿಯರಿಂದ ಶಿಕ್ಷಕರಿಂದ ಅವರ ನಡವಳಿಕೆಗಳಿಂದ ಜೀವನ ಮೌಲ್ಯಗಳನ್ನು ರೂಢಿಸಿ ಕೊಳ್ಳುತ್ತದೆ. ಮಗುವಿನ ಜೊತೆ ಒಡನಾಡುವ ಪ್ರತಿಯೊಬ್ಬರೂ ಲಿಂಗಸೂಕ್ಷ್ಮ ಪ್ರಜ್ಞೆಯನ್ನು ಬೆಳೆಸಿ ಕೊಳ್ಳಬೇಕಾಗಿರುವುದು ಇಂದಿನ ತುರ್ತು. ಒಂದು ವೇಳೆ ಈ ಹಂತದಲ್ಲಿ ನಾವು ಎಡವಿದರೆ ಪ್ರತಿಹಂತದಲ್ಲೂ ಹಿಂಸೆ, ದೌರ್ಜನ್ಯ, ತಾರತಮ್ಯಗಳು ವಿಜೃಂಭಿಸುತ್ತವೆ. ಇದು ರೋಗವಾಗಿ ಉಲ್ಬಣಿಸಿದರೆ ಸಮಾಜ ಕಂಟಕ ಶಕ್ತಿಯಾಗಿ ಬೆಳೆಯುತ್ತದೆ. ದೇಶ ಕಾಲಾತೀತವಾಗಿ ಎಲ್ಲೆ ಮೀರಿ ಹರಡುತ್ತದೆ. ಇದಕ್ಕೆ ಚಿಕಿತ್ಸೆಯೆಂದರೆ ನಾವು ಹೆಣ್ಣು– ಗಂಡು ಬಡವ ಶ್ರೀಮಂತ ಎಂಬ ಭೇದವಿಲ್ಲದಂತೆ ಪ್ರಾಮಾಣಿಕವಾಗಿ ಅಂತರಂಗ ಬಹಿರಂಗ ಶುದ್ಧಿಯೊಂದಿಗೆ ಸಮಾನತೆಯೆಡೆ ಹೆಜ್ಜೆ ಇಡುವುದು; ಬದುಕಿನ ಕ್ರಮವಾಗಿ ಇದನ್ನು ಆಚರಣೆಗೆ ತರುವುದು.

ಲಿಂಗಸಮಾನತೆಯನ್ನು ಒಳಗೊಂಡಂತೆ ಅಭಿವೃದ್ಧಿಯ ವಿವಿಧ ಆಯಾಮಗಳನ್ನು ಮನೆ, ಕುಟುಂಬ, ಸಮುದಾಯ ಹಾಗೂ ಸಮಾಜದ ವಿವಿಧ ಅಂಗಗಳಿಗೆ ವಿಸ್ತರಿಸುವ, ನೆಲೆಗೊಳಿಸುವ ಕ್ರಿಯೆ ತಕ್ಷಣದಿಂದಲೇ ಪ್ರಾರಂಭವಾಗಬೇಕು. ಇದು ಆರೋಗ್ಯ, ಸಾಮಾಜಿಕ, ಶೈಕ್ಷಣಿಕ, ವ್ಯವಸ್ಥೆಯಿಂದ ತೊಡಗಿ ಜನಜೀವನದ ಪ್ರತಿ ಹಂತಗಳಲ್ಲೂ ಕಾರ್ಯ ರೂಪಕ್ಕೆ ಬರಬೇಕು. ಸಹ ಜೀವಿಗಳಲ್ಲಿ ಸಮಾನತೆಯೆನ್ನುವುದು ಹಕ್ಕು ಎಂಬ ಮಾದರಿಯಲ್ಲಿ ಮನೆಯೊಳಗಿಂದ ಇದು ಆಚರಣೆಗೆ ಬಂದರೆ ಇದಕ್ಕೆ ಭಾವನಾತ್ಮಕ ಸ್ಪರ್ಶ ದೊರೆತು ಗಟ್ಟಿಗೊಳ್ಳುತ್ತದೆ. ಬಹುತ್ವ ಭಾರತ ಪರಿಕಲ್ಪನೆ ಎಷ್ಟು ಚೆನ್ನಾಗಿದೆ ಅಲ್ಲವೇ? ನಮ್ಮ ಹಿರಿಯ ಮುತ್ಸುದ್ದಿಗಳು ತುಳಿದ ಹಾದಿಯಿದು. ವಿವಿಧತೆಯಲ್ಲಿ ಏಕತೆಯನ್ನು ಕಂಡ ಸಂಸ್ಕೃತಿ ನಮ್ಮದು. ಇಲ್ಲಿ ಎಲ್ಲರಿಗೂ ಹಕ್ಕು ಬದ್ಧವಾದ ನೆಮ್ಮದಿಯ ಬದುಕು ಕಲ್ಪಿಸಬೇಕೆಂಬ ಆಶಯದಲ್ಲಿ ರೂಪುಗೊಂಡ ಸಂವಿಧಾನ ನಮ್ಮದು. ಈ ಪ್ರಜಾಪ್ರಭುತ್ವ ದೇಶದ ಚಕ್ರದಡಿಯಲ್ಲಿ ಸಹಜೀವಿಗಳ ಜೊತೆ ನಿಗರ್ತಿಕ , ದಮನಿತರನ್ನು ಘನತೆಯಿಂದ ನಡೆಸಿಕೊಳ್ಳುವ, ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ಶ್ರಮಿಸುವ ಬಹುದೊಡ್ಡ ಜವಾಬ್ದಾರಿ ನಮ್ಮದಾಗಿದೆ. ಗಂಡಿರಲಿ ಹೆಣ್ಣಿರಲಿ ಮನುಷ್ಯತ್ವ ಅರಳಿಸುವ ಈ ಕಾಯಕದಲ್ಲಿ ನಾವೆಲ್ಲರೂ ಜೊತೆ ಜೊತೆಯಾಗಿ ಹೆಜ್ಜೆಯಿಡೋಣ

ದೇವಿಕಾ ನಾಗೇಶ್

ಕವಿಗಳು, ಸಾಮಾಜಿಕ ಕಾರ್ಯಕರ್ತೆ

More articles

Latest article