ಬೆಂಗಳೂರು: ಯಲಹಂಕ ಸಮೀಪವಿರುವ ಕೊಡಿಗೆಹಳ್ಳಿಯ ಬಾಲಾಜಿ ಅಪಾರ್ಟ್ ಮೆಂಟ್ ನಲ್ಲಿ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ನಂತರ ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ವರದಿಯಾಗಿದೆ.
ಪುತ್ರ ಶ್ರೇಯಾನ್ (6) ಹಾಗೂ ಪುತ್ರಿ ಚಾರ್ವಿ (ಒಂದೂವರೆ ವರ್ಷ) ಕೊಲೆಯಾದ ಮಕ್ಕಳು. ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಬಳಿಕ 35 ವರ್ಷದ ತಾಯಿ ಕುಸುಮಾ ಅವರೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿಯ ಸುರೇಶ್
ಮತ್ತು ಯಶವಂತಪುರದ ಕುಸುಮಾ 2015ರಲ್ಲಿ ವಿವಾಹವಾಗಿದ್ದರು. ಇವರು ಬಾಲಾಜಿ ಲೇಔಟ್‌ನ ಫ್ಲ್ಯಾಟ್‌ನಲ್ಲಿ ನೆಲಸಿದ್ದರು. ಸುರೇಶ್ ಅವರು ವೈಟ್‌ಫೀಲ್ಡ್‌ನ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಮಕ್ಕಳಿದ್ದ ಕಾರಣಕ್ಕೆ ಕುಸುಮಾ ಉದ್ಯೋಗಕ್ಕೆ
ರಾಜೀನಾಮೆ ನೀಡಿದ್ದರು.
ಇವರ ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು ವಶಕ್ಕೆ ಪಡೆದುಕೊಂಡು
ಪರಿಶೀಲಿಸಲಾಗುತ್ತಿದೆ. ನಮ್ಮ ಸಾವಿಗೆ ನಾವೇ ಕಾರಣ. ಅಭಿನಂದನೆಗಳು… ವಿನ್ ಯುವರ್ ಈಗೋ… ಜೀವನ ಪೂರ್ತಿ ಇದು ನೆನಪಿನಲ್ಲಿ ಇರಬೇಕು ಎಂದು ಬರೆಯಲಾಗಿದೆ. ಮರಣ ಪತ್ರದ ನೈಜತೆ ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕುಸುಮಾ ಅವರ ಸಹೋದರ ದೂರು ನೀಡಿದ್ದು, ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಸುರೇಶ್ ಅವರನ್ನು
ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲಿಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ವರದಿ ಬಂದ ಬಳಿಕ ಮಕ್ಕಳ ಸಾವು ಹೇಗಾಯಿತು ಎಂಬುದು ಗೊತ್ತಾಗಲಿದೆ ಎಂದು ಮೂಲಗಳು ಹೇಳಿವೆ. ಬುಧವಾರ ಬೆಳಿಗ್ಗೆ ಸುರೇಶ್ ಕೆಲಸಕ್ಕೆ ತೆರಳಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿತ್ತು. ಕೂಡಲೇ ದೂರು ಸಲ್ಲಿಸಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.
ವಿವಾಹವಾದ ಆರಂಭದಲ್ಲಿ ದಂಪತಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಕ್ರಮೇಣ ಭಿನ್ನಾಭಿಪ್ರಾಯ ಉಂಟಾಗಿತ್ತು. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲಿಸರು ಹೇಳಿದ್ದಾರೆ. ಎರಡು ದಿನಗಳ ಹಿಂದೆ ದಂಪತಿ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯಿಂದ ಕುಸುಮಾ ತೀವ್ರ ಬೇಸರಗೊಂಡಿದ್ದರು. ಇದೇ ವಿಷಯಕ್ಕೆ ಅವರು ಮಕ್ಕಳನ್ನೂ ಕೊಂದು ತಾನೂ ಆತ್ಮಹತ್ಯೆಗೆ
ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.