ಮಡಿಕೇರಿ: ಇಲ್ಲಿನ ದುಬಾರೆ ಆನೆ ಶಿಬಿರದಲ್ಲಿ ಆನೆಗಳಿಗೆ ಸ್ನಾನ ಮಾಡಿಸುವಾಗ ಕಾದಾಟ ನಡೆದಿದ್ದು, ಈ ವೇಳೆ ನಿಂತು ನೋಡುವಾಗ ಆಯತಪ್ಪಿ ಕೆಳಗೆ ಬಿದ್ದ ಮಹಿಳೆ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ತಮಿಳುನಾಡು ಮೂಲಕ ಮಹಿಳೆ ಜಿನ್ಶು ಮೃತ ದುರ್ದೈವಿ. ಕಾದಾಟದ ವೇಳೆ ಅಯತಪ್ಪಿ ನೀರಿನೊಳಗೆ ಬಿದ್ದಿದ್ದರು. ಅವರ ಮೇಲೆ ಸಾಕಾನೆಗಳು ತುಳಿದು ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಅವರನ್ನು ರಕ್ಷಣೆ ಮಾಡಲು ಪತಿ ಪ್ರಯತ್ನ ನಡೆಸಿದ್ದರು. ಆದರೆ ಕಾದಾಟದ ನಡುವೆ ದಿಟ್ಟತನ ತೋರಿಸಿದ ತಂದೆ ಮಗುವನ್ನು ರಕ್ಷಣೆ ಮಾಡಿದ್ದಾರೆ.
ಕೊಡಗು ಜಿಲ್ಲೆ ದುಬಾರೆ ಶಿಬಿರದಲ್ಲಿ ಎರಡು ಸಾಕಾನೆಗಳ ಕಾದಾಟದ ವೇಳೆ ಅನಿರೀಕ್ಷಿತವಾಗಿ ಮೃತಪಟ್ಟ ಮಹಿಳೆಗೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ.ಇದು ಅತ್ಯಂತ ಆಘಾತಕರ ಘಟನೆ ಎಂದಿದ್ದಾರೆ.
ಸಾಕಾನೆಗಳಾದ ಕಂಜನ್ ಮತ್ತು ಮಾರ್ತಾಂಡ ಆನೆಗಳು ಸ್ನಾನ ಮಾಡಿಸುತ್ತಿದ್ದ ವೇಳೆ ಪರಸ್ಪರ ಕಾದಾಟ ನಡೆಸಿದ್ದು, ಮಾವುತರು ನಿಯಂತ್ರಿಸುತ್ತಿದ್ದರೂ ಮುನ್ನುಗ್ಗಿದ ಕಂಜನ್ ಆನೆ, ಮಾರ್ತಾಂಡ ಆನೆಗೆ ಗುದ್ದಿದ್ದು, ಮಾರ್ತಾಂಡ ಆಯ ತಪ್ಪಿ ಕೆಳಗೆ ಬಿದ್ದಾಗ, ಈ ಮಹಿಳೆ ಆನೆಯ ಕೆಳಗೆ ಸಿಲುಕಿ ಮೃತಪಟ್ಟಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದು ಯಾರೂ ಊಹಿಸದಂತಹ ಘಟನೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಇಂತಹ ಅಚಾತುರ್ಯಗಳು ಆಗದ ರೀತಿಯಲ್ಲಿ ಕ್ರಮ ವಹಿಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.

