ನವದೆಹಲಿ: ಒಂದು ವೇಳೆ ಮಹಿಳೆ ತನ್ನ ಪತಿಯನ್ನು ಹೊರತುಪಡಿಸಿ ಅನ್ಯ ಪುರುಷರ ಜೊತೆ ದೈಹಿಕ ಸಂಬಂಧ ಹೊಂದದೆ ಕೇವಲ ಪ್ರೀತಿ, ವಾತ್ಸಲ್ಯದ ಸಂಬಂಧವನ್ನು ಮಾತ್ರ ಹೊಂದಿದ್ದರೆ ಅದು ವ್ಯಭಿಚಾರಕ್ಕೆ ಸಮನಾಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದೈಹಿಕ ಸಂಬಂಧ ಹೊಂದಿದರೆ ಮಾತ್ರ ಅದನ್ನು ಅಕ್ರಮ ಸಂಬಂಧ ಅಥವಾ ವ್ಯಭಿಚಾರ ಎಂದು ಕರೆಯಲು ಸಾಧ್ಯ ಎಂದು ಹೈಕೋರ್ಟ್ ತೀರ್ಪು ನೀಡಿದೆ. ತನ್ನ ಪತ್ನಿ ಪರ ಪುರುಷನನ್ನು ಪ್ರೀತಿಸುತ್ತಿರುವುದರಿಂದ ಆಕೆ ತನ್ನಿಂದ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿದೆ.
ಪತಿಯ ವಾದವನ್ನು ತಿರಸ್ಕರಿಸಿರುವ ನ್ಯಾಯಲಯ ವ್ಯಭಿಚಾರವೆಂದರೆ ಪರ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆ ಹೊಂದಿರಬೇಕು. ಕೇವಲ ಪ್ರೀತಿ ಮಾಡುತ್ತಿದ್ದರೆ ಅದು ವ್ಯಭಿಚಾರ ಎಂದು ವೆಂದು ಪರಿಗಣೀಸಲಾಗುವುದಿಲ್ಲ ನ್ಯಾಯಮೂರ್ತಿ ಜಿ.ಎಸ್. ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.
ಪತ್ನಿಗೆ 4,000 ರೂ.ಗಳ ಮಧ್ಯಂತರ ಜೀವನಾಂಶವನ್ನು ಪಾವತಿಸಲು ಆದೇಶ ಹೊರಡಿಸಿದ ಕುಟುಂಬ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಪರಿಷ್ಕರಣಾ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಯಾವುದೇ ದೈಹಿಕ ಸಂಬಂಧವಿಲ್ಲದೆ ಹೆಂಡತಿ ಬೇರೊಬ್ಬರ ಬಗ್ಗೆ ಪ್ರೀತಿಯನ್ನು ಮಾತ್ರ ಹೊಂದಿದ್ದರೆ ಅದನ್ನು ವ್ಯಭಿಚಾರ ಎಂದು ಹೇಳಲಾಗುವುದಿಲ್ಲ. ಹಾಗೆಯೇ, ಗಂಡನ ಅಲ್ಪ ಆದಾಯದ ಕಾರಣಕ್ಕೆ ಜೀವನಾಂಶವನ್ನು ನಿರಾಕರಿಸಲೂ ಆಗುವುದಿಲ್ಲ. ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ಸಮರ್ಥರಲ್ಲ ಎಂದು ಸಂಪೂರ್ಣವಾಗಿ ತಿಳಿದೂ ಅವರು ಮದುವೆಯಾದರೆ ಅದಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ. ಅವರು ಸಮರ್ಥ ವ್ಯಕ್ತಿಯಾಗಿದ್ದರೆ ಅವರು ತಮ್ಮ ಪತ್ನಿಯನ್ನು ನಿರ್ವಹಿಸಲು ಅಥವಾ ನಿರ್ವಹಣಾ ಮೊತ್ತವನ್ನು ಪಾವತಿಸಲು ಏನನ್ನಾದರೂ ಸಂಪಾದಿಸಲೇಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.