ನವದೆಹಲಿ : ಸಂವಿಧಾನದ 370ನೇ ವಿಧಿಯ ರದ್ದತಿ ಕುರಿತು ಟೀಕೆ ಮಾಡುವುದು ಹಾಗೂ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಗೆ ಆ ದೇಶದ ನಾಗರಿಕರಿಗೆ ಶುಭಾಶಯ ಕೋರುವುದು ಭಾರತೀಯ ದಂಡಸಂಹಿತೆಯಡಿ ಅಪರಾಧವಲ್ಲ. ಇದು ಸಂವಿಧಾನದ 19ನೇ ವಿಧಿಯಡಿ ಭಾರತದ ಪ್ರಜೆಗೆ ನಿಗದಿಯಾದ ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕು ಎಂದು ಗುರುವಾರ ಸುಪ್ರೀಂ ಕೋರ್ಟ್ ಹೇಳಿದೆ.
ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಟೀಕಿಸಿ ಮತ್ತು ವಾಟ್ಸಪ್ ಸ್ಟೇಟಸ್ ಮೂಲಕ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿರುವುದರ ವಿರುದ್ಧ ವ್ಯಕ್ತಿಯೊಬ್ಬರ ದೂರಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಕಾಲೇಜು ಪ್ರೊಫೆಸರ್ ಜಾವೇದ್ ಅಹ್ಮದ್ ಹಜಾಮ್ ವಿರುದ್ಧ (ಅರ್ಜಿದಾರ) ವಿರುದ್ಧ ದಾಖಲಿಸಿಕೊಂಡಿದ್ದ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153A ಅಡಿಯಲ್ಲಿ ದ್ವೇಷ ಭಾಷಣದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.
ಇತರ ಶಿಕ್ಷಕರು, ಹಲವು ಪೋಷಕರು ಸಹ ಸದಸ್ಯರಾಗಿದ್ದ ಕಾಲೇಜು ವಾಟ್ಸಪ್ ಗುಂಪಿನಲ್ಲಿ ಅರ್ಜಿದಾರ ಪ್ರೊಫೆಸರ್ ಜಾವೇದ್, ಆರ್ಟಿಕಲ್ 370 ರದ್ದಾದ ಆಗಸ್ಟ್ 5 ನೇ ತಾರೀಖನ್ನು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಕಪ್ಪುದಿನ ಎಂದು ಹೇಳುವುದಲ್ಲದೇ, ಆರ್ಟಿಕಲ್ 370 ರದ್ದಾಗಿರುವುದರಿಂದ ತಾವು ಸಂತೋಷವಾಗಿಲ್ಲ ಎಂದು ಬರೆದುಕೊಂಡಿದ್ದರು. ಮತ್ತು ಆಗಸ್ಟ್ 14 ರಂದು ಪಾಕಿಸ್ತಾನದ ನಾಗರಿಕರಿಗೆ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳನ್ನು ಕೋರಿದ್ದರು. ಈ ಆರೋಪದಡಿ ಅವರ ಮೇಲೆ ಐಪಿಸಿಯ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಾಯಿತು. ನಂತರ ಅವರು ಪ್ರಕರಣವನ್ನು ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಆಚರಿಸುವ ಕುರಿತು ಅರ್ಜಿದಾರರು ಹೇಳಿರುವುದು ಐಪಿಸಿ ಸೆಕ್ಷನ್ 153 ಎ ವ್ಯಾಪ್ತಿಗೆ ಬರುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿತಾದರೂ, ಆರ್ಟಿಕಲ್ 370 ಗೆ ಸಂಬಂಧಿಸಿದ ಇತರ ಎರಡು ವಾಟ್ಸಾಪ್ ಸ್ಟೇಟಸ್ ಅಪ್‌ಡೇಟ್‌ಗಳು ಆಕ್ಷೇಪಾರ್ಹವಾಗಿವೆ ಮತ್ತು ಸೆಕ್ಷನ್ 153 ಎ ಐಪಿಸಿಗೆ ಒಳಪಡುತ್ತವೆ ಎಂದು ಅಭಿಪ್ರಾಯಪಟ್ಟು ಹೈಕೋರ್ಟ್ ಅರ್ಜಿದಾರರ ಮನವಿಯನ್ನು ವಜಾ ಮಾಡಿತು. ನಂತರ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿಗಳಾದ ಅಭಯ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ವಿಭಾಗೀಯ ಪೀಠವು, ಸಂವಿಧಾನದ 19 ನೇ ವಿಧಿಯಡಿ ಬೇರೆ ದೇಶದ ಸ್ವಾತಂತ್ರ್ಯದ ದಿನಗಳಲ್ಲಿ ಇತರ ದೇಶಗಳ ನಾಗರಿಕರಿಗೆ ಶುಭ ಹಾರೈಕೆಗಳನ್ನು ಸಲ್ಲಿಸುವುದು ಭಾರತೀಯ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಅದೇ ರೀತಿ ಭಾರತದ ನಾಗರಿಕರು ಆಗಸ್ಟ್ 14 ರಂದು ಪಾಕಿಸ್ತಾನದ ನಾಗರಿಕರಿಗೆ ಶುಭ ಹಾರೈಸುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ಸದ್ಭಾವನೆಯ ಸಂಕೇತವಾಗಿದೆ. ಇದು ಮೇಲ್ಮನವಿ ಅರ್ಜಿದಾರರು ಹೊಂದಿರುವ ಕಾರಣ, ಉದ್ದೇಶ ಮತ್ತು ಧರ್ಮದಿಂದ ಆರೋಪಿಸಲು ಸಾಧ್ಯವಿಲ್ಲ.
“ಅದೇ ರೀತಿ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರದ ಪ್ರತಿಯೊಂದು ಕ್ರಮವನ್ನು ಟೀಕಿಸುವ ಹಕ್ಕಿದೆ. ಅದಕ್ಕಾಗಿ ರಾಜ್ಯದ ಪ್ರತಿಯೊಂದು ನಿರ್ಧಾರವನ್ನು ರಾಜ್ಯದ ಯಾವುದೇ ನಿರ್ಧಾರದಿಂದ ಅತೃಪ್ತ ಎಂದು ಹೇಳುವ ಹಕ್ಕನ್ನು ಆತ ಹೊಂದಿದ್ದಾನೆ. ಈ ಹಿನ್ನೆಲೆಯಲ್ಲಿ ಆರ್ಟಿಕಲ್ 370 ರ ರದ್ದತಿಯನ್ನು ಟೀಕಿಸುವುದು IPC ಯ ಸೆಕ್ಷನ್ 153A ಅಡಿ ಅಪರಾಧವಲ್ಲ” ಎಂದು ಕೋರ್ಟ್ ಹೇಳಿದೆ.
ಪೊಲೀಸರಿಗೆ ಸುಪ್ರಿಂ ತರಾಟೆ
ಮೇಲ್ಮನವಿದಾರರ ವಿರುದ್ಧ ಮೊಕದ್ದಮೆ ಹೂಡಿದ್ದಕ್ಕಾಗಿ ಪೊಲೀಸರ ಕ್ರಮವನ್ನು ಖಂಡಿಸಿರುವ ಸುಪ್ರಿಂ ಕೋರ್ಟ್, “ಸಂವಿಧಾನ 19(1) (ಎ) ವಿಧಿಯಿಂದ ಖಾತರಿಪಡಿಸಲಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆ ಮತ್ತು ಅವರ ಈ ಸ್ವಾತಂತ್ರ್ಯದ ಮೇಲೆ ಸಮಂಜಸವಾದ ನಿರ್ಭಂಧದ ವ್ಯಾಪ್ತಿಯ ಬಗ್ಗೆ ನಮ್ಮ ಪೊಲೀಸ್ ಯಂತ್ರವನ್ನು ಪ್ರಬುದ್ಧಗೊಳಿಸುವ ಮತ್ತು ಈ ಕುರಿತು ಅವರಿಗೆ ಶಿಕ್ಷಣ ನೀಡುವ ಸಮಯ ಬಂದಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.