Wednesday, December 11, 2024

ಬೆಳಗಾವಿಯಲ್ಲಿ ಅಧಿವೇಶನ ಆರಂಭ; ಒಡೆದ ಮನೆಯಾದ ಬಿಜೆಪಿ; ಉಪ ಚುನಾವಣೆಗಳ ಗೆಲುವಿನ ಹುಮ್ಮಸ್ಸಿನಲ್ಲಿ ಸರ್ಕಾರ    

Most read

ಎರಡು ವಾರಗಳ ಚಳಿಗಾಲದ ಅಧಿವೇಶನ ಇಂದಿನಿಂದ  ಬೆಳಗಾವಿಯ ಸುವರ್ಣಸೌಧದಲ್ಲಿ ಆರಂಭವಾಗಿದೆ. ಉಪ ಚುನಾವಣೆಗಳ ಗೆಲುವು ಮತ್ತು ಐದು ಗ್ಯಾರಂಟಿಗಳ ರಕ್ಷಣೆ ಪಡೆಯಲು ಸರ್ಕಾರ ಮುಂದಾಗಿದ್ದರೆ, ವಿವಿಧ ಹಗರಣಗಳನ್ನು ಪ್ರಸ್ತಾಪಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಕಟ್ಟಿ ಹಾಕಲು ತುದಿಗಾಲಲ್ಲಿ ನಿಂತಿದೆ. ಆದರೆ ಬಿಜೆಪಿಯ ಬಣ ಬಡಿದಾಟ, ಉಪ ಚುನಾವಣೆಗಳ ಸೋಲು ಒಂದು ಹೆಜ್ಜೆಯನ್ನು ಹಿಂದಿಡುವಂತೆ ಮಾಡಿದೆ. ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳ ಗೆಲುವಿನ ವಿಶ್ವಾಸದೊಂದಿಗೆ ಕಾಂಗ್ರೆಸ್‌ ಸರ್ಕಾರ ಬೀಗುತ್ತಿದೆ.

ಬಿಜೆಪಿ ಒಡೆದ ಮನೆಯಾಗಿದೆ. ಪಕ್ಷದ ಅಧ್ಯಕ್ಷರನ್ನೇ ಶಿಸ್ತಿನ ಪಕ್ಷದೊಳಗಿನ ಒಂದು ಗುಂಪು ಪ್ರಬಲವಾಗಿ ಹಾದಿಬೀದಿಗಳಲ್ಲಿ ವಿರೋಧಿಸುತ್ತಿದೆ. ಪಕ್ಷದ ಅಧ್ಯಕ್ಷರ ವಿರುದ್ಧವೇ ಭ್ರಷ್ಟಾಚಾರ, ಸಿಎಂ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಆರೋಪಗಳನ್ನು ಮಾಡುತ್ತಿದೆ.  ಹಗರಣಗಳಿದ್ದರೂ ಮೇಲ್ಮನೆ ಮತ್ತು ಕೆಳಮನೆಯಲ್ಲಿ ದುರ್ಬಲ ಪ್ರತಿಪಕ್ಷಗಳ ನಾಯಕರು ಇರುವುದು ಕಾಂಗ್ರೆಸ್‌ ಸರ್ಕಾರಕ್ಕೆ ವರದಾನವಾಗಿದೆ.

ಸದನದಲ್ಲಿ ಮುಡಾ ಹಗರಣ ಪ್ರಮುಖವಾಗಿ ಪ್ರಸ್ತಾಪವಾಗಲಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ ಅವರೇ ನೇರ ಫಲಾನುಭವಿಯಾಗಿರುವುದನ್ನೇ ಅಸ್ತ್ರವಾಗಿಟ್ಟುಕೊಂಡು ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಬಹುದು. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ನ್ಯಾಯಾಂಗ ನಿಂದನೆಯಾಗಲಿದೆ ಎಂದು ಸರ್ಕಾರ ಪ್ರತಿಪಕ್ಷದ ಬಾಯಿ ಮುಚ್ಚಿಸಬಹುದು.

ವಕ್ಫ್‌ ನೋಟಿಸ್‌ ಬಿಜೆಪಿಯ ನೆಚ್ಚಿನ ಅಸ್ತ್ರ. ನೇರವಾಗಿ ತನ್ನ ಮುಸಲ್ಮಾನ ವಿರೋಧಿ ಅಜೆಂಡಾಗೆ ಹೊಂದಾಣಿಕೆಯಾಗುವುದು ಮತ್ತೊಂದು ಕಾರಣ. ಈಗಾಗಲೇ ಸರ್ಕಾರ ನೋಟಿಸ್‌ ಗಳನ್ನು ಹಿಂಪಡೆದಿದೆ. ಹಾಗಾಗಿ ಬಿಜೆಪಿಗೆ ಲಾಭವಾಗಲಿಕ್ಕಿಲ್ಲ.

ಇಂತಹ ಹಲವು ವಿಷಯಗಳನ್ನು ಪ್ರಸ್ತಾಪಿಸಲು ಪ್ರತಿಪಕ್ಷ ನಾಯಕ ಆರ್. ಅಶೋಕ್‌ ಅವರಿಗೆ ಅವರದ್ದೇ ಪಕ್ಷದ ಸಹಕಾರ ಸಿಗುವುದು ಕಷ್ಟಸಾಧ್ಯ.  ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಜಯಪುರ ಶಾಸಕ ಬಸನಗೌಡ ಯತ್ನಾಳ್‌ ನಡುವಿನ ಭಿನ್ನಮತ ಹಾದಿರಂಪ ಬೀದಿರಂಪವಾಗಿ ಮಾರ್ಪಟ್ಟಿದೆ. ಯತ್ನಾಳ್‌ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು  ಪಟ್ಟು ಹಿಡಿದಿದ್ದಾರೆ. ಇದರ ಲಾಭವನ್ನು ಆಡಳಿತಾರೂಢ ಕಾಂಗ್ರೆಸ್‌ ಪಡೆಯದೆ ಇರಲಾರದು.

ಚನ್ನಪಟ್ಟಣ ಫಲಿತಾಂಶ ಜೆಡಿಎಸ್‌ ಉತ್ಸಾಹವನ್ನು ಸಂಪೂರ್ಣವಾಗಿ ಕುಗ್ಗಿಸಿದೆ. ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷದಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಎಚ್.ಡಿ.ರೇವಣ್ಣ ಅವರ ಕುಟುಂಬ ಲೈಂಗಿಕ ಹಗರಣಗಳಲ್ಲಿ ಸಿಲುಕಿದ್ದು, ರೇವಣ್ಣ ಬಾಯಿ ಬಿಡುವುದು ಕಷ್ಟಸಾಧ್ಯ. ವಿರೋಧಕ್ಕಾಗಿ ವಿರೋಧ ಮಾಡಬಹುದು ಅಷ್ಟೇ. ಕೊನೆಯದಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಉದ್ದೇಶ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ. ಆದರೆ ಉದ್ಧೇಶ ಈಡೇರುತ್ತಿಲ್ಲ ಎನ್ನುವುದು ದುರಂತವೇ ಸರಿ.

More articles

Latest article