ಡಾ.ಎಂ.ಸಿ.ಸುಧಾಕರ್ ಕೋಲಾರ: ಹೈಕಮಾಂಡ್ ಸೂಚಿಸಿದರೆ ನಾನೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ. ಈ ಹಿಂದೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರೂ ಪಕ್ಷ ಬಯಸಿದರೆ ರಾಜೀನಾಮೆಗೆ ಸಿದ್ಧ ಎಂದು ಹೇಳಿದ್ದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೈಕಮಾಂಡ್ ಸೂಚಿಸಿದರೆ ನಾನೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವಾಗಿದ್ದೇನೆ. ಸಂಪುಟ ಪುನಾರಚನೆ ಕುರಿತು ಮುಖ್ಯಮಂತ್ರಿಗೆ ಪರಮೋಚ್ಚ ಅಧಿಕಾರ ಇದ್ದೇ ಇರುತ್ತದೆ. ಈ ವಿಷಯದಲ್ಲಿ ಅವರಿಗೆ ಹೈಕಮಾಂಡ್ ಸೂಚನೆ ನೀಡುತ್ತದೆ. ಇದಕ್ಕೆಲ್ಲ ನಾವು ಬದ್ಧವಾಗಿರುತ್ತೇವೆ ಎಂದು ಹೇಳಿದರು.
ಪಕ್ಷದ 136 ಶಾಸಕರಿಗೆ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಸಹಜವಾಗಿಯೇ ಸಚಿವರಾಗಬೇಕು ಎಂಬ ಅಭಿಲಾಷೆ ಇದ್ಧೇ ಇರುತ್ತದೆ. ಇದು ತಪ್ಪಲ್ಲ. ನವೆಂಬರ್ ತಿಂಗಳಲ್ಲಿ ಕ್ರಾಂತಿಯೋ, ಬ್ರಾಂತಿಯೋ ನನಗೆ ತಿಳಿದಿಲ್ಲ. ಇದೆಲ್ಲಾ ಮಾದ್ಯಮಗಳ ಸೃಷ್ಟಿ ಮಾತ್ರ ಎಂದರು.
ಪಕ್ಷ ನಮ್ಮನ್ನು ಗುರುತಿಸಿ ಅವಕಾಶ ಮಾಡಿಕೊಟ್ಟಿದೆ. ಆಡಳಿತಾತ್ಮಕ ಮತ್ತು ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಬದಲಾವಣೆ ಸೇರಿದಂತೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಶಕ್ತವಾಗಿರುತ್ತದೆ. ನಾವೂ ಸಹ ಶಿಸ್ತಿಗೆ ಬದ್ಧರಾಗಿ ಸ್ಪಂದಿಸುತ್ತೇವೆ ಎಂದು ತಿಳಿಸಿದರು. ಸಿದ್ದರಾಮಯ್ಯ ಅವರು 2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಪ್ರತಿಕ್ರಿಯಿಸಿ, ಅವರ ರಾಜಕೀಯ ಭವಿಷ್ಯ ಕುರಿತು ಮಾತನಾಡುವಷ್ಟು ದೊಡ್ಡವನಲ್ಲ. ಯಾವ ನಿರ್ಧಾರ ಕೈಗೊಳ್ಳಬೇಕು ಎನ್ನುವುದು ಅವರ ವೈಯಕ್ತಿಕ ಹಾಗೂ ಪಕ್ಷದ ತೀರ್ಮಾನದ ಭಾಗವಾಗಿರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

