ಪುತ್ತೂರಿನ ಅಪರೇಷನ್ ಸಿಂಧೂರ ಸುಖಾಂತ್ಯವಾದೀತೇ..!?

Most read

ಬಿಡಲಾಗದ ಜಾತಿ ಶ್ರೇಷ್ಟತೆಯ ವ್ಯಸನ ಅಥವಾ ಮತ್ತಿನ್ಯಾವುದೋ ಸ್ವಾರ್ಥಪರ ಚಿಂತನೆಗಳನ್ನು ಬಹುಕಾಲ ಮುಚ್ಚಿಡಲಾಗದು. ಯಾವುದೋ ರೀತಿಯಲ್ಲಿ ಇವು ಕಾಲ ಸಂದರ್ಭಗಳಲ್ಲಿ ಅನಾವರಣ ಗೊಳ್ಳುವುದು ವಾಸ್ತವ. ಲೋಕಲ್ ಸಿಂಧೂರ ಇದಕ್ಕೊಂದು ಉದಾಹರಣೆಯಷ್ಟೆ. ಏನೇ ಆದರೂ ಈ ಕೊಳಕು ಶ್ರೇಷ್ಟತೆಯ ವ್ಯಸನ ಸಂತ್ರಸ್ತೆಯ ’ಸಿಂಧೂರ’ ಭಾಗ್ಯವನ್ನು ಕಸಿಯದಿರಲಿಶಂಕರ್‌ ಸೂರ್ನಳ್ಳಿ, ಲೇಖಕರು. 

ಇತ್ತೀಚೆಗೆ ದೇಶಾದ್ಯಂತ ಭಾರೀ ಸುದ್ದಿ ಮಾಡಿದಂತಹ ವಿಷಯವೆಂದರೆ ಅದು ಸಿಂಧೂರ. ಅರ್ಥಾತ್ ಭಾರತೀಯ ಸ್ತ್ರೀಯರ ಹಣೆಯ ಮೇಲಿನ ಸೌಭಾಗ್ಯದ ಪ್ರತೀಕವೆಂದು ತಿಳಿಯಲ್ಪಡುವ ಕುಂಕುಮ. ಪಹಲ್ಗಾಂವ್ ದಾಳಿಯಲ್ಲಿ ದುಷ್ಕರ್ಮಿಗಳಿಂದ ಮೃತರಾದ ಪ್ರವಾಸಿಗರ ಪತ್ನಿಯರ ಹಣೆ ಮೇಲಿನ ಸಿಂಧೂರ ಅಳಿಸಿದ್ದಕ್ಕೆ ಪ್ರತಿಯಾಗಿ ನಡೆದ ಪ್ರತೀಕಾರದ ಕಾರ್ಯಾಚರಣೆಯ ನಂತರ ಸುದ್ದಿಯಾಗಿಸಲ್ಪಟ್ಟಂತಹ ವಿಚಾರವಿದು. ಇಂಗ್ಲಿಷಿನ SINDHOORA  ಪದದಲ್ಲಿನ  ’ O” ಅಕ್ಷರದ ಸ್ಥಾನದಲ್ಲಿ ಕುಂಕುಮದ ಬಟ್ಟಲನಿಟ್ಟು ಸಿಂಧೂರವನ್ನು ಭಾವನಾತ್ಮಕವಾಗಿ ಸುದ್ದಿ ಮಾಡಲಾಗಿತ್ತಲ್ಲದೇ ಮನೆ ಮನೆಗೆ ಸಿಂಧೂರ ಎನ್ನುವ ಕಾರ್ಯಕ್ರಮವನ್ನೂ ಕೂಡ ಅಲ್ಲಲ್ಲಿ ನಡೆಸಲಾಗಿತ್ತು. ಭಾರತೀಯ ಪರಂಪರೆಯಲ್ಲಿ ದಾಂಪತ್ಯ ಬದುಕಿನ ಸೌಭಾಗ್ಯದ ಪ್ರತೀಕವೆನಿಸುವ ಈ ಪರಮ ಪವಿತ್ರ ಸಿಂಧೂರ (ಧಾರಣೆ ಭಾಗ್ಯ )ದ ವಿಚಾರ  ದಕ ಜಿಲ್ಲೆಯ ಪುತ್ತೂರಿನಲ್ಲಿ ಇದೀಗ ತನ್ನದೇ ರೀತಿಯಲ್ಲಿ ಸುದ್ದಿಯಲ್ಲಿದೆ.

ಅಷ್ಟೇನೂ ವಿಶೇಷವಲ್ಲದ ತೀರಾ ಸಾಮಾನ್ಯವಾಗಿ ಸಂಭವಿಸುವಂತಹ ವಿದ್ಯಾರ್ಥಿಗಳ ಪ್ರೇಮಪ್ರಕರಣವೊಂದು ದೈಹಿಕ ಸಂಪರ್ಕದವರೆಗೂ ಮುಂದುವರೆದು ಪ್ರೇಯಸಿ ಗರ್ಭಿಣಿಯಾಗಿ ಮಗುವನ್ನು ಹೆತ್ತುಕೊಡುವವರೆಗೂ ವಿಷಯ ಮುಂದುವರೆದಿತ್ತು. ಬಳಿಕ ಗಣ್ಯರ ಸಮ್ಮುಖದಲ್ಲಿ ಸದರಿ ವಿಚಾರ ಮದುವೆ ಮಾಡಿಸಿಕೊಡುವ ಖಾತ್ರಿಯೊಂದಿಗೆ ರಾಜಿಯಾಯ್ತಾದರೂ ಇದೀಗ ಹುಡುಗನ ಕಡೆಯವರು ಆಗಬೇಕಿದ್ದ ಈ ಮದುವೆಗೆ ಅಪಸ್ವರ ಎತ್ತುತ್ತಿರುವ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ.  ಮಾತುಕತೆಯ ಸಮಯದಲ್ಲಿ ಕಾನೂನು ರೀತಿಯಲ್ಲಿ ಹುಡುಗನಿಗೆ ೨೧ ವರ್ಷ ದಾಟಲಿ ಎಂದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳೋ ತಂತ್ರಗಾರಿಕೆ ಹುಡುಗನ ಕಡೆಯವರಿಂದ ನಡೆದರೂ ಸುದ್ದಿ ಗೋಷ್ಟಿಯಲ್ಲಿ ಸಂತ್ರಸ್ತೆಯ ತಾಯಿ ಹೇಳುವಂತೆ ಬಳಿಕ ಹಣದ ಆಮಿಷ, ಮಗುವನ್ನು ಬೇರೆಯವರಿಗೆ ಮಾರಿ ಕೈ ತೊಳೆದುಕೊಳ್ಳುವ ಐಡಿಯಾ, ಹೊಟ್ಟೆಯಲ್ಲಿನ ಶಿಶು ಏಳು ತಿಂಗಳು ದಾಟಿ ಪರಿಪೂರ್ಣ ಹಂತದ  ಬೆಳವಣಿಗೆ ತಲುಪಿರುವ ಕಾರಣ ಅಬಾರ್ಷನ್ ಪ್ರಕ್ರಿಯೆ ಮಗು ಮತ್ತು ತಾಯಿಯ ಜೀವಕ್ಕೆ ಅಪಾಯಕಾರಿಯಾದರೂ ಅದನ್ನು ತುಂಡು ತುಂಡು ಮಾಡಿ ತೆಗೆಸುವ ಒತ್ತಡ ಇವುಗಳೆಲ್ಲ ಎದುರಾದರೂ ಕೂಡ ತನ್ನ ಮಗಳು ಮತ್ತು ಆಕೆಯ ಗರ್ಭದಲ್ಲಿನ ಅಮಾಯಕ ಮಗುವಿನ ಒಳಿತಿಗಾಗಿ ಹೋರಾಡುತ್ತಿರುವ ಮಹಿಳೆಗೆ ಸೂಕ್ತ ನ್ಯಾಯ ದೊರೆಯಲೇ ಬೇಕೆನ್ನುವುದು ಜಾತಿ ಧರ್ಮ ಪಕ್ಷಾತೀತವಾಗಿ ಎಲ್ಲರ ಆಶಯವಾಗಿದೆ.

ಸಂತ್ರಸ್ತೆಯ ತಾಯಿ ಹೇಳುವಂತೆ ಹುಡುಗನ ತಾಯಿ ನೀವು ಮದುವೆಯ ಆಸೆಯನ್ನು ಇಲ್ಲಿ ಇಟ್ಟುಕೊಳ್ಳಬೇಡಿ ಮತ್ತು ಹುಡುಗನ ತಂಟೆಗೇನಾದರೂ ಬಂದರೆ ನಿಮ್ಮ ಮಗಳು ಗರ್ಭಿಣಿ ಎನ್ನುವುದನ್ನೂ ಕೂಡ ಮರೆತು ನೋಡಕೊಳ್ಳಬೇಕಾದೀತು ಎಂಬಂತಹ ಪರೋಕ್ಷ ಬೆದರಿಕೆಯನ್ನೂ ಹಾಕಿದ್ದರಂತೆ. ಆರಂಭದಲ್ಲಿ ಮಾತುಕತೆ ಮೊದಲಾದೆಡೆ ಬರುತ್ತಿದ್ದ ಹುಡುಗ ಬಳಿಕ ಯಾವುದೋ ಒತ್ತಡಕ್ಕೊಳಗಾದವನಂತೆ ನಾನು ಮದುವೆಯಾಗಲಾರೆ, ಆತ್ಮಹತ್ಯೆ ಮೊದಲಾದ ನಾಟಕೀಯ ಮಾತುಗಳಿಗೆ ಮುಂದಾಗಿರುವುದಲ್ಲದೇ ಇನ್ನೂ ಕೆಲವರ ಹೆಸರುಗಳನ್ನೆಳೆದು ಸಂತ್ರಸ್ತೆಯ ನಡವಳಿಕೆಯನ್ನೇ ಸಂಶಯಿಸುತ್ತಿದ್ದನೆನ್ನಲಾಗಿದೆ.

ಸಂತ್ರಸ್ತೆಯ ತಾಯಿ ಮತ್ತು ಆರೋಪಿ ಕೃಷ್ಣ ಜೆ.ರಾವ್‌

ಹೇಳಿ ಕೇಳಿ ಪುತ್ತೂರು ಮುಂಚಿನಿಂದಲೂ ಇಂತಹ ವಿಚಾರಗಳಿಗೆ ತಕ್ಷಣ ಪ್ರತಿಕ್ರಿಯಿಸುವಂತಹ ಸೂಕ್ಷ್ಮ ಪ್ರದೇಶ. ಆದರೆ ವಿಷಯಗಳು ಒಂದೇ  ರೀತಿ ಇದ್ದ ಮಾತ್ರಕ್ಕೆ ಎಲ್ಲದಕ್ಕೂ ಒಂದೇ ರೀತಿಯ ಪ್ರತಿಕ್ರಿಯೆ ಎಂದಿರಬೇಕಿಲ್ಲ ಎಂಬುದು ಕೆಲವರ ತರ್ಕ. ಉದಾಹರಣೆಗೆ ಸೌಮ್ಯಾ ಭಟ್ ಗೆ ಪ್ರತಿಯಾಗಿ ಇನ್ನಿಲ್ಲದಂತೆ ಹೊತ್ತಿ ಉರಿದ ಪುತ್ತೂರು ನಂತರ ಅಕ್ಷತಾ ಪೂಜಾರಿಗೆ ಸ್ಪಂದಿಸಲೇ ಇಲ್ಲ. ಬದಲು ಅವಳನ್ನೇ ದೂರಲಾಯಿತು. ಈಗ ಮಹಿಳೆಯೊಬ್ಬಳು ತನ್ನ ಮಗಳಿಗಾದ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದರೆ ಅವಳಿಗೆ ಸಿಗಬೇಕಿದ್ದ ಪ್ರಾಮಾಣಿಕ ಬೆಂಬಲ ಸಿಗಲೇ ಇಲ್ಲ. ಅಷ್ಟಕ್ಕೂ ಆ ಮಹಿಳೆ ಕೇಳುತ್ತಿರುವುದಾದರೂ ಏನನ್ನು? ಆರೋಪಿಯನ್ನು ಜೈಲಿಗೆ ಹಾಕಿ ಶಿಕ್ಷಿಸಿ ಎಂದು ಆಕೆ ಎಲ್ಲೂ ಕೇಳಿಲ್ಲ. ಬದಲಿಗೆ ಅವನನ್ನು ಮದುವೆ ಮಾಡಿಕೊಟ್ಟು ನನ್ನ ಮಗಳು ಮತ್ತು ಮೊಮ್ಮಗುವಿಗೆ ಭವಿಷ್ಯದಲ್ಲಿ ಯಾವುದೇ ಸಾಮಾಜಿಕ ತೊಂದರೆಗಳು ಆಗದಂತಹ ಸಹಜ ನ್ಯಾಯದ ಆಗ್ರಹ ಮಾಡುತ್ತಿದ್ದಾಳಷ್ಟೆ. ಗಂಡಿನ ಕಡೆಯವರು ಗಣ್ಯರು, ಬಲಾಢ್ಯ ಜಾತಿಯವರು ಎಂದ ಮಾತ್ರಕ್ಕೆ ನ್ಯಾಯ ಏಕಮುಖಿಯಾಗಿರಬೇಕೆಂದೇನಿಲ್ಲ. ಈ ನಾಡಿನಲ್ಲಿ ಎಲ್ಲರಿಗೂ ಕೂಡ ನ್ಯಾಯವನ್ನು ಕೇಳಿ ಪಡೆಯುವಂತಹ ಅಧಿಕಾರವಿದೆ. ಅದರಲ್ಲೂ ಸಂತ್ರಸ್ತ/ಸ್ತೆ ಎನಿಸಿಕೊಂಡವರು ನ್ಯಾಯದ ಈ ಆಗ್ರಹಕ್ಕೆ ಹೆಚ್ಚು ಅರ್ಹರು.

ಬಲ್ಲ ಮೂಲಗಳ ಪ್ರಕಾರ ಜಾತೀಯತೆ ಮತ್ತು ಪುರುಷಾಧಿಕಾರ (ಗಂಡು ಏನು ಮಾಡಿದರೂ ನಡೆಯುತ್ತೆ ಆದರೆ ಹೆಣ್ಣು ಎಲ್ಲವನ್ನೂ ಸಹಿಸಿ ನಡೆಯುವಂತಹ ಕ್ಷಮಯಾ ಧರಿತ್ರಿಯಾಗಿರಬೇಕೆನ್ನುವ ವಾದ) ಈ ವಿಚಾರದ ಹಿಂದೆ ಕೆಲಸ ಮಾಡುತ್ತಿದೆ ಎನ್ನುವುದು.  ಗಂಡು ಬ್ರಾಹ್ಮಣ ಸಮುದಾಯಕ್ಕೆ ಸೇರಿದವನಾಗಿ ಸಂತ್ರಸ್ತೆ ಬೇರೆ ಸಮುದಾಯದವಳಾಗಿರುವ ಕಾರಣ ಈ ಮದುವೆ ಅಸಂಭವ ಎಂದು ಕೆಲವರ ತಕರಾರು ಎನ್ನಲಾಗಿದೆ. ಅನ್ಯ ಧರ್ಮೀಯರ ವಿಚಾರ ಬಂದಾಗ ಧುತ್ತನೆ ಎದ್ದು ನಿಲ್ಲುವ ಮಂದಿಗಳಿಗೆ ಈ ಸಂದರ್ಭದಲ್ಲಿ ಹಿಂದೂ ನಾವೆಲ್ಲರೂ ಒಂದು ಎನ್ನುವ ಘೋಷವಾಕ್ಯ ನೆನಪಿಗೆ ಬಾರದಿರುವುದು ಮಾತ್ರ ಸೋಜಿಗದ ವಿಚಾರ.

ನಮ್ಮ ಧರ್ಮ, ಶಾಸ್ತ್ರಗಳು ಅಣು ರೇಣು ತೃಣ ಕಾಷ್ಠಗಳಲ್ಲಿ ಸಕಲ ಚರಾಚರ ಜೀವ ಜಂತುಗಳಲ್ಲೂ ದೇವರಿದ್ದಾನೆ, ವಸುಧೈವ ಕುಟುಂಬಕಂ, ಸರ್ವೇ ಜನಾಃ ಸುಖಿನೋ ಭವಂತು.. ನಂತಹ ಧ್ಯೇಯ ವಾಕ್ಯಗಳನ್ನು ಹೊಂದಿದೆ ಎಂದರಷ್ಟೇ ಸಾಲದು. ಈ ವಿಚಾರಗಳ ಅನುಷ್ಠಾನ ನಮ್ಮ ನಿಜ ಜೀವನದಲ್ಲಿ ಆಗಿದೆಯೇ ಅಥವಾ ಆಗುತ್ತಿದೆಯೇ ಎನ್ನುವುದು ಇಲ್ಲಿ ಮುಖ್ಯ. ಒಬ್ಬ ಉಚ್ಛ ಮತ್ತೊಬ್ಬ ನೀಚ, ಮುಟ್ಟಿಸಿಕೊಳ್ಳುವವರು ಮುಟ್ಟಿಸಿಕೊಳ್ಳಲಾಗದವರು ಇಂತಹ ಅಸಮಾನತೆಗಳನ್ನು ಸಮಾಜದಲ್ಲಿ ಪೋಷಿಸಿಕೊಂಡು ಮೇಲಿನ ಧ್ಯೇಯ ವಾಕ್ಯಗಳನ್ನು ಎಷ್ಟೇ ಹೇಳಿದರೂ  ಏನು ತಾನೆ ಪ್ರಯೋಜನ.. !?

ಮೊನ್ನೆ ಮೊನ್ನೆ ಇದೇ ಪುತ್ತೂರಿನ ಪ್ರಸಿದ್ಧ ದೇವಾಲಯದ ಜಾಗದಲ್ಲಿ ಸಂಸ್ಕೃತಿ ರಕ್ಷಕ ಪಕ್ಷದ ವ್ಯಕ್ತಿಗಳ ಮನೆಯನ್ನು ತೆರವುಗೊಳಿಸಲು ಹೋದಾಗ ಅದಕ್ಕೆ ಅವರುಗಳಿಂದ ತೀವ್ರ ವಿರೋಧ ಎದುರಾಗಿತ್ತು.  ಆದರೆ ಅದೇ ಜಾಗದಲ್ಲಿ ಅವರದರ ಬದಲಿಗೆ ಅನ್ಯ ಮತೀಯನ ಮನೆ ಇದ್ದಿದ್ದರೆ ಇವರುಗಳೇ ಮುಂದೆ ನಿಂತು ಹೋರಾಟಕ್ಕಿಳಿಯುತ್ತಿದ್ದರಲ್ಲವೇ?. ಇಲ್ಲೂ ಕೂಡ ಈ ಲೈಂಗಿಕ ಶೋಷಣೆಯ ಪ್ರಕರಣದಲ್ಲಿ ಒಂದು ವೇಳೆ ಸಂಸ್ಕೃತಿ ರಕ್ಷಕನ ಬದಲಿಗೆ ಅನ್ಯಮತೀಯನ ಹೆಸರಿದ್ದಿದ್ದರೆ ಈ ಪ್ರಕರಣದ ಲೆವೆಲ್ಲೇ ಬೇರೆ ಇರುತಿತ್ತು.

ನಿಜಕ್ಕೂ ಇಂತಹ ಸೋಗಲಾಡಿತನಗಳೆಲ್ಲ ಯಾಕೆ? ಹೊಟ್ಟೆಯಲ್ಲಿ ಪರಿರ್ಪೂರ್ಣವಾಗಿ ಬೆಳೆದ ಏಳೆಂಟು ತಿಂಗಳ ಮಗುವನ್ನು ತುಂಡು ತುಂಡಾಗಿ ಕತ್ತರಿಸಿ ತೆಗೆಸುವುದೆಂದರೆ ಅದೇನು ನೀರುಳ್ಳಿ ಆಲುಗಡ್ಡೆಗಳೇ? ಬೆಳೆದು ಬದುಕಬೇಕಾದ ಒಂದು ಜೀವ. ನಮ್ಮ ನಿಮ್ಮಷ್ಟೆ ಅದಕ್ಕೂ ಕೂಡ ಸ್ವಾಭಿಮಾನದ ಬದುಕನ್ನು ಬದುಕುವ ಹಕ್ಕಿದೆ. ಅದನ್ನು ಕಸಿಯುವ ಅಧಿಕಾರ ನಮಗ್ಯಾರಿಗೂ ಖಂಡಿತಾ ಇಲ್ಲ. ಅದೇ ರೀತಿ, ಮಗುವನ್ನು ಮಾರುವುದೆಂದರೆ ಹೇಳಲು ಸುಲಭ. ಆದರೆ ಇಲ್ಲಿ ತಾಯಿಯ ವಯಸ್ಸು ೨೧ ಅಂದರೆ  ಅದು ಸಣ್ಣ ವಯಸೇನಲ್ಲ. ಮದುವೆಯ ಸಹಜ ವಯಸ್ಸು. ಯಾವ ಆರೋಗ್ಯವಂತ ತಾಯಿಯೂ  ಭಾವನಾತ್ಮಕವಾಗಿ ಕಾರಣವಿಲ್ಲದೇ ಯಾವ ಕಾರಣಕ್ಕೂ ಈ ರೀತಿ ತನ್ನ ಮಗುವನ್ನು ಮಾರಲು ಒಪ್ಪಳು. ಅದನ್ನು ಅವಳನ್ನು ಬಿಟ್ಟರೆ ಇತರರಿಗೆ ನಿರ್ಧರಿಸಲೂ ಆಗದು.

ಬಿಡಲಾಗದ ಜಾತಿ ಶ್ರೇಷ್ಟತೆಯ ವ್ಯಸನ ಅಥವಾ ಮತ್ತಿನ್ಯಾವುದೋ ಸ್ವಾರ್ಥಪರ ಚಿಂತನೆಗಳನ್ನು ಬಹುಕಾಲ ಮುಚ್ಚಿಡಲಾಗದು. ಯಾವುದೋ ರೀತಿಯಲ್ಲಿ ಇವು ಕಾಲ ಸಂದರ್ಭಗಳಲ್ಲಿ ಅನಾವರಣ ಗೊಳ್ಳುವುದು ವಾಸ್ತವ. ಲೋಕಲ್ ಸಿಂಧೂರ ಇದಕ್ಕೊಂದು ಉದಾಹರಣೆಯಷ್ಟೆ. ಏನೇ ಆದರೂ ಈ ಕೊಳಕು ಶ್ರೇಷ್ಟತೆಯ ವ್ಯಸನ ಸಂತ್ರಸ್ತೆಯ ’ಸಿಂಧೂರ’ ಭಾಗ್ಯವನ್ನು ಕಸಿಯದಿರಲಿ.

ಶುಭವಾಗಲಿ

ಶಂಕರ್ ಸೂರ್ನಳ್ಳಿ.  

ಲೇಖಕರು. 

ಇದನ್ನೂ ಓದಿ-ಶಾಲಿನಿ ರಜನೀಶ್ ಪ್ರಕರಣ |ಇದೇನಾ ಪಾರ್ಟಿ ವಿತ್‌ ಡಿಫರೆನ್ಸ್ ?

More articles

Latest article