ಬೆಂಗಳೂರು: ರಾಜ್ಯ ರಾಜಕಾರಣಲ್ಲಿ ಹನಿಟ್ರ್ಯಾಪ್ ಪ್ರಕರಣ ಎರಡನೇ ಬಾರಿಗೆ ಸದ್ದು ಮಾಡುತ್ತಿದೆ. ಈ ವಿಷಯ ಕುರಿತು ವಿಧಾನಸಭೆಯಲ್ಲಿ ಕೆಲ ಹೊತ್ತು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ ನನ್ನ ಮೇಲೆ ಹನಿಟ್ರ್ಯಾಪ್ ಮಾಡಿರುವುದು ನಿಜ ಎಂದುಘೋಷಿಸಿದರು. ತುಮಕೂರಿನಲ್ಲಿ ನಾನು ಹಾಗೂ ಪರಮೇಶ್ವರ್ ಸೇರಿದಂತೆ ಇಬ್ಬರು ಸಚಿವರಿದ್ದೇವೆ, ನಾನು ಲಿಖಿತ ದೂರು ಕೊಡುತ್ತೇನೆ, ಇದರ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಯಲಿ ಎಂದು ಹೇಳಿದ್ದಾರೆ.
ಹನಿಟ್ರ್ಯಾಪ್ ಮಾಡಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಭವಿಷ್ಯ ಹಾಳು ಮಾಡಿದ್ದಾರೆ. ಈಗ ನನ್ನ ಮೇಲೆ ಅಂತಹುದೇ ಪ್ರಯತ್ನ ನಡೆಸಿದ್ದಾರೆ ಎಂದು ಕೆಎನ್ ರಾಜಣ್ಣ ಭಾವುಕರಾದರು. ಹನಿಟ್ರ್ಯಾಪ್ ಬಗ್ಗೆ ಎಲ್ಲರಿಗೂ ಗೊತ್ತಾಗಲಿ, ಇದರ ಹಿಂದೆ ಯಾರಿದ್ದಾರೆ, ಪ್ರೊಡ್ಯೂಸರ್ ಯಾರು, ಡೈರೆಕ್ಟರ್ ಯಾರು ಎಂದು ಗೊತ್ತಾಗಲಿ. ನಾನು ಗೃಹ ಸಚಿವರಿಗೆ ಲಿಖಿತ ದೂರು ಕೊಡುತ್ತೇನೆ ಎಂದೂ ಅವರು ಮತ್ತೊಮ್ಮೆ ಪುನರುಚ್ಚರಿಸಿದರು.