ಚೀನಾದ ಕಮ್ಯುನಿಸ್ಟ್ ಪಕ್ಷದ ಜತೆ ನೋಂದಣಿಯೇ ಆಗದ ಆರ್‌ ಎಸ್‌ ಎಸ್‌ ಗೆ ಏನು ಕೆಲಸ?;ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

Most read

ಬೆಂಗಳೂರು: ಚೀನಾ ದೇಶದ ಕಮ್ಯುನಿಸ್ಟ್ ಪಕ್ಷದ ನಿಯೋಗವೊಂದು ಆರ್‌ ಎಸ್‌ ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರನ್ನು ಭೇಟಿ ಮಾಡಿರುವ ಔಚಿತ್ಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಮಂಗಳವಾರ ಚೀನಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಪ್ರತಿನಿಧಿಗಳು ಹೊಸಬಾಳೆ ಅವರನ್ನು ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದರು.

ಸಂಘ ಪರಿವಾರದ ನಡೆಯನ್ನು ಟಿಎಂಸಿ ನಾಯಕಿ ಸಾಗರಿಕಾ ಘೋಷ್‌ ಅವರೂ ಖಂಡಿಸಿದ್ದಾರೆ. ಭಾರತದ ಭೂ ಪ್ರದೇಶವನ್ನು ಆಕ್ರಮಿಸಿಕೊಂಡು ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆದಾಗ ಪಾಕಿಸ್ತಾನವನ್ನು ಬೆಂಬಲಿಸಿದ ಚೀನಾದ ಕಮ್ಯುನಿಸ್ಟ್‌ ಪಕ್ಷದ  ನಿಯೋಗವನ್ನು ಬಿಜೆಪಿ ತನ್ನ ಕೇಂದ್ರ ಕಚೇರಿಗೆ ಸ್ವಾಗತಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.

ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಪ್ರತಿನಿಧಿಗಳನ್ನು ಬಿಜೆಪಿಯನ್ನು ಪೊರೆಯುತ್ತಿರುವ  ನೋಂದಣಿಯೇ ಆಗದ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿಗಳು ಭೇಟಿ ಮಾಡಿದ್ದು ಯಾವ ಉದ್ದೇಶಕ್ಕಾಗಿ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿರುವ ಅವರು ಈ ಭೇಟಿಯು ಕೇಂದ್ರ ಸರ್ಕಾರವನ್ನು ಯಾರು ಮುನ್ನಡೆಸುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತದೆ ಎಂದಿದ್ದಾರೆ. 

ಸಂಘ ಪರಿವಾರ ಹಿಂದೆಯೂ ರಾಜಕಾರಣ ಮಾಡುತ್ತಿತ್ತು. ಮುಂದೆಯೂ ಮಾಡಲಿದೆ. ಅದರಲ್ಲೂ ವಾಸ್ತವ ನಿಯಂತ್ರಣ ರೇಖೆಯ ವಿಷಯದಲ್ಲಿ ಚೀನಾದ ನಿರಂತರ ಹಸ್ತಕ್ಷೇಪವನ್ನು ಸಹಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ನಿಲುವನ್ನು ಗಮನಿಸಿದರೆ, ಇವರು ವಿದೇಶಾಂಗ ನೀತಿಯ ಹೆಸರಲ್ಲಿ ಸರ್ಕಸ್ ನಡೆಸುತ್ತಿರುವುದು ಗೋಚರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 

More articles

Latest article