ಭಾಷೆ ಅಂತ ಬಂದಾಗ ನಿಜಕ್ಕೂ ಹೆಣ್ಣು ಸೃಷ್ಟಿಸಿದ ಭಾಷೆ ಎಂಬುದು ಇದೆಯಾ? ಹೆಣ್ಣಿಗೆ ಆದ ನೋವನ್ನ ನಲಿವನ್ನ ಹೇಳುವಂಥ ಭಾಷೆ ಎಲ್ಲಿದೆ? ಎಂಬ ಪ್ರಶ್ನೆ ಬಂದಾಗ ಉತ್ತರವಿಲ್ಲ ! 21ನೇ ಶತಮಾನದಲ್ಲೂ ಕೂಡ ನಾವು ಗಂಡು ಸೃಷ್ಟಿಸಿದ ಭಾಷೆಯಲ್ಲಿಯೇ ಬದುಕುತ್ತಿದ್ದೇವೆ, ಬರೆಯುತ್ತಿದ್ದೇವೆ – ಶೃಂಗಶ್ರೀ ಟಿ, ಉಪನ್ಯಾಸಕಿ
ಶತಶತಮಾನಗಳಿಂದಲೂ ಕೂಡ ಹೆಣ್ಣನ್ನು ಎಲ್ಲಾ ತರಹದಲ್ಲೂ ಎಲ್ಲಾ ಎಲ್ಲಾ ಸ್ತರಗಳಲ್ಲೂ ಪುರುಷ ಪ್ರಧಾನ ವ್ಯವಸ್ಥೆ, ಹೆಣ್ಣನ್ನ ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅನ್ಯಳನ್ನಾಗಿ ಪರಿಗಣಿಸಿ ಹೊರಗಿಟ್ಟಿದೆ. ಎಲ್ಲಾ ರೀತಿಯ ಸವಲತ್ತುಗಳನ್ನು ಕಸಿದು ಕೊಂಡಿದೆ.
ಬಹು ಮುಖ್ಯವಾಗಿ ಶೈಕ್ಷಣಿಕ ವ್ಯವಸ್ಥೆ ಅಂತ ಬಂದಾಗ ಅಥವಾ ಓದು, ಬರವಣಿಗೆ, ಸಾಹಿತ್ಯ, ಕಲಿಕೆ ಎಂಬ ವಿಷಯ ಬಂದಾಗ ಬರವಣಿಗೆಯನ್ನು ಮಡಿಯಂತೆ ಹೆಣ್ಣಿನಿಂದ ದೂರವಿರಿಸಿದ್ದೇವೆ. ಶತಮಾನಗಳ ಕಾಲ ಹೆಣ್ಣಿಗೆ ಓದುವ ಬರೆಯುವ ಅವಕಾಶವೇ ಇರಲಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿರುವ ಸಂಗತಿಯೇ. ಬಿಕಾಸ್ ಆಫ್ ಕ್ರಿಶ್ಚಿಯನ್ ಮಶಿನರೀಸ್, ಬ್ರಿಟಿಷರ ಆಡಳಿತ, ಸಂವಿಧಾನ, ಅಂಬೇಡ್ಕರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಕ್ ಮುಂತಾದವರ ಹೋರಾಟದಿಂದ ಹೆಣ್ಣಿಗೂ ಕೂಡ ಓದುವಂತಹ ಅವಕಾಶಗಳು ದಕ್ಕಿದವು.
ಕಾಲಕ್ರಮೇಣ ಹೆಣ್ಣು ಓದಲು ಬರೆಯಲು ತಿಳಿಯಲು ಶುರು ಮಾಡಿದ ಮೇಲೆ ಉದ್ಯೋಗ, ಜವಾಬ್ದಾರಿ, ಕೆಲಸ, ಸ್ವಾತಂತ್ರ್ಯ ಎಲ್ಲವೂ ಹೆಣ್ಣಿನ ಕೈಗೆ ಸಿಗಲು ಶುರುವಾದವು. ಇಂದು ಹೆಣ್ಣು ಎಲ್ಲಾ ಸ್ತರಗಳಲ್ಲಿ ಎಲ್ಲಾ ತರಹದ ಕೆಲಸಗಳಲ್ಲಿ ಬಹಳ ಜವಾಬ್ದಾರಿಯುತ ಸ್ಥಾನಮಾನಗಳನ್ನ ಗಿಟ್ಟಿಸಿಕೊಂಡಿರುವುದು ಅದ್ಭುತ ಸಂಗತಿಗಳಲ್ಲಿ ಒಂದು.
ಆದರೆ ಭಾಷೆ ಅಂತ ಬಂದಾಗ ನಿಜಕ್ಕೂ ಹೆಣ್ಣು ಸೃಷ್ಟಿಸಿದ ಭಾಷೆ ಎಂಬುದು ಇದೆಯಾ? ಹೆಣ್ಣಿಗೆ ಆದ ನೋವನ್ನ ನಲಿವನ್ನ ಹೇಳುವಂಥ ಭಾಷೆ ಎಲ್ಲಿದೆ ? ಎಂಬ ಪ್ರಶ್ನೆ ಬಂದಾಗ ಉತ್ತರವಿಲ್ಲ ! 21ನೇ ಶತಮಾನದಲ್ಲೂ ಕೂಡ ನಾವು ಗಂಡು ಸೃಷ್ಟಿಸಿದ ಭಾಷೆಯಲ್ಲಿಯೇ ಬದುಕುತ್ತಿದ್ದೇವೆ, ಬರೆಯುತ್ತಿದ್ದೇವೆ.
ನನ್ನನ್ನು ಯಾವಾಗಲೂ ಕಾಡುವಂತದ್ದು ಈ ಕುಡುಕರು ಅಥವಾ ಇಬ್ಬರು ಗಂಡಸರು ಸೀರಿಯಸ್ಸಾಗಿ ಸಿಟ್ಟಿನಲ್ಲಿ ಕೋಪದಲ್ಲಿ ಜಗಳ ಮಾಡುವಾಗ ಅಥವಾ ತಮಾಷೆಗೂ ಕೂಡ ಬೈದುಕೊಳ್ಳುವಾಗ ಬಳಸುವ ಶಬ್ದಗಳನ್ನು ಗ್ರಹಿಸಿದ್ದೀರಾ ?
ಮಾತೆತ್ತಿದರೆ ಕೆಲವರು ತೀರಾ ಅಸಹ್ಯ, ಅವಾಚ್ಯ ಶಬ್ದಗಳನ್ನೇ ಬಳಸುತ್ತಾರೆ. ಯಾವನೋ ಒಬ್ಬ ಕುಡುಕ ಕುಡಿದಿದ್ದು ಹೆಚ್ಚಾಗಿ ಮತ್ತೊಬ್ಬ ಕುಡುಕನನ್ನೋ ಅಥವಾ ಇನ್ಯಾರನ್ನೋ ಬೈದುಕೊಳ್ಳುವಾಗಲು ಕೂಡ ಅಥವಾ ಇಬ್ಬರು ಗಂಡಸರ ನಡುವಿನ ಜಗಳದಲ್ಲಿಯೂ ಕೂಡ ಅವರು ಬಳಸುವ ಪದಗಳು ಹೆಣ್ಣನ್ನೇ ದೂಷಿಸಿ ಬೈಯುವಂತದ್ದು.
ಉದಾಹರಣೆಗೆ: ಸೂಳೆ ಮಗ, ಬೋಳಿ ಮಗ, ರಂಡೆ ಮಗ, ಮುಂಡೆ ಮಗ ಇನ್ನೂ ಹೀಗೆ ಹಲವಾರು ಪದಗಳನ್ನ ತಲೆಕೆಟ್ಟ ಗಂಡಸರು ಜಗಳವಾಡುವಾಗ ಬಳಸುತ್ತಿರುತ್ತಾರೆ. ಅಲ್ಲಿ ಯಾವ ಹೆಣ್ಣಿನ ಪ್ರವೇಶವು ಇಲ್ಲದೆಯೇ ಅವಳ ಬಗೆಗೆ ಅವಳ ಅಸ್ತಿತ್ವದ ಬಗ್ಗೆಯೇ ಯಾಕೆ ಮಾತುಗಳು ಬರುತ್ತವೆ ಅನ್ನೋದು ಇಂದಿಗೂ ಅರ್ಥವಾಗಿಲ್ಲ.
ನಿನ್ನ್ ಅಮ್ಮನ್ ಅಂತ ಬೈಯುವ ಬದಲು ನಿನ್ ಅಪ್ಪನ್ ಅಂತ, ನಿನ್ನ್ ಅಕ್ಕನ್ ಅಂತ ಬೈಯುವ ಬದಲು ನಿಮ್ಮಣ್ಣನ್, ನಿಮ್ಮ್ ತಮ್ಮನ್ ಯಾಕೆ ಬಳಸಿಲ್ಲ..ಬಳಸಲ್ಲಾ !?!?
ರಂಡೆ ಮಗ, ಮುಂಡೆ ಮಗ ಅಂತ ಬಳಸ್ತಾರಲ್ಲ ರಂಡನ ಮಗ ಮುಂಡನ ಮಗ ಅಂತ ಯಾವ ಪದಗಳಿಲ್ವಾ ?! ಹಂಗೇನೆ ಅಳುಮುಂಜಿ ಅನ್ನೋ ಪದ ಇದೆಯಲ್ವಾ ಅದೇ ಅಳುಮುಂಜಾ ಅನ್ನೋ ಪದ ಇದೆಯಾ ?
ಈ ಸೂಳೇ ಅಂತ ಬೈತಾರಲ್ಲ ಈ ಪದಕ್ಕೆ ಗಂಡಿಗೆ ಬಳಸುವ ಪದ ಯಾವುದು ? ಅಂಥ ಪದ ನಿಜಕ್ಕೂ ಇದೆಯಾ? ನನ್ನ ಗಮನಕ್ಕೆ ಬಂದ ಹಾಗೆ ಅಂಥ ಯಾವ ಪದವೂ ಇಲ್ಲ. ಇದ್ದರೂ ಸಂಸ್ಕೃತದಲ್ಲಿ ವಿಟ ಪುರುಷ ಎಂಬ ಪದವಿದೆ. ವಿಟ ಪುರುಷ ಅಂತ ಹೇಳಿದ ತಕ್ಷಣ ನಮಗೆ ಅನ್ನಿಸುವ ಭಾವಕ್ಕೂ ಸೂಳೆ ಅಂದಾಗ ಅನ್ನಿಸುವ ಭಾವಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಅಲ್ಲವಾ ? ಅದೇ ರೀತಿ ಈ ಹಾದರಗಿತ್ತಿ ಅನ್ನೋ ಪದ ಇದೆಯಲ್ಲ ಗಂಡಿಗೂ ಕೂಡ ಅಂಥ ಒಂದು ಸೂಕ್ತ ಪದ ಇದೆಯಾ?
ನಿಜಕ್ಕೂ ಈ ಎಲ್ಲಾ ಬೈಗುಳದ ಪದಗಳ, ಭಾಷೆಗಳ ಹಿಂದೆ ಇರುವ ಹುನ್ನಾರ ಯಾವುದು ? ಹೆಣ್ಣನ್ನೇ ದೂಷಿಸುತ್ತಾ, ಹೆಣ್ಣನ್ನೇ ನಾವು ಜರಿಯುತ್ತಿದ್ದೇವೆ ಅಂತ ಅರ್ಥವಲ್ಲವಾ? ದುರಂತವೆಂದರೆ ಈ ಎಲ್ಲಾ ಗಂಡಾಳ್ವಿಕೆಯ ಹುನ್ನಾರಗಳ ಹಿಂದಿರುವ ಸತ್ಯ ಅರಿಯದೆ ಹೆಣ್ಣು ಇನ್ನೊಂದು ಹೆಣ್ಣನ್ನು ಹೀಗೇ ಬೈದುಕೊಳ್ಳುವುದಿದೆಯಲ್ಲ ಅದಕ್ಕಿಂತ ಶೋಚನೀಯ ಸಂಗತಿ ಇನ್ನೇನಿದೆ ?
ಇದನ್ನೂ ಓದಿ-http://ಮಹಿಳಾ ಸಂಕುಲದ ಬಿಡುಗಡೆಯ ಹಾದಿ ಹುಡುಕುತ್ತಾ… https://kannadaplanet.com/searching-way-for-liberation-of-women-roopa-hassan/
ಪ್ರತಿಯೊಬ್ಬ ನಾಗರೀಕರ, ಸಭ್ಯರ, ಮನುಷ್ಯರಾದವರ ಕರ್ತವ್ಯ ಹೀಗೆ ಹೆಣ್ಣನ್ನ ಕೆಟ್ಟದಾಗಿ ಬಿಂಬಿಸುವ, ಕೆಟ್ಟದಾಗಿ ಕರೆಯುವ ಕೆಟ್ಟ ಶಬ್ದಗಳ ಮೂಲಕ ಮಾತಾಡುವುದನ್ನು ಬಿಟ್ಟುಬಿಡುವುದು. ಇಲ್ಲವೋ ಗಂಡಸು ಪುಲ್ಲಿಂಗ ಬಳಸಿಯೇ ಬೈದುಕೊಳ್ಳಬೇಕು. ಇಲ್ಲದಿದ್ದರೆ ಸಾವಿರ ಸಾವಿರ ವರ್ಷಗಳು ಉರುಳಿದರೂ ಇದೇ ಶಬ್ದಗಳು ಚಾಲ್ತಿಯಲ್ಲಿ ಇರುತ್ತವೆ. ಜೊತೆಯಲ್ಲಿ ಹೆಣ್ಣನ್ನೇ ಮತ್ತಷ್ಟು ನಿಕೃಷ್ಟಳನ್ನಾಗಿ ಮಾಡುವ, ಕಾಣುವ ಎಲ್ಲಾ ರಾಜಕಾರಣದ ಹುನ್ನಾರಗಳು ಸಫಲವಾಗುತ್ತಲೇ ಹೋಗುತ್ತವೆ.
ಸೋ ಇಲ್ಲಿ ಬಹು ಮುಖ್ಯವಾಗಿ ಆಗಬೇಕಾಗಿದ್ದು ಹೆಣ್ಣು ಈ ಎಲ್ಲಾ ಅನ್ಯಾಯಗಳನ್ನು ಪ್ರಶ್ನಿಸಬೇಕು. ಈ ಎಲ್ಲಾ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಬೇಕು. ತನ್ನೊಡಲ ಸಂಕಟಗಳ, ನೋವುಗಳ, ಹತಾಶೆಗಳ, ದುಃಖಗಳ, ನಲಿವುಗಳ ಕಥೆಯನ್ನು ತನ್ನದೇ ಭಾಷೆಯಲ್ಲಿ ತನ್ನದೇ ರೂಪಕದಲ್ಲಿ ಬರಿಯುವಂತಾಗಬೇಕು. ತನ್ನದೇ ಭಾಷೆಯನ್ನ ಸೃಷ್ಟಿಸಬೇಕು. ಆ ದಿನಗಳಿಗಾಗಿ ಎದುರು ನೋಡೋಣ.
ಶೃಂಗಶ್ರೀ ಟಿ
ಅತಿಥಿ ಉಪನ್ಯಾಸಕಿ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ.