ಆಂಕರಿಂಗ್‌ ನಲ್ಲಿ ಪುರುಷರಿಗಿಲ್ಲದ ವಯಸ್ಸಿನ ಮಿತಿ ಮಹಿಳಾ ಆಂಕರ್‌ ಗಳಿಗೆ ಮಾತ್ರ ಏಕೆ: ಕೆ.ವಿ.ಪ್ರಭಾಕರ್‌ ಪ್ರಶ್ನೆ

Most read

ಬೆಂಗಳೂರು: ಪತ್ರಿಕಾ ವೃತ್ತಿ ಮಹಿಳೆಯರಿಗಲ್ಲ ಎನ್ನುವ ಮಾತು ಈಗ ಸಂಪೂರ್ಣ ಸುಳ್ಳಾಗಿದ್ದು, ಪತ್ರಿಕಾ ವೃತ್ತಿಯ ಘನತೆ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಪತ್ರಕರ್ತೆಯರ ಪಾತ್ರ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಪತ್ರಕರ್ತೆಯರ ಸಂಘ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ಸಾಧಕಿಯರನ್ನು ಅಭಿನಂದಿಸಿ ಮಾತನಾಡಿದರು.

ಸಂಘದ ಪ್ರಶಸ್ತಿಗೆ ಸಬೀಹಾ ಬಾನು, ಪೂರ್ಣಿಮಾ ರವಿ, ಪದ್ಮಾ ಕೋಲಾರ ಅವರನ್ನು ಆಯ್ಕೆ ಮಾಡಿರುವುದು ಬಹಳ ಖುಷಿಯಾಯಿತು. ಪತ್ರಕರ್ತೆಯರ ಸಂಘ ಬಹಳ ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಆದವರನ್ನು ಆಯ್ಕೆ ಮಾಡಿದೆ.

ನ್ಯೂಸ್‌ ಆಂಕರ್‌ಗಳು ಎಂದರೆ ತೆಳ್ಳಗೆ ಬೆಳ್ಳಗೆ ಇರಬೇಕು. 20 ರಿಂದ 25 ವರ್ಷದೊಳಗಿನ ಅವಿವಾಹಿತ ಹೆಣ್ಣು ಮಕ್ಕಳೇ ಇರಬೇಕು ಎನ್ನುವ ನಂಬಿಕೆ ಇದೆ. ಪುರುಷ ಆಂಕರ್‌ಗಳಿಗೆ ಇಲ್ಲದ ವಯಸ್ಸಿನ ಮಿತಿ ಮಹಿಳಾ ಆಂಕರ್‌ಗಳಿಗೆ ಮಾತ್ರ ಇರುವುದು ಸರಿಯಲ್ಲ. ಈ ಅಸಹಜ ನಂಬಿಕೆಯನ್ನು ಸುಳ್ಳಾಗಿಸಿ ಅರ್ಹತೆ ಮೆರೆದವರು ನಮ್ಮ ಸಬೀಹಾ ಬಾನು, ನ್ಯೂಸ್‌ ಆಂಕರಿಂಗ್‌ನ ಘನತೆಯನ್ನು ಹೆಚ್ಚಿಸಿದವರು.

ಹಾಗೆಯೇ ಮಲೆನಾಡಿನ ಹುಡುಗಿ ಪೂರ್ಣಿಮಾ ರವಿ. ಕನ್ನಡ ಪತ್ರಿಕೋದ್ಯಮದಲ್ಲಿ ಪತ್ರಿಕಾ ಛಾಯಾಗ್ರಾಹಕಿಯಾಗಿ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತೆ ಹೋಮೈ ವರವಲ್ಲಾ ಅವರ ಪರಂಪರೆಯನ್ನು ಮುಂದುವರೆಸಿದ್ದಾರೆ.

ನಾವು ಬೆಳಗ್ಗೆ ಎದ್ದು ಮನೆಯಿಂದ ಹೊರಗೆ ಕಾಲಿಡುವ ಮೊದಲೇ ಬೀದಿಯನ್ನು ಗುಡಿಸಿ, ನಮ್ಮ ಕಸವನ್ನು ತೆಗೆಯುವ ಪೌರ ಕಾರ್ಮಿಕರು ಮತ್ತು ಸಫಾಯಿ ಕರ್ಮ ಚಾರಿಗಳ ಪರವಾಗಿ ಹೋರಾಟ ನಡೆಸುತ್ತಿರುವ ಪದ್ಮಾ ಕೋಲಾರ ಅವರ ಆಯ್ಕೆ ಪತ್ರಕರ್ತೆಯರ ಸಂಘದ ಸಮಾಜಮುಖಿ ದೃಷ್ಠಿಕೋನಕ್ಕೆ ಸಾಕ್ಷಿಯಾಗಿದೆ.

ಪತ್ರಕರ್ತೆಯರ ಸಂಘದ ಈ ವೇದಿಕೆಯಲ್ಲಿ ನಾನು ಪ್ರಮುಖವಾಗಿ ಮೂವರು ಪತ್ರಕರ್ತೆಯರನ್ನು ಸ್ಮರಿಸಿಕೊಳ್ಳಲು ಇಚ್ಚಿಸುತ್ತೇನೆ. ಹೋಮೈ ವರವಲ್ಲಾ, ಪ್ರಭಾ ದತ್‌, ಕಮಲಾ ಮಂಕೇಕರ್‌. ಭಾರತೀಯ ಪತ್ರಿಕಾ ಕ್ಷೇತ್ರದಲ್ಲಿ ಈ ಮೂವರೂ ಕೂಡ ಯಾವತ್ತೂ ಅಳಿಸಲಾಗದ ಹೆಜ್ಜೆ ಗುರುತುಗಳನ್ನು ದಾಖಲಿಸಿರುವುದು ಮಾತ್ರವಲ್ಲ, ಇವರು ಇವತ್ತಿನ ತಮ್ಮ ಮೊಮ್ಮಕ್ಕಳ ವಯಸ್ಸಿನ ಯುವ ಪತ್ರಕರ್ತೆಯರಿಗೆ ಸ್ಫೂರ್ತಿಯಾಗಿದ್ದಾರೆ.

ಭಾರತದ ಪ್ರಥಮ ಮಹಿಳಾ ಪತ್ರಿಕಾ ಛಾಯಾಗ್ರಾಹಕಿ ಹೋಮೈ ವಾರಾವಲ್ಲಾ. ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಇವರು ಪತ್ರಿಕಾ ವೃತ್ತಿಗೆ ಪ್ರವೇಶ ಪಡೆದಿದ್ದರು. ಬಾಂಬೆ ಕ್ರೋನಿಕಲ್‌ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಇವರು ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರು. 1940 ರಿಂದ 1970 ರ ವರೆಗೆ 30 ವರ್ಷಗಳ ಕಾಲ ಇವರು ದಾಖಲಿಸಿರುವ ಹೆಜ್ಜೆ ಗುರುತುಗಳು ಕಪ್ಪು, ಬಿಳುಪು ಕಾಲದಿಂದ ಛಾಯಾಚಿತ್ರ ಜಗತ್ತು ಬೆಳೆದು ಬಂದ ಇತಿಹಾಸಕ್ಕೂ ಸಾಕ್ಷಿಯಾಗಿದ್ದಾರೆ.

ಹಾಗೆಯೇ ಕಮಲಾ ಮಂಕೇಕರ್‌ ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸ್ತಿಲಲ್ಲಿ 1949 ರಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಗಾರ್ತಿ ಆಗಿದ್ದ ಕಮಲಾ ಮಂಕೇಕರ್, ಪತ್ರಿಕಾ ಸಂಸ್ಥೆಗಳಲ್ಲಿ ಮಹಿಳಾ ಶೌಚಾಲಯಕ್ಕಾಗಿ ಮೊದಲ ಬಾರಿಗೆ ಧ್ವನಿ ಎತ್ತಿದ್ದವರು. ಕೊನೆಗೆ ಮ್ಯಾನೇಜ್ ಮೆಂಟ್ ಬಳಸುತ್ತಿದ್ದ ಶೌಚಾಲಯದ ಕೀ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದ್ದರು. ರಾಷ್ಟ್ರದ ಮೊದಲ ಸಂಸತ್ ನಲ್ಲಿದ್ದ 22 ಮಹಿಳಾ ಎಂ.ಪಿ ಗಳಲ್ಲಿ ಹತ್ತು ಮಂದಿಯ ಸಂದರ್ಶನ ನಡೆಸಿದ ಯಶಸ್ಸು ಇವರ ಪಾಲಿಗಿದೆ.

ಮೂರನೆಯವರು ಪ್ರಭಾ ದತ್‌. ಬರ್ಕಾ ದತ್‌ ಅವರ ತಾಯಿ. 1965 ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ವರದಿಗಾರಿಕೆಗೆ ತೆರಳಿದ್ದ ಪ್ರಭಾದತ್ ಅವರನ್ನು ಈ ಸಂದರ್ಭದಲ್ಲಿ ನಾವು ವಿಶೇಷವಾಗಿ ಸ್ಮರಿಸಲೇಬೇಕು. ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ವರದಿಗಾರ್ತಿ ಆಗಿದ್ದ ಪ್ರಭಾ ದತ್‌ ಅವರಿಗೆ ಯುದ್ಧದ ವರದಿ ಮಾಡುವ ಉತ್ಸಾಹವಿತ್ತು. ಆದರೆ ಪತ್ರಿಕೆ ಅವಕಾಶ ಕೊಟ್ಟಿರಲಿಲ್ಲ. ಆದರೂ ಕೆಲಸಕ್ಕೆ ರಜೆ ಹಾಕಿ ರಣರಂಗಕ್ಕೆ ತೆರಳಿ ಸರಣಿ ವರದಿಗಳನ್ನು ಕಚೇರಿಗೆ ಕಳುಹಿಸಿದ್ದರು. ಅವು ಉತ್ತಮ ಗುಣಮಟ್ಟದ್ದಾಗಿದ್ದರಿಂದ ಪ್ರಕಟ ಕೂಡ ಆದವು. ಕೊನೆಗೆ ಇದೇ ಪತ್ರಿಕೆ ಪ್ರಭಾ ದತ್‌ ಅವರು ಮಿಲಿಟರಿ ಟ್ಯಾಂಕರ್ ಮುಂದೆ ನಿಂತಿದ್ದ ಫೋಟೋವನ್ನೂ ಪ್ರಕಟಿಸಿ ಪತ್ರಕರ್ತೆಯರ ಇತಿಹಾಸಕ್ಕೆ ದಾಖಲೆ ಉಳಿಸಿದೆ.

ಪುರುಷ ಪ್ರಾಭಲ್ಯವೇ ತುಂಬಿದ್ದ ಪತ್ರಿಕೋದ್ಯಮದಲ್ಲಿ ಈ ಮೂವರೂ ಒಟ್ಟು ಪತ್ರಿಕೋದ್ಯಮದ ಮಾದರಿಗಳಾಗಿ ಉಳಿದಿದ್ದಾರೆ. ಇವರ ಮೊಮ್ಮಕ್ಕಳ ವಯಸ್ಸಿನ ಇವತ್ತಿನ ಯುವ ಪತ್ರಕರ್ತೆಯರು ಈಗ ತಮ್ಮ ಅಜ್ಜಿಯರ ಕತೆಗಳನ್ನು ಹೆಚ್ಚೆಚ್ಚು ದಾಖಲಿಸುವ ಕೆಲಸ ಮಾಡುವ ಮೂಲಕ ಪತ್ರಕರ್ತೆಯರ ಚರಿತ್ರೆಯನ್ನು ಬರೆಯುವ ಕೆಲಸ ಮಾಡಬೇಕಿದೆ.

ಉತ್ತರ ಪ್ರದೇಶದ ಹಾಥರಸ್‌ ಅತ್ಯಾಚಾರ ಪ್ರಕರಣವನ್ನು ಬೆನ್ನತ್ತಿದ್ದ ಇಂಡಿಯಾ ಟುಡೇಯ ತನುಶ್ರೀ ಪಾಂಡೆ, ಪೆಗಾಸಿಸ್‌ ತನಿಖಾ ವರದಿ ಪ್ರಕಟಿಸಿದ ರೋಹಿಣಿ ಸಿಂಗ್‌, ಕೋವಿಡ್ ಸಂದರ್ಭದ ದುಡಿಯುವ ವರ್ಗದ ಸಂಕಷ್ಟಗಳನ್ನು ಇಡೀ ದೇಶ ಸುತ್ತಿ ದಾಖಲಿಸಿದ ಬರ್ಖಾ ದತ್‌ ಮತ್ತು ರಾಣಾ ಅಯೂಬ್‌, ಸ್ವಾತಿ ಚತುರ್ವೇದಿ ಥರದ ಹಲವು ಮಂದಿ ಪತ್ರಿಕಾ ವೃತ್ತಿಯ ಘನತೆ ಹೆಚ್ಚಿಸುತ್ತಲೇ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿತ್ತಾ ತಮ್ಮ ಹಿಂದಿನವರ ಚರಿತ್ರೆಯನ್ನು ಮುಂದುವರೆಸಿದ್ದಾರೆ.

ಇವತ್ತು ತಂತ್ರಜ್ಞಾನದ ಕಾರಣಕ್ಕೆ ಮಾಧ್ಯಮ ಕ್ಷೇತ್ರ ಕೂಡ ವಿಪರಿತ ಬೆಳೆದಿದೆ. ಪುರುಷರಂತೆ ಮಹಿಳೆಯರಿಗೂ ಹೆಚ್ಚೆಚ್ಚು ಅವಕಾಶಗಳು ಒದಗುತ್ತಿವೆ. ಮಾಧ್ಯಮಗಳ ನಿರ್ಣಾಯಕ ಹುದ್ದೆಗಳಲ್ಲಿ ಮಹಿಳೆಯರೇ ಇಲ್ಲ ಎನ್ನುವ ಪರಿಸ್ಥಿತಿ ನಿಧಾನಕ್ಕೆ ಬದಲಾಗುತ್ತಿದೆ. “ಓ ವುಮೇನಿಯಾ” ಸಂಸ್ಥೆ ನೀಡಿರುವ ವರದಿಯ ಪ್ರಕಾರ ನಮ್ಮ ಮಾಧ್ಯಮಗಳಲ್ಲಿ ಶೇ13 ರಷ್ಟು ಪ್ರಮುಖ ಹುದ್ದೆಗಳಲ್ಲಿ ಈಗ ಪತ್ರಕರ್ತೆಯರು ಇದ್ದಾರೆ.

ಇನ್ನು ಪರ್ಯಾಯ ಮಾಧ್ಯಮಗಳಲ್ಲಿ, ಯು ಟ್ಯೂಬ್‌ ಚಾನಲ್‌ಗಳಲ್ಲಿ ಪತ್ರಕರ್ತೆಯರು ನಿರಂತರ ಹವಾ ಎಬ್ಬಿಸುತ್ತಿದ್ದಾರೆ. ನಮ್ಮವರೇ ಆದ ವಿಜಲಕ್ಷ್ಮಿ ಶಿಬರೂರು, ಮಂಜುಳಾ ಮಾಸ್ತಿಕಟ್ಟೆ, ರಾಷ್ಟ್ರೀಯ ಮಟ್ಟದಲ್ಲಿ ಧನ್ಯಾ ರಾಜೇಂದ್ರನ್‌, ಸಾಕ್ಷಿ ಜೋಶಿ, ಕುಂಕುಮ್‌ ಬಿಲ್ವಾಲ್‌ ಮುಂತಾದವರು ಪತ್ರಿಕಾ ವೃತ್ತಿಯ ಸಾಧ್ಯತೆಗಳನ್ನು. ತೂಕವನ್ನು ಹೆಚ್ಚಿಸುತ್ತಿದ್ದಾರೆ. ಇವರೆಲ್ಲರ ಸಾಧನೆಗಳನ್ನು ಸ್ಮರಿಸುತ್ತಾ ಪತ್ರಕರ್ತೆಯರ ಸಂಘದ ಮುಂದೆ ನಾನು ಒಂದು ಬೇಡಿಕೆ ಇಡುತ್ತಿದ್ದೇನೆ.

ಭಾರತೀಯ ಪತ್ರಿಕೋದ್ಯಮದ ಮೊದಲ ಛಾಯಾಗ್ರಾಹಕಿ ಹೋಮೈ ವರವಲ್ಲಾ ಮತ್ತು ಮೊದಲ ಯುದ್ಧ ವರದಿಗಾರ್ತಿ ಪ್ರಭಾ ದತ್‌ ಅವರ ಹೆಸರಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಬೇಕು. ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಪತ್ರಕರ್ತೆಯರನ್ನು ಗುರುತಿಸಿ ಪ್ರತೀ ವರ್ಷವೂ ಪ್ರಶಸ್ತಿ ನೀಡಬೇಕು. ಈ ಎರಡೂ ಪ್ರಶಸ್ತಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತವನ್ನು ನಾನು ಮುಖ್ಯಮಂತ್ರಿಗಳಿಂದ ಕೊಡಿಸಲು ಸಿದ್ದನಿದ್ದೇನೆ. ಇದು ಈ ರ್ಷದಿಂದಲೇ ಆರಂಭಿಸಿದರೂ ನಾನು ಸಿದ್ದನಿದ್ದೇನೆ ಎಂದು ಘೋಷಿಸಿದರು.
ಪತ್ರಕರ್ತೆಯರ ಸಂಘಕ್ಕೆ ಕಾರ್ಯ ನಿರ್ವಹಿಸಲು ಕಚೇರಿಯ ಅಗತ್ಯವಿದ್ದು ಇದಕ್ಕೆ ಸೂಕ್ತ ಕ್ರಮ ವಹಿಸಲು ಪ್ರಯತ್ನಿಸಲಾಗುವುದು ಎಂದರು.
ರಾಜ್ಯ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

More articles

Latest article