ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮೊದಲಿಗೆ ಕಾಮಕಾಂಡದ ಆರೋಪಿ ಪ್ರಜ್ವಲ್ ಗೂ ನಮ್ಮ ಕುಟುಂಬಕ್ಕೂ ಸಂಬಂಧವಿಲ್ಲ ಎಂದಿದ್ದರು. ಈಗ ಪ್ರತಿ ದಿನ ಯಾಕೆ ಮೈಕ್ ಮುಂದೆ ಭಾಷಣ ಮಾಡುತ್ತಿದ್ದಾರೆ, ಕುಟುಂಬ ಪ್ರೇಮ ಯಾಕೆ ಉಕ್ಕಿ ಹರಿಯುತ್ತಿದೆ? ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಪ್ರಶ್ನಿಸಿದರು.
ಕಾಮಕಾಂಡ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಸಂಸದ, ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು ಮತ್ತು ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಇಂದು ನಡೆಯುತ್ತಿರುವ ಬೃಹತ್ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಾಸನ ಜಿಲ್ಲೆಯಲ್ಲಿ ನಡೆದಿರುವ ಈ ಪ್ರಕರಣ ಎಲ್ಲರೂ ತಲೆತಗ್ಗಿಸುವಂಥದ್ದು, ಏಕೆಂದರೆ ಇದು ಹೋರಾಟದ ಕಣವಾಗಿದ್ದಂತಹ ಜಿಲ್ಲೆ, ರೈತ ಹೋರಾಟ, ದಲಿತ ಹೋರಾಟ, ಮಹಿಳಾ ಹೋರಾಟ ಮತ್ತು ಎಲ್ಲ ಬಗೆಯ ಜನಪರ ಹೋರಾಟಗಳ ತಾಣವಾಗಿದ್ದ ಜಿಲ್ಲೆಯಲ್ಲಿ ಇಂಥ ಘೋರ ಪ್ರಕರಣ ನಡೆದಿರುವುದು ನಾಚಿಕೆಗೇಡು ಎಂದು ಅವರು ಹೇಳಿದರು.
ಈ ವೇದಿಕೆಯಿಂದ ಪ್ರಧಾನ ಮಂತ್ರಿಗಳನ್ನು ನಾನು ಕೇಳುತ್ತಿದ್ದೇನೆ: ʼನಾನೇ ದೇವರು ಅಂತ ಹೇಳಿಕೊಳ್ಳುತ್ತಿರುವ ಪ್ರಧಾನ ಮಂತ್ರಿಗಳೇ ನೀವು ವಿವೇಕಾನಂದರು ಧ್ಯಾನ ಮಾಡಿದ್ದ ನೆಲವನ್ನು ಮಲಿನ ಮಾಡುವುದನ್ನು ನಿಲ್ಲಿಸಿ, ಅದರ ಬದಲು ಹಾಸನಕ್ಕೆ ಬಂದು ನೊಂದವರ ಅಳಲು ಕೇಳಿ ಎಂದು ಆಗ್ರಹಿಸಿದರು.
ಆರೋಪಿ ದೇಶ ಬಿಟ್ಟು ಹಾರಿಹೋಗುತ್ತಾನೆ, ಇದಕ್ಕೆ ಯಾರ ಬೆಂಬಲ ಇತ್ತು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವೂ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ನೊಂದವರಿಗೆ ರಕ್ಷಣೆ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲೇಬೇಕು ಎಂದು ಈ ಹೋರಾಟದ ಮೂಲಕ ನಾವು ಆಗ್ರಹಿಸುತ್ತಿದ್ದೇವೆ. ಅಲ್ಲಿಯತನಕ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಅವರು ಘೋಷಿಸಿದರು.