ನ್ಯಾಯವಾದಿಗಳು ಹೆಚ್ಚೆಚ್ಚು ಕ್ರಿಯಾಶೀಲರಾಗಿ ಮತ್ತು ಕೌಶಲ್ಯದಿಂದ ಕೆಲಸ ಮಾಡಿದಷ್ಟೂ ನ್ಯಾಯದಾನ ಪ್ರಕ್ರಿಯೆಯ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ಸಂಘಟಿತ ಹಾಗು ಪ್ರಾಮಾಣಿಕ ಪ್ರಯತ್ನವು ನ್ಯಾಯಾಧೀಶರು, ವಕೀಲರು, ಕಾನೂನು ವಿದ್ಯಾರ್ಥಿಗಳು, ಶಾಸಕಾಂಗ ಮತ್ತು ಸರಕಾರ ಹೀಗೆ ಎಲ್ಲ ಕಡೆಯಿಂದ ಬಂದರೆ ನಮ್ಮ ನ್ಯಾಯದಾನ ಪ್ರಕ್ರಿಯೆಯ ಗುಣಮಟ್ಟವನ್ನು ನಾವು ವಿಶ್ವದಲ್ಲೇ ಅತಿ ಎತ್ತರಕ್ಕೆ ಕೊಂಡೊಯ್ಯುವುದು ಅಸಾಧ್ಯದ ಮಾತಲ್ಲ -ಶಫೀರ್ ಎ .ಎ, ಮಾಜಿ ನ್ಯಾಯಾಧೀಶರು.
ಎಲ್ಲೋ ಓದಿದ ಒಂದು ಕಥೆ ನೆನಪಿಗೆ ಬರುತ್ತಿದೆ. ಒಂದು ಕಾಡಿನಲ್ಲಿ ಒಮ್ಮೆ ದುಷ್ಟ ಸಿಂಹ ರಾಜನಾಗಿ ಅಧಿಕಾರ ವಹಿಸಿ ಕೊಳ್ಳುತ್ತದೆ. ಆ ಸಿಂಹಕ್ಕೆ ಕತ್ತೆಗಳ ಮೇಲೆ ವಿಪರೀತ ದ್ವೇಷ ಇರುತ್ತದೆ. ಎಲ್ಲಾ ಕತ್ತೆಗಳನ್ನು ಕಾಡಿನಿಂದ ಓಡಿಸಿ ಬಿಡಬೇಕೆಂದು ತೀರ್ಮಾನಿಸಿ ಆ ಸಿಂಹ ಒಂದು ಆದೇಶ ಹೊರಡಿಸುತ್ತದೆ. ಆ ಆದೇಶ ಈ ರೀತಿ ಇರುತ್ತದೆ- ಎಲ್ಲ ಕತ್ತೆಗಳು ಮೂರು ದಿನಗಳ ಒಳಗಾಗಿ ಕಾಡಿನಿಂದ ಜಾಗ ಖಾಲಿ ಮಾಡಬೇಕು. ಈ ಆದೇಶ ಪಾಲಿಸದ ಕತ್ತೆಗಳನ್ನು ಜೈಲಿಗೆ ಅಟ್ಟಲಾಗುವುದು.
ಕ್ರೂರಿ ರಾಜನ ವಿಚಿತ್ರ ಆಜ್ಞೆ ಕೇಳಿ ಹೆದರಿದ ಕತ್ತೆಗಳು ಸಂಸಾರ ಸಮೇತ ಗುಂಪು ಗುಂಪಾಗಿ ಕಾಡಿನಿಂದ ಪಲಾಯನ ಮಾಡಲು ಶುರು ಮಾಡುತ್ತವೆ. ಇದನ್ನು ನೋಡಿಯೂ ಬೇರೆ ಪ್ರಾಣಿಗಳು ಏನೂ ಮಾಡಲಾಗದೆ ದುಃಖದಿಂದ ಅಸಹಾಯಕರಾಗಿ ಕುಳಿತಿರುತ್ತವೆ.
ಆದರೆ ವಿಚಿತ್ರ ಎಂಬಂತೆ, ಕಾಡಿನಿಂದ ಹಿಂಡು ಹಿಂಡಾಗಿ ಪಲಾಯನ ಮಾಡುತ್ತಿದ್ದ ಕತ್ತೆಗಳ ಜೊತೆ ಒಂದು ಕಾಡು ಕೋಣ ಸೇರಿಕೊಳ್ಳುತ್ತದೆ. ಆ ಕೋಣವನ್ನು ನೋಡಿ ಕುತೂಹಲ ತಾಳಲಾರದೆ ಕತ್ತೆಗಳು ಕೇಳುತ್ತವೆ. “ನೀನೇಕೆ ಹೆದರಿ ಓಡ್ತಾ ಇದ್ದಿಯಾ?, ರಾಜನ ಆದೇಶ ಕತ್ತೆಗಳಿಗೆ ಅಷ್ಟೇ ಅಲ್ವಾ ಅನ್ವಯಿಸುವುದು?”. ಅದಕ್ಕೆ ಕೋಣ ನೀಡುವ ಉತ್ತರ ಹೀಗೆ ಇದೆ- ನಾನು ಕೋಣ ಅನ್ನೋದು ನಿಜ. ಆದರೆ ನನಗೆ ಬಹಳ ಕತ್ತೆಗಳ ಜೊತೆ ಗೆಳೆತನ ಇದೆ. ಒಂದು ವೇಳೆ ರಾಜನ ಪೊಲೀಸರು ನನ್ನ ಮೇಲಿನ ಹಗೆಯಿಂದ ನಾನು ಕತ್ತೆ ಎಂದು ಸುಳ್ಳು ಆರೋಪ ಮಾಡಿ ನನ್ನನ್ನು ಬಂಧಿಸಿ ಜೈಲಿಗೆ ಅಟ್ಟಿದರೆ ನಾನು ಕತ್ತೆ ಅಲ್ಲ, ಕೋಣ ಎಂದು ಸಾಬೀತು ಪಡಿಸಿ ಜೈಲಿನಿಂದ ಹೊರ ಬರಲು ಕನಿಷ್ಠ 15 ವರ್ಷ ಬೇಕಾಗ ಬಹುದು. ಹೀಗೆ ಹೇಳಿ ಆ ಕೋಣ ನಾಗಾಲೋಟಕ್ಕೆ ಅಣಿಯಾಗುತ್ತದೆ.
ನಮ್ಮ ನ್ಯಾಯದಾನ ಪ್ರಕ್ರಿಯೆಯ ಆಮೆಗತಿಯ ವೇಗ ಈ ಕತೆಯಲ್ಲಿ ವಿಡಂಬನೆಗೆ ಒಳಗಾಗಿದೆ. ನ್ಯಾಯಾಲಯಗಳ ಮಂದಗತಿಯ ನ್ಯಾಯದಾನ ಪ್ರಕ್ರಿಯೆಯನ್ನು ಅಣಕಿಸುವ “ಕೋರ್ಟಿಗೆ ಹೋಗಿ ಗೆದ್ದವನು ಸೋತ, ಸೋತವನು ಸತ್ತ” ಎಂಬ ಮಾತು ಕೂಡ ನಮ್ಮಲ್ಲಿ ಬಹಳ ಪ್ರಚಲಿತದಲ್ಲಿದೆ.
ಅಷ್ಟಕ್ಕೂ ನಮ್ಮ ನ್ಯಾಯಾಂಗದ ನ್ಯಾಯ ದಾನ ಪ್ರಕ್ರಿಯೆಗಳಲ್ಲಿ ವಿಳಂಬಕ್ಕೆ ಕಾರಣಗಳೇನು ಎಂಬುದು ಬಹಳ ಜಿಜ್ಞಾಸೆ ಹುಟ್ಟಿಸುವ ಪ್ರಶ್ನೆ. ಇದಕ್ಕೆ ಉತ್ತರ ಕಂಡು ಕೊಳ್ಳಬೇಕಾದರೆ ನಮ್ಮ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆ ಹಾಗು ನ್ಯಾಯದಾನ ಪ್ರಕ್ರಿಯೆಯ ಸಂರಚನೆ ಮತ್ತು ಪರಿಮಿತಿಗಳ ಬಗ್ಗೆ ತಿಳಿದು ಕೊಳ್ಳುವುದು ಮುಖ್ಯ.
ನಮ್ಮ ಸಂವಿಧಾನದ ಅಡಿಯಲ್ಲಿ ಕಾನೂನುಗಳನ್ನು ರೂಪಿಸುವ ಅಧಿಕಾರವನ್ನು ಶಾಸಕಾಂಗಕ್ಕೆ ನೀಡಲಾಗಿದೆ. ಸಂವಿಧಾನದ 246ನೇ ವಿಧಿ ಹಾಗು ಏಳನೇ ಪರಿಚ್ಛೇದದಲ್ಲಿ ರಾಜ್ಯ ಶಾಸಕಾಂಗ ಮತ್ತು ಕೇಂದ್ರದ ಸಂಸತ್ತು ಯಾವ ಯಾವ ವಿಷಯಗಳಲ್ಲಿ ಕಾನೂನು ರಚಿಸಬಹುದು ಎಂದು ಹೇಳಲಾಗಿದೆ. ಈ ಪರಿಚ್ಛೇದದ ಅಡಿಯಲ್ಲಿ ರಾಜ್ಯ ಶಾಸಕಾಂಗ ಹಾಗು ಸಂಸತ್ತು ರೂಪಿಸಿ ಅನುಮೋದಿಸುವ ಕಾನೂನುಗಳನ್ನು ಜಾರಿಗೆ ತರುವುದು ಆಯಾ ಸರಕಾರಗಳ ಕೆಲಸ.
ಕಾನೂನಿನ ಉಲ್ಲಂಘನೆಯನ್ನು ತಡೆಯುವುದು ಮತ್ತು ತಪ್ಪಿತಸ್ಥರನ್ನು ನ್ಯಾಯಾಂಗದ ಮುಂದೆ ತರುವುದು ಸರಕಾರದ ಅಧೀನದಲ್ಲಿರುವ ಪೋಲೀಸರು ಮತ್ತು ಸಂಬಂಧಿಸಿದ ಇಲಾಖೆಗಳ ಕರ್ತವ್ಯ. ಹಾಗೆ ನ್ಯಾಯಾಲಯದ ಮುಂದೆ ಪ್ರಕರಣಗಳು ಬಂದಾಗ ಕಾನೂನುಗಳ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡುವುದು ನ್ಯಾಯಾಲಯದ ಜವಾಬ್ದಾರಿ.
ನ್ಯಾಯಾಲಯದಲ್ಲಿ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸುವುವಾಗ ನ್ಯಾಯಾಧೀಶರು ಹಲವಾರು ಕಾನೂನು ಕಟ್ಟಳೆಗಳನ್ನು ಪರಿಶೀಲಿಸ ಬೇಕಾಗುತ್ತದೆ. ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಿಗೆ ವಿಭಿನ್ನ ಹಾಗು ಬೇರೆಯದೇ ಆದ ಕಾನೂನು ಮತ್ತು ಸಾಕ್ಷ್ಯ ವಿಧಾನವನ್ನು ಅನುಸರಿಸ ಬೇಕಾಗುತ್ತದೆ.
ನಮ್ಮ procedural ಕಾನೂನುಗಳು ಎಷ್ಟು ಜಠಿಲ ಎಂದರೆ ಅವುಗಳನ್ನು ಅರ್ಥ ಮಾಡಿ ಕೊಳ್ಳಲು ಮತ್ತು ಸರಿಯಾದ ವ್ಯಾಖ್ಯಾನ ಕಂಡು ಕೊಳ್ಳಲು ಬಹಳ ಅಗಾಧ ಓದು, ಶ್ರಮ ಮತ್ತು ಸಮಯ ಬೇಕಾಗುತ್ತದೆ. ನಿಯಮಾವಳಿಗಳನ್ನು ಅನ್ವಯಿಸುವಲ್ಲಿ ಅಥವಾ ಪಾಲಿಸುವಲ್ಲಿ ಕೆಳ ನ್ಯಾಯಾಲಯ ತಪ್ಪೆಸಗಿದರೆ ಮೇಲ್ಮನವಿ ನ್ಯಾಯಾಲಯ ಕೆಳ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿ ಪ್ರಕರಣದ ಅಥವಾ ಅರ್ಜಿಯ ಮರು ವಿಚಾರಣೆಗೆ ಆದೇಶಿಸುತ್ತದೆ. ಇದು ಪ್ರಕರಣಗಳ ಇತ್ಯರ್ಥ ವಿಳಂಬಗೊಳ್ಳಲು ಕಾರಣವಾಗುತ್ತದೆ.
ಗಮನಿಸ ಬೇಕಾದ ಮತ್ತೊಂದು ವಿಚಾರ ಏನೆಂದರೆ ನಮ್ಮಲ್ಲಿರುವ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ನಮ್ಮಲ್ಲಿ ಸಂಪನ್ಮೂಲವಾಗಲೀ, ನ್ಯಾಯಾಲಯಗಳಾಗಲೀ ಲಭ್ಯ ಇಲ್ಲ. ಹೀಗಾಗಿ ಕಡಿಮೆ ಸಂಖ್ಯೆಯಲ್ಲಿರುವ ನ್ಯಾಯಾಧೀಶರುಗಳು ಸೀಮಿತ ಸಂಪನ್ಮೂಲಗಳನ್ನು ಬಳಸಿ ಕೊಂಡು ತಮ್ಮ ಸಾಮರ್ಥ್ಯ ಮೀರಿ ಕೆಲಸ ಮಾಡುವ ಒತ್ತಡಕ್ಕೆ ಸಿಲುಕಿರುತ್ತಾರೆ.
ಸಾಮಾನ್ಯವಾಗಿ ವಿಚಾರಣಾ ನ್ಯಾಯಾಲಯಗಳಲ್ಲಿ ಪ್ರತಿ ನ್ಯಾಯಾಧೀಶರ ಮುಂದೆ ಬೆಟ್ಟದಷ್ಟು ಕೆಲಸ ಇರುತ್ತದೆ. ಪ್ರತಿ ದಿನ 70 ರಿಂದ 100 ಪ್ರಕರಣಗಳು ನ್ಯಾಯಾಧೀಶರ ಮುಂದೆ ಬರುತ್ತವೆ. ಪ್ರತಿ ತಿಂಗಳು ಸಾಮಾನ್ಯವಾಗಿ ನ್ಯಾಯಾಧೀಶರು ಐವತ್ತಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಸಾವಿರಾರು ಪುಟಗಳ ದಾಖಲೆ ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿ ಸುದೀರ್ಘವಾದ ತೀರ್ಪು ಮತ್ತು ಆದೇಶ ಬರೆದಿರುತ್ತಾರೆ.
ಪರಿಮಿತಿಗಳ ನಡುವೆಯೂ ಬೇರೆ ಯಾವುದೇ ಇಲಾಖೆಗಳಿಗೆ ಹೋಲಿಸಿದರೆ ನಮ್ಮ ನ್ಯಾಯಾಲಯಗಳು ಅತ್ಯಂತ ಕ್ರಿಯಾಶೀಲವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡುತ್ತವೆ. ನ್ಯಾಯಾಲಯದ ಮುಂದೆ ನೀವು ಎಂತದ್ದೇ ಅಸಮಂಜಸ ಮತ್ತು ಜೊಳ್ಳು ಅರ್ಜಿಯನ್ನು ಸಲ್ಲಿಸಿದರೂ ಪಕ್ಷಕಾರರನ್ನು ಆಲಿಸಿದ ನಂತರ ಅದನ್ನು ಕಾನೂನಿನ ವ್ಯಾಪ್ತಿಯಲ್ಲಿ ಪರಿಶೀಲಿಸಿ ಸವಿವರವಾದ ಆದೇಶವನ್ನು ನ್ಯಾಯಾಲಯ ಮಾಡುತ್ತದೆ. ಕಾರಣಗಳನ್ನು ನೀಡದೆ ಅರ್ಜಿಗಳನ್ನು ವಜಾ ಮಾಡುವ ಅಥವಾ ಕಸದ ಬುಟ್ಟಿಗೆ ಹಾಕುವ ಪರಿಪಾಠ ನ್ಯಾಯಾಲಯಕ್ಕಿಲ್ಲ. ಇದು ಹುರುಳಿಲ್ಲದ ಎಷ್ಟೋ ಪ್ರಕರಣಗಳಲ್ಲಿ ನ್ಯಾಯಾಲಯದ ಅಮೂಲ್ಯವಾದ ಸಮಯವನ್ನು ನುಂಗಿ ಹಾಕುತ್ತದೆ.
ಇವಿಷ್ಟು ಒಂದೆಡೆಯಾದರೆ ಮತ್ತೊಂದೆಡೆ ನಮ್ಮ ಕಾನೂನುಗಳಲ್ಲಿ ಇರುವ ಲೋಪ ದೋಷ ಮತ್ತು ಹುಳುಕುಗಳು ನಮ್ಮ ನ್ಯಾಯಾಲಯಗಳ ಕೈ ಕಟ್ಟಿ ಹಾಕುತ್ತವೆ. ಉದಾಹರಣೆಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್ -ಸಿ. ಆರ್. ಪಿ.ಸಿ ಇದನ್ನು ಜುಲೈ ಒಂದರಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆ ಜಾಗದಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ -BNSS 2023 ನ್ನು ಜಾರಿಗೆ ತರಲಾಗಿದೆ. ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಲು ಯಾವ ನಿಯಮ ಮತ್ತು ವಿಧಾನಗಳನ್ನು ಪಾಲಿಸ ಬೇಕೆಂದು CRPC ಮತ್ತು BNSS 2023 ತಿಳಿಸಿ ಕೊಡುತ್ತವೆ.
ನ್ಯಾಯದಾನ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು BNSS 2023 ಇದರ ಪ್ರಮುಖ ಉದ್ದೇಶಗಳಲ್ಲಿ ಒಂದು ಎಂದು ಹೇಳಲಾಗಿದೆ. ಆದರೆ ಯಾವುದೇ ಸರಿಯಾದ ಚರ್ಚೆ ಮತ್ತು ವಿಚಾರ ಮಂಥನವಿಲ್ಲದೆ ಕೇಂದ್ರ ಸರಕಾರ ಜಾರಿಗೆ ತಂದಿರುವ BNSS 2023 ನಲ್ಲಿ ಹೊಸದಾಗಿ ಪರಿಚಯಿಸಲಾಗಿರುವ ಕೆಲವು ಕಲಂಗಳು ನ್ಯಾಯದಾನ ಪ್ರಕ್ರಿಯೆಯನ್ನು ಮತ್ತಷ್ಟು ವಿಳಂಬ ಮಾಡುವ ಸಾಧ್ಯತೆಯೇ ಹೆಚ್ಚು. ಉದಾಹರಣೆಗೆ ನ್ಯಾಯಾಲಯಕ್ಕೆ ನೇರವಾಗಿ ಸಲ್ಲಿಸಲಾಗುವ ಖಾಸಗಿ ಫಿರ್ಯಾದಿನ ಬಗ್ಗೆBNSS 2023 ಇದರ ಸೆಕ್ಷನ್ 223 ರಲ್ಲಿ ಹೇಳಲಾಗಿದೆ. ಈ ಸೆಕ್ಷನ್ ಗೆ ಸಂಬಂಧಿಸಿದ ಹಾಗೆ ಹೊಸದಾಗಿ ತಂದಿರುವ ನಿಯಮ ಏನೆಂದರೆ ಯಾವುದೇ ಖಾಸಗಿ ಫಿರ್ಯಾದು ಪ್ರಕರಣಗಳಲ್ಲಿ cogninzance ತೆಗೆದುಕೊಳ್ಳುವ ಮೊದಲು ನ್ಯಾಯಾಲಯ ಆರೋಪಿಗೆ ನೋಟಿಸ್ ನೀಡಬೇಕು. ಈ ನಿಯಮ ನೊಂದ ದೂರುದಾರರಿಗೆ ಎಷ್ಟು ಅನಾನುಕೂಲಕ್ಕೆ ಕಾರಣವಾಗ ಬಲ್ಲುದು ಎಂದರೆ:-
1. ಕಾಗ್ನಿಝನ್ಸ್ ತೆಗೆದು ಕೊಳ್ಳುವ ಮುನ್ನವೇ ಆರೋಪಿಗೆ ನೋಟೀಸ್ ಜಾರಿ ಮಾಡಿದರೆ ಆತ ನ್ಯಾಯಾಲಯದ ಮುಂದೆ ಹಾಜರಾಗಿ ವಿಳಂಬ ತಂತ್ರಗಳನ್ನು ಅನುಸರಿಸಿ ಫಿರ್ಯಾದಿ ರಾಜಿಗೆ ಒಪ್ಪಿಕೊಳ್ಳುವಂತೆ ಒತ್ತಡದ ಸನ್ನಿವೇಶ ಸೃಷ್ಟಿಸುವ ಸಾಧ್ಯತೆ ಇರುತ್ತದೆ.
2. ಪ್ರಿ ಕಾಗ್ನಿಝನ್ಸ್ ಹಂತದಲ್ಲಿ ಆರೋಪಿ ಜಾಮೀನು ಅರ್ಜಿ ಸಲ್ಲಿಸ ಬೇಕಾಗಿರುವುದಿಲ್ಲ ಮತ್ತು ಆರೋಪಿಯನ್ನು ಬಂಧಿಸುವ ಅವಕಾಶ ನ್ಯಾಯಾಲಯಕ್ಕೆ ಇರುವುದಿಲ್ಲ. ಇದರಿಂದ ಆರೋಪಿ ಪ್ರಬಲನಾಗಿದ್ದಲ್ಲಿ ಸಾಕ್ಷಿಗಳನ್ನು ಬೆದರಿಸಲು, ಆಮಿಷವೊಡ್ಡಲು ಹಾಗು ಸಾಕ್ಷ್ಯ ನಾಶ ಮಾಡಲು ವಿಫುಲ ಅವಕಾಶ ಕೊಟ್ಟಂತಾಗುತ್ತದೆ.
3. ಪ್ರಿ ಕಾಗ್ನಿಝನ್ಸ್ ನೋಟೀಸನ್ನು ಪ್ರಶ್ನೆ ಮಾಡಿ ಆರೋಪಿ ಹೈ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿ ತಡೆ ಆಜ್ಞೆ ತರುವ ಸಾಧ್ಯತೆ.
4. ಪ್ರಿ ಕಾಗ್ನಿಝನ್ಸ್ ಹಂತದಲ್ಲೇ ಆರೋಪಿ ಹಲವಾರು ದಾಖಲೆ ಹಾಗು ಸುದೀರ್ಘ ವಾದ ಮಂಡನೆಯ ಮೂಲಕ ನ್ಯಾಯಾಲಯದ ಸಮಯ ಹಾಳು ಮಾಡುವ ಸಾಧ್ಯತೆ.
ನಮ್ಮ ಕಾನೂನುಗಳ ಇಂತಹ ಲೋಪ ದೋಷಗಳೇ ಹೆಚ್ಚಿನ ಬಾರಿ ನೊಂದವರಿಗೆ ನ್ಯಾಯವನ್ನು ಮರೀಚಿಕೆ ಮಾಡುತ್ತದೆ. ನ್ಯಾಯಾಲಯಗಳಲ್ಲಿ ಪ್ರಕರಣ ಇತ್ಯರ್ಥಗೊಳ್ಳಲು ವಿಳಂಬವಾಗಲು ಕಾರಣವಾಗುವ ಹಲವಾರು ಅಂಶಗಳಲ್ಲಿ ಪ್ರಮುಖ ಕಾರಣ ಶಾಸಕಾಂಗ ಅಥವಾ ನಮ್ಮ ಸಂಸತ್ತು ರೂಪಿಸುವ ಕಾನೂನುಗಳಲ್ಲಿನ ಲೋಪ ದೋಷ ಎಂದರೆ ಅದನ್ನು ಅಲ್ಲಗೆಳೆಯಲಾಗದು. ಅದರ ಜೊತೆಗೆ ಕೆಲವು ನ್ಯಾಯವಾದಿಗಳಲ್ಲಿ ಕಂಡು ಬರುವ ವೃತ್ತಿ ಪರತೆಯ ಕೊರತೆ, ಕೌಶಲ್ಯದ ಅಭಾವ ಹಾಗು ಅಸಹಕಾರದ ಮನೋಭಾವ ಇವು ಸಹ ನ್ಯಾಯದಾನ ಪ್ರಕ್ರಿಯೆಯ ವೇಗವನ್ನು ಕುಂಠಿತ ಗೊಳಿಸುತ್ತವೆ.
ನ್ಯಾಯವಾದಿಗಳಲ್ಲಿ ಕೌಶಲ್ಯದ ಅಭಾವ ಉಂಟಾದರೆ ಅದು ನ್ಯಾಯಾಧೀಶರು ನೀಡುವ ತೀರ್ಪು ಮತ್ತು ಆದೇಶಗಳ ಗುಣಮಟ್ಟವನ್ನು ನೇರವಾಗಿ ಪ್ರಭಾವಿಸುತ್ತದೆ. ನ್ಯಾಯವಾದಿಗಳು ಹೆಚ್ಚೆಚ್ಚು ಕ್ರಿಯಾಶೀಲರಾಗಿ ಮತ್ತು ಕೌಶಲ್ಯದಿಂದ ಕೆಲಸ ಮಾಡಿದಷ್ಟೂ ನ್ಯಾಯದಾನ ಪ್ರಕ್ರಿಯೆಯ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ಸಂಘಟಿತ ಹಾಗು ಪ್ರಾಮಾಣಿಕ ಪ್ರಯತ್ನ ನ್ಯಾಯಾಧೀಶರು, ವಕೀಲರು, ಕಾನೂನು ವಿದ್ಯಾರ್ಥಿಗಳು, ಶಾಸಕಾಂಗ ಮತ್ತು ಸರಕಾರ ಹೀಗೆ ಎಲ್ಲ ಕಡೆಯಿಂದ ಬಂದರೆ ನಮ್ಮ ನ್ಯಾಯದಾನ ಪ್ರಕ್ರಿಯೆಯ ಗುಣಮಟ್ಟವನ್ನು ನಾವು ವಿಶ್ವದಲ್ಲೇ ಅತಿ ಎತ್ತರಕ್ಕೆ ಕೊಂಡೊಯ್ಯುವುದು ಅಸಾಧ್ಯದ ಮಾತಲ್ಲ.
ಶಫೀರ್ ಎ .ಎ
ಮಾಜಿ ನ್ಯಾಯಾಧೀಶರು ಹಾಗು ಹಾಲಿ ವಕೀಲರು
ಮೊ : 9342104296