ನವದೆಹಲಿ: ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ಕರಾವಳಿ ಜಿಲ್ಲೆಗಳ ಆಚೆಗೂ ಆಯೋಜಿಸುವುದನ್ನು ವಿರೋಧಿಸಿ ಪ್ರಾಣಿ ಹಕ್ಕುಗಳ ಸಂಘಟನೆ ‘ಪೇಟಾ ಇಂಡಿಯಾ’ (PETA) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಸಲು ಇದ್ದ ಅಡೆತಡೆಗಳು ಸಂಪೂರ್ಣವಾಗಿ ನಿವಾರಣೆಯಾಗಿವೆ.
ಮಾರ್ಚ್ 10 ರಂದು ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, ಕರ್ನಾಟಕ ಹೈಕೋರ್ಟ್‌ನ ನವೆಂಬರ್ 14ರ ಆದೇಶವನ್ನು ಎತ್ತಿ ಹಿಡಿಯಿತು. ಬೆಂಗಳೂರಿನಲ್ಲಿ ಕಂಬಳ ನಡೆಸಲು ಅನುಮತಿ ನೀಡಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪೇಟಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕಂಬಳವನ್ನು ಅದರ ಸಾಂಪ್ರದಾಯಿಕ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹೊರಗೆ ಆಯೋಜಿಸುವುದು ಕಾನೂನುಬಾಹಿರ ಮತ್ತು ಇದು ಪ್ರಾಣಿ ಹಿಂಸೆಗೆ ದಾರಿ ಮಾಡಿಕೊಡುತ್ತದೆ ಎಂದು ಪೇಟಾ ವಾದಿಸಿತ್ತು.
ಆದರೆ ಸುಪ್ರೀಂ ಕೋರ್ಟ್ ಈ ವಾದವನ್ನು ತಿರಸ್ಕರಿಸಿದ್ದು, “ಸಂಸ್ಕೃತಿಯನ್ನು ಕೇವಲ ಒಂದು ಪ್ರದೇಶಕ್ಕೆ ಸೀಮಿತಗೊಳಿಸುವುದು ಯಾಕೆ? ರಾಜ್ಯದ ಇತರ ಭಾಗಗಳ ಜನರಿಗೂ ಈ ಸಂಸ್ಕೃತಿಯ ಪರಿಚಯವಾಗಲಿ,” ಎಂದು ಪ್ರಬಲವಾಗಿ ಅಭಿಪ್ರಾಯಪಟ್ಟಿದೆ.

