ನಾವು ʼಅಂತಹʼ ಮೇಧಾವಿಯ ಬಗ್ಗೆ ಯಾಕಿಷ್ಟು ಲಘುವಾಗಿ ಮಾತಾಡುತ್ತೇವೆ?

Most read

(ಗಣರಾಜ್ಯೋತ್ಸವದಂದು ಒಂದು ಜಿಜ್ಞಾಸೆ)

ನಾವು ಒಂದು ಸಮಾಜವಾಗಿ ಜನರಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಹಕ್ಕುಗಳು ಹೇಗೆ ನಮ್ಮ ಜೀವನದಲ್ಲಿ ಅಮೂಲಾಗ್ರಹ ಬದಲಾವಣೆ ತಂದಿವೆ ಎಂಬ ಅರಿವನ್ನೇ ಮೂಡಿಸಿಲ್ಲ. ಸಂವಿಧಾನ, ಪ್ರಜಾಪ್ರಭುತ್ವದ ಪಾಠಗಳನ್ನ ನಮ್ಮ ವಿದ್ಯಾರ್ಥಿಗಳು ಓದಿದ್ದರೂ ಅವು ಬರಿಯ ಅಮೂರ್ತ, ಅಸ್ಪಷ್ಟ ಪರಿಕಲ್ಪನೆಗಳಾಗಿ ಉಳಿಯುತ್ತವೆ. -ಡಾ.ಹರೀಶ್‌ ಗಂಗಾಧರ್‌,ಅಸೋಸಿಯೇಟ್‌ ಪ್ರೊಫೆಸರ್‌.

ಇತ್ತೀಚಿಗೆ ನಗರದ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಂಬೇಡ್ಕರ್ ಅವರನ್ನ ಕುರಿತು ಮಾಡಿದ ಅಪಹಾಸ್ಯ, ಅಸ್ಪೃಶ್ಯತೆ ಹಾಗು ಮೀಸಲಾತಿ ಬಗ್ಗೆ ವಿದ್ಯಾರ್ಥಿಗಳಿಗಿರುವ ತಪ್ಪು ತಿಳುವಳಿಕೆ ನನಗೇನು ಅಚ್ಚರಿ ತರಲಿಲ್ಲ. ಗಣರಾಜ್ಯೋತ್ಸವ ಆಚರಣೆಯ ವೇಳೆಯಲ್ಲಿ ಅಂಬೇಡ್ಕರ್ ಫೋಟೋವನ್ನ ತೆಗೆಸಿದ್ದು, ಗ್ರಂಥಾಲಯ ಹಾಗು ವಿವಿಧ ಕಚೇರಿಗಳಿಂದ ಅವರ ಚಿತ್ರಗಳು ಕಣ್ಮರೆಯಾಗುತ್ತಿರುವುದರ ಮುಂದುವರೆದ ಭಾಗವೇ ಇದು. ನಮ್ಮ “ಪರ್ಫೆಕ್ಟ್ ಸಮಾಜದ” ಡಾರ್ಕ್ ಅಂಡರ್ ಬೆಲ್ಲಿ ಇದು.

ಈ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯದಲ್ಲಿ ಓದುವ ಬಹುಪಾಲು ವಿದ್ಯಾರ್ಥಿಗಳು ವ್ಯಾಪಾರಿಗಳ, ಅಧಿಕಾರಿಗಳ ಮಕ್ಕಳು. ಹುಟ್ಟಿನಿಂದಲೇ ಹೇರಳ ಸಂಪತ್ತು ಮತ್ತು ಸವಲತ್ತುಗಳನ್ನ ಅನುಭವಿಸಿದವರು. ಇಂತಹ ವಿದ್ಯಾರ್ಥಿಗಳು ಕೂಡ ಅಸ್ಪೃಶ್ಯತೆ ಮತ್ತದರ ಕಠೋರ ಛಾಯೆಯಲ್ಲಿಯೇ ಬೆಳೆದ ಮೇಧಾವಿ ಅಂಬೇಡ್ಕರ್ ಅವರ ಅವಹೇಳನ ಮಾಡುವುದು ಹೇಸಿಗೆ ಹುಟ್ಟಿಸಿದರೂ ಅನಿರೀಕ್ಷಿತವೇನಲ್ಲ.

ಅಂಬೇಡ್ಕರ್

ರಾಜ್ಯದ ಇಂತಹ ಸಾಕಷ್ಟು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಪ್ರವೇಶ ಪಡೆಯುವುದಕ್ಕಿರುವುದು ಎರಡೇ ಮಾರ್ಗ- ಒಂದು ಮೆರಿಟ್ ವಿಥ್ ಡೊನೇಷನ್ ಮತ್ತೊಂದು ಮೆರಿಟ್ ಇಲ್ಲದ ಡಬಲ್ ಡೊನೇಷನ್. ಡೊನೇಷನ್ ಅನ್ನುವ ಪದಕ್ಕೆ ದಾನ, ದೇಣಿಗೆ, ಕೊಡುಗೆ ಎಂಬ ಅರ್ಥಗಳಿವೆ. ಆದರೆ ಈ ವಿದ್ಯಾಸಂಸ್ಥೆಗಳು ಪಡೆಯುವ ಡೊನೇಷನ್ ಎಂಬ ಪದಕ್ಕೆ ಬೇರೆಯದೇ ಅರ್ಥ, ಆಯಾಮ ಮತ್ತು ಪ್ರಭಾವವಿದೆ. ಮೊದಲಿಗೆ ಮೆರಿಟ್. ಮೆರಿಟ್ ಮತ್ತು ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ಸೀಟ್ ಕೊಡಲಾಗುತ್ತದೆ. ಅಭಾವವೇ ಇಲ್ಲದೆ ಬೆಳೆಯುವ ಈ ವಿದ್ಯಾರ್ಥಿಗಳಿಗೆ ಮೆರಿಟ್ ಅನ್ನೋದು ಸತತ ಪರಿಶ್ರಮದ, ಬುದ್ಧಿವಂತಿಕೆಯ ಫಲ. ಸಾಮಾಜಿಕ ಬಂಡವಾಳ ಅನ್ನೋದರ ಕಲ್ಪನೆಯು ಈ ವಿದ್ಯಾರ್ಥಿಗಳ ತಲೆಯಲ್ಲಿರುವುದಿಲ್ಲ. ಈ ಆಲೋಚನಾ ಕ್ರಮದ ವಿದ್ಯಾರ್ಥಿಗಳು ಒಂದು ಕಡೆಯಾದರೆ, ಸಾಧಾರಣ ಓದಿನ ಮಕ್ಕಳು ಉನ್ನತ ವ್ಯಾಸಂಗ ಮುಗಿಸಿ ತಮ್ಮ ಬೃಹತ್ ವ್ಯಾಪಾರ ವಹಿವಾಟುಗಳನ್ನ ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿ ಎಂಬ ಕನಸುಗಳನೊತ್ತು ಡಬಲ್ ಡೊನೇಷನ್ ತೆತ್ತು ಈ ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಸೇರುವ ವಿದ್ಯಾರ್ಥಿ ವರ್ಗ ಇನ್ನೊಂದೆಡೆ. ಒಟ್ಟಾರೆ ವಿದ್ಯಾರ್ಥಿ ಸಂಯೋಜನೆಯನ್ನ ವಿವರಿಸುವುದಾದರೆ ಅದು ಮೇಲ್ವರ್ಗ, ಅಧಿಕಾರಶಾಹಿ, ವ್ಯಾಪಾರೀ, ಮತ್ತು ಸಾಮಾಜಿಕ ಬಂಡವಾಳವನ್ನ ಅನಾದಿ ಕಾಲದಿಂದಲೂ ಅನುಭವಿಸಿಕೊಂಡು ಬಂದಿರುವವರ ಗುಂಪೆಂದರೆ ತಪ್ಪಾಗಲಾರದು.

ಇನ್ನು ಇಲ್ಲಿನ ಶಿಕ್ಷಕರನ್ನ ಗಮನಿಸಿದರೆ ಬಹುಸಂಖ್ಯೆಯಲ್ಲಿ ನಿಮಗೆ ಕಾಣಸಿಗುವುದು ಅರ್ಬನ್, upper ಮಿಡ್ಲ್ ಕ್ಲಾಸ್ ಶಿಕ್ಷಕರೇ. ಕೆಲಸದ ಅನಿಶ್ಚತತೆ ಇವರನ್ನ ಸದಾ ಕಾಡುತ್ತದೆ. ಅವರು ಎಷ್ಟೇ ಪ್ರತಿಭಾನ್ವಿತರಾದರು, ಅನುಭವಿಯಾದರು ಅವರ ತಲೆಯ ಮೇಲೆ ತೂಗು ಕತ್ತಿಯೊಂದು ನೇತಾಡುತ್ತಲೇ ಇರುತ್ತದೆ. ಪಕ್ಕಾ ಕಾರ್ಪೊರೇಟ್ ಕಂಪನಿಯಂತೆ ಕಾರ್ಯ ನಿರ್ವಹಿಸುವ ಈ ಶಿಕ್ಷಣ ಸಂಸ್ಥೆಗಳಲ್ಲಿ ಅವರು ಮ್ಯಾನೇಜ್ಮೆಂಟ್ ಜೊತೆಗೆ ಅತಿಯಾದ ವಿನಯದಿಂದಲೇ ನೆಡೆದುಕೊಳ್ಳಬೇಕು. ಸಂವಾದ, ಚರ್ಚೆ, ಪ್ರತಿರೋಧ ಅನ್ನೋದು ಇಲ್ಲಿ ಸತ್ತ ಪದಗಳು. A nation is a people in conversation ಎಂಬುದು ಈ ಸಂಸ್ಥೆಗಳಲ್ಲಿ ಒಪ್ಪಿತವಾಗದ ಮಾತು. ಇಂತಹ ವಿದ್ಯಾ ಸಂಸ್ಥೆಗಳಲ್ಲಿ ಶಿಕ್ಷಕರಿಗಿರುವ ಶೈಕ್ಷಣಿಕ ಸ್ವಾತಂತ್ರ್ಯವಾದರೂ ಎಂತದ್ದು? ಅಲ್ಲಿರುವ ಶಿಕ್ಷಕರ ಜಾತಿ/ಧರ್ಮ/ವರ್ಗಗಳ ಕಂಪೋಸಿಷನ್ ಏನು?

ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಕೆಲ ಪ್ರಾಧ್ಯಾಪಕರು ಖಾಸಗಿ ವಿದ್ಯಾ ಸಂಸ್ಥೆಗಳ ಗುಣಗಾನ ಮಾಡುವುದನ್ನ ನಾನು ಸದಾ ಕೇಳುತ್ತಲೇ ಇರುತ್ತೇನೆ. “ವಿಶ್ವ ದರ್ಜೆಯ ಸೌಲಭ್ಯವಿದೆ, ವಿಶಾಲ ಕ್ಯಾಂಪಸ್ ಇದೆ, ಅದ್ಭುತ ಕ್ಯಾಂಟೀನ್ ಇದೆ” ಅಂತ ಉದ್ಗರಿಸುವಾಗ ಅಲ್ಲಿನ ಅಕಾಡೆಮಿಕ್ ಫ್ರೀಡಂ ಅನ್ನ ಕಡೆಗಣಿಸಿರುತ್ತಾರಷ್ಟೆ. ಹೀಗೆ ಖಾಸಗಿ ಸಂಸ್ಥೆಗಳ ಗುಣಗಾನ ಮಾಡುವ ಪ್ರಾಧ್ಯಾಪಕ ವರ್ಗ ತಮ್ಮ ಸಂಸ್ಥೆಯ ಕೆಳಜಾತಿಯ ಪ್ರಾಧ್ಯಾಪಕರ ಮೇಲೆ ವಿನಾಕಾರಣ ಅಸಮರ್ಥತೆಯ ಆಪಾದನೆ ಮಾಡುತ್ತಲೇ ಇರುತ್ತದೆ ಎನ್ನುವುದನ್ನ ಕೂಡ ನಾವು ಗಮನಿಸಬೇಕು. ನಿರಂತರ ಆಪಾದನೆ, ತಾತ್ಸಾರ, ಅಸಡ್ಡೆ, ಅವಮಾನಕ್ಕೆ ಒಳಗಾಗಿ ನಿಜವಾಗಿಯೂ “ಕೆಲಸಕ್ಕೆ ಬಾರದವರು/ಅಸಮರ್ಥರು” ಆಗುವ ಕೆಲಸಗಾರರ ಕುರಿತು ಬರೆದರೆ ಬೇರೊಂದು ಕತೆಯೇ ಆಗುತ್ತದೆ. ಇರಲಿ, ನಾವು ಒಂದು ವಿಷಯ ನೆನಪಿನಲ್ಲಿಡಬೇಕು, ಯಾವ ಖಾಸಗಿ ಶಿಕ್ಷಣ ಸಂಸ್ಥೆಯು ಈ ದೇಶದ ಪಿಡುಗುಗಳನ್ನ ಹೋಗಲಾಡಿಸದು. ಅಲ್ಲಿ ಓದುವ ವಿದ್ಯಾರ್ಥಿಗಳಿಂದ ಅಪಹಾಸ್ಯ ಅಥವಾ ಸಮಾಜದ ಯಥಾಸ್ಥಿತಿ ಕಾಪಾಡಿ ಕೊಳ್ಳುವಿಕೆ ಮಾತ್ರ ನಿರೀಕ್ಷಿಸಬಹುದೇ ಹೊರತು ಮತ್ತಿನ್ನೇನನ್ನೂ ಅಲ್ಲ. ಚಿಂತಿಸಿ, ಸರ್ಕಾರಿ ವಿದ್ಯಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಜವಾಬ್ದಾರಿ ಎಂತದ್ದು? ಈ ಸರ್ಕಾರಿ ವಿದ್ಯಾ ಸಂಸ್ಥೆಗಳನ್ನ ಅಭಿವೃದ್ಧಿ, ಶೈಕ್ಷಣಿಕ ಸ್ವಾತಂತ್ರ್ಯದ ವಾತಾವರಣ ನಿರ್ಮಿಸುವಲ್ಲಿ ಸರ್ಕಾರದ ಪಾತ್ರ ಎಷ್ಟು ಮಹತ್ವದ್ದು? ಕ್ಷೇತ್ರಗಳಲ್ಲಿ ಅತಿಯಾದ ಖಾಸಗಿ ಕಾರಣಕ್ಕೆ ಆದ್ಯತೆ ನೀಡುತ್ತಿರುವ ಈ ಕಾಲದಲ್ಲಿ ಸರ್ಕಾರಿ ಶಿಕ್ಷಣಗಳ ಅವಶ್ಯಕತೆಯ ಕುರಿತು ಮರುಚಿಂತನೆ, ವ್ಯಾಪಕ ಚರ್ಚೆಯ ಸಮಯವಿದು ಎಂದು ಮಾತ್ರ ಹೇಳಬಲ್ಲೆ.

ಖಾಸಗಿ ಶಾಲೆಯ ಸಾಂಧರ್ಭಿಕ ಚಿತ್ರ

ಸುಶಿಕ್ಷಿತ ಮೇಲ್ವರ್ಗ, ಮೇಲ್ಜಾತಿಯವರು ಅಂಬೇಡ್ಕರ್ ಅವರನ್ನ ಕುರಿತು ಇಷ್ಟೇಕೆ ವಿಷ ಕಾರುತ್ತಲೇ ಇರುತ್ತಾರೆ ಅನ್ನೋದಕ್ಕೆ ನಾನಾ ಕಾರಣಗಳಿರಬಹುದು, ಅಂಬೇಡ್ಕರ್ ವಾದದಿಂದ ಮೇಲ್ಜಾತಿ/ವರ್ಗದವರು ಕಾಪಾಡಿಕೊಂಡು ಬಂದಿರುವ ಸ್ಟೇಟಸ್, ಪ್ರಿವಿಲೇಜ್ ಮತ್ತು ಸಾಮಾಜಿಕ ಕ್ಯಾಪಿಟಲ್‌ ಗೆ ಅಪಾಯವಿದೆ (direct threat) ಎಂಬುದು ಅವರ ತಪ್ಪು ಗ್ರಹಿಕೆಯಾದರು ಆ ಭೀತಿಯನ್ನ ಹೋಗಲಾಡಿಸಲಾಗಿಲ್ಲ. Infact ಪ್ರಿವಿಲೇಜ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲೂ ಉಳ್ಳವರು ತಯಾರಿಲ್ಲ ಎಂಬುದು ವಾಸ್ತವ. ಉಳ್ಳವರು, ಜಮೀನುದಾರರು, ಮುಖಂಡರು, ರಾಜರು ತಮ್ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನ ಕಾಪಾಡಿಕೊಂಡು ಬಂದಿರುವ ನಾಡಿನಲ್ಲಿ “ಪರ್ಸನಲ್ ಇಂಟರೆಸ್ಟ್” ಮೊದಲಾದರೆ ಸಾರ್ವಜನಿಕ ಹಿತ ಅಷ್ಟು ಮುಖ್ಯವಾಗುವುದಿಲ್ಲ. Inclination is to protect their own interests rather than the interests of the people! ಸವಲತ್ತುಗಳನ್ನ ಎಲ್ಲರು ಸಮನಾಗಿ ಅನುಭವಿಸಬೇಕು, ಸಮಾನತೆಯ ನಾಡೊಂದ ಕಟ್ಟಬೇಕು ಎಂಬ ಅಂಬೇಡ್ಕರ್ ಅವರ ಆಶಯದಲ್ಲೇ ಮೇಲ್ಜಾತಿ/ವರ್ಗದವರು ಅವರನ್ನ ದ್ವೇಷಿಸುವ ಎಲ್ಲ ಅಂಶಗಳಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಭ್ರಾತೃತ್ವ ಕುರಿತಾದ ಹೇಳಿಕೆ ಇಲ್ಲಿ ಉಲ್ಲೇಖಿಸುವುದು ಸೂಕ್ತ:

“The Hindu social order is opposed to fraternity. It does not admit the principle of equality. Far from recognizing equality it makes inequality its official doctrine.

ಹಿಂದೂ ಸಾಮಾಜಿಕ ವ್ಯವಸ್ಥೆಯೇ ಭ್ರಾತೃತ್ವದ ವಿರೋಧಿ. ಅದು ಸಮಾನತೆಯ ತತ್ವವನ್ನು ಎಂದು ಒಪ್ಪುವುದಿಲ್ಲ. ಸಮಾನತೆಯನ್ನ ಗುರುತಿಸುವ ಬದಲಾಗಿ ಅಸಮಾನತೆಯನ್ನೇ ತನ್ನ ಅಧಿಕೃತ ಸಿದ್ಧಾಂತವಾಗಿಸಿಕೊಳ್ಳುತ್ತದೆ ”

ಇದರ ಜೊತೆಗೆ ಬಾಬಾ ಸಾಹೇಬರು ಹೇಳಿದ ಇನ್ನೊಂದು ಮಾತು ಇಲ್ಲಿ ಸಮಂಜಸ-

Civilised society undoubtedly needs division of labour. But in no civilised society is division of labour accompanied by this unnatural division of labourers into watertight compartments. Caste System is not merely a division of labourers- which is quite different from division of labour- it is a hierarchy in which the divisions of labourers are graded one above the other. In no other country is the division of labour accompanied by this gradation of labourers.

ನಾಗರೀಕ ಸಮಾಜದಲ್ಲಿ ನಿಸ್ಸಂಶಯವಾಗಿ ಶ್ರಮದ ಹಂಚಿಕೆ ಅವಶ್ಯಕ. ಆದರೆ ಯಾವುದೇ ಸಮಾಜದಲ್ಲಿ ಶ್ರಮದ ಹಂಚಿಕೆಯ ಜೊತೆಗೆ ಅಸ್ವಾಭಾವಿಕ ಕಾರ್ಮಿಕರ ವಿಭಜನೆಯಾಗಿಲ್ಲ. ಅವರನ್ನ ಅಭೇದ್ಯ ವಿಭಾಗಗಳಿಗೆ ಸಿಲುಕಿಸಿಲ್ಲ. ಜಾತಿ ವ್ಯವಸ್ಥೆ ಎನ್ನುವುದು ಬರಿಯ ಕಾರ್ಮಿಕರ ವಿಭಜನೆ ಮಾತ್ರವಲ್ಲ ಅದು ವಿಭಜನೆಯಾದವರನ್ನ ಒಬ್ಬರ ಮೇಲೆ ಒಬ್ಬರನ್ನಿರಿಸಿ ಮಾಡಿದ ಶ್ರೇಣಿಕೃತ ಕ್ರಮಾನುಗತ. ಬೇರಾವುದೇ ದೇಶದಲ್ಲಿ ಶ್ರಮದ ಹಂಚಿಕೆಯ ಜೊತೆಗೆ ಶ್ರಮಿಕರನ್ನ ಶ್ರೇಣಿಕೃತಗೊಳಿಸುವ ವ್ಯವಸ್ಥೆ ಇರಲಾರದು.

– The Essential AmbedKar (Ed- Bhalachandra Mungekar)

ಅಂಬೇಡ್ಕರ್ ಕಟ್ಟಬಯಸಿದ ಸಮಾಜ ಯಾರಿಗೂ ಮಾರಕವಾಗದೆ ಎಲ್ಲರನ್ನ ಸಮೃದ್ಧಿ, ಸಹಬಾಳ್ವೆಯತ್ತ ಕೊಂಡೊಯ್ಯುವ ಸಮಾಜವೆಂದು ಮನವರಿಕೆ ಮಾಡುವಲ್ಲಿ ನಾವು ಎಡವಿದ್ದೇವೆ. ನಮ್ಮ ಪಠ್ಯ ಪುಸ್ತಕಗಳಲ್ಲಿ ಗಾಂಧಿ ಕಾಣಿಸಿಕೊಳ್ಳಬಹುದು, ವಿವೇಕಾನಂದ ಇರಬಹುದು, ಮಾರ್ಕ್ಸ್ ತೀವ್ರ ಚರ್ಚೆಗೊಳಗಾಗಬಹುದು ಆದರೆ ಅಂಬೇಡ್ಕರ್ ನೋಡ ಸಿಗುವುದು ತೀರಾ ವಿರಳ. ಅಂಬೇಡ್ಕರ್ ಅವರನ್ನ ನಮ್ಮ ಅಕಾಡೆಮಿಕ್ ವಲಯ ಪಠ್ಯಪುಸ್ತಕಗಳಿಂದ ಹೊರಗಿರಿಸಲು ಮಾಡಿರುವ ಹುನ್ನಾರ ಬಹಳ ದೊಡ್ಡದು. ಅಂಬೇಡ್ಕರ್ ಅವರ ಬರಹವನ್ನ ಮೊದಲ ಬಾರಿಗೆ ನಾನು ಓದಿದ್ದು ನನ್ನ ವಿದ್ಯಾರ್ಥಿ ಜೀವನ ಮುಗಿದ ನಂತರವೇ! He was never a part of my curriculum. He has remained an Icon of the oppressed but not a true legend (which he is) of this nation. ಅವರ ವಿಚಾರಧಾರೆಗಳು ಎಲ್ಲರಿಗು ತಲುಪಿಸುವಲ್ಲಿ ನಾವು ಹಿಂದುಳಿದಿದ್ದೇವೆ ಎಂಬುದರಲ್ಲಿ ಸಂಶಯವಿಲ್ಲ. ಅಂಬೇಡ್ಕರ್ ವಿಚಾರಧಾರೆ ಬಿಡಿ, ನಮ್ಮ ವಿದ್ಯಾಸಂಸ್ಥೆಗಳಲ್ಲಿ ಡೆಮಾಕ್ರೆಟಿಕ್ ಶಿಕ್ಷಣವು ಇಲ್ಲ. ಹಾಗಾದರೆ ಇಲ್ಲಿರುವ ಶಿಕ್ಷಣ ವ್ಯವಸ್ಥೆಯಾದರು ಎಂತದ್ದು?

ಗ್ರೀಕ್ ಭಾಷೆಯಲ್ಲಿ ಪ್ಲೇಯೋನೆಕ್ಸಿಯ (pleonexia) ಎಂಬ ಪದವಿದೆ. ಪ್ಲೇಯೋನೆಕ್ಸಿಯ ಎಂಬುದು ಜಗದ ಎಲ್ಲವೂ ನನಗೆ ಬೇಕೆಂಬ ದುರಾಸೆ. ಅದು ಹಂಚಿ ಬಾಳದಿರುವ ದುರ್ಗುಣ. ಬೇರೆಯವರಿಗೆ ಸಲ್ಲಬೇಕಾಗಿರುವ ಶ್ರೇಯಸ್ಸು ಕೊಡದಿರುವ ದುರ್ಬುದ್ಧಿ ನ್ಯಾಯ, ಪರಸ್ಪರ ಸಹಾಯದ ಕನಿಷ್ಠ ಗಂಧವು ಇಲ್ಲದ ವಿರೂಪ ಮನಸ್ಥಿತಿಯದು. ಇಂತಹ ತೀವ್ರ ಪ್ಲೇಯೋನೆಕ್ಸಿಯಕ್ಕೆ ಬಲಿಯಾದ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿದೆ. ಈ ವಾತಾವರಣದಲ್ಲಿ ಪರಸ್ಪರ ಅನ್ಯೋನ್ಯತೆ, ಪರರಿಗೆ ಸ್ಪಂದಿಸುವುದು, ತಾಳ್ಮೆಯಿಂದ ಆಲಿಸುವುದು, ಸಹಾನುಭೂತಿ, ಭಿನ್ನಾಭಿಪ್ರಾಯಗಳನ್ನ ಮೀರಿ ಸಂವಾದದಲ್ಲಿ ತೊಡಗುವುದನ್ನ ವಿದ್ಯಾರ್ಥಿಗಳು ಕಲಿಯುವುದೇ ಇಲ್ಲ. ಅವರು ಗ್ರಹಿಸಿ, ಅರ್ಥ ಮಾಡಿಕೊಳ್ಳುವುದು ಕುಂಠಿತಗೊಳಿಸುವ ಕ್ರಮಾನುಗತ (Crippling Hierarchy) ಮತ್ತು ಕ್ಲಾಸ್ಟ್ರೊಫೋಬಿಕ್ ಅಸ್ತಿತ್ವವನ್ನಷ್ಟೇ. ದೇಶದ ಸುದೀರ್ಘ ಇತಿಹಾಸ ಮತ್ತು ಸಮಾಜದ ಮೂಲಭೂತ ಜ್ಞಾನವಿಲ್ಲದ ಪೀಳಿಗೆಯನ್ನ ತಯಾರಿಸುತ್ತಿವೆ ವಿದ್ಯಾ ಸಂಸ್ಥೆಗಳು. ಹೀಗಿರುವಾಗ common good, sense of justice ಎಂಬ ನಿಲುವುಗಳಿಗೆ ಅರ್ಥವಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ನಾವು ಒಂದು ಸಮಾಜವಾಗಿ ಜನರಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಹಕ್ಕುಗಳು ಹೇಗೆ ನಮ್ಮ ಜೀವನದಲ್ಲಿ ಅಮೂಲಾಗ್ರಹ ಬದಲಾವಣೆ ತಂದಿವೆ ಎಂಬ ಅರಿವನ್ನೇ ಮೂಡಿಸಿಲ್ಲ. ಸಂವಿಧಾನ, ಪ್ರಜಾಪ್ರಭುತ್ವದ ಪಾಠಗಳನ್ನ ನಮ್ಮ ವಿದ್ಯಾರ್ಥಿಗಳು ಓದಿದ್ದರೂ ಅವು ಬರಿಯ ಅಮೂರ್ತ, ಅಸ್ಪಷ್ಟ ಪರಿಕಲ್ಪನೆಗಳಾಗಿ ಉಳಿಯುತ್ತವೆ. ಪ್ರಜಾಪ್ರಭುತ್ವವೆಂದರೇನು ಎಂದು ವಿದ್ಯಾರ್ಥಿಗಳನ್ನ ಕೇಳಿದರೆ- ಅಬ್ರಹಾಂ ಲಿಂಕನ್ ನೀಡಿದ ಜನರಿಂದ, ಜನರಿಗಾಗಿ, ಜನರಿಗೋಸ್ಕರವೆಂದು ಉತ್ತರ ಬರುತ್ತದೆ ಆದರೆ ಅದರ ಸಂಪೂರ್ಣ ಇಂಪ್ಲಿಕೇಷನ್ಸ್ ವಿದ್ಯಾರ್ಥಿಗಳಿಗೆ ತಿಳಿದಿರುವುದೇ ಇಲ್ಲ. ವಿದ್ಯಾರ್ಥಿಗಳು ಪ್ರಜಾಪ್ರಭುತ್ವ, ಮಿತಜನತಂತ್ರ, ನಿರಂಕುಶವಾದಿ ಮತ್ತು ಸರ್ವಾಧಿಕಾರದ ತೌಲನಿಕವಾಗಿ ಓದುವುದಂತೂ ದೂರದ ಮಾತು. ಈ ಎಲ್ಲ ಕಾರಣಗಳಿಂದಲೇ ವಿದ್ಯಾರ್ಥಿಗಳು ಹಿಟ್ಲರ್ ನನ್ನು ಆರಾಧಿಸುವ, ಅಹಿಂಸೆಯನ್ನ ದ್ವೇಷಿಸುವ ಮತ್ತು ಸರ್ವಾಧಿಕಾರಕ್ಕೆ ಹಾತೊರೆಯುವ ಗುಣ ಬೆಳೆಸಿಕೊಳ್ಳುವುದು ಸಾಮಾನ್ಯ.

ರಾಜೀವ್ ಭಾರ್ಗವ್

ಹದಿನೆಂಟನೇ ಶತಮಾನದ ಇಂಗ್ಲೆಂಡ್‌ ನಲ್ಲಿ ಚಿಮ್ನಿ ಗುಡಿಸುವ ಮಕ್ಕಳಿದ್ದರು. ಉಳ್ಳವರು ಈ ಮಕ್ಕಳನ್ನ ಕಠಿಣವೂ, ಅಪಾಯಕಾರಿಯೂ ಆದ ಕೆಲಸಕ್ಕೆ ಇಳಿಸುತ್ತಿದ್ದರು. ಮನೆಯ ಮಂದಿಯೆಲ್ಲ ಬೆಚ್ಚಗಿರಲು ಮನೆಯೊಳಗೆ ಆಗ್ಗಿಷ್ಟಿಕೆ ಉರಿಸುವ ಪದ್ಧತಿಯಿದ್ದ ಕಾರಣ ಉರಿವ ಒಲೆಯ ಮೇಲೆ ಸಪೂರವಾದ ಚಿಮ್ನಿ ಹೊಂದಿಸಲಾಗುತ್ತಿತ್ತು. ಈ ಚಿಮ್ನಿಗಳನ್ನ ಗುಡಿಸಲು ಕೈಯಲ್ಲೊಂದು ಪೊರಕೆ ಮತ್ತು ಮಸಿ ತುಂಬುವ ಚೀಲವನ್ನ ಕೊಡಲಾಗುತ್ತಿತ್ತು. ನಿರ್ಗತಿಕ, ಅನಾಥ ಮತ್ತು ಕಡು ಬಡ ಮಕ್ಕಳನ್ನ ಕಪ್ಪಾದ ಒಂದು ನಿಲುವಂಗಿ ತೊಡಿಸಿ ಚಿಮ್ನಿ ಒಳಕ್ಕೆ ಬಿಡಲಾಗುತ್ತಿತ್ತು. ಹೀಗೆ ಚಿಮ್ನಿ ಒಳಗೆ ನುಗ್ಗಿದ ಎಷ್ಟೋ ಮಕ್ಕಳು ಅಲ್ಲೇ ಕೊನೆಯುಸಿರೆಳೆಯುತ್ತಿದ್ದರು.

ಇಂತಹ ಘೋರ ಶಿಶು ಶೋಷಣೆ ಕಾಲ ಕ್ರಮೇಣ ಮಾಯವಾಯಿತು. ಇದಕ್ಕೆ ಕಾರಣವಾಗಿದ್ದು ಕಠಿಣ ಕಾನೂನುಗಳು, ಚಿಮ್ನಿ ಶುಚಿಗೊಳಿಸಲು ಹುಟ್ಟಿಕೊಂಡ ಪರ್ಯಾಯಗಳು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಜನರ ಮನೋಧರ್ಮ ಬದಲಾದದ್ದು. ಆದರೆ ಜಾತಿ ಪದ್ಧತಿ ಮತ್ತು ಅದರ ಹೆಸರಲ್ಲಿ ಆಗುವ ಶೋಷಣೆ ಇಂದಿಗೂ ನಿಂತಿಲ್ಲ. ಎಷ್ಟೇ ಕಠಿಣ ಕಾನೂನು ಬಂದರು (Emancipation Proclamation ಜಾರಿಗೆ ಬಂದು, ಜಿಮ್ ಕ್ರೌ ನೀತಿ ನಾಶವಾಗಿ, ಬರಾಕ್ ಒಬಾಮ ಅಮೆರಿಕಾದ ರಾಷ್ಟ್ರಪತಿಯಾದರೂ ವರ್ಣಭೇದ ಹೊಸ ರೂಪದಲ್ಲಿ ಕಾಣಿಸಿಕೊಳ್ಳುವಂತೆ) ಜಾತಿ ಎಂಬುದು ರೂಪಾಂತರಗೊಂಡು ಭಾರತದಲ್ಲೇ ಅಲ್ಲದೆ ವಿದೇಶಗಳಲ್ಲೂ ತುಂಬ ಸಶಕ್ತವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ದೇಶದ ನಾಗರೀಕರ ಮನೋ ಧರ್ಮ ಬದಲಾಗುವ ಸೂಚನೆಗಳೂ ಕಾಣುತ್ತಿಲ್ಲ. Caste is reborn in new form, tailored to the needs and constraints of the time. ರೇವ ಸೀಗಲ್ ಹೇಳುವ ಹಾಗೆ ಜಾತಿ ಎಂಬುದನ್ನ ಸಂರಕ್ಷಣೆ ಮಾಡಲಾಗುತ್ತಿದೆ. It is preservation through transformation. ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯದಲ್ಲಿ ನಡೆದದ್ದು ಇಂತಹ ಸಂರಕ್ಷಣೆಯ ಸಣ್ಣ ಪ್ರಯತ್ನವಷ್ಟೆ.

ಡಾ. ಹರೀಶ್‌ ಗಂಗಾಧರ್

ಅಸೋಸಿಯೇಟ್‌ ಪ್ರೊಫೆಸರ್‌, ಇಂಗ್ಲಿಷ್‌ ವಿಭಾಗ

More articles

Latest article