ಕಾರಣ 1- ದಲಿತರ ಮೇಲಿನ ದೌರ್ಜನ್ಯ ಹೆಚ್ಚಳ
ಅತ್ಯಂತ ಅಮಾನವೀಯ ಸಂಗತಿ ಎಂದರೆ 2012 ರಲ್ಲಿ ಪ್ರತಿ ದಿನ 3 ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿತ್ತು. 2019 ರಷ್ಟೊತ್ತಿಗೆ ಪ್ರತಿ ದಿನ 6 ದಲಿತ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗುತ್ತಿತ್ತು. 2021 ರಷ್ಟೊತ್ತಿಗೆ ಪ್ರತಿದಿನ 14 ದಲಿತ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗುತ್ತಿದೆ. ಇದಕ್ಕೆ ನೇರ ಹೊಣೆ ಬಿಜೆಪಿ ಹಾಗೂ ಮೋದೀಜಿ ಸರ್ಕಾರ. ಇಂತಹ ಬಿಜೆಪಿ-ಮೋದಿ ಪಕ್ಷಕ್ಕೆ ದಲಿತರು ಸತ್ತರೂ ಓಟು ಹಾಕಲಾರರು – ನವೀನ್ ಮಾದಾರ.
2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅತ್ಯಂತ ಕ್ರೂರವಾಗಿ ದಮನಕ್ಕೊಳಗಾಗಿರುವ ಸಮುದಾಯ ದಲಿತರು. ಚಾತುರ್ವರ್ಣ ಪದ್ಧತಿಯನ್ನು ಎತ್ತಿಹಿಡಿಯುವ ಹಿಂದುತ್ವದ ಪ್ರತಿಪಾದಕ ಆಗಿರುವ ಬಿಜೆಪಿ ಸಹಜವಾಗಿಯೇ ಮೇಲಿನ ಜಾತಿಗಳ ಪರವಾಗಿ ನಿಲ್ಲುತ್ತದೆ. ಇದಕ್ಕೆ ಉದಾಹರಣೆ ಲೆಕ್ಕವಿಲ್ಲದಷ್ಟು ಸಿಗುತ್ತವೆ. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಆಡಳಿತದಲ್ಲಿ ದಲಿತರು ನರಕ ನೋಡಿದ್ದಾರೆ. ಈ ಕೆಳಗಿನ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ NCRB ನೀಡಿರುವ ಮಾಹಿತಿಯನ್ನು ಗಮನಿಸಿ.
2012 ರ ಎನ್.ಸಿ.ಆರ್.ಬಿ ವರದಿ ಪ್ರಕಾರ ಪ್ರತಿ 18 ನಿಮಿಷಗಳಿಗೆ ಒಂದರಂತೆ ದಲಿತರ ಮೇಲೆ ದೌರ್ಜನ್ಯವಾಗುತ್ತಿತ್ತು. ಆಗ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. ಪ್ರತಿ ದಿನ 3 ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿತ್ತು. ದಿನಕ್ಕೊಂದು ದಲಿತರ ಹತ್ಯೆಯಾಗುತ್ತಿತ್ತು. ಆದರೆ 2014 ರ ನಂತರ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದಲಿತರ ಪಾಲಿಗೆ ಅಕ್ಷರಶಃ ನರಕವಾಗಿ ಪರಿಣಮಿಸಿದೆ. ಮೊದಲ 5 ವರ್ಷದ ಮೋದಿ ಆಡಳಿತದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾದವು. ಎನ್.ಸಿ.ಆರ್.ಬಿ ವರದಿ ಪ್ರಕಾರ 2019 ರಲ್ಲಿ 15 ನಿಮಿಷಗಳಿಗೊಬ್ಬ ದಲಿತನ ಮೇಲೆ ದೌರ್ಜನ್ಯ ನಡೆಯಿತು.. ಪ್ರತಿ ದಿನ 6 ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಯಿತು. ಇಬ್ಬರು ಹತರಾದರು. ಮೋದಿಯವರ ಮೊದಲ ಅವಧಿಯ ಆಡಳಿತದಲ್ಲಿ ದಲಿತರ ಮೇಲೆ ಗುಂಪು ಹಲ್ಲೆಗಳು (ಲಿಂಚಿಂಗ್) ಎಂಬ ಹೊಸ ದೌರ್ಜನ್ಯವೇ ಆರಂಭವಾಯಿತು. ಹಿಂದೆ ಜಜ್ಜಾರ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು 5 ಜನ ದಲಿತರನ್ನು ಸತ್ತ ದನದ ಚರ್ಮ ಸುಲಿಯುತ್ತಿದ್ದರು ಎಂಬ ಕಾರಣಕ್ಕಾಗಿ ಪೊಲೀಸ್ ಸ್ಟೇಷನ್ನಿನ ಮುಂದೆಯೇ ಸುಟ್ಟು ಹಾಕಿದ್ದರು. ಇಂತಹ ಘಟನೆಗಳು ಮೋದಿಯವರ ಆಡಳಿತದಲ್ಲಿ ಗೋರಕ್ಷಣೆ ಹೆಸರಿನಲ್ಲಿ ದಿನ ನಿತ್ಯವೂ ಸಂಭವಿಸುತ್ತಿವೆ. ಮೋದಿ 1.0 ಯಲ್ಲಿ 28 ಗುಂಪು ಹಲ್ಲೆಗಳು ದಾಖಲಾಗಿದ್ದು ಅದರಲ್ಲಿ 8 ದಲಿತರನ್ನು ಸಂಘಪರಿವಾರದ ಭಯೋತ್ಪಾದಕರು ಕೊಂದು ಹಾಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮೋದಿ ಸರ್ಕಾರ ಅಟ್ರಾಸಿಟಿ ಕಾಯ್ದೆಯನ್ನೇ ದುರ್ಬಲಗೊಳಿಸುವ ಕೆಲಸಕ್ಕೆ ಕೈ ಹಾಕಿತ್ತು. ಅಟ್ರಾಸಿಟಿ ಕಾಯ್ದೆ ಪರವಾಗಿ ಹೋರಾಟಕ್ಕಿಳಿದ 11 ದಲಿತರನ್ನು ಗೋಲಿಬಾರ್ ಮೂಲಕ ಕೊಂದು ಹಾಕಲಾಯಿತು. ದೇಶಾದ್ಯಂತ ಭುಗಿಲೆದ್ದ ದಲಿತ ಚಳವಳಿಯ ಭಯದಿಂದಾಗಿ ಆ ಪ್ರಯತ್ನದಿಂದ ಮೋದಿ ಸರ್ಕಾರ ಹಿಂದೆ ಸರಿಯಿತು.
ಆಂಧ್ರಪ್ರದೇಶದ ದಲಿತ ಪ್ರತಿಭಾನ್ವಿತ ಯುವಕ ರೋಹಿತ್ ವೇಮುಲನನ್ನು ಬಲಿ ಪಡೆಯುವ ಸಂಚಿನಲ್ಲಿ ನೇರವಾಗಿಯೇ ಬಿಜೆಪಿ ಕೈವಾಡವಿತ್ತು. ಮೋದಿ ಸರ್ಕಾರದ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ, ಅಂದಿನ ಮಾನವ ಸಂಪನ್ಮೂಲ ಸಚಿವೆಯಾಗಿದ್ದ ಸ್ಮೃತಿ ಇರಾನಿ ಮತ್ತು ಬಿಜೆಪಿಯ ಅಂಗ ಸಂಘಟನೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇರ ಕೈವಾಡದಿಂದ ರೋಹಿತ್ ವೇಮುಲ ಬಲಿಯಾಗಬೇಕಾಗಿ ಬಂದಿತು. ಮದ್ರಾಸ್ ವಿಶ್ವವಿದ್ಯಾಲಯದ ‘ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್ ಸಂಘಟನೆ’ಯನ್ನು ನಿಷೇಧಿಸಲು ಮುಂದಾಗಿದ್ದರು. ಗುಜರಾತಿನ ಊನಾದಲ್ಲಿ ಆರ್‌ಎಸ್‌ಎಸ್-ಸಂಘ ಪರಿವಾರದ ಗೋಭಯೋತ್ಪಾದಕರು ದಲಿತ ಯುವಕರನ್ನು ಹಾಡಹಗಲೇ ಮಾರಣಾಂತಿಕವಾಗಿ ಥಳಿಸಿದ್ದರು. ಹೀಗೆ ಒಂದೇ ಎರಡೇ ಮೋದಿಯವರ ಮೊದಲೈದು ವರ್ಷದ ಆಡಳಿತ ದಲಿತರ ಪಾಲಿಗೆ ರೌರವ ನರಕವಾಗಿತ್ತು.
ಇಷ್ಟೆಲ್ಲಾ ದಲಿತರ ಮೇಲೆ ಮೋದಿ ಸರ್ಕಾರವೇ ದೌರ್ಜನ್ಯ ನಡೆಸಿದ ಮೇಲೂ, ಬಿಜೆಪಿಯ ಹಿಂದೂರಾಷ್ಟ್ರ ಸಿದ್ಧಾಂತ ಹಿಂದೂ ಮೇಲ್ಜಾತಿಗಳಿಗೆ ಬಲ ತಂದು ಕೊಟ್ಟು ಅದು ದಲಿತರನ್ನು ಪ್ರಾಣಿಗಳಂತೆ ಕಾಣಲು ಆರಂಭಿಸಿದ ಮೇಲೂ ಎರಡನೇ ಬಾರಿಯೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದಿತು. ಈಗ 2021 ರ ಎನ್.ಸಿ.ಆರ್.ಬಿ ವರದಿ ಬಿಡುಗಡೆಗೊಂಡಿದೆ. ಅದರ ಪ್ರಕಾರ 60,045 ದಲಿತರ ಮೇಲಿನ ದೌರ್ಜನ್ಯಗಳು ದಾಖಲಾಗಿವೆ. ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತಿ ಹೆಚ್ಚು. ಮತ್ತೊಂದು ಕಟು ಸತ್ಯವೆಂದರೆ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಹರಿಯಾಣ, ಉತ್ತರಖಂಡ, ಉತ್ತರಪ್ರದೇಶ, ಗೋವಾ, ಹಿಮಾಚಲ ಪ್ರದೇಶಗಳಲ್ಲಿಯೇ ದಲಿತರ ಮೇಲೆ ಅತಿ ಹೆಚ್ಚು ದೌರ್ಜನ್ಯಗಳು ದಾಖಲಾಗಿವೆ. ಶೇ 25.82 ರಷ್ಟು ದೌರ್ಜನ್ಯಗಳು ಉತ್ತರಪ್ರದೇಶ ಒಂದರಲ್ಲಿಯೇ ನಡೆದಿವೆ. ಕಣ್ಣು ಕೆಂಪಗಾಗಿಸುವ ಮತ್ತೊಂದು ಅಂಶವೆಂದರೆ ಒಟ್ಟಾರೆ ದೌರ್ಜನ್ಯಗಳಲ್ಲಿ ಶೇ. 22.64 ರಷ್ಟು ದಲಿತ ಮಹಿಳೆಯರ ಮೇಲಿನ ಅತ್ಯಾಚಾರಗಳೇ ಆಗಿವೆ. ಅಪಹರಣ ಮತ್ತು ಲೈಂಗಿಕ ಕಿರುಕುಳ ಎಗ್ಗಿಲ್ಲದಂತೆ ನಡೆದಿದೆ. ಬಿಜೆಪಿ ಸರ್ಕಾರಗಳೇ ಹಿಂದೂ ಮೇಲ್ಜಾತಿಗಳೊಂದಿಗೆ ಕೈ ಜೋಡಿಸಿ ದಲಿತರ ಮೇಲೆ ದೌರ್ಜನ್ಯ ಎಸಗುತ್ತಿವೆ. ಹತ್ರಾಸ್ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವಲ್ಲಿ ಉತ್ತರಪ್ರದೇಶದ ಆದಿತ್ಯನಾಥ್ ಬಿಜೆಪಿ ಸರ್ಕಾರದ ಕೈವಾಡ ಇಡೀ ಜಗತ್ತಿಗೇ ತಿಳಿಯಿತು. ರಾತ್ರೋ ರಾತ್ರಿ ದಲಿತ ಯುವತಿಯ ಶವವನ್ನು ಪೊಲೀಸರೇ ಕುಟುಂಬದವರಿಗೆ ತಿಳಿಯದಂತೆ ಸುಟ್ಟು ಹಾಕಿದರು. ಕೋರೆಗಾವ್ ವಿಜಯೋತ್ಸವದಲ್ಲಿ ಗಲಭೆ ಸೃಷ್ಟಿಸಿದ ಬಿಜೆಪಿ ಕೃಪಾಪೋಷಿತ ಗಲಭೆಕೋರರು ಸಾಂಬಾಜಿ ಭಿಡೆ ಮತ್ತು ಮಿಲಿಂದ್ ಎಕ್‌ಬೋತೆಯನ್ನು ಬಂಧಿಸದೇ ಅವರಿಬ್ಬರಿಗೂ ರಕ್ಷಣೆ ನೀಡಿತು. ಅಂಬೇಡ್ಕರರ ಕುಟುಂಬದ ಸದಸ್ಯ ಆನಂದ್ ತೇಲ್ತುಂಬ್ಡೆಯವರನ್ನೇ ಬಂಧಿಸಿ ಜೈಲಿಗಟ್ಟಿತು.
ಹೀಗೆ ಮೋದಿ 2.0 ಸರ್ಕಾರದಲ್ಲಿ ದಲಿತರ ಮೇಲಿನ ದೌರ್ಜನ್ಯ ಮುಗಿಲು ಮುಟ್ಟಿದೆ. 2021 ರಷ್ಟೊತ್ತಿಗೆ ಪ್ರತಿ 6 ನಿಮಿಷಕ್ಕೊಂದರಂತೆ ದಲಿತರ ಮೇಲೆ ಒಂದು ದೌರ್ಜನ್ಯವಾಗುತ್ತಿದೆ. ಪ್ರತಿ ದಿನ 14 ಅತ್ಯಾಚಾರ ನಡೆಯುತ್ತಿದೆ. ಅದರಲ್ಲಿ 4 ಅತ್ಯಾಚಾರಗಳು ದಲಿತ ಬಾಲಕಿಯರ ಮೇಲೆ ನಡೆಯುತ್ತಿದೆ! ಪ್ರತಿ ದಿನ 3 ದಲಿತರನ್ನು ಕೊಲ್ಲಲಾಗುತ್ತಿದೆ. ಇನ್ನು ಥಳಿತ, ಕೊಲೆಗೆ ಯತ್ನ, ಅವಮಾನ, ಜಾತಿ ನಿಂದನೆ, ಬಹಿಷ್ಕಾರಗಳ ಲೆಕ್ಕವೇ ಇಲ್ಲ. ಇದಿಷ್ಟು ದಾಖಲಾಗಿರುವ ಪ್ರಕರಣಗಳ ಹಣೆ ಬರೆಹ. ದಾಖಲಾಗದ ಪ್ರಕರಣಗಳು ರಾಶಿಗಟ್ಟಲೆ ಅಲ್ಲಲ್ಲಿಯೇ ಉಸಿರಾಟ ನಿಲ್ಲಿಸಿಸಾಯುತ್ತಿವೆ.
ಹೀಗೆ ಮೋದಿಯವರ 10 ವರ್ಷಗಳ ಆಡಳಿತವು ದಲಿತರಿಗೆ ನರಕವನ್ನೇ ತೋರಿಸುತ್ತಿರುವಾಗ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ಸಿಗಲು ಸಾಧ್ಯವೇ? 2021 ರಷ್ಟೊತ್ತಿಗೆ ಬರೋಬ್ಬರಿ 82,977 ಪ್ರಕರಣಗಳಲ್ಲಿ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿಲ್ಲ! 3,06,024 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ದಲಿತರಿಗೆ ನ್ಯಾಯ ಕೊಡಿಸಲು ವಿಫಲವಾಗಿರುವ ಮೋದಿ ಸರ್ಕಾರ ಶೇ. 96 ರಷ್ಟು ಪ್ರಕರಣಗಳನ್ನು ಬಾಕಿ ಉಳಿಸಿಕೊಂಡು ಗಹಗಹಿಸಿ ನಗುತ್ತಿದೆ. ಹಿಂದೂರಾಷ್ಟ್ರದ ಲಕ್ಷಣಗಳನ್ನು ತೋರಿಸುತ್ತಿದೆ.
2012 ರಲ್ಲಿ ಪ್ರತಿ 18 ನಿಮಿಷಗಳಿಗೆ ಒಂದರಂತೆ ದಲಿತರ ಮೇಲೆ ದೌರ್ಜನ್ಯವಾಗುತ್ತಿತ್ತು. 2019 ರಲ್ಲಿ 15 ನಿಮಿಷಗಳಿಗೊಂದು ದಲಿತರ ಮೇಲೆ ದೌರ್ಜನ್ಯ ನಡೆದವು. 2021 ರಷ್ಟೊತ್ತಿಗೆ ಪ್ರತಿ 6 ನಿಮಿಷಕ್ಕೊಂದರಂತೆ ದಲಿತರ ಮೇಲೆ ಒಂದು ದೌರ್ಜನ್ಯವಾಗುತ್ತಿದೆ. 2024 ರಲ್ಲಿ ಅದು ಇನ್ನೂ ಹೆಚ್ಚಾಗಿರುತ್ತದೆ. ಅತ್ಯಂತ ಅಮಾನವೀಯ ಸಂಗತಿ ಎಂದರೆ 2012 ರಲ್ಲಿ ಪ್ರತಿ ದಿನ 3 ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿತ್ತು. 2019 ರಷ್ಟೊತ್ತಿಗೆ ಪ್ರತಿ ದಿನ 6 ದಲಿತ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗುತ್ತಿತ್ತು. 2021 ರಷ್ಟೊತ್ತಿಗೆ ಪ್ರತಿದಿನ 14 ದಲಿತ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗುತ್ತಿದೆ. ಇದಕ್ಕೆ ನೇರ ಹೊಣೆ ಬಿಜೆಪಿ ಹಾಗೂ ಮೋದಿಜಿ ಸರ್ಕಾರ. ಇಂತಹ ಬಿಜೆಪಿ-ಮೋದಿ ಪಕ್ಷಕ್ಕೆ ದಲಿತರು ಸತ್ತರೂ ಓಟು ಹಾಕಲಾರರು.