ಪಟಾಕಿ ನಿಷೇಧ ದೆಹಲಿಗೆ ಮಾತ್ರ ಏಕೆ ಸೀಮಿತ? ದೇಶಾದ್ಯಂತ ನಿಷೇಧ ಹೇರಲಿ: ಸುಪ್ರೀಂಕೋರ್ಟ್‌ ಅಭಿಪ್ರಾಯ

Most read

ನವದೆಹಲಿ: ದೆಹಲಿ–ಎನ್‌ಸಿಆರ್‌ ಗೆ ಮಾತ್ರ ಸೀಮಿತವಾಗಿರುವ ಪಟಾಕಿ ನಿಷೇಧವನ್ನು ಇಡೀ ದೇಶಕ್ಕೆ ಏಕೆ ವಿಸ್ತರಿಸಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಶುದ್ಧ ಗಾಳಿ ಎಂಬುದು ಕೇವಲ ಗಣ್ಯ ವ್ಯಕ್ತಿಗಳ ಹಕ್ಕು ಮಾತ್ರ ಅಲ್ಲ, ಅದು ದೇಶದಲ್ಲಿರುವ ಪ್ರತಿಯೊಬ್ಬರ ನಾಗರಿಕರ ಹಕ್ಕೂ ಹೌದು ಎಂದು ಅಭಿಪ್ರಾಯಪಟ್ಟಿದೆ.

ದೆಹಲಿಯಲ್ಲಿ ಪಟಾಕಿ ನಿಯಂತ್ರಣ ಕುರಿತಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾ. ಕೆ.ವಿನೋದ ಚಂದ್ರನ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಎನ್‌ಸಿಆರ್‌ ನಲ್ಲಿರುವ ನಗರಗಳು ಶುದ್ಧ ಗಾಳಿಗೆ ಅರ್ಹವಾಗಿದ್ದರೆ, ಇತರ ನಗರಗಳ ನಿವಾಸಿಗಳು ಅರ್ಹರಲ್ಲವೇ? ಯಾವುದೇ ನೀತಿ ಅನುಸರಿಸಿದರೂ ಅದು ಇಡೀ ದೇಶಕ್ಕೆ ಆಧಾರವಾಗಿಟ್ಟುಕೊಂಡು ರೂಪಿಸಬೇಕು. ಕೇವಲ ದೆಹಲಿಯಲ್ಲಿ ಗಣ್ಯ ವ್ಯಕ್ತಿಗಳು ವಾಸಿಸುತ್ತಿದ್ದಾರೆ ಎಂದ ಮಾತ್ರಕ್ಕೆ ವಿಶೇಷ ಕಾನೂನು ರಚಿಸುವಂತಿಲ್ಲ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿಗಳು ಮಾತನಾಡುತ್ತಾ ಕಳೆದ ಚಳಿಗಾಲದಲ್ಲಿ ನಾನು ಅಮೃತಸರದಲ್ಲಿದ್ದೆ. ಅಲ್ಲಿನ ಮಾಲಿನ್ಯ ದೆಹಲಿಗಿಂತ ಕೆಟ್ಟದಾಗಿತ್ತು. ಪಟಾಕಿಗಳನ್ನು ನಿಷೇಧಿಸುವುದಾದರೆ ದೇಶದಾದ್ಯಂತ ನಿಷೇಧಿಸಬೇಕು ಎಂದು ಅಭಿಪ್ರಾಯಪಟ್ಟರು. ನಂತರ ಪೀಠವು ಗಾಳಿಯ ಗುಣಮಟ್ಟ ನಿರ್ವಹಣೆ ಆಯೋಗದಿಂದ ಹವಾಮಾನ ವರದಿಯನ್ನು ತರಿಸಿಕೊಳ್ಳುವಂತತೆ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾತಿ ಅವರಿಗೆ ಸೂಚಿಸಿತು

ಅಮಿಕಸ್ ಕ್ಯೂರಿ ಹಿರಿಯ ವಕೀಲೆ ಅಪರಾಜಿತಾ ಸಿಂಗ್ ವಾದ ಮಂಡಿಸಿ, ತಮ್ಮ ಆರೋಗ್ಯದ ಕಾಳಜಿ ಮಾಡಿಕೊಳ್ಳುವುದು ಗಣ್ಯರಿಗೆ ತಿಳಿದಿರುತ್ತದೆ. ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದರೆ ಅವರು ಬೇರೆ ನಗರಗಳಿಗೆ ಹೋಗುತ್ತಾರೆ ಎಂದರು.

ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯು (NEERI) ಹಸಿರು ಪಟಾಕಿ ಕುರಿತು ಸಂಶೋಧನೆ ನಡೆಸಿದ್ದು, ಅವು ಹೇಗೆ ಮಾಲಿನ್ಯ ನಿಯಂತ್ರಣಕ್ಕೆ ಕಾರಣವಾಗಲಿವೆ ಎಂಬುದನ್ನು ಕುರಿತು ಅಧ್ಯಯನ ನಡೆಸಿದೆ ಎಂದು ಕಾನೂನು ಅಧಿಕಾರಿ ತಿಳಿಸಿದ್ದಾರೆ. ಪಟಾಕಿ ತಯಾರಿಕೆಗೆ ನಿರ್ದಿಷ್ಟ ರಾಸಾಯನಿಕವನ್ನು NEERI ಗೊತ್ತುಪಡಿಸಿಬೇಕು. ಅದರ ಅನ್ವಯವೇ ಪಟಾಕಿಗಳನ್ನು ತಯಾರಿಸಬೇಕು ಎಂದು ಪಟಾಕಿ ತಯಾರಕರ ಪರ ಹಾಜರಿದ್ದ ವಕೀಲರು ನ್ಯಾಯಾಲಯದ ಗಮನಕ್ಕೆ ತಿಳಿಸಿದರು. ನಂತರ ನ್ಯಾಯಾಲಯವು ವಿಚಾರಣೆಯನ್ನು ಸೆ. 22ಕ್ಕೆ ವಿಚಾರಣೆ ಮುಂದೂಡಿತು.

More articles

Latest article