ಯುವ ಪೀಳಿಗೆಯ ಮಾನಸಿಕ ಸಂಕಟ ಯಾರಿಗೂ ಕಾಣುತ್ತಿಲ್ಲವೇಕೆ?

Most read

ಕೊನೆಯ ವರ್ಷದ ಡಿಗ್ರಿ ಮುಗಿಯಲು, ಇನ್ನೂ ಒಂದು ಆರು ತಿಂಗಳು ಮಾತ್ರ ಉಳಿದಿತ್ತು. ನನ್ನ ಸ್ನೇಹಿತರು ಮತ್ತು ಹೆಚ್ಚಾಗಿ ಎಲ್ಲಾ ಫೈನಲ್ ಇಯರ್ ವಿದ್ಯಾರ್ಥಿಗಳು ತುಂಬಾ ಬ್ಯುಸಿಯಾಗಿ ಹೋಗಿದ್ದರು. ಕೊನೆಯ ಸೆಮಿಸ್ಟರ್ ತುಂಬಾ ಕೆಲಸ ಇರುತ್ತಿದ್ದರಿಂದ ಎಲ್ಲರೂ ಪರೀಕ್ಷೆ, ಡೆಸರ್ಟೇಶನ್ ಹೀಗೆ ಕಳೆದು ಹೋಗಿದ್ದರು. ಕಾಲೇಜಿನ ಮೊದಲ ಎರಡು ವರ್ಷ ಜೊತೆಗಿದ್ದು ಹರಟೆ ಹೊಡೆಯುತ್ತಿದ್ದ ಗೆಳೆಯರೆಲ್ಲರೂ, ಮುಖ ನೋಡಿ ಹಾಯ್ ಹೇಳುವಷ್ಟು ಪುರುಸೊತ್ತಿಲ್ಲದೆ ಓಡಾಡುತ್ತಿದ್ದರು.

ಇಂಥ ಸಮಯದಲ್ಲಿ ನಾನು ಒಂದು ದಿನ ಕ್ಲಾಸ್ ಬ್ರೇಕಿನಲ್ಲಿ ವಾಶ್ ರೂಮಿಗೆ ಹೋದೆ. ಅಲ್ಲಿದ್ದ ಬಾತ್ರೂಮ್ ಒಳಗಿನಿಂದ ಸಣ್ಣ ಅಳುವ ಧ್ವನಿ ಕೇಳಿಸಿತು, ಯಾರೆಂದು ತಿಳಿಯಲಿಲ್ಲ. ಅಲ್ಲಿದ್ದ ಯಾರು ಕೂಡ ಅದರ ಬಗ್ಗೆ  ಗಮನವೇ ಇಲ್ಲದಂತೆ ಎಲ್ಲರೂ ತಮ್ಮದೇ ಆದ ಮಾತಿನಲ್ಲಿ ಮುಳುಗಿ ಹೋಗಿದ್ದರು. ಅಂತೆಯೇ ನಾನು ಹೆಚ್ಚು ತಲೆ ಕೆಡಿಸಿಕೊಳ್ಳದೆ ಮುಂದಿನ ಕ್ಲಾಸಿಗೆ ಹಿಂದಿರುಗಿದೆ. ನಂತರ ಒಂದು ಕ್ಲಾಸ್ ಮುಗಿಸಿಕೊಂಡು ಮತ್ತೆ ವಾಶ್ರೂಮ್ ಕಡೆ ಹೋಗಿ ನೋಡಿದರೆ ಆ ಹುಡುಗಿಯ ಅಳು ಇನ್ನೂ ಹಾಗೆ ಕೇಳಿಸುತ್ತಿತ್ತು. ನನಗೆ ತುಂಬಾ ದುಃಖವಾಯ್ತು. ಬಾತ್ರೂಮಿನ ಬಾಗಿಲು ಬಡಿದೆ ಏನು ಉತ್ತರವಿಲ್ಲ. ಮತ್ತೆ ಬಡಿದೆ. ಪಕ್ಕದ ತರಗತಿಯ ಒಂದು ಹುಡುಗಿ ಹೊರ ಬಂದಳು. ಕಣ್ಣುಗಳು ಕೆಂಪಾಗಿ ಊದಿತ್ತು, ಉಸಿರಾಡಲು ಕಷ್ಟ ಪಡುತ್ತಿದ್ದಳು, ಗಂಟಲು ಕಟ್ಟಿತ್ತು. ನಾನು ಅವಳಿಗೆ ಸ್ವಲ್ಪ ನೀರು ಕುಡಿಸಿ, ಏನಾಯ್ತು ಎಂದು ಕೇಳಿದೆ. ಮೊದಲಿಗೇನು ಉತ್ತರಿಸಲಿಲ್ಲ ನಂತರ ನಾನು ಅವಳ ಕೈ ಹಿಡಿದುಕೊಂಡು “ it’s fine everything will be fine”. ಅಂತ ಹೇಳಿ ಏನಾಯ್ತು ಎಂದು ಕೇಳಿದೆ. ಅವಳು ಕಣ್ಣೊರೆಸಿಕೊಂಡು ನಗುತ್ತಾ “ no nothing it’s just my casual anxiety attack, I will be fine in sometime”, thanks for your concern” ಎಂದು ಮುಖ ತೊಳೆದುಕೊಂಡು ಲಿಪ್‌ಸ್ಟಿಕ್‌ ಹಾಕಿಕೊಂಡು ಮುಖದ ಮೇಲೊಂದು ಸ್ಮೈಲ್ ಇರಿಸಿ  ಏನು ಆಗೇ ಇಲ್ಲವೆಂಬಂತೆ ಹೊರ ನಡೆದಳು.

ಒಂದೂವರೆ ಎರಡು ಗಂಟೆಗಳ ಕಾಲ ಅತ್ತ ಹುಡುಗಿ ಹೀಗೆ ಏನು ಆಗಿಯೇ ಇಲ್ಲ ಎಂಬಂತೆ ವರ್ತಿಸುವುದನ್ನು ಕಂಡು ನನಗೆ ಆಶ್ಚರ್ಯವಾಯಿತು. ನನಗೂ ಕ್ಲಾಸಿಗೆ ತಡವಾದ್ದರಿಂದ ಹೆಚ್ಚು ಯೋಚಿಸದೆ ಅಲ್ಲಿಂದ ಹೊರಟೆ.

ಸಾಂದರ್ಭಿಕ ಚಿತ್ರ

ಹೀಗೆ ದಿನಗಳು ಉರುಳುತ್ತಿದ್ದವು. ವಿದ್ಯಾರ್ಥಿಗಳ ಮೇಲಿನ ಒತ್ತಡ ಹೆಚ್ಚುತ್ತಲೇ ಹೋಯ್ತು. ಒಂದು ದಿನ ಸಂಜೆ ಕ್ಲಾಸ್ ಮುಗಿಸಿ ರೂಮಿಗೆ ಬರುವ ಸಮಯ, ಹೊತ್ತು ಸುಮಾರು ಏಳು ಗಂಟೆ ಆಗಿರಬಹುದು. ನನ್ನ PG ಕಾಲೇಜಿನ ಬಳಿಯೇ ಇತ್ತು. ಆ ಏರಿಯಾದ ತುಂಬಾ ಬರೀ PG ಗಳೇ ತುಂಬಿ ಹೋಗಿದ್ದವು. ಎಲ್ಲಿ ನೋಡಿದರೂ ಬರೀ ಕಾಲೇಜ್ ಸ್ಟೂಡೆಂಟ್ಸ್. ಆ ದಿನ ಒಂದು ಲೈಟ್ ಕಂಬದ ಕೆಳಗೆ ಒಬ್ಬಳೇ ಹುಡುಗಿ ಕುಳಿತಿದ್ದಾಳೆ. ಕೈಯಲ್ಲಿ ಸಿಗರೇಟ್. ಅವಳು ಕಾಲುಗಳನ್ನು ಬಿರುಸಾಗಿ ಅಲುಗಾಡಿಸುತ್ತಿದ್ದರಿಂದ ನನ್ನ ಗಮನ ಅವಳ ಕಡೆ ಹರಿಯಿತು. ಯಾರೆಂದು ನೋಡಿದೆ, ಅವಳು ನಮ್ಮ ಪಿ.ಜಿ ಯಲ್ಲೇ ಇರುತ್ತಿದ್ದ ಹುಡುಗಿ. ಅವಳ ಪರಿಚಯ ಅಷ್ಟು ಇಲ್ಲದಿದ್ದರೂ ಅವಳ ಹತ್ತಿರ ಹೋದೆ. ನಾನು ಹತ್ತಿರವಾದಂತೆ ಅವಳು ಕಾಲು ಅಲುಗಿಸುವುದನ್ನು ಕಡಿಮೆ ಮಾಡಿದಳು. ಕೈಯಲ್ಲಿ ಯಾವುದೋ ಕೀಯನ್ನು ಒತ್ತಿ ಹಿಡಿದಿದ್ದಾಳೆ, ಕಣ್ಣುಗಳು ಕೆಂಪಾಗಿ ನೀರು ತುಂಬಿದೆ, ಕೈಯಲ್ಲಿನ ಸಿಗರೇಟನ್ನು ತುಂಬಾ ಬಿರುಸಾಗಿ ಸೇದುತ್ತಿದ್ದಾಳೆ, ನಾನು ಹತ್ತಿರ ಹತ್ತಿರ ಹೋದಂತೆ ಅವಳ ಕೈಯಲ್ಲಿದ್ದ ಕೀಯನ್ನು ಹೆಚ್ಚು ಗಟ್ಟಿಯಾಗಿ ಒತ್ತಿ ಹಿಡಿಯುತ್ತಿದ್ದಾಳೆ, ಅದು ಅವಳ ಕೈಯಲ್ಲಿ ಇನ್ನೇನು ರಕ್ತ ಬರಿಸುವುದೇನೋ ಎನ್ನುವಷ್ಟು ಗಟ್ಟಿಯಾಗಿ ಹಿಡಿದಿದ್ದಾಳೆ. ಇದನ್ನೆಲ್ಲಾ ನೋಡಿ ಒಂದು ಕ್ಷಣ ಭಯವಾಯಿತಾದರೂ ಅವಳ ಮುಖ ಪರಿಚಯವಿದ್ದರಿಂದ ಅವಳ ಬಳಿಗೆ ಹೋದೆ. “is everything alright”, ಎಂದು ಕೇಳಿದೆ. ಮೊದಲಿಗೆ ತಲೆ ಎತ್ತಲಿಲ್ಲ. ನಿಧಾನವಾಗಿ ಕತ್ತೆತ್ತಿ ನನ್ನ ಮುಖ ನೋಡಿ ಆ ನೀರು ತುಂಬಿದ ಕಣ್ಣುಗಳ ಜೊತೆಗೆ ಒಂದು ಸಣ್ಣ ಸ್ಮೈಲ್ ಮಾಡಿದಳು. ತನ್ನ ಒಳಗಿನ ದುಃಖವನ್ನು ಹೊರಹಾಕಲು ಕಾಯುತ್ತಿದ್ದವಳಂತೆ ನನ್ನನ್ನು ಗಟ್ಟಿಯಾಗಿ ತಬ್ಬಿ  ಹಿಡಿದು ಬಿಕ್ಕಳಿಸಿ ಅಳಲು ಶುರು ಮಾಡಿದಳು. ಅವಳನ್ನು ಹೇಗೆ ಸಮಾಧಾನ ಮಾಡಬೇಕೆಂದು ತಿಳಿಯಲಿಲ್ಲ. ಅವಳ ಅಳುವಿಗೆ ಅಥವಾ ಅವಳ ಸ್ಥಿತಿಗೆ ಕಾರಣ ಕೂಡ ತಿಳಿದಿರಲಿಲ್ಲವಾದ್ದರಿಂದ ಅವಳ ಬೆನ್ನು ಸವರುತ್ತಾ ಹಾಗೆ ಸುಮ್ಮನೆ ಕೂತೆ. ಕೆಲವು ನಿಮಿಷಗಳ ನಂತರ ತಾನೇ ಸಮಾಧಾನವಾಗಿ ಥ್ಯಾಂಕ್ಸ್ ಎಂದಳು. ನಾನು ಇಟ್ಸ್ ಓಕೆ, ಏನಾದ್ರೂ ತೊಂದ್ರೆ ಆಯ್ತಾ ಎಂದು ಕೇಳಿದೆ. ಇವಳು ಕೂಡ “ nothing it’s just my mental health, it’s f***** up” ಎಂದು ಒಂದೇ ವಾಕ್ಯದಲ್ಲಿ ಮಾತು ಮುಗಿಸಿ ಬಿಟ್ಟಳು. ಅವಳಿದ್ದ ಸನ್ನಿವೇಶದಲ್ಲಿ ಹೆಚ್ಚು ಏನು ಕೇಳಲಾಗದೆ ಸುಮ್ಮನೆ ಅವಳನ್ನು ಕರೆದುಕೊಂಡು PG ಗೆ ನಡೆದೆ.

ಈ ಎರಡು ಘಟನೆಗಳು ನನ್ನ ತಲೆಯಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಿದ್ದವು, ಹೀಗೆ ದಿನ ಕಳೆದಂತೆ ಹಲವು ವಿದ್ಯಾರ್ಥಿಗಳಲ್ಲಿ ಇಂತಹ behavioral  change pattern ಗಳು ನನ್ನ ಗಮನಕ್ಕೆ ಬರಲು ಶುರುವಾದವು. ಕ್ಲಾಸಿನಲ್ಲಿ ತುಂಬಾ ಆಕ್ಟೀವ್ ಆಗಿ ಪಾರ್ಟಿಸಿಪೇಟ್ ಮಾಡುತ್ತಿದ್ದವರು, ಯಾವಾಗಲೂ ಖುಷಿಯಾಗಿ cheerful ಆಗಿ ಇದ್ದವರೆಲ್ಲ ಯಾವುದೋ ಒಂದು ರೀತಿಯ ಮೌನಕ್ಕೆ ಇಳಿದಿದ್ದಾರೆ. ಪಾಠಗಳಲ್ಲಿ ಹಲವರು ಆಸಕ್ತಿ ಕಳೆದುಕೊಂಡಂತಾಗಿದ್ದರು. ಎಲ್ಲರೂ ತಮ್ಮದೇ ಆದ ಕೆಲಸಗಳಲ್ಲಿ ಕಳೆದು ಹೋದಂತೆ ಅನ್ನಿಸಿತ್ತು. ಕ್ಲಾಸಿಗೆ ಹೋಗಿ ಕೂರುವುದು ಅಸೈನ್ಮೆಂಟ್ಸ್ ಮಾಡುವುದು, ಫೋನ್, ಲ್ಯಾಪ್ ಟಾಪ್, ಓದು, ಮತ್ತೆ ರೂಮ್ ಇಷ್ಟೇ ಜಗತ್ತು ಎಲ್ಲರನ್ನು ಸುತ್ತುವರಿದಂತೆ ಎನ್ನಿಸಿ ನನಗೆ ಕಾಲೇಜು ಕಾರ್ಖಾನೆಯಾದಂತೆ ಅನುಭವವಾಯಿತು. ವಿದ್ಯಾರ್ಥಿಗಳ ಮುಖದ ನಗು ತುಂಟಾಟಗಳೆಲ್ಲ ಕಳೆದು ಗಾಂಭೀರ್ಯ‌, ಭಯ ಮತ್ತು ಬಳಲಿಕೆ ಆವರಿಸಿತ್ತು. ಕಾಲೇಜಿನಲ್ಲಿ ಕೊನೆಯ ವರ್ಷದ ವಿದ್ಯಾರ್ಥಿಗಳಲ್ಲಿ ಯಾರನ್ನಾದರೂ “ hi how are you doing”, ಎಂದು ಮಾತನಾಡಿಸಿದರೆ, ಎಲ್ಲರ ಉತ್ತರ “ just surviving bro”, ಅಥವಾ “ I am so done dude, I can’t do this anymore” ಎಂಬ ಉತ್ತರವೇ ಹೆಚ್ಚಾಗಿ ಕೇಳಿ ಬರುತ್ತಿತ್ತು.

ಸಾಂದರ್ಭಿಕ ಚಿತ್ರ

ಎಲ್ಲರೂ ಈ ಸ್ಥಿತಿಯಲ್ಲಿಯೇ ಇದ್ದಾಗ ಒಬ್ಬರನ್ನೊಬ್ಬರು ಹೇಗೆ ಕೇಳಿಯಾರು ತೊಂದರೆ ಏನೆಂದು?. ಅಥವಾ ಕೇಳಿದರೂ ಹಲವರ ಬಳಿ ಇದಕ್ಕೆ ಉತ್ತರವಿರಲಿಲ್ಲ.

ಹೀಗೆ ಒಂದು ದಿನ ರಾತ್ರಿ ಮೂರರ ಸಮಯ. ನನಗೆ ನಿದ್ದೆ ಬಾರದ್ದರಿಂದ ಸ್ವಲ್ಪ fresh air ತೆಗೆದು ಕೊಳ್ಳಲೆಂದು ಟೆರೇಸಿಗೆ ಹೋದೆ. ಪೂರ್ತಿ ಕತ್ತಲು. ಒಂದು ಮೂಲೆಯಿಂದ ಸಣ್ಣಗೆ ಬಿಕ್ಕಳಿಸುವ ದನಿ. ಯಾರೆಂದು ನೋಡಲು ಲೈಟ್ ಆನ್ ಮಾಡಿದೆ. ಅದು ನನ್ನ ಗೆಳತಿ. ನಾನು ಅವಳ ತರಗತಿಗೆ elective ಕ್ಲಾಸಿಗೆಂದು ಹೋಗುತ್ತಿದ್ದೆ. ಅವಳು ಬಹಳವೆ ಮುದ್ದಾಗಿದ್ದ ಹುಡುಗಿ. ತುಂಬಾ ಎಕ್ಸ್‌ಟ್ರಾ ವರ್ಟ್ ಕೂಡ. ಎಲ್ಲರೊಂದಿಗೂ ಯಾವಾಗಲೂ ನಗು ನಗುತ್ತ ಕೀಟಲೆ ಮಾಡಿಕೊಂಡೇ ಇರುತ್ತಿದ್ದವಳು. ಅವಳನ್ನು ಆ ರೀತಿ ನೋಡಿ ನನಗೆ ಒಂದು ಕ್ಷಣ ಶಾಕ್ ಆಯ್ತು. ನನ್ನ ನೋಡಿ ಅವಳ ಅಳು ಹೆಚ್ಚುತ್ತಾ ಹೋಯ್ತು. ಹತ್ತಿರ ಹೋಗಿ ಏನಾಯ್ತು ಅಂತ ಕೇಳಿ ಗಟ್ಟಿಯಾಗಿ ಅಪ್ಪಿಕೊಂಡೆ. ಒಂದೆರಡು ನಿಮಿಷದ ನಂತರ ನಿಧಾನವಾಗಿ ಸಮಾಧಾನವಾದಳು. ಮೊದಲಿಗೆ ಹೇಳಲು ಹಿಂಜರಿದಳು. ನಂತರ ರೀಸೆಂಟ್ ಆಗಿ ಆಗಿರುವ ತನ್ನ ಮಾನಸಿಕ ಬದಲಾವಣೆಗಳ ಬಗ್ಗೆ ಮತ್ತು ಪದೇಪದೇ ಆಗುತ್ತಿರುವ ಅವಳ ಬ್ರೇಕ್ ಡೌನ್ ( intense crying episodes) ಗಳ ಬಗ್ಗೆ, ಅವಳು ತೆರಪಿ ತೆಗೆದು ಕೊಳ್ಳುತ್ತಿರುವುದರ ಬಗ್ಗೆ ಹೇಳಿಕೊಂಡಳು. ಅವಳಿಗೆ ತನ್ನ ಈ ಮನಸ್ಥಿತಿಯ ಕಾರಣವಾಗಲಿ, ಈ ಬ್ರೇಕ್ ಡೌನ್ಸಿನ  ಕಾರಣವಾಗಲಿ ತಿಳಿದಿರಲಿಲ್ಲ, ಇಂತ ಸಮಯದಲ್ಲಿ ತನಗೆ ಉಸಿರಾಡಲು ಕಷ್ಟವಾಗುತ್ತದೆ ಎಂದು ಕೂಡ ಹೇಳಿಕೊಂಡಳು.

ಇದೇ  ಹುಡುಗಿ  ಕಾಲೇಜಿನಲ್ಲಿ ನಗುನಗುತ್ತಾ ಎಲ್ಲರೊಂದಿಗೂ ಹರಟುತ್ತಾ, ಹಾಡುತ್ತಾ, ಕೀಟಲೆ ಮಾಡುತ್ತಾ  ಸಂತೋಷವಾಗಿರುತ್ತಿದ್ದಳು. ಅವಳನ್ನು ಕಾಲೇಜಿನಲ್ಲಿ ಹಾಗೆ ನೋಡಿ ಅಭ್ಯಾಸವಿದ್ದ ನನಗೆ ಅವಳ ಇಂದಿನ ಸ್ಥಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಾಗಲಿಲ್ಲ.

ಹೀಗೆ ಅವಳನ್ನು ಮಾತನಾಡಿಸುತ್ತಾ, ತೆರಪಿ ಹೇಗೆ ನಡೆಯುತ್ತದೆ ಮತ್ತು ಈ ವಿಷಯವಾಗಿ ಅವಳು ಯಾರಿಗಾದರೂ ಏನಾದರೂ ಹೇಳಿದ್ದಾಳೆಯೇ ಎಂದು ಕೇಳಿದೆ. ಅವಳ ಉತ್ತರ “ No”, ನಿನ್ನನ್ನು ಬಿಟ್ಟು ಈ ವಿಷಯ ಯಾರಿಗೂ ಹೇಳಿಲ್ಲ ಎಂದಳು. ನನ್ನ ತಂದೆ ತಾಯಿಯರಿಗೆ ಹೇಳಿದರೆ ಅರ್ಥವಾಗುವುದಿಲ್ಲ. ಸುಮ್ಮನೆ ಮೆಂಟಲ್ ಹಾಸ್ಪಿಟಲ್‌ಗೆ ಯಾಕೆ ಹೋಗ್ತಿದ್ದೀಯಾ ಎಂದು ಕೇಳುತ್ತಾರೆ. First of all ಅವರಾರಿಗೂ ಇದರ ಬಗ್ಗೆ ಕೇಳೋದಕ್ಕೂ ಸಮಯವಿಲ್ಲ ಎಂದು ಬೇಸರಗೊಂಡು ಇನ್ನೂ ಕೆಲವರು ತನ್ನಂತೆಯೆ ಇಂತಹ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿಯೂ ಹೇಳಿದಳು.

ಈ ಎಲ್ಲವನ್ನು ಕೇಳಿ ನನಗೆ ತುಂಬಾ ಕಳವಳವಾಯಿತು. ಇಷ್ಟು ವರ್ಷ ಕಾಣದ  ಹೊಸ ಲೋಕ ಒಂದು ಇಂದು ನನ್ನೆದುರು ತೆರೆದುಕೊಂಡು ಕುಳಿತಿತ್ತು.

ಅವಳು ಈ ವಿಷಯವನ್ನೆಲ್ಲ ನನ್ನ ಬಳಿ ಹೇಳಿಕೊಂಡಿದ್ದರಿಂದಾಗಿ ಒಮ್ಮೆ ಅವಳ ಜೊತೆಗೆ ಅವಳ ಕೌನ್ಸೆಲರ್ ಬಳಿಗೆ ಹೋದೆ. ಆ ಕ್ಲಿನಿಕ್ಕಿನ ಕ್ಯಾಂಪಸ್ಸಿನಲ್ಲಿ ನಾನಿದ್ದಿದ್ದು ಒಂದೂವರೆ ಗಂಟೆಗಳ ಸಮಯ. ಇಷ್ಟರಲ್ಲಿ ನಮ್ಮ ಕಾಲೇಜಿನ ನಾಲ್ಕಾರು ವಿದ್ಯಾರ್ಥಿಗಳು ಅವರವರ ಸೆಷನ್ನಿಗಾಗಿ ಕಾಯುತ್ತಾ ಕುಳಿತಿರುವುದನ್ನು ಕಂಡು ನನ್ನ ಮನಸ್ಸು  ಗೊಂದಲಮಯವಾಗಿ  ಬಾಯಿಂದ ಒಂದು ಮಾತು ಸಹ ಹೊರಡದಂತಾಯ್ತು.

ಆ ಕೆಲವು ದಿನಗಳಲ್ಲಿ ನಡೆದ ಈ ಎಲ್ಲಾ ಸನ್ನಿವೇಶಗಳು ನನ್ನನ್ನು ಹೊಸ ಜಗತ್ತಿಗೆ ಪರಿಚಯಿಸಿದ್ದವು. ಸಮೂಹದಲ್ಲಿ ಇದ್ದರೂ ಎಲ್ಲಾ ಒಂಟಿಯಾಗಿರುವ ಜಗತ್ತು . ನೋವು, ದುಃಖ, ಹೆದರಿಕೆ, ಹಿಂಸೆ, ಒತ್ತಡಗಳೆಲ್ಲವನ್ನು ನುಂಗಿ ಮೇಲೆ ಮುಗುಳು ನಗೆ ಹೊತ್ತ ಜಗತ್ತು.

ಇಂತಹ ಒಂದು ದೊಡ್ಡ ಮೂಕ ವೇದನೆ ಈಗಿನ ಪೀಳಿಗೆಯ ಮಕ್ಕಳನ್ನು ಯುವಕರನ್ನು ನುಂಗಿ ಹಾಕಿರುವುದು ದುರಂತವೆ ಸರಿ. ಇದನ್ನೆಲ್ಲಾ ನೋಡುತ್ತಾ ಯೋಚಿಸುತ್ತಾ ನನ್ನಲ್ಲಿ ಹಲವು ಪ್ರಶ್ನೆಗಳು ಹುಟ್ಟಿದವು.

 ಏಕೆ ಯಾರಿಗೂ ಈಗಿನ ಪೀಳಿಗೆಯ ಸಂಕಟ ಕಾಣುತ್ತಿಲ್ಲ? ಏಕೆ ಎಲ್ಲರೂ ಇದನ್ನು ಒಂಟಿಯಾಗಿ ಅನುಭವಿಸುತ್ತಿದ್ದಾರೆ? ಪೋಷಕರಿಗೆ ಮಕ್ಕಳ ಓದು, ಅಂಕ, ಉದ್ಯೋಗ, ಹಣವಷ್ಟೇ ಮುಖ್ಯವೆ..? ಮಕ್ಕಳಿಗೆ ಅವರದ್ದೇ ಆದ ಅಸ್ತಿತ್ವವಿಲ್ಲವೇ? ಮಕ್ಕಳು ಈ ಇಡೀ ವ್ಯವಸ್ಥೆಯ ಆಸೆ, ಲಾಲಸೆಗಳನ್ನು ಪೂರೈಸುವ ಸರಕುಗಳೆ..? ಒತ್ತಡದಿಂದ ಘಾಸಿಗೊಳ್ಳುತ್ತಿರುವ ಮಕ್ಕಳ ಮಾನಸಿಕ ಆರೋಗ್ಯದತ್ತ  ಯಾಕೆ ಯಾರು ಗಮನಹರಿಸುತ್ತಿಲ್ಲ…..? ನಮ್ಮ ಶಾರೀರಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯ ಮುಖ್ಯವಲ್ಲವೇ? ಏಕೆ ಮಾನಸಿಕ ಆರೋಗ್ಯ ಮತ್ತು ಅದಕ್ಕೆ ಸಂಬಂಧಿಸಿದ ಚಿಕಿತ್ಸೆಯ ವಿಷಯಗಳು ನಮ್ಮ ಸಮಾಜದಲ್ಲಿ ಮುಜುಗರ ಪಡುವಂತಹ ಸಂಗತಿಗಳಾಗಿ ನಿಂತಿವೆ…?

ನಾನು ಹೇಳಿದ ಕೆಲವು ಸನ್ನಿವೇಶಗಳು ಉದಾಹರಣೆಗಳಷ್ಟೇ. ಹಲವು ಕಾಲೇಜುಗಳಲ್ಲಿ ಇಂತಹ ನೂರಾರು ಮಕ್ಕಳು ಒದ್ದಾಡುತ್ತಿದ್ದಾರೆ. ತಂದೆ ತಾಯಿಯರು ತಮ್ಮ ಮಕ್ಕಳು ತುಂಬಾ ಪ್ರೆಸ್ಟೀಜಿಯಸ್ ಕಾಲೇಜಿನಲ್ಲಿ ತುಂಬಾ ಒಳ್ಳೆಯ ಡಿಗ್ರಿಯನ್ನು ಪಡೆಯುತ್ತಿದ್ದಾರೆಂದಷ್ಟೇ ತಿಳಿದಿರುತ್ತಾರೆ. ಆದರೆ ಅದರ ಹಿಂದೆ ನಡೆಯುತ್ತಿರುವ ಯಾವ ವಿಷಯದ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ, ಅಥವಾ ಈ ವಿಷಯಗಳು ಅವರ ಅರಿವಿಗೆ ಬಂದಿರುವುದಿಲ್ಲ.

ಶೇಕಡಾ 13 ರಿಂದ 57 ಭಾಗ ಯುವಜನತೆ ಮತ್ತು ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಶಾಲೆ ಕಾಲೇಜುಗಳ  ಪೈಪೋಟಿ,  ಸಮಾಜದ ಕಟ್ಟು ಪಾಡುಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿವೆ. ಆದರೆ ಇದನ್ನೆಲ್ಲಾ ಎಷ್ಟು ಜನರು ಗಮನಿಸುತ್ತಿದ್ದಾರೆ? ಎಷ್ಟು ಜನ ತಮ್ಮ ಮಕ್ಕಳ, ಸ್ನೇಹಿತರ, ಪೋಷಕರ ಮತ್ತು ಕುಟುಂಬದವರ ಮಾನಸಿಕ ಆರೋಗ್ಯದ ಬಗ್ಗೆ ಯೋಚಿಸುತ್ತಾರೆ?

ಸಾಕಷ್ಟು ವಿದ್ಯಾರ್ಥಿಗಳು ಅದರಲ್ಲೂ  ಮುಖ್ಯವಾಗಿ teen agers ಹಾಗೂ young adults ಈ ರೀತಿ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಒಂಟಿ ಆಗುತ್ತಿದ್ದಾರೆ. ಅವರು ಕೂಡ ಸಮುದಾಯದ ಒಂದು ಭಾಗ ಎಂಬುದನ್ನು ಮರೆಯುವಂತೆ ಖಿನ್ನತೆ ಅವರನ್ನು ನುಂಗಿ ಹಾಕುತ್ತಿದೆ. ಸಾಕಷ್ಟು ಮಂದಿ, ಮಾನಸಿಕ ಅರೋಗ್ಯದ ಬಗ್ಗೆ ಹೇಳಿಕೊಳ್ಳುವುದು ಅಥವಾ ಮಾತಾಡಿ ಕೊಳ್ಳುವುದು ನಾಚಿಗೆ ಗೇಡಿನ ಅಥವಾ ಮುಜುಗರಕ್ಕೆ ಒಳಪಡುವಂತಹ ವಿಷಯವಾಗಿ ನೋಡುತ್ತಿರುವುದು ಮತ್ತು ನಿರ್ಲಕ್ಷಿಸುತ್ತಿರುವುದು ಕೂಡ ಈ ಸಮಸ್ಯೆ ಮತ್ತಷ್ಟು ಉಲ್ಬಣ ಗೊಳ್ಳಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಪ್ರತಿಯೊಬ್ಬರು ಈ ವಿಷಯದ ಕುರಿತಾಗಿ ಗಂಭೀರವಾಗಿ ಚಿಂತಿಸ ಬೇಕಿದೆ, ಮಾತಾಡಬೇಕಾಗಿದೆ, ಎಲ್ಲೆಡೆ ಅರಿವು ಮೂಡುವಂತೆ ಮಾಡಬೇಕಾಗಿದೆ…ಕೂಡಲೇ ಎಚ್ಚರ ವಹಿಸದಿದ್ದರೆ ಮುಂದೆ ಬಹುದೊಡ್ಡ ಸಮಸ್ಯೆಯನ್ನು ಎದುರಿಸಬೇಕಾದ ಸಮಯ ಬಹು ದೂರವಿಲ್ಲ..

ಗೌತಮಿ ತಿಪಟೂರು

ವಿದ್ಯಾರ್ಥಿನಿ, ಯುವ ಕಲಾವಿದೆ

ಇದನ್ನೂ ಓದಿ- ಮೊಬೈಲ್‌ ಪರದೆ ಮತ್ತು ಈಗಿನ ಪೀಳಿಗೆ

More articles

Latest article