ಮೊದಲು ಕೃಷಿಯೇತರ ಭೂಮಿಯು ಹೆಚ್ಚಾಗಿತ್ತು. ಈ ಕೃಷಿಯೇತರ ಭೂಮಿಯ ಕಾರಣಕ್ಕೆ ಪಶುಪಾಲಕರಾಗಿದ್ದ ಅಲೆಮಾರಿಗಳಿಗೂ ಅನುಕೂಲಕರ ವಾತಾವರಣವಿತ್ತು. ಈ ಚಿತ್ರ ಈಚಿನ ಎರಡು ದಶಕಗಳಲ್ಲಿ ಬದಲಾಗಿದೆ. ಈ ಕಾರಣಕ್ಕೆ ಸಹಜವಾಗಿ ಅಲೆಮಾರಿ ಸಮುದಾಯಗಳು ನಗರಕ್ಕೆ ಹೊಂದಿಕೊಂಡಂತೆ ನೆಲೆಸುತ್ತಿವೆ – ಡಾ.ಅರುಣ್ ಜೋಳದಕೂಡ್ಲಿಗಿ
ಇದೀಗ ಒಳಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಅಲೆಮಾರಿಗಳಿಗೆ ಅನ್ಯಾಯವಾಗಿರುವ ಬಗ್ಗೆ ಕೂಗು ಎದ್ದಿದೆ. ಜಸ್ಟೀಸ್ ನಾಗಮೋಹನ್ ದಾಸ್ ಅವರು ಸಮಿತಿಯ ವರದಿಯಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಶೇ 1 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದ್ದರು. ಆದರೆ ಸರಕಾರ ಜಾರಿ ಮಾಡುವಾಗ ಅಲೆಮಾರಿಗಳನ್ನು ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳ ಜತೆ ಸೇರಿಸಿ ಒಟ್ಟು ಶೇ. 5 ರಷ್ಟು ನಿಗದಿ ಪಡಿಸಲಾಗಿದೆ. ಇದರಿಂದ ಶಾಶ್ವತವಾಗಿ ಮೀಸಲಾತಿಯ ಸೌಲಭ್ಯದಿಂದ ವಂಚಿತರಾಗುವ ಭಯದಲ್ಲಿ ಅಲೆಮಾರಿಗಳಿದ್ದಾರೆ. ಇದೇ ಸಂದರ್ಭದಲ್ಲಿ ಅಲೆಮಾರಿ ಸಮುದಾಯಗಳ ಬದುಕಿನ ಬಿಕ್ಕಟ್ಟಿನ ಚರ್ಚೆಯೂ ನಡೆಯುತ್ತಿದೆ. ಇಂದು ಅಲೆಮಾರಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಸಾಮಾನ್ಯ ವರ್ಗದಲ್ಲಿಯೂ ಹಂಚಿ ಹೋಗಿದ್ದಾರೆ. ಹೀಗಿರುವಾಗ ಇದು ಕೇವಲ ಪರಿಶಿಷ್ಟ ಜಾತಿಯಲ್ಲಿರುವ ಅಲೆಮಾರಿಗಳ ಸಂಕಷ್ಟ ಮಾತ್ರವಲ್ಲ ಎಲ್ಲಾ ಅಲೆಮಾರಿಗಳ ದುಸ್ಥಿತಿಯೂ ಕೂಡ.
ಅಲೆಮಾರಿಗಳು ನಗರಗಳ ಮೈಗೆ ಅಂಟಿಕೊಂಡಂತೆ ಯಾಕೆ ಬದುಕುತ್ತಿದ್ದಾರೆ? ಯಾಕೆ ಗ್ರಾಮೀಣ ಭಾಗದ ವಲಸೆಯನ್ನು ಕೈಬಿಡುತ್ತಿದ್ದಾರೆ?. ಈ ಬಗೆಯ ಬಿಕ್ಕಟ್ಟು ಅಲೆಮಾರಿಗಳಿಗೆ ಏಕೆ ಸೃಷ್ಟಿಯಾಗಿದೆ ಎನ್ನುವುದನ್ನು ಪರಿಶೀಲಿಸಬೇಕು. ಕೆಲವು ಅಲೆಮಾರಿಗಳ ವಾಸದ ನೆಲೆಯ ಅಂಕೆ ಸಂಖ್ಯೆಗಳನ್ನು ನೋಡುವುದಾದರೆ, ಗೋಸಂಗಿ ಸಮುದಾಯದಲ್ಲಿ ನಗರ ಪ್ರದೇಶದ ವಾಸದ ನೆಲೆ ಶೇ. 70 ರಷ್ಟಿದ್ದರೆ, ಗ್ರಾಮೀಣ ಪ್ರದೇಶದ ವಾಸದ ನೆಲೆ ಶೇ 30 ರಷ್ಟಿದೆ. ಘಿಸಾಡಿ ಸಮುದಾಯದ ವಾಸದ ನೆಲೆ ಗ್ರಾಮೀಣ ಭಾಗದಲ್ಲಿ ಶೇ 22 ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ. 78 ರಷ್ಟಿದೆ. ಗೋಂಧಳಿ ಸಮುದಾಯದ ವಾಸದ ನೆಲೆ ಗ್ರಾಮೀಣ ಭಾಗದಲ್ಲಿ ಶೇ 19.47 ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಸರಾಸರಿ ಶೇ. 80.53 ರಷ್ಟಿದೆ. ಬೈಲ ಪತ್ತಾರ ಸಮುದಾಯ ನಗರ ಭಾಗದಲ್ಲಿ ಶೇ 51.36 ಇದ್ದರೆ ಗ್ರಾಮೀಣ ಭಾಗದಲ್ಲಿ 49.31 ರಷ್ಟಿದೆ. ದೊಂಬಿದಾಸ ಸಮುದಾಯ ನಗರ ಭಾಗದಲ್ಲಿ ಶೇ 51.36 ಇದ್ದರೆ ಗ್ರಾಮೀಣ ಭಾಗದಲ್ಲಿ ಶೇ. 49.31 ರಷ್ಟಿದೆ. ಕಂಜರ ಭಾಟ ಸಮುದಾಯ ಗ್ರಾಮೀಣ ಭಾಗದಲ್ಲಿ 163 ಜನರು ನೆಲೆಸಿದ್ದರೆ, ನಗರ ಭಾಗದಲ್ಲಿ ಒಟ್ಟು 1834 ರಷ್ಟಿದ್ದಾರೆ.
ಈ ಅಂಕೆಸಂಖ್ಯೆಗಳು ಅಲೆಮಾರಿ ಸಮುದಾಯಗಳ ನಗರ ಕೇಂದ್ರಿತ ವಲಸೆಯನ್ನು ತೋರಿಸುತ್ತಿದೆ. ಹೀಗೆ ಅಲೆಮಾರಿ ಸಮುದಾಯಗಳು ಗ್ರಾಮೀಣ ಭಾಗದ ವಲಸೆಯನ್ನು ಯಾಕೆ ಕೈಬಿಡುತ್ತಿದ್ದಾರೆ, ಮುಖ್ಯವಾಗಿ ಗ್ರಾಮಗಳು ಕೃಷಿಯಾಧಾರಿತ ಬದುಕನ್ನು ಆಧರಿಸಿ ಸ್ವತಃ ಹಳ್ಳಿಗಳೆ ಸಂಕಷ್ಟದಲ್ಲಿವೆ. ಇಂತಹ ಸಂಕಷ್ಟದ ಬಹುಪಾಲು ಹಳ್ಳಿಗಳು ಅಲೆಮಾರಿ ಸಮುದಾಯಗಳಿಗೆ ಅನ್ನ ನೀಡುವಲ್ಲಿ ಬದುಕನ್ನು ಕಲ್ಪಿಸುವಲ್ಲಿ ಸೋಲುತ್ತಿರುವಂತೆ ಕಾಣುತ್ತಿವೆ. ಮೊದಲು ಕೃಷಿಯೇತರ ಭೂಮಿಯು ಹೆಚ್ಚಾಗಿತ್ತು. ಈ ಕೃಷಿಯೇತರ ಭೂಮಿಯ ಕಾರಣಕ್ಕೆ ಪಶುಪಾಲಕರಾಗಿದ್ದ ಅಲೆಮಾರಿಗಳಿಗೂ ಅನುಕೂಲಕರ ವಾತಾವರಣವಿತ್ತು. ಈ ಚಿತ್ರ ಈಚಿನ ಎರಡು ದಶಕಗಳಲ್ಲಿ ಬದಲಾಗಿದೆ. ಈ ಕಾರಣಕ್ಕೆ ಸಹಜವಾಗಿ ಅಲೆಮಾರಿ ಸಮುದಾಯಗಳು ನಗರಕ್ಕೆ ಹೊಂದಿಕೊಂಡಂತೆ ನೆಲೆಸುತ್ತಿವೆ. ಹೀಗೆ ನಗರದಂಚಿನ ವಲಸೆಯಿಂದಾಗಿ ಅಲೆಮಾರಿ ಸಮುದಾಯಗಳು ನಗರ ಕೇಂದ್ರಿತ ಹೊಸ ಕಸುಬುಗಳಿಗೆ ಒಗ್ಗಿಕೊಳ್ಳುತ್ತಿವೆ. ಇದರಲ್ಲಿ ಮಹಿಳೆಯರ ಕಸುಬುಗಳೂ ಬದಲಾಗುತ್ತಿವೆ. ಅಂತೆಯೇ ನಗರ ಸಂಪರ್ಕದಿಂದಾಗಿ ಅಲೆಮಾರಿ ಮಹಿಳೆಯರಲ್ಲಿ ಕೆಲವು ಮುಖ್ಯ ಬದಲಾವಣೆಗಳು ಘಟಿಸಿವೆ. ಇಂದು ಅಲೆಮಾರಿಗಳು ನಗರ ಹೊರಚೆಲ್ಲುವ ಕಸ ಆಯ್ದು ಬದುಕುವ ಸ್ಥಿತಿಗೆ ಬಂದಿದ್ದಾರೆ. ಇಂದು ನಗರಗಳಲ್ಲಿ ಕಸ-ಚಿಂದಿ ಆಯುವ ಸಮುದಾಯಗಳೆ ಅಲೆಮಾರಿ ಸಮುದಾಯಗಳಾಗಿವೆ.
ಅಲೆಮಾರಿತನಕ್ಕೂ, ಶಿಕ್ಷಣಕ್ಕೂ ವಿರುದ್ಧ ಸಂಬಂಧವಿದೆ. ಅಂದರೆ ನಿರಂತರವಾಗಿ ಅಲೆದಾಡಿಕೊಂಡಿರುವ ಕಾರಣ ಒಂದೆಡೆ ನಿಂತು ಶಿಕ್ಷಣ ಪಡೆಯುವುದು ಈ ಸಮುದಾಯಗಳಿಗೆ ಸಾಧ್ಯವಾಗುತ್ತಿಲ್ಲ. ಅಲೆಮಾರಿ ಸಮುದಾಯಗಳಿಗೆ ಶಿಕ್ಷಣ ಈಗಲೂ ನಿಲುಕದ ನಕ್ಷತ್ರವೆ. ಅಲೆಮಾರಿ ಸಮುದಾಯಗಳು ಈಗ ಕೆಲವೆಡೆ ನೆಲೆ ನಿಲ್ಲುತ್ತಿದ್ದು ಕೆಲವರು ಅರೆ ಅಲೆಮಾರಿಗಳಾಗಿದ್ದಾರೆ. ಅಲೆಮಾರಿ ಸಮುದಾಯಗಳಿಗೆ ಸ್ಥಾಪನೆಯಾಗಿ ವಸತಿ ಶಾಲೆಗಳಿಂದಾಗಿ ಸ್ವಲ್ಪಮಟ್ಟಿಗೆ ಕಲಿಯಲು ಸಹಕಾರಿಯಾಗಿವೆ. ಇಲ್ಲಿಯೂ ಹುಡುಗರಿಗಿಂತ ಹುಡುಗಿಯರ ಶಿಕ್ಷಣ ಬಹಳ ಕಡಿಮೆ ಇದೆ.
ಹಕ್ಕಿಪಿಕ್ಕಿ ಸಮುದಾಯದಲ್ಲಿ ಸರಾಸರಿ ಶೈಕ್ಷಣಿಕ ಪ್ರಮಾಣ ಪುರುಷರು ಶೇ. 19.23 ರಷ್ಟಿದ್ದರೆ, ಮಹಿಳೆಯರು ಶೇ. 10.31 ರಷ್ಟಿದ್ದಾರೆ. ಒಟ್ಟು ಶೇ. 14.74 ರಷ್ಟು ಸಾಕ್ಷರರಿದ್ದಾರೆ. ಗೋಸಂಗಿ ಸಮುದಾಯದಲ್ಲಿ ಶೇ 39.59 ರಷ್ಟು ಗಂಡಸರ ಶಿಕ್ಷಣವಿದ್ದರೆ, ಶೇ. 36.08 ರಷ್ಟು ಮಹಿಳೆಯರ ಶಿಕ್ಷಣವಿದೆ. ಅಲೆಮಾರಿ ಕುರುಬರಲ್ಲಿ 2001 ರ ಜನಗಣತಿಯ ಪ್ರಕಾರ ಸಾಕ್ಷರತೆ ಶೇ. 25.03 ರಷ್ಟಿದೆ. ಪುರುಷರಲ್ಲಿ ಶೇ. 18.44 ರಷ್ಟಿದ್ದರೆ, ಮಹಿಳೆಯರು ಶೇ. 6.59 ರಷ್ಟಿದೆ. 2007 ರ ಸಮೀಕ್ಷೆ ಪ್ರಕಾರ ಅಲೆಮಾರಿ ಕುರುಬರ ಮಹಿಳೆಯರ ಶಿಕ್ಷಣ ಶೇ. 6.59 ರಷ್ಟಿದೆ. ಬಹುಪಾಲು ಅಲೆಮಾರಿ ಸಮುದಾಯಗಳ ಶೈಕ್ಷಣಿಕ ಅಂಕೆಸಂಖ್ಯೆಗಳು ಮೇಲಿನಂತೆಯೇ ಇದೆ. ಹೀಗೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಬಹಳ ದುಸ್ಥಿತಿಯಲ್ಲಿರುವ ಅಲೆಮಾರಿಗಳಿಗೆ ಒಳ ಮೀಸಲಾತಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿದರೆ, ಈಗಿರುವ ಸ್ಥಿತಿಗಿಂತಲೂ ಒಂದಷ್ಟಾದರೂ ಚೇತರಿಸಿಕೊಳ್ಳಬಹುದು.
(ಸೂಚನೆ:ಬರಹದಲ್ಲಿ ಬಳಸಿದ ಅಂಕೆ ಸಂಖ್ಯೆಗಳು 2007-08 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರ ಪ್ರಧಾನ ಸಂಪಾದಕತ್ವದಲ್ಲಿ ಕೆ.ಎಂ.ಮೇತ್ರಿ ಅವರ ಸಂಪಾದಕತ್ವದಲ್ಲಿ ಪ್ರಕಟವಾದ ಕರ್ನಾಟಕದ 22 ಅಲೆಮಾರಿ ಸಮುದಾಯಗಳ ಅಧ್ಯಯನಗಳನ್ನು ಆಧರಿಸಿವೆ)
ಡಾ.ಅರುಣ್ ಜೋಳದಕೂಡ್ಲಿಗಿ
ಜಾನಪದ ವಿದ್ವಾಂಸರು, ಸಂಶೋಧಕರು
ಇದನ್ನೂ ಓದಿ- ಪ್ರತ್ಯೇಕ ಮೀಸಲಾತಿ ಘೋಷಿಸುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ; ಅಲೆಮಾರಿಗಳ ಸಂಘಟನೆಗಳ ಎಚ್ಚರಿಕೆ