ಇವತ್ತಿಗೂ ಯಾರಾದರೂ ಮದುವೆ ಆಗದ ಹೆಣ್ಣುಮಕ್ಕಳು ಮುಟ್ಟಿನ ಕಪ್ಪು ಬಳಸುತ್ತಾರೆ ಅಂದರೆ ಅವರ ಮೇಲೆ, ಅವರ ವರ್ಜಿನಿಟಿ ಮೇಲೆ ಅನುಮಾನ ಪಡುವ ಜನರೇ ಹೆಚ್ಚು. ಈ ವರ್ಜಿನಿಟಿ, ಕನ್ಯಾಪೊರೆಯ ಹಿಂದೆ ಹೆಣ್ಣನ್ನು ಗಂಡಿನ ಅಧೀನವನ್ನಾಗಿಸುವ ಒಂದು ವ್ಯವಸ್ಥಿತ ಷಡ್ಯಂತ್ರ ಇದೆ ಎಂದು ಅರಿತುಕೊಳ್ಳುವ ಹೆಣ್ಣುಗಳು ಮುಟ್ಟಿನ ಕಪ್ಪನ್ನು ನಿರಾಕರಿಸಲಾರರು – ದಿವ್ಯಶ್ರೀ ಅದರಂತೆ, ಯುವ ಲೇಖಕಿ.
ಆಗಿನ್ನೂ 8 ನೇ ಕ್ಲಾಸ್, “ದೇಹದಲ್ಲಿ ಏನೊ ಬದಲಾವಣೆ ಆಗತ್ತೆ, ತಯಾರಾಗಿರಿ” ಅಂತ ಸ್ಕೂಲ್ ಗೆ ಬಂದಿದ್ದ ಡಾಕ್ಟರ್ ಒಬ್ಬರು ಹೇಳಿದ್ದ ಮಾತು ನೆನಪಿತ್ತು ಬಿಟ್ಟರೆ, ಏನಾಗತ್ತೆ, ಎಲ್ಲಿ ಆಗತ್ತೆ ಅನ್ನುವುದರ ಅರಿವು ಮಾತ್ರ ಒಂಚೂರು ಇರಲಿಲ್ಲ.
ಹೀಗಾಗಿನೇ ಮೊದಲ ಬಾರಿ ಮುಟ್ಟಾಗಿ, ಹಾಕಿದ್ದ ಸ್ಕರ್ಟ್ ತುಂಬಾ ಕೆಂಪು ಕಲೆಗಳಾಗಿದ್ದರೂ ಏನೂ ಆಗಿಲ್ಲದಂತೆ, ನನ್ನ ದೇಹದಲ್ಲಾದ ಹೊಸ ಅನುಭವವನ್ನು ಕಂಡುಕೊಳ್ಳಲಾಗದಷ್ಟು ಮುಗ್ದೆಯಾಗಿದ್ದೆ.
ಹೋಮ್ವರ್ಕ್ ಮುಗಿಸಿ, ರಾತ್ರಿ ಮಲಗುವ ಹೊತ್ತಿಗೆ, ನಾನು ಹಾಕಿದ್ದ ಸ್ಕರ್ಟ್ ಮೇಲಿನ ಕಲೆ ನೋಡಿದ್ದ ಅಮ್ಮ ಬಚ್ಚಲು ಮನೆಗೆ ಕರೆದೊಯ್ದು ಸ್ನಾನ ಮಾಡು ಅಂದಿದ್ದಳು.
ಸ್ನಾನ ಮುಗಿಸಿ ಬಂದ ನನಗೆ, ಒಳಚಡ್ಡಿಯಲ್ಲಿ ದಪ್ಪಗೆ ಮಡಿಚಿದ ಹಳೆಯ ಬಟ್ಟೆಯನ್ನಿಟ್ಟು, ಇದನ್ನ ಹಾಕಿಕೋ ಎಂದು ಕೊಟ್ಟಿದ್ದಳು.
ಮನೆಯ ಕೊನೆ ರೂಮಿನಲ್ಲಿ ಒಂದು ಚಾಪೆ, ಸಣ್ಣದೊಂದು ಕಾಟನ್ ಬೆಡ್ಶೀಟ್ ಕೊಟ್ಟು ಇವತ್ತು ಇಲ್ಲೇ ಮಲಗು ಒಳಗೆ ಬರೋದು ಬೇಡ ಅಂತ ಹೇಳಿ ಹೋದ ಅಮ್ಮ ಅವತ್ತು ನೆಮ್ಮದಿಯಾಗಿ ನಿದ್ದೆ ಮಾಡಿದ್ದಳೋ ಇಲ್ಲವೋ ಗೊತ್ತಿಲ್ಲ,
ನಾನಂತೂ ಇಡಿರಾತ್ರಿ ಕಣ್ಣು ಮುಚ್ಚಿರಲಿಲ್ಲ.
ಹೊಟ್ಟೆ ಹಿಚುಕುವ ನೋವಿಗಿಂತ ಅಮ್ಮ ನನ್ನೊಬ್ಬಳನ್ನೇ ಅಲ್ಲಿ ಅದರಲ್ಲೂ ಮಳೆಗಾಲದ ಆ ಚಳಿಯಲ್ಲಿ ಹಾಗೇ ಸಣ್ಣ ಚಾಪೆ ಕೊಟ್ಟು ಮಲಗಿಸಿ ಹೋದದಕ್ಕೆ ಅಮ್ಮನ ಮೇಲೆ ಮತ್ತು ಮುಟ್ಟಿನ ಮೇಲೆ ಸಿಟ್ಟು, ಕೋಪ, ಹತಾಶೆ ಎಲ್ಲವೂ ಬಂದು ರಾತ್ರಿಯಿಡೀ ಅತ್ತು ಹಗುರಾಗಿದ್ದೆ.
ಇನ್ನು ಹಳ್ಳಿಗಳ ಕಡೆ ಇರುವ ಸರ್ಕಾರಿ ಹೈಸ್ಕೂಲ್ ಗಳಲ್ಲಿರುವ ವಾಶ್ ರೂಮ್ ಕತೆ ಎಲ್ಲರಿಗೂ ಗೊತ್ತಿರೋದೆ. ಶಾಲೆಗಳಲ್ಲೇ ಕೊಡುತ್ತಿದ್ದ ಶುಚಿ ಪ್ಯಾಡ್ ಹಾಕಿಕೊಂಡು ಹೋದರೆ ಬೆಳಿಗ್ಗೆ 9 ರಿಂದ ಸಂಜೆ 4 30 ವರೆಗೂ ಒಂದೇ ಪ್ಯಾಡ್ ನಲ್ಲಿ ಇರಬೇಕಾಗಿದ್ದ ಹಿಂಸೆ ಅಷ್ಟಿಷ್ಟಲ್ಲ. ವಾಶ್ ರೂಮ್ ನಲ್ಲಿ ಕನಿಷ್ಠ ಒಂದು ಕಸದ ಬುಟ್ಟಿ ಇಡದೇ, ಇಟ್ಟರೂ ಅದನ್ನ ದಿನಾಲೂ ತೆಗೆದು ಹಾಕುವವರು ಯಾರು ಎಂಬ ಗೋಜನ್ನ ತಲೆ ಮೇಲೆ ಹೊತ್ತುಕೊಳ್ಳಲಾಗದ ವ್ಯವಸ್ಥೆಯ ವಾತಾವರಣಕ್ಕೆ ಮುಟ್ಟಾದ ಹೆಣ್ಣುಗಳೆಲ್ಲ ಬಲಿಪಶುಗಳು. ಶಾಲೆ ಮುಗಿಸಿ ಸಂಜೆ ಮನೆ ತಲುಪಲು ಐದರಿಂದ ಆರು ಕಿಲೋಮೀಟರ್ ಸೈಕಲ್ ಓಡಿಸಬೇಕಿತ್ತು.
ಸೈಕಲ್ ಸೀಟ್ ಮೇಲೆ ಕೂತರೆ, ಎಲ್ಲಿ ಯುನಿಫಾರ್ಮ್ ಕೆಂಬಣ್ಣ ತಾಳುವುದೋ ಅನ್ನುವ ಭಯ. ಆ ಐದು ದಿನಗಳಿಗೆ ನಮ್ಮ ಕಾಲುಗಳನ್ನೇ ಅವಲಂಬಿಸಬೇಕಾದ ಸ್ಥಿತಿ.
ಮುಂದುವರಿದು ಪಿಯುಸಿ ಮತ್ತು ಡಿಗ್ರಿ ಓದುವ ಟೈಮಲ್ಲಿ, ಹಾಸ್ಟೆಲ್ ನಲ್ಲಿ ಇದ್ದಾಗ, ಬಳಸಿದ ಪ್ಯಾಡ್ ನ್ನ ತೊಳೆದು, ಪೇಪರ್ ಸುತ್ತಿ ಕಸದಬುಟ್ಟಿಗೆ ಹಾಕಬೇಕು. ಮರುದಿನ ಹುಡುಗಿಯರೇ ಅದನ್ನ ಕಸದ ಗಾಡಿಗೆ ಹಾಕಬೇಕು ಅನ್ನುವ ಕಟ್ಟಪ್ಪಣೆ. ನೂರಾರು ಜನ ಹುಡುಗಿಯರಿಗೆ ಇರುವ ನಾಲ್ಕೈದು ವಾಶ್ ರೂಮ್ ಗಳಲ್ಲಿ ಪ್ಯಾಡ್ ತೊಳೆದು, ಕೆಂಪುಬಣ್ಣ ಹೋಗುವವರೆಗೂ ನೀರು ಹಾಕಲು ಕೆಲವೊಮ್ಮೆ ನೀರೇ ಇಲ್ಲದ ಸ್ಥಿತಿ. ಇನ್ನೂ ಕೆಲವೊಮ್ಮೆ ಯಾವುದೋ ಹೆಣ್ಣು ಬೇಸತ್ತು ಬಳಸಿದ ಪ್ಯಾಡ್ ನ್ನ ವಾಶ್ ರೂಮಲ್ಲೇ ಹಾಕಿ ಬಂದರೆ, ಅವತ್ತು ಹುಡುಗಿಯರ ಕತೆ ಮುಗಿದೇ ಹೋಯಿತು. ಪ್ರೇಯರ್ ಹಾಲಿನಲ್ಲಿ ಹುಡುಗಿಯರಿಂದಲೇ ಹುಡುಗಿಯರಿಗೆ ಮಂಗಳಾರತಿ, ತಾಸು, ಎರಡು ತಾಸು ಅಲ್ಲೇ ಕೂರಬೇಕು. ಅವತ್ತು ಒಂದು ಮುಟ್ಟಿನ ಪ್ಯಾಡಿಗೆ ಮುಟ್ಟಾದವರೆಲ್ಲರೂ ಫೈನ್ ಕಟ್ಟಬೇಕು.
ಈ ಎಲ್ಲಾ ಅನುಭವಗಳು ನನ್ನ ಆ ಐದು ದಿನಗಳಿಗೆ ಯಾವ ಸಂಭ್ರಮವನ್ನು ಕೊಡುತ್ತಿರಲಿಲ್ಲ.
ಬೆಂಗಳೂರಿಗೆ ಬಂದು ಓದುವಾಗ, ಗೆಳತಿಯರೆಲ್ಲ ಮುಟ್ಟಿನ ಕಪ್ ಬಗ್ಗೆ ಮಾತಾಡುತ್ತಿದ್ದರೆ, ನನಗೂ ತಿಳಿದುಕೊಳ್ಳುವ ಕುತೂಹಲ. (ಹಾಗೇ ನಾನು ಹೇಗೆ ಮುಟ್ಟಿನ ಕಪ್ ಬಳಸಬೇಕಾದ ಅನಿವಾರ್ಯತೆ ಎದುರಾಯಿತು, ನನಗೆ ಡಾಕ್ಟರ್ ಕೊಟ್ಟ ಸಲಹೆ, ಮಾತುಗಳ ಬಗ್ಗೆ ಹಿಂದೆ ಒಂದು ಪೋಸ್ಟ್ ಬರೆದು ಹಾಕಿದ್ದೇನೆ ಕೂಡ )
ಇವತ್ತಿಗೂ ಯಾರಾದರೂ ಮದುವೆ ಆಗದ ಹೆಣ್ಣುಮಕ್ಕಳು ಮುಟ್ಟಿನ ಕಪ್ಪು ಬಳಸುತ್ತಾರೆ ಅಂದರೆ ಅವರ ಮೇಲೆ, ಅವರ ವರ್ಜಿನಿಟಿ ಮೇಲೆ ಅನುಮಾನ ಪಡುವ ಜನರೇ ಹೆಚ್ಚು. ಈ ವರ್ಜಿನಿಟಿ, ಕನ್ಯಾಪೊರೆಯ ಹಿಂದೆ ಹೆಣ್ಣನ್ನು ಗಂಡಿನ ಅಧೀನವನ್ನಾಗಿಸುವ ಒಂದು ವ್ಯವಸ್ಥಿತ ಷಡ್ಯಂತ್ರ ಇದೆ ಎಂದು ಅರಿತುಕೊಳ್ಳುವ ಹೆಣ್ಣುಗಳು ಮುಟ್ಟಿನ ಕಪ್ಪನ್ನು ನಿರಾಕರಿಸಲಾರರು. ಮುಂದುವರಿದು ಕೆಲವು ಹೆಣ್ಣುಮಕ್ಕಳಿಗೆ ಹುಟ್ಟುವಾಗಲೇ ಕನ್ಯಾ ಪೊರೆ ಇರುವುದಿಲ್ಲ, ಕೆಲವೊಮ್ಮೆ ಸೈಕ್ಲಿಂಗ್, ಹಾರ್ಸ್ ರೈಡಿಂಗ್, ಸ್ವಿಮ್ಮಿಂಗ್ ಮತ್ತು ಜಿಮ್ ಆಕ್ಟಿವಿಟಿ ಮಾಡುವಾಗಲೂ ಈ ಕನ್ಯಾಪೊರೆ ಹರಿದು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಒಂದು ಹೆಣ್ಣನ್ನು ವರ್ಜಿನ್ ಹೌದೋ ಅಲ್ಲವೋ ಅಂತ ಕನ್ಯಾಪೊರೆಯ ಮೂಲಕ ಸರ್ಟಿಫಿಕೇಟ್ ಕೊಡುವ ಗಂಡಸರು, ತಾವು ತಮಗೆ ಯಾವ ಆಧಾರದಲ್ಲಿ ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಾರೆ ಅನ್ನುವ ಚಿಕ್ಕ ಪ್ರಶ್ನೆಯನ್ನು ಎದುರಿಟ್ಟು ಕೊಳ್ಳಲೇಬೇಕು.
ನನ್ನ ಪ್ರಕಾರ ಈ ವರ್ಜಿನಿಟಿ ಅನ್ನುವ ಪದವೇ ತೀರಾ ನಾನ್ಸೆನ್ಸ್ ಎಂಬುದೇ ಇವತ್ತಿಗೂ ಇರುವ ತಿಳುವಳಿಕೆ.
ಮುಟ್ಟಿನ ಕಪ್ ಬಳಸುವಾಗ ಕನ್ಯಾಪೊರೆ ಹರಿಯುವ ಸಾಧ್ಯತೆ ಇರುವುದರಿಂದ ಕಪ್ ಬಳಸಬೇಕೆಂದು ಇಚ್ಚಿಸುವ ಹೆಣ್ಣುಗಳು ಈ ವರ್ಜಿನಿಟಿಯ ಕಾರಣಕ್ಕೆ ಹೆದರುತ್ತಾರೆ. ಮುಂದೆ ಮದುವೆಯಾದಾಗ ತನ್ನ ಗಂಡ ಅನ್ನಿಸಿಕೊಂಡವ ಸರ್ಟಿಫಿಕೇಟ್ ಕೊಡಬೇಕಲ್ಲ ಆ ಕಾರಣಕ್ಕೆ.
ಆದರೆ ಇಂತಹ ಕೀಳುಮಟ್ಟದ ಯೋಚನೆಗಳಿಂದ ಗಂಡು ಹೆಣ್ಣು ಇಬ್ಬರೂ ಹೊರಗೆ ಬಂದರೆ ಬಹಳಷ್ಟು ಹೆಣ್ಣುಮಕ್ಕಳಿಗೆ ಕಪ್ ಬಳಸುವ ಮುಕ್ತ ವಾತಾವರಣವೊಂದು ಸಿಗಬಹುದು.
ನಾನು ಸುಮಾರು ಆರೇಳು ತಿಂಗಳಿಂದ ಈ ಕಪ್ ಬಳಸುತ್ತಿದ್ದೇನೆ. 18 ವರ್ಷದ ಮೇಲಿನ ಹೆಣ್ಣುಮಕ್ಕಳು ತಮಗೆ ಸರಿಯೆನಿಸುವ ಸೈಜ್ ಗಳ ( small, medium, large) ಕಪ್ ಗಳನ್ನು ಆರಾಮಾಗಿ ಬಳಸಬಹುದು. ಮೊದಲು ಬಳಸುವಾಗ ಸ್ವಲ್ಪ ನೋವಾಗುವುದು ಸಹಜ, ಬಳಸುವ ಕುರಿತು ಯೂಟ್ಯೂಬ್ ವಿಡಿಯೋ ಗಳನ್ನ ನೋಡಿ ತಿಳಿದು ಕೊಳ್ಳಬಹುದು. ಅಗತ್ಯ ಬಿದ್ದರೆ ಡಾಕ್ಟರ್ ಗಳನ್ನ ಸಂಪರ್ಕಿಸಿ ಸ್ಪಷ್ಟ ಮಾಹಿತಿ ತಿಳಿದುಕೊಂಡು, ಅವರ ಸಹಾಯವನ್ನೂ ಪಡೆಯಬಹುದು.
ಕಲೆಯ ಭಯವಿಲ್ಲದೆ, ಪದೇ ಪದೇ ಬದಲಿಸಬೇಕಾದ ಪ್ಯಾಡ್ ನ ಕಿರಿಕಿರಿ ಇಲ್ಲದೇ ಇರಬಹುದು. ಕನಿಷ್ಠ 8 ರಿಂದ 10 ತಾಸಿಗೊಮ್ಮೆ ಕಪ್ ತೆಗೆದು, ತೊಳೆದು ಮತ್ತೆ ಬಳಸಬೇಕು. ಬ್ಲೀಡಿಂಗ್ ನಿಂತ ಮೇಲೆ 10 ನಿಮಿಷ ಬಿಸಿನೀರಲ್ಲಿ ಕಪ್ಪನ್ನು ಹಾಕಿ ಕುದಿಸಿ, ತೆಗೆದಿಟ್ಟು ಮತ್ತೆ ಮುಂದಿನ ತಿಂಗಳು ಬಳಸಬಹುದು. ಹೀಗೇ ಕೇವಲ 250 ರಿಂದ 300 ಬೆಲೆಯ ಒಂದು ಕಪ್ಪನ್ನ ಕನಿಷ್ಠ 2 ರಿಂದ 3 ವರ್ಷ ಬಳಸಬಹುದು.
ಅನುಮಾನ ಪಡುವವರು ಪಡಲಿ, ನಮಗೆ ಬೇಕಾದದ್ದು ಮುಟ್ಟಿನ ದಿನಗಳ ನೆಮ್ಮದಿ ಅನ್ನುವ ಅರಿವು ಬೆಳೆಸಿಕೊಂಡು, ಹೆಣ್ಣುಮಕ್ಕಳು ಇದನ್ನ ಬಳಸಲೇಬೇಕು ಅನ್ನುವುದು ನನ್ನ ನಿಲುವು.
ಸಿಟಿಯಲ್ಲಿನ ಹೆಣ್ಣುಮಕ್ಕಳು ಆರಾಮಾಗಿ ಮುಟ್ಟಿನ ಕಪ್ ಬಳಸುತ್ತಾರೆ ಆದರೆ ನನ್ನೂರಿನ ಹೆಣ್ಣುಗಳು?
ಈಗ ನಾನು ನನ್ನ ಪ್ರತಿ ತಿಂಗಳ ಮುಟ್ಟನ್ನ ಸಂಭ್ರಮಿಸುವ ಹಾಗೆಯೇ ಹಳ್ಳಿಗಾಡಿನ ನನ್ನೂರಿನ ಹೆಣ್ಣುಗಳು ಅವರ ಮುಟ್ಟನ್ನ ಸಂಭ್ರಮಿಸುವಂತಾಗಲಿ ಎಂಬುದಷ್ಟೇ ಈ ಹೊತ್ತಿನ ತುಡಿತ.
ದಿವ್ಯಶ್ರೀ ಅದರಂತೆ
ಯುವ ಲೇಖಕಿ
ಇದನ್ನೂ ಓದಿ- ನನಗೇ ಯಾಕೆ ಹೀಗಾಗುತ್ತದೆ…?