“ನಮ್ಮ ವಿರೋಧಿ ಕಾಂಗ್ರೆಸ್ ಪಕ್ಷ ಅಲ್ಲವೇ ಅಲ್ಲ. ಅದನ್ನು ನಾವು ಈಗ ನೋಡೋದೇ ಅನುಕಂಪದಿಂದ. ನಮ್ಮ ವಿರೋಧಿ ಸಿದ್ಧರಾಮಯ್ಯ. ಸಿದ್ಧರಾಮಯ್ಯ ಎಂದರೆ ಒಬ್ಬ ವ್ಯಕ್ತಿ ಅಲ್ಲ, ಒಂದು ಸಿದ್ಧಾಂತ. ಆ ಸಿದ್ಧಾಂತ ನಮ್ಮ ವಿರೋಧಿ ಸಿದ್ಧಾಂತ. ಹೀಗಾಗಿ ಆ ಸಿದ್ಧಾಂತವನ್ನು ಸೋಲಿಸಬೇಕು…”
ಹೀಗೆ ಹೇಳಿದ್ದರು ಬಿಜೆಪಿಯ ಹಿರಿಯ ನಾಯಕರೊಬ್ಬರು. ಅವರೀಗ ಬಿಜೆಪಿಯಲ್ಲೇ ಅಪ್ರಸ್ತುತರಾಗಿದ್ದಾರೆ, ಅದು ಬೇರೆಯ ವಿಷಯ.
ಆದರೆ ಅವರ ಮಾತುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಿದ್ಧರಾಮಯ್ಯ ವಿರುದ್ಧ ನಡೆದಿರುವ ಷಡ್ಯಂತ್ರಗಳು, ಕೂಗಾಟಗಳು, ದ್ವೇಷದ ಕೂರಂಬುಗಳು, ಅಸಹನೆಯ ಆಪಾದನೆಗಳು ಅರ್ಥವಾಗುತ್ತದೆ.
ಮುಡಾ ಪ್ರಕರಣದಲ್ಲಿ ಸಿದ್ಧರಾಮಯ್ಯ ಪಾತ್ರವೇನೂ ಇಲ್ಲ ಎಂಬುದು ಸ್ವತಃ ಬಿಜೆಪಿ ನಾಯಕರಿಗೇ ಗೊತ್ತಿದೆ. ಆದರೆ ಅವರು ಶಿಕಾರಿ ಮಾಡಲು ಹೊರಟಿರುವುದು ಸಿದ್ಧರಾಮಯ್ಯ ಅವರು ಪ್ರತಿಪಾದಿಸುವ, ಪ್ರತಿನಿಧಿಸುವ ಸಿದ್ಧಾಂತವನ್ನು.
ಮುಡಾ ಪ್ರಕರಣದಲ್ಲಿ ಅಷ್ಟಕ್ಕೂ ಏನಿದೆ? ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಜಮೀನನ್ನು ಮುಡಾ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಲೇ ಔಟ್ ನಿರ್ಮಿಸಿತ್ತು. ಇಂಥದ್ದೇ ಪ್ರಕರಣವೊಂದರಲ್ಲಿ ಜಮೀನು ಕಳೆದುಕೊಂಡಿದ್ದ ಮಹಿಳೆಯೋರ್ವರಿಗೆ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಜಮೀನು ನೀಡಲು ಮುಡಾ ಮುಂದಾಗಿತ್ತು. ಆದರೆ ಆ ಮಹಿಳೆ ಅದಕ್ಕೆ ಹೈಕೋರ್ಟ್ ಮೊರೆ ಹೋಗಿ ಶೇ 100 ರಷ್ಟು ಪರಿಹಾರ ಪಡೆದಿದ್ದರು. ಆದರೆ ಇಲ್ಲಿ ಪಾರ್ವತಿಯವರಿಗೆ ಅವರ ಮನವಿಯ ಮೇರೆಗೆ 50:50 ಅನುಪಾತದಲ್ಲಿ ಹದಿನಾಲ್ಕು ಸೈಟುಗಳನ್ನು ನೀಡಲಾಯಿತು. ಇಷ್ಟೇ ವಿಷಯ.
ಇದರಲ್ಲಿ ಸಿದ್ಧರಾಮಯ್ಯ ಪಾತ್ರವೇನು? ಅವರ ತಪ್ಪಾದರೂ ಏನು? ಹೀಗೇ ಮಾಡಿ ಎಂದು ಅವರು ಮುಡಾಗೆ ಶಿಫಾರಸು ಮಾಡಿದ್ದಾರೆಯೇ? ಅಥವಾ ಶಿಫಾರಸು ಮಾಡಿದ್ದರೂ ಅದು ತಪ್ಪಾಗುತ್ತದೆಯೇ? ಜಮೀನು ಕಳೆದುಕೊಂಡವರು ಸುಮ್ಮನೇ ಇದ್ದುಬಿಡಬೇಕೆ? ತಮಗೆ ಸಲ್ಲಬೇಕಾದ ನ್ಯಾಯಯುತ ಪಾಲು ಪಡೆಯಬಾರದೆ? ಈ ಪ್ರಶ್ನೆಗಳಿಗೆ ಇಲ್ಲ, ಇಲ್ಲ ಎಂಬ ಉತ್ತರವೇ ನಮ್ಮ ಮುಂದೆ ಹರವಿಕೊಳ್ಳುತ್ತದೆ. ಇಷ್ಟನ್ನು ಅರ್ಥಮಾಡಿಕೊಳ್ಳಲು ದೊಡ್ಡ ಕಾನೂನಿನ ಜ್ಞಾನವೇನೂ ಬೇಕಾಗಿಲ್ಲ.
ಇಷ್ಟಾಗಿಯೂ ಸಿದ್ಧರಾಮಯ್ಯ ಯಾಕೆ ಟಾರ್ಗೆಟ್ ಆದರು? ಬಿಜೆಪಿಯವರಿಗೆ ಯಾರು ಮುಖ್ಯಮಂತ್ರಿಯಾದರೂ ಬೇಸರವಿಲ್ಲ, ಆದರೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿರಬಾರದು. ಯಾಕೆಂದರೆ ಅವರು ಭ್ರಷ್ಟಾಚಾರಿಯಲ್ಲ, ಅವರನ್ನು ಹಣಿಯುವುದು ಅಷ್ಟು ಸುಲಭವಲ್ಲ. ಅವರಿಗೆ ಅಂಥದ್ದೊಂದು ಪಟ್ಟ ಕಟ್ಟಿ ಮೂಲೆಗೆ ತಳ್ಳಿದರೆ ಬಿಜೆಪಿಯವರಿಗೆ ಮುಂದಿನ ಹಂತದ ತಂತ್ರ ಕುತಂತ್ರಗಳು ಸಲೀಸಾಗಿ ಒದಗಿಬಂದುಬಿಡುತ್ತವೆ.
ಈ ಬಾರಿ ಅಧಿಕಾರಕ್ಕೆ ಬಂದ ಕೂಡಲೇ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿಗಳನ್ನು ಅನುಷ್ಠಾನಗೊಳಿಸಿಬಿಟ್ಟಿತು. ಈ ಗ್ಯಾರೆಂಟಿಗಳು ತಲುಪುವ ವರ್ಗ ಯಾವುದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅದನ್ನು ಬಿಜೆಪಿಯಂಥ ಮನುವಾದಿ ಪಕ್ಷಕ್ಕೆ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಈ ಗ್ಯಾರೆಂಟಿಗಳಿಂದ ಕಾಂಗ್ರೆಸ್ ಗೆ ಲಾಭವಾಗುತ್ತದೆ ಎಂಬುದು ಅವರ ದೊಡ್ಡ ನಿರಾಶೆಗೆ ಕಾರಣ. ಆದರೆ ಅದಕ್ಕಿಂತ ಮುಖ್ಯವಾಗಿ ಶೋಷಿತ ಸಮುದಾಯಗಳಿಗೆ ಸ್ವಾಭಿಮಾನದ ಬದುಕು ಲಭಿಸುವುದು ಮನುವಾದಿ ಸಿದ್ಧಾಂತಕ್ಕೆ ತಡೆದುಕೊಳ್ಳಲು ಆಗುವುದಿಲ್ಲ. ಆ ಸಿದ್ಧಾಂತ ಮೇಲ್ಜಾತಿಗಳ ಏಳಿಗೆಯನ್ನಷ್ಟೇ ಬಯಸುತ್ತದೆ. ವರ್ಣಾಶ್ರಮದ ಕೆಳಗಿನ ಶ್ರೇಣಿಯ ಜನರ ಏಳಿಗೆಯನ್ನಲ್ಲ.
ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗುವುದಕ್ಕೂ ಮೊದಲಿನಿಂದಲೂ ಈ ದೇಶದಲ್ಲಿ ಸಂಪತ್ತಿನ ಹಂಚಿಕೆಯಾಗಬೇಕು ಎಂದು ಪ್ರತಿಪಾದಿಸುತ್ತ ಬಂದಿದ್ದರು. ಸಮಾಜವಾದಿ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಬಂದ ಸಿದ್ಧರಾಮಯ್ಯ ಅವರಿಗೆ ಇದು ಸಹಜ ಹೇಳಿಕೆ. ಆದರೆ ಈಗಿನ ಕಾಲಘಟ್ಟದಲ್ಲಿ ಆಶಯಾತ್ಮಕವಾಗಿಯಾದರೂ ಇಂಥ ಹೇಳಿಕೆ ನೀಡುವ ಧೈರ್ಯ ಯಾವ ದೊಡ್ಡ ರಾಜಕಾರಣಿಯಲ್ಲೂ ಇಲ್ಲ; ರಾಹುಲ್ ಗಾಂಧಿಯವರನ್ನು ಹೊರತುಪಡಿಸಿ. ಸಿದ್ಧರಾಮಯ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರೆಂಟಿಗಳೆಲ್ಲವೂ ಸಂಪತ್ತಿನ ಹಂಚಿಕೆಯ ಒಂದು ಸಣ್ಣ ಪ್ರಯೋಗ ಅಷ್ಟೆ. ಇದನ್ನೇ ರಾಹುಲ್ ಗಾಂಧಿ ‘ನ್ಯಾಯ್’ ಎಂದು ಕರೆದರು.
ಸಿದ್ಧರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಒಂದು ವರ್ಷವಷ್ಟೇ ಕಳೆದಿದೆ. ಈ ಅವಧಿಯ ನಂತರ ಚುನಾವಣಾ ರಾಜಕಾರಣದಿಂದ ಹೊರಹೋಗುವುದಾಗಿ ಅವರು ಈಗಾಗಲೇ ಹೇಳಿದ್ದಾರೆ. ಆದರೆ ಸಿದ್ಧರಾಮಯ್ಯ ರಾಜಕೀಯವಾಗಿ ಕ್ರಿಯಾಶೀಲವಾಗಿಯೇ ಇರುತ್ತಾರೆ; ಅವರ ಆರೋಗ್ಯ ಚೆನ್ನಾಗಿ ಇರುವವರೆಗೆ. ಸಿದ್ಧರಾಮಯ್ಯ ಕ್ರಿಯಾಶೀಲರಾಗಿ ಇರುವವರೆಗೆ ಕರ್ನಾಟಕದಲ್ಲಿ ಬಿಜೆಪಿಯ ಆಟಗಳು ನಡೆಯೋದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ. ಈ ಕಾರಣದಿಂದಲೇ ಸಿದ್ಧರಾಮಯ್ಯ ಬಿಜೆಪಿಗೆ ಗಂಟಲಲ್ಲಿ ಸಿಕ್ಕಿಕೊಂಡ ಮುಳ್ಳು.
ಸಿದ್ಧರಾಮಯ್ಯ ಅವರ ಮೇಲೆ ರಾಜ್ಯಪಾಲರನ್ನು ಬಳಸಿಕೊಂಡು ಬಿಜೆಪಿ ಆಡುತ್ತಿರುವ ಆಟಗಳನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಅವರಿಗೆ ಬೆಂಬಲ ವ್ಯಕ್ತವಾಗುತ್ತಿದೆ.
ಈ ಕ್ಷಣದಲ್ಲಿ ಸಿದ್ಧರಾಮಯ್ಯ ಅವರನ್ನು ಬೆಂಬಲಿಸುವುದೆಂದರೆ ಅವರು ಪ್ರತಿಪಾದಿಸುವ ಸಿದ್ಧಾಂತವನ್ನು ಬೆಂಬಲಿಸುವುದು. ಆ ಸಿದ್ಧಾಂತ ನಮಗೆಲ್ಲ ಆಪ್ತವಾದ ಸಮಸಮಾಜ ಕಲ್ಪನೆಯ ಸಿದ್ಧಾಂತ. ಸಿದ್ಧರಾಮಯ್ಯ ಅವರನ್ನು ಸೋಲಿಸಲು ಯತ್ನಿಸುತ್ತಿರುವುದು ಮನುವಾದಿ ಸಿದ್ಧಾಂತ. ನಾವು ಜೀವನಪರ್ಯಂತ ವಿರೋಧಿಸಿಕೊಂಡುಬಂದ ಸಿದ್ಧಾಂತ.
ಹೀಗಾಗಿ ನನಗಂತೂ ಆಯ್ಕೆ ಸುಲಭ. ನಿಮಗೆ?
- ದಿನೇಶ್ ಕುಮಾರ್ ಎಸ್.ಸಿ.