ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಎಂಬಾತನ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಆತನ ಗೆಳತಿ ಪವಿತ್ರಗೌಡ ಸೇರಿದಂತೆ ಒಟ್ಟು 13 ಆರೋಪಿಗಳು ಬಂಧಿತರಾಗಿ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ರೇಣುಕಾಸ್ವಾಮಿ ಪದೇ ಪದೇ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಗ್ಯಾಂಗ್ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದೆ ಎಂದು ಪೊಲೀಸರು ಈ ಎಲ್ಲರನ್ನೂ ಬಂಧಿಸಿದ್ದಾರೆ.
ಬಂಧಿತರ ಪೈಕಿ ನಾಗರಾಜ್ ಎಂಬಾತ ದರ್ಶನ್ ಗೆ ಪರಮಾಪ್ತನಾಗಿದ್ದವನು. ಈತ ಮೈಸೂರು ನಗರದ ತೊಣಚಿಕೊಪ್ಪಲು ನಿವಾಸಿ. ಅತ್ಯಂತ ಸಾಧಾರಣ ಹಿನ್ನೆಲೆ ಇರುವ ನಾಗರಾಜ್ ಮೊದಲು ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಅದು ಹೇಗೋ ಅವನಿಗೆ ದರ್ಶನ್ ಅವರ ಸಂಪರ್ಕ ದೊರೆಯಿತು. ನಿಧಾನವಾಗಿ ದರ್ಶನ್ ವಿಶ್ವಾಸ ಗಳಿಸಿದ ಆತ ಆಪ್ತಬಳಗ ಸೇರಿಬಿಟ್ಟ.
ಕಳೆದ 15 ವರ್ಷಗಳಿಂದ ದರ್ಶನ್ ಜತೆಯಲ್ಲಿರುವ ನಾಗರಾಜ್ ಒಂದು ರೀತಿಯಲ್ಲಿ ದರ್ಶನ್ ಗೆ ಬಲಗೈ ಬಂಟ. ದರ್ಶನ್ ಬೇಕು ಬೇಡಗಳನ್ನೆಲ್ಲ ನೋಡಿಕೊಳ್ಳುವ ವ್ಯಕ್ತಿ.
ದರ್ಶನ್ ಊಟ, ತಿಂಡಿ, ವಾಸ್ತವ್ಯ, ಪ್ರವಾಸ, ಮೋಜು, ಮಸ್ತಿ. ದರ್ಶನ್ ವೈಯಕ್ತಿಕ ವಿಚಾರಗಳೆಲ್ಲವನ್ನೂ ನೋಡಿಕೊಳ್ಳುತ್ತಿದ್ದ ನಾಗರಾಜ್, ಆತ ಹೋದಲ್ಲೆಲ್ಲ ಜೊತೆಯಲ್ಲೇ ಇರುತ್ತಿದ್ದ. ದರ್ಶನ್ ಮೈಸೂರು ತಾಲ್ಲೂಕಿನ ಕೆಂಪಯ್ಯನಹುಂಡಿ ತೋಟದ ಮನೆ ನಿರ್ವಹಣೆಯ ಜವಾಬ್ದಾರಿಯೂ ಅವನದ್ದಾಗಿತ್ತು. ದರ್ಶನ್ ಈತನನ್ನು ನಾಗು ಎಂದೇ ಪ್ರೀತಿಯಿಂದ ಕರೆಯುತ್ತಾನೆ.
ನಾಗರಾಜ್ ಎಂದರೆ ದರ್ಶನ್ ಗೆ ಅತೀವ ನಂಬಿಕೆ. ದರ್ಶನ್ ಅಭಿಮಾನಿ ಸಂಘಗಳ ಜೊತೆಯೂ ನಾಗರಾಜ್ ವ್ಯವಹರಿಸುತ್ತಿದ್ದ. ಅಭಿಮಾನಿ ಸಂಘಗಳ ಬೇಕು ಬೇಡಗಳನ್ನೂ ನೋಡಿಕೊಳ್ಳುತ್ತಿದ್ದ. ತನ್ನ ಸುತ್ತಮುತ್ತ ಇರುವವರನ್ನು ಚೆನ್ನಾಗಿ ನೋಡಿಕೊಳ್ಳುವ ದರ್ಶನ್ ತನ್ನ ಬಲಗೈ ಬಂಟ ನಾಗರಾಜ್ ಬದುಕಿಗೂ ವ್ಯವಸ್ಥೆ ಮಾಡಿಕೊಟ್ಟಿದ್ದ. ಮೈಸೂರಲ್ಲಿ ಬಾರ್ ಒಂದನ್ನು ದರ್ಶನ್ ತನ್ನ ಸ್ವಂತ ಖರ್ಚಿನಲ್ಲೇ ನಾಗರಾಜ್ ಗಾಗಿ ಮಾಡಿಕೊಟ್ಟಿದ್ದ.
ದರ್ಶನ್ ಹೇಳಿದ್ದೆಲ್ಲವನ್ನೂ ಮಾಡುತ್ತಿದ್ದ ನಾಗರಾಜ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಲ್ಲಿ ಈಗ ಆರೋಪಿಯಾಗಿ ಜೈಲು ಸೇರುತ್ತಿದ್ದಾನೆ.
ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ನಂದೀಶ್ ಕಥೆ ಸ್ವಲ್ಪ ಭಿನ್ನವಾಗಿದೆ. ಇತರರಿಗೆ ಹೋಲಿಸಿದರೆ ನಂದೀಶ್ ತೀರಾ ಬಡ ಕುಟುಂಬದಿಂದ ಬಂದವನು. ಮಂಡ್ಯ ಜಿಲ್ಲೆ ಚಾಮಲಾಪುರ ಈತನ ಹುಟ್ಟೂರು. ಅಮ್ಮ ಕೂಲಿ ಮಾಡುತ್ತಾಳೆ, ಅಪ್ಪ ಒಂದು ಸಣ್ಣ ಟೀ ಅಂಗಡಿ ಇಟ್ಟುಕೊಂಡಿದ್ದಾನೆ. ಈ ಕುಟುಂಬಕ್ಕೆ ಒಂದಿಂಚು ಜಮೀನೂ ಕೂಡ ಇಲ್ಲ.
ದರ್ಶನ್ ಗ್ಯಾಂಗ್ ಪೈಕಿ ನಂದೀಶನಿಗೆ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತರುವ ಟಾಸ್ಕ್ ನೀಡಲಾಗಿತ್ತು. ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರನೊಂದಿಗೆ ಸೇರಿ ನಂದೀಶ ಉಪಾಯವಾಗಿ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದ. ಈಗ ಕೊಲೆಕೇಸಿನಲ್ಲಿ ಸಿಕ್ಕಿಬಿದ್ದಿದ್ದಾನೆ.