ಸುಪ್ರೀಂ ಕೋರ್ಟ್ ನಲ್ಲಿ ಎರಡನೇ ಹಿರಿಯ ನ್ಯಾಯಮೂರ್ತಿಗಳಾಗಿರುವ ಸಂಜೀವ್ ಖನ್ನಾ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಸೂಚಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಶಿಫಾರಸ್ಸು ಮಾಡಿದ್ದಾರೆ. ಅವರು ಯಾರು ಎಂಬ ಮಾಹಿತಿ ಇಲ್ಲಿದೆ.
ಸಂಜೀವ್ ಖನ್ನಾ ಅವರು 1960, ಮೇ 14ರಂದು ಜನಿಸಿದರು. 1983ರಲ್ಲಿ ದೆಹಲಿಯಲ್ಲಿ ವಕೀಲಿ ವೃತಿಯನ್ನು ಆರಂಭಿಸಿದರು. ಇವರು ಸಾಂವಿಧಾನಿಕ ಕಾನೂನು, ತೆರಿಗೆ, ಮಧ್ಯಸ್ಥಿಕೆ ವಾಣಿಜ್ಯ ಮತ್ತು ಪರಿಸರದ ವಿಷಯಗಳಲ್ಲಿ ಪರಿಣಿತಿ ಹೊಂದಿದ್ದಾರೆ. 2005ರಲ್ಲಿ ದೆಹಲಿ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿದ್ದ ಖನ್ನಾ ಅವರು 2006ರಲ್ಲಿ ಖಾಯಂ ಖಾಯಂ ನ್ಯಾಯಮೂರ್ತಿಗಳಾಗಿದ್ದರು.
ತಮ್ಮ ವೃತ್ತಿ ಜೀವನದಲ್ಲಿ ಖನ್ನಾ ಅವರು ಅನೇಕ ಕಾನೂನು ಸಂಸ್ಥೆಗಳ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ದೆಹಲಿ ನ್ಯಾಯಾಂಗ ಅಕಾಡೆಮಿ ಮತ್ತು ದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಅಧ್ಯಕ್ಷರಾಗಿದ್ದರು. 2019ರ ಜೂನ್ 18ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಗೊಂಡಿದ್ದರು.
2024ರಲ್ಲಿ ಮತಯಂತ್ರಗಳನ್ನು ಶೇ. ನೂರರಷ್ಟು ಪರಿಶೀಲನೆ ಮಾಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ಪೀಠದ ಮುಖ್ಯಸ್ಥರಾಗಿದ್ದರು. ಇದೇ ವರ್ಷದಲ್ಲಿ ಚುನಾವಣಾ ಬಾಂಡ್ ಯೋಜನೆ ಅಸಂವಿಧಾನಿಕ ಎಂಬ ಐತಿಹಾಸಿಕ ತೀರ್ಪು ನೀಡಿ ಚುನಾವಣಾ ಬಾಂಡ್ ನ ಮಾಹಿತಿ ನೀಡದೇ ಇರುವುದು ಹಕ್ಕಿನ ಉಲ್ಲಂಘನೆ ಎಂದೂ ಅಭಿಪ್ರಾಯಪಟ್ಟಿದ್ದರು.
ಜಮ್ಮು ಮತ್ತು ಕಾಶ್ಮೀರದ 371 ನೇ ವಿಧಿಯನ್ನು ರದ್ದುಗೊಳಿಸಿದ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಇವರೂ ಒಬ್ಬರಾಗಿದ್ದರು. 2019ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾyಮೂರ್ತಿಗಳೂ ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಐತಿಹಾಸಿಕ ತೀರ್ಪು ನೀಡಿದ್ದರು. ಸರ್ಕಾರ ಇವರನ್ನು ಆಯ್ಕೆ ಮಾಡಿದರೆ ಇವರು 51ನೇ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ ಮತ್ತು ಇವರ ಅಧಿಕಾರಾವಧಿ 2025 ಮೇ 13ರವರೆಗೆ ಇರಲಿದೆ.