ಬೆಂಗಳೂರು: ನಿನ್ನೆ ನಡೆದ ಮೆಟ್ರೋ ರೈಲು ಉದ್ಘಾಟನೆಗೆ ಆಹ್ವಾನ ನೀಡದೆ ನಿಮ್ಮನ್ನು ನಿಮ್ಮ ಪಕ್ಷ ಅವಮಾನಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರನ್ನು ಗೇಲಿ ಮಾಡಿದ್ದಾರೆ.
ಶ್ರೀ ಶ್ರೀ @RAshokaBJP …
ನಿಮಗಾಗಿರುವ ನೋವು, ಹತಾಶೆ, ಸಿಟ್ಟು ಎಲ್ಲವೂ ನಮಗೆ ಅರ್ಥವಾಗುತ್ತದೆ, ನಿಮ್ಮ ಪಕ್ಷದವರ ಮೇಲೆ ತೋರಿಸಲಾಗದ ಹತಾಶೆಯನ್ನು ನಮ್ಮ ಮುಂದೆ ತೋರಿಸುತ್ತಿರುವಿರಿ!
ನಿಮ್ಮ ಸಾಮಾಜಿಕ ಜಾಲತಾಣದ ನಿರ್ವಹಣೆಯನ್ನು ಯಾವುದೋ ವಾಟ್ಸಾಪ್ ಯೂನಿವರ್ಸಿಟಿಯನ್ನು ಅವಲಂಬಿಸಿ ಬದುಕುವ ಪರಾವಲಂಬಿ ರೂ.2 ಕ್ರಿಮಿಗಳ ಕೈಗೆ ಕೊಟ್ಟಿದ್ದೀರಿ, ಅಸಂಬದ್ಧಗಳನ್ನು ಬರೆದು ಅವರು ನಿಮ್ಮ ಮರ್ಯಾದೆ ತೆಗೆಯುತ್ತಿದ್ದಾರೆ.
ಪ್ರಿಯದರ್ಶಿನಿ, ರಾಹುಲ್, ಪ್ರಿಯಾಂಕ್ (ಪ್ರಿಯಾಂಕ ಅಲ್ಲ) ಈ ಹೆಸರುಗಳು ಬೌದ್ಧ ಧರ್ಮದ ಪ್ರಭಾವದಿಂದ ಸಿಕ್ಕಿರುವಂತಹವು, ಅಶೋಕ್ ಎಂಬ ಹೆಸರೂ ಕೂಡ ಬೌದ್ಧ ಧರ್ಮವನ್ನು ಜಗತ್ತಿಗೆ ಪ್ರಚಾರ ಮಾಡಿದ ಇತಿಹಾಸ ಪುರುಷನ ಹೆಸರು ಎನ್ನುವುದಾದರೂ ತಿಳಿದಿದೆಯೇ? ಹಿಂದೂ ಧರ್ಮದ ಬಗ್ಗೆಯೇ ಸರಿಯಾಗಿ ತಿಳಿಯದ ತಮಗೆ ಬೌದ್ಧ ಧರ್ಮ ತಿಳಿಯುವುದಾದರೂ ಹೇಗೆ..
ಸಾಂವಿಧಾನಿಕ ಸ್ಥಾನವಾದ ಲೋಕಸಭೆಯ ವಿರೋಧ ಪಕ್ಷದ ನಾಯಕನಿಗೆ ನಾಲಾಯಕ್ ಎಂಬ ಪದ ಬಳಕೆ ಮಾಡಿರುವುದು ನಿಮ್ಮ ತಿಳುವಳಿಕೆಯನ್ನು ತೋರಿಸುತ್ತದೆ, ನೀವೂ ಸಹ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿರುವವರು ಎಂಬ ಪ್ರಜ್ಞೆ ಇಟ್ಟುಕೊಂಡಿದ್ದರೆ ಒಳ್ಳೆಯದಿತ್ತು.
ನಾಲಾಯಕ್ ಯಾರು ಎನ್ನುವುದು ನಿರ್ಧಾರವಾಗುವುದು ನಿಮ್ಮಿಂದ ಅಲ್ಲ, ಅವರವರ ನಡವಳಿಕೆಯಿಂದ.
– ಚೀನಾ ಅತಿಕ್ರಮಣದ ಬಗ್ಗೆ ಮಾತಾಡಲು ಹೆದರುವವರು
– ಗಲಭೆ ಪೀಡಿತ ಮಣಿಪುರಕ್ಕೆ ಕಾಲಿಡದವರು
– ಅಮೇರಿಕಾದ ಹುಕುಂಗೆ ಹೆದರಿ ಆಪರೇಷನ್ ಸಿಂಧೂರ ನಿಲ್ಲಿಸಿದವರು
– ಟೆಲಿ ಪ್ರಾಂಪ್ಟರ್ ಇಲ್ಲದೆ ಒಂದು ಪದವೂ ಮಾತನಾಡಲಾಗದವರು
– ಅಂತರರಾಷ್ಟ್ರೀಯ ಸಂಬಂಧವನ್ನು ಹಾಳುಗೆಡವಿದವರು
– ಟ್ರಂಪ್ ಹೆಸರನ್ನು ಪ್ರಸ್ತಾಪಿಸಲು ಹೆದರುವವರು
– 11 ವರ್ಷದಲ್ಲಿ ಒಮ್ಮೆಯೂ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಲಾಗದವರು
ಇವರನ್ನು “ ನಾಲಾಯಕ್” ಎಂದು ಕರೆದರೆ ಸೂಕ್ತವಲ್ಲವೇ?? ಅಶೋಕ್ ಅವರೇ,
ಶ್ರೀ ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಬಗ್ಗೆ ಮಾತನಾಡುವ ಅರ್ಹತೆ ನಿಮಗಿಲ್ಲ, ಆಕಾಶ ನೋಡಿ ಉಗಿಯುವ ಪ್ರಯತ್ನ ಬಿಡಿ, ನಿಮ್ಮ ಮುಖವೇ ಕೊಳಕಾದೀತು.
ಪೋಕ್ಸೋ ಪ್ರಕರಣದ ಆರೋಪಿ ಕಾಲಿಗೆ ಬಿದ್ದು ಕುರ್ಚಿ ಉಳಿಸಿಕೊಳ್ಳಬೇಕಾದ ಹಾಗೂ ನಿಮಗೆ ಏಡ್ಸ್ ಇಂಜಕ್ಷನ್ ಚುಚ್ಚಲು ಪ್ರಯತ್ನಿಸಿದ ಅತ್ಯಾಚಾರ ಆರೋಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಸ್ತಿತ್ವ ಉಳಿಸಿಕೊಳ್ಳಬೇಕಾದ ನಿಮ್ಮ ದಯನೀಯ ಸ್ಥಿತಿಯು ಮರುಕ ಹುಟ್ಟಿಸುತ್ತಿದೆ.
ʼಇಂದಿನ ಪ್ರಧಾನಿ ಕಾರ್ಯಕ್ರಮದಲ್ಲಿ ನಿಮ್ಮನ್ನು ಅವಾಯ್ಡ್ ಮಾಡಿ ತಾವು ಕುರ್ಚಿ ಪಡೆದುಕೊಂಡು ಬೀಗಿದ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರು ಅರ್ಹತೆಯಿಂದ ಹುದ್ದೆ ಪಡೆದಿದ್ದಾರೋ ಅಥವಾ ಅಪ್ಪನ ಹೆಸರಿನಿಂದ ಹುದ್ದೆ ಪಡೆದಿದ್ದಾರೋ ಎನ್ನುವುದನ್ನು ಚಿಂತಿಸಿ ಉತ್ತರಿಸಿʼ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.