ಯಾರಿವನು ಲಾರೆನ್ಸ್ ಬಿಷ್ಣೋಯ್? ಬಾಬಾ ಸಿದ್ದಿಖಿಯನ್ನು ಕೊಂದಿದ್ದೇಕೆ? 700 ಶಾರ್ಪ್ ಶೂಟರ್ ಗಳ ತಂಡ ಕಟ್ಟಿದ್ದು ಹೇಗೆ?

Most read

ಮುಂಬೈ: ಮಹಾರಾಷ್ಟ್ರದ ಹಿರಿಯ ರಾಜಕಾರಣಿ, ಮಾಜಿ ಶಾಸಕ ಬಾಬಾ ಸಿದ್ದಿಖಿಯನ್ನು ಶಾರ್ಪ್ ಶೂಟರ್ ಗಳು ಗುಂಡಿಕ್ಕಿ ಕೊಂದ ಬೆನ್ನಲ್ಲೇ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ.

ಕೆಲವೇ ವರ್ಷಗಳಲ್ಲಿ ದೇಶದ ನಾನಾ ರಾಜ್ಯಗಳಲ್ಲಿ ತನ್ನ ಗ್ಯಾಂಗ್ ಬೆಳೆಸಿರುವ ಲಾರೆನ್ಸ್ ಬಿಷ್ಣೋಯ್ ಸದ್ಯ ಗುಜರಾತ್ ನ ಸಾಬರ್ ಮತಿ ಜೈಲಿನಲ್ಲಿದ್ದಾನೆ. ಬಾಬಾ ಸಿದ್ದಿಖಿ ಹತ್ಯೆಯ ಹಿಂದೆ ನಾವಿದ್ದೇವೆ, ಆತ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ ಇಟ್ಟುಕೊಂಡಿದ್ದ,‌ ಹೀಗಾಗಿ ಆತನನ್ನು ಕೊಂದಿದ್ದೇವೆ ಎಂದು ಬಿಷ್ಣೋಯ‌್ ಶಿಷ್ಯನೊಬ್ಬ ಫೇಸ್ ಬುಕ್ ಪೋಸ್ಟ್ ಹಾಕಿದ್ದ. ಅಷ್ಟೇ ಅಲ್ಲದೆ ನಟ ಸಲ್ಮಾನ್ ಖಾನ್ ಮನೆಯ ಬಳಿ ಶೂಟ್ ಔಟ್ ನಡೆಸಿದ ಶೂಟರ್ ಗಳ ಪೈಕಿ ಒಬ್ಬ ಮೃತನಾಗಿದ್ದಾನೆ. ಅದಕ್ಕೆ ಪ್ರತೀಕಾರವಾಗಿ ಬಾಬಾ ಸಿದ್ದಿಖಿಯನ್ನು ಕೊಂದಿದ್ದೇವೆ ಎಂದು ಆತ ಬರೆದಿದ್ದ. ಪೊಲೀಸರು ಈಗಾಗಲೇ ಓರ್ವ ಅಪ್ರಾಪ್ತನೂ ಸೇರಿದಂತೆ ಹಲವು‌ ಆರೋಪಿಗಳನ್ನು ಬಂಧಿಸಿದ್ದಾರೆ. ಬಾಬಾ ಸಿದ್ದಿಖಿ ಹತ್ಯೆಯ ಹಿಂದೆ ನಿಜವಾಗಿಯೂ ಲಾರೆನ್ಸ್ ಕೈವಾಡವಿದೆಯೇ? ಅಥವಾ ಅವನ ಹೆಸರನ್ನು‌ ಬಳಕೆ ಮಾಡಿಕೊಳ್ಳಲಾಗುತ್ತಿದರಯೇ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.

ಲಾರೆನ್ಸ್ ಬಿಷ್ಣೋಯ್ ಪಂಜಾಬ್ ನ ಫೆರೋಜ್ ಪುರ್ ನವನು. ಅಪ್ಪ ಪೊಲೀಸ್ ಕಾನ್ಸ್ ಟೇಬಲ್. ಆದರೆ ಮಗ ಆರಿಸಿಕೊಂಡಿದ್ದು ಭೂಗತ ಜಗತ್ತನ್ನು. ವಿದ್ಯಾರ್ಥಿ ದೆಸೆಯಲ್ಲೇ ಪುಂಡಾಟಿಕೆ ಆರಂಭಿಸಿದ ಲಾರೆನ್ಸ್ ಗ್ಯಾಂಗ್ ಕಟ್ಟಿದ. ಕೊಲೆ, ಸುಲಿಗೆಗಳಿಗೆ ಇಳಿದ. ಅವನ ಗ್ಯಾಂಗ್ ನಲ್ಲಿ ಈಗ 700 ಮಂದಿ ಶಾರ್ಪ್ ಶೂಟರ್ ಗಳಿದ್ದಾರೆ. ಐದಾರು ರಾಜ್ಯಗಳಲ್ಲಿ ಆತನ ಗ್ಯಾಂಗ್ ಕಾರ್ಯಾಚರಣೆ ನಡೆಸುತ್ತದೆ.

2013ರಲ್ಲಿ ಪದವಿ ಶಿಕ್ಷಣ ಮುಗಿಸಿದ ಲಾರೆನ್ಸ್ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದಿದ್ದ ಮುಕ್ತಸರ್ ಎಂಬಾತನನ್ನು ಗುಂಡಿಟ್ಟು ಕೊಂದು ಹಾಕಿದ. ಅಷ್ಟೇ ಅಲ್ಲ, ಲುಧಿಯಾನದ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ತನ್ನ ಸ್ಪರ್ಧಿಯಾಗಿದ್ದ ಎದುರಾಳಿಯನ್ನು ಗುಂಡಿಟ್ಟು ಕೊಂದ. ಕೊಲೆಗಳನ್ನು ಮಾಡಿ ಭೂಗತನಾಗುತ್ತಿದ್ದ ಲಾರೆನ್ಸ್ ಲಿಕ್ಕರ್ ದಂಧೆಗೆ ಇಳಿದ.‌ ಕೊಲೆಗಡುಕರಿಗೆ ತನ್ನ ಗ್ಯಾಂಗ್ ನಲ್ಲಿ ಆಶ್ರಯ ನೀಡಿದ. ರಾಜಸ್ತಾನ ಪೊಲೀಸರ ಜೊತೆ ಲಾರೆನ್ಸ್ ಗ್ಯಾಂಗ್ ಎನ್ ಕೌಂಟರ್ ಒಂದು ನಡೆದಿತ್ತು. ಈ ಸಂದರ್ಭದಲ್ಲಿ ಲಾರೆನ್ಸ್ ಬಂಧಿತನಾಗಿ ಜೈಲಿಗೆ ಹೋಗಿದ್ದ. ಜೈಲಿಗೆ ಹೋದ ನಂತರ ಲಾರೆನ್ಸ್ ಅಲ್ಲಿಂದಲೇ ಸುಪಾರಿಗಳನ್ನು ಪಡೆದು ಹತ್ಯೆಗಳ ಸರಣಿಯನ್ನೇ ನಡೆಸಿದ.

2018ರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವ ಯತ್ನದ ಶೂಟ್ ಔಟ್ ಒಂದು ಅವರ ನಿವಾಸದ ಬಳಿಯೇ ನಡೆಯಿತು. ಮೊದಲ ಬಾರಿ ಲಾರೆನ್ಸ್ ಹೆಸರು ಇಡೀ ದೇಶದ ಗಮನ ಸೆಳೆಯಿತು. ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ ಸಂಪತ್ ನೆಹ್ರಾ ಎಂಬಾತ, ಲಾರೆನ್ಸ್ ಬಿಷ್ಣೋಯ್ ಸೂಚನೆಯ ಮೇರೆಗೆ ದಾಳಿ‌ ನಡೆಸಿದ್ದಾಗಿ ಹೇಳಿಕೊಂಡಿದ್ದ. ಅಷ್ಟೇ ಅಲ್ಲ, ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಬೇಟೆಯಾಡಿದ ಕಾರಣಕ್ಕೆ ಈ ಕೃತ್ಯ ಎಸಗಿರುವುದಾಗಿ ಹೇಳಿದ್ದ.

ಇದಾದ ನಂತರ ಪೊಲೀಸರ ಜೋಧ್ ಪುರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಲಾರೆನ್ಸ್ ಬಿಷ್ಣೋಯ್ ಕೂಡ ಇದೇ ಮಾತು ಹೇಳಿದ್ದ. ಇಲ್ಲೇ ಜೋಧ್ ಪುರದಲ್ಲೇ ಸಲ್ಮಾನ್ ಖಾನ್ ರನ್ನು ಕೊಲ್ಲುತ್ತೇನೆ. ಪೊಲೀಸರು ನನಗೆ ಅವಕಾಶ ಕೊಟ್ಟರೆ ನಾನು ಮಾಡುವ ಮೊದಲ ಕೆಲಸ ಸಲ್ಮಾನ್ ಖಾನ್ ರನ್ನು ಕೊಲ್ಲುವುದು ಎಂದು ಕೂಗಾಡಿದ್ದ.

2022ರ May 29ರಂದು ಲಾರೆನ್ಸ್ ಬಿಷ್ಣೋಯ್ ಇಡೀ ಪಂಜಾಬ್ ಬೆಚ್ಚಿಬೀಳುವಂಥ ದುಷ್ಕೃತ್ಯ ಎಸಗಿದ. ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಎಂಬುವವರನ್ನು ಗುಂಡಿಟ್ಟು ಕೊಲ್ಲಲಾಯಿತು. ಲಾರೆನ್ಸ್ ಮತ್ತು ಗೋಲ್ಡಿ ಬ್ರಾರ್ ಎಂಬ ಇನ್ನೊಬ್ಬ ಗ್ಯಾಂಗ್ ಸ್ಟರ್ ಸೇರಿ ಈ ಹತ್ಯೆ ಸಂಚು ರೂಪಿಸಿದ್ದರು. ಈ ಹತ್ಯೆ ನಡೆಯುವಾಗ ಲಾರೆನ್ಸ್ ತಿಹಾರ್ ಜೈಲಿನಲ್ಲಿದ್ದ.

ಈಗ ಬಾಬಾ ಸಿದ್ದೀಖಿ ಹತ್ಯೆಯ ಜೊತೆ ಲಾರೆನ್ಸ್ ಹೆಸರು ಥಳುಕು ಹಾಕಿಕೊಂಡಿದೆ. ಕೃಷ್ಣಮೃಗದ ಬೇಟೆಯಂಥ ಕಥೆಯನ್ನು ಹೇಳಲಾಗುತ್ತಿದೆಯಾದರೂ, ಬಾಬಾ ಸಿದ್ದಿಖಿ ಅವರು ಸಲ್ಮಾನ್ ಖಾನ್ ಅವರಿಗೆ ಆಪ್ತರಾಗಿದ್ದರಿಂದ ಕೊಲ್ಲಲಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. 2023ರ ನವೆಂಬರ್ ನಲ್ಲಿ ಗಾಯಕ-ನಟ ಜಿಪ್ಪಿ ಗ್ರೇವಾಲ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಸಲ್ಮಾನ್ ಖಾನ್ ಜೊತೆ ಆತ ಒಡನಾಟ ಇಟ್ಟುಕೊಂಡಿದ್ದರಿಂದಲೇ ಆತನ ಹತ್ಯೆಗೆ ಯತ್ನಿಸಿದ್ದಾಗಿ ಲಾರೆನ್ಸ್ ಬಿಷ್ಣೋಯ್ ಹೇಳಿಕೊಂಡಿದ್ದ.

ಲಾರೆನ್ಸ್ ಬಿಷ್ಣೋಯ್ ಮೇಲೆ ಕನಿಷ್ಠ ಎರಡು ಡಜನ್ ಕ್ರಿಮಿನಲ್ ಕೇಸುಗಳಿವೆ. ಆತ ಜೈಲಿನಲ್ಲೇ ಇದ್ದಾನೆ. ಹೀಗಿದ್ದಾಗ್ಯೂ ಆತ ಗ್ಯಾಂಗ್ ನಡೆಸುತ್ತಿರುವುದು ಹೇಗೆ? ಆತನಿಗೆ ಕಾಣದ ಕೈಗಳು ಬೆಂಬಲಕ್ಕೆ ನಿಂತಿದೆಯೇ? ರಾಜಕೀಯ ಬೆಂಬಲ ಇಲ್ಲದೆ, 700 ಶೂಟರ್ ಗಳ ತಂಡ ಕಟ್ಟಿ ಜೈಲಿನಲ್ಲಿ ಇದ್ದುಕೊಂಡೇ ಕೊಲೆಗಳನ್ನು ನಡೆಸಲು ಸಾಧ್ಯವೇ ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.

More articles

Latest article