ದೇಶದ ಬೇಕು ಬೇಡಗಳನ್ನು ನಿರ್ಧರಿಸಲು ಟ್ರಂಪ್‌ ಗೆ ಅಧಿಕಾರ ಕೊಟ್ಟಿದ್ದು ಏಕೆ? : ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

Most read

ಬೆಂಗಳೂರು: ಯುದ್ದ ಮಾಡಬೇಕೆ ಬೇಡವೇ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಮಾಡುತ್ತಾರೆ ಎಂದಾದರೆ ಇದು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ. ಜೊತೆಗೆ ಸೈನಿಕರ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಎಂದು ಕಾಂಗ್ರೆಸ್‌ ಮುಖಂಡ  ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪ ಮಾಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಅವರು ಮಾತನಾಡಿದರು.

ಭಯೋತ್ಪಾದಕ ದಾಳಿ ನಡೆಸಿದ ಪಾಕಿಸ್ತಾನಕ್ಕೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಬೆಂಬಲ ನೀಡಲಾಗುವುದು ಎಂದು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ತೀರ್ಮಾನ ಮಾಡಿತ್ತು. ದಾಳಿ ನಡೆಸಿದ ಭಯೋತ್ಪಾದಕರು ಎಲ್ಲಿಗೆ ಹೋದರು ಎನ್ನುವ ಮಾಹಿತಿಯೂ ದೊರೆತಿಲ್ಲ.  ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಜಂಟಿ ಸದನವನ್ನು ಕರೆದು ಈ ಪಾಕಿಸ್ತಾನದ ದಾಳಿ ವಿಚಾರದ ಬಗ್ಗೆ ಚರ್ಚೆ ನಡೆಸುವಂತೆ ತಿಳಿಸಿದರು. ಈ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಯುದ್ಧವನ್ನು ಮಾಡುವ ಮೊದಲು ಎಲ್ಲಾ ಪಕ್ಷಗಳ ಅಭಿಪ್ರಾಯ ಪಡೆಯಲಿಲ್ಲ. ಜೊತೆಗೆ ಸರ್ವ ಪಕ್ಷ ಸಭೆಗೆ ಪ್ರಧಾನಿಯವರು ಗೈರು ಹಾಜರಾಗಿದ್ದರು ಎಂದು ಟೀಕಿಸಿದರು.

ಪ್ರಧಾನಿ ಮೋದಿ ಅವರು ಪಹಲ್ಗಾಮ್ ದಾಳಿ ‌ ನಡೆದ ನಂತರ ಬಿಹಾರಕ್ಕೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದರು, ಕೇರಳಕ್ಕೆ ಹೋಗಿದ್ದರು. ಇದನ್ನು ನೋಡಿದಾಗ ಅವರಿಗೆ ಯಾವುದು ಮುಖ್ಯ ಎಂಬುದು ಗೊತ್ತಾಗುತ್ತದೆ. ಸರ್ವಪಕ್ಷ ಸಭೆ ನಡೆದಾಗ ಪ್ರಧಾನಿಗಳು ಸಂದೇಶ ನೀಡಬೇಕು ಆದರೆ ಅವರು ನೀಡುತ್ತಾರೆಯೇ ಗೊತ್ತಿಲ್ಲ ಎಂದರು.

1982 ಜುಲೈ 2 ರಂದು ಇಂದಿರಾಗಾಂಧಿ ಅವರು ಪಾಕಿಸ್ತಾನದ ಪ್ರಧಾನಿ ಬುಟ್ಟೋ ಅವರೊಂದಿಗೆ ಶಿಮ್ಲಾ ಒಪ್ಪಂದ ಮಾಡಲಾಗಿತ್ತು. ಈ ಒಪ್ಪಂದದ ಪ್ರಕಾರ ಈ ಎರಡು ರಾಷ್ಟ್ರಗಳ ಸಮಸ್ಯೆಗಳಿಗೆ ಯಾವುದೇ ಮೂರನೇ ರಾಷ್ಟ್ರ ತಲೆ ಹಾಕಬಾರದು ಎಂದು ಹೇಳಲಾಗಿತ್ತು. ಆದರೆ ಈಗ ಏನಾಯಿತು  ಎಂದು ಪ್ರಶ್ನಿಸಿದರು.

ಮಾನ್ಯ ಪ್ರಧಾನಿ ಮೋದಿಯವರು ವಿಶ್ವಗುರು ಎಂದು ಓಡಾಡುತ್ತಿದ್ದಾರೆ. ಆದರೆ ಟ್ರಂಪ್ ವಿಶ್ವಗುರುವಾಗಿ ಹೊರಹೊಮ್ಮಿದ್ದಾರೆ.  ಟ್ರಂಪ್ ಹೇಳಿದಂತೆ ಯಾರ ಬಳಿ ತೈಲ ಖರೀದಿ‌ಮಾಡಬೇಕು, ಯಾರ ಬಳಿ ಫೈಟರ್ ಜೆಟ್ ಖರೀದಿ ಮಾಡಬೇಕು. ಯಾವ ಟ್ಯಾರಿಫ್ ಹಾಕಬೇಕು, ಟೆಸ್ಲಾ ಭಾರತಕ್ಕೆ ಬರಬೇಕೆ ಬೇಡವೇ ಎಂದು ಯಾರು ನಿರ್ಧಾರ ಮಾಡಬೇಕು ಎಂಬುದನ್ನು ಟ್ರಂಪ್ ಕೈಗೆ ಕೊಟ್ಟಂತಿದೆ ಎಂದು ಹರಿಪ್ರಸಾದ್‌ ದೂರಿದರು.

ಐಎಂಎಫ್ ಅವರು ಪಾಕಿಸ್ತಾನಕ್ಕೆ 1.2 ಬಿಲಿಯನ್ ಸಾಲ‌ ನೀಡುತ್ತಾರೆ. ಇದನ್ನು ದೇಶದಿಂದ ನಿಲ್ಲಿಸಲು ಸಹ ಆಗಲಿಲ್ಲ. ನಮ್ಮ ಪರವಾಗಿ ಇದ್ದಂತಹ ಟರ್ಕಿ, ಇರಾನ್,‌ ಸೌಧಿ ಅರೇಬಿಯಾ ದೇಶಗಳು ನಮ್ಮ‌ ಪರವಾಗಿ ಮಾತನಾಡದೇ ಇದ್ದಿದ್ದು ನೋಡಿದರೆ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ.   ಅಮೇರಿಕಾದ ‌ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳುತ್ತಾರೆ. ನರಂತರ 48 ಗಂಟೆಗಳ ಕಾಲ ಪಾಕಿಸ್ತಾನ ಹಾಗೂ ಭಾರತದ ನಡುವೆ ಮಾತುಕತೆ ನಡೆಸಿ ಈ ಕದನ ವಿರಾಮಕ್ಕೆ ಹೆಜ್ಜೆ ಇಡಲಾಗಿದೆ. ಪಾಕಿಸ್ತಾನದ ಪ್ರಧಾನಿ ಶಹಬಾದ್ ಷರೀಫ್, ವಿದೇಶಾಂಗ ಸಚಿವ ಅಸೀಮ್ ಮುನೀರ್, ದೇಶದ ಪ್ರಧಾನಿ ನರೇಂದ ಮೋದಿ, ವಿದೇಶಾಂಗ ಸಚಿವ ಜೈ ಶಂಕರ್ ಅವರ ಜೊತೆ ಮಾತುಕತೆ ನಡೆಸಲಾಗಿದೆ ಎಂದಿದ್ದಾರೆ‌. ಇದು ದೇಶದ ಗೌರವ ಉಳಿಸುವ ಮಾದರಿಯೇ ಎಂದು ವಾಗ್ದಾಳಿ ನಡೆಸಿದರು.

ಕದನ ವಿರಾಮ ತಂತ್ರವಿರಬಹುದಲ್ಲವೇ ಎಂದು ಕೇಳಿದಾಗ, “ಸಮಸ್ಯೆ ಇರುವದು ಪಾಕಿಸ್ತಾನ ಮತ್ತು ಭಾರತದ ನಡುವೆ. ಇದನ್ನು ಇನ್ನೊಬ್ಬರು ಬಗೆಹರಿಸಬೇಕೇ?. ಶಿಮ್ಲಾ ಒಪ್ಪಂದದ ಪ್ರಕಾರ ವಿಶ್ವಸಂಸ್ಥೆಯೂ ಮೂಗು ತೂರಿಸುವಂತಿಲ್ಲ ಎಂದು ಒಪ್ಪಂದವಾಗಿದೆ. ಸರ್ವ ಪಕ್ಷ ಸಭೆ ಕರೆದು ಈ ತೀರ್ಮಾನ ಪಡೆದುಕೊಳ್ಳಬೇಕಿತ್ತು. ಆದರೂ ಏಕೆ ಮೂಗು ತೂರಿಸಲು ಅವಕಾಶ ನೀಡಿದಿರಿ ಎಂದು ಪ್ರಶ್ನೆ ಮಾಡುತ್ತಿದ್ದೇನೆ. ವಿದೇಶಾಂಗ ನೀತಿಯಲ್ಲಿ ಮೋದಿಯವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಯಾರ ಒತ್ತಡಕ್ಕೆ ಒಳಗಾಗಿ ಹೀಗಾಗಿದ್ದಾರೆ ಎಂದು ಮೋದಿ ಅವರು ಹೇಳಬೇಕು ಎಂದರು.

ಯುದ್ಧ ವಿರಾಮದಿಂದ ಕಾಶ್ಮೀರದವರು ಬೇಸರವಾಗಿದ್ದಾರೆ. ಇಡೀ ದೇಶವೇ ಬೇಸರವಾಗಿದೆ. ಪಾಕಿಸ್ತಾನದವರು ಭಾರತದ ಕಡೆ ಕಣ್ಣೆತ್ತಿ ಮಾಡದಂತೆ ಆಗುತ್ತದೆ ಎಂದು ದೇಶದ ನಿವಾಸಿಗಳು ಕಾದಿದ್ದರು. ಆದರೆ ಈಗ ಏಕೆ ಈ ರೀತಿಯಾಗಿದೆ ಎಂದು ಮೋದಿ ಅವರು ಉತ್ತರಿಸಬೇಕು. ಕೂಡಲೇ ಜಂಟಿ ‌ಸದನ ಕರೆದು ಮಾತನಾಡಬೇಕು ಎಂದು ಒತ್ತಾಯಿಸಿದರು.

More articles

Latest article