ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಆರೋಪಿ ಯಾರು ಎನ್ನುವುದನ್ನು ಸ್ಪಷ್ಟಪಡಿಸುವಂತೆ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಸಮಿತಿ ಆಗ್ರಹ ಪಡಿಸಿದೆ. ಪ್ರಕರಣದ ತನಿಖೆಯನ್ನು ಪ್ರಶ್ನಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಬಂಧಿತ ವ್ಯಕ್ತಿಗೂ ಹಾಗೂ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿರುವ ವ್ಯಕ್ತಿಗೂ ಸಾಮ್ಯತೆ ಇದೆಯೇ? ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.
ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಮೂಲದ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸೈಫ್ ಅವರ ನಿವಾಸಕ್ಕೆ ಶೆಹಜಾದ್ ಕಳ್ಳತನದ ಉದ್ದೇಶದಿಂದ ಪ್ರವೇಶಿಸಿದ್ದ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಈ ಬಗ್ಗೆ ಬಂಗಾಳಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಶರೀಫುಲ್ ತಂದೆ ಮೊಹಮ್ಮದ್ ರುಹುಲ್ ಅಮೀನ್ ಫಕೀರ್, ರಾಜಕೀಯ ಬಿಕ್ಕಟ್ಟಿನ ಕಾರಣ ನನ್ನ ಮಗ ಬಾಂಗ್ಲಾದೇಶವನ್ನು ತೊರೆದು ಉದ್ಯೋಗ ಹುಡುಕಿಕೊಂಡು ಭಾರತಕ್ಕೆ ತೆರಳಿದ್ದಾನೆ. ಆತನ ಬಳಿ ಯಾವುದೇ ಅಗತ್ಯ ದಾಖಲೆಗಳಿಲ್ಲ. ಅಲ್ಲಿ ಯಾರೋ ಒಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ, ಆತನನ್ನು ಬಂಧಿಸಲಾಗಿದೆ. ಆದರೆ ಸಿಸಿಟಿವಿಯಲ್ಲಿರುವ ವ್ಯಕ್ತಿ ನನ್ನ ಮಗ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ. ಈ ಬೆಳವಣಿಗೆಗಳು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಹಾಗಾಗಿ ಮುಂಬೈ ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಪಟೋಲೆ ಆಗ್ರಹಿಸಿದ್ದಾರೆ.