ಫೈನಾನ್ಸ್ ವ್ಯವಸ್ಥೆ ಮಹಿಳೆಯರ, ಮಾನಸಿಕ, ಸಾಮಾಜಿಕ ಸ್ಥಿತಿಯನ್ನು ತೀರಾ ಕೆಳಮಟ್ಟಕ್ಕೆ ಇಳಿಯುವಂತೆ ಮಾಡಿರುವುದು ಎಲ್ಲರ ಗಮನಕ್ಕೂ ಬಂದಿದೆ. ಮಹಿಳೆ ದಿನ ಪೂರ್ತಿ ದುಡಿದು, ಅಥವಾ ನಾಲ್ಕು ಗೋಡೆಯೊಳಗೆ ಇದ್ದಂತಹ ಹೆಣ್ಣುಮಕ್ಕಳು ಒಂದೆಡೆ ಸೇರಿ, ಸುಖದುಃಖ, ಭಾವನೆಗಳನ್ನು ಹಂಚಿಕೊಳ್ಳಲು, ವೇದಿಕೆಯಾಗಿದ್ದ ಸಂಘಗಳು ಇಂದು ಹೊರೆಯಾಗಿ ಮಹಿಳೆಯರ ಮೇಲೆರಗಿವೆ. ಒಂದು ದಿನ ಕೂಲಿ ಸಿಗದಿದ್ದರೆ ಸಂಘಕ್ಕೆ ಹಣ ಹೇಗೆ ಕಟ್ಟುವುದು ಎಂಬುದರ ಬಗ್ಗೆ ಚಿಂತೆಗೊಳಗಾಗುತ್ತಿದ್ದಾಳೆ. ಅಗೌರವದ ಮಾತುಗಳಿಗೆ ಈಡಾಗುತ್ತಿದ್ದಾಳೆ – ಮಂಗಳ ಎಸ್ – ಯಶವಂತಪುರ
ಸುಮಾರು ಮೂವತ್ತು ವರ್ಷದ ಹಿಂದೆ ಹೊಲದಿಂದ ದುಡಿದು ಬಂದ ನನ್ನವ್ವ ಪ್ರತಿ ಸೋಮವಾರ ನಮ್ಮೆಲ್ಲರಿಗೂ ಉಣಬಡಿಸಿ ಕೈಯಲ್ಲೊಂದು ಪುಸ್ತಕ ಹಿಡಿದು ಸ್ವ ಸಹಾಯ ಸಂಘದ ಮನೆ ಕಡೆ ಹೊರಡುತಿದ್ದಳು. ನನ್ನಂತೆ ಶಾಲೆ ಕಾಲೇಜು ಹತ್ತದಿದ್ದರೂ ಅವಳ ಹೆಸರು ಬರೆಯುವುದನ್ನು ಕಲಿತೇ ಬಿಟ್ಟಿದ್ದಳು. ಅಕ್ಷರಗಳು ಗುಂಡಗಿಲ್ಲದಿದ್ದರೂ, ಒತ್ತು, ದೀರ್ಘಗಳು ಒಂದಕ್ಕೊಂದು ಸ್ಪಂದಿಸದಿದ್ದರೂ ಇದು ನನ್ನವ್ವನ ಹೆಸರೆಂದು ಗೊತ್ತಾಗುತಿತ್ತು. ಸಂಘದಲ್ಲಿ ಅವಳ ಸಹಿಗೆ ಒಂದು ರೀತಿಯ ಗೌರವ, ನಾನೇ ಬರೆದಿದ್ದು ಎಂಬ ಬಿಗುಮಾನ ಅವಳ ಮುಖದಲ್ಲಿ ಕಾಣುತಿತ್ತು. ಮೈರಾಡ ಸಂಸ್ಥೆ, ಮಹಿಳಾ ಸಮಖ್ಯಾ- ಕರ್ನಾಟಕದಂತಹ ಇನ್ನೂ ಹಲವಾರು ಸಂಘ ಸಂಸ್ಥೆಗಳು ಮಹಿಳೆಯರ ಸಬಲೀಕರಣಕ್ಕಾಗಿ ಹಾಕಿದ್ದ ಶ್ರಮ ಕಣ್ಣೊಳಗೆ ಇನ್ನೂ ಮಾಸಿಲ್ಲ.
ನಾವೆಲ್ಲಾ ಕೂಡಿ ಕಳೆಯುವ ಲೆಕ್ಕವನ್ನು ಕಲಿಯಲು ವರ್ಷಗಳೇ ತೆಗೆದುಕೊಂಡಿದ್ದೇವೆ. ಆದರೆ ವಾರಕ್ಕೆ ಎರಡು ರೂಪಾಯಿ ಉಳಿತಾಯ ಮಾಡುವ ನನ್ನ ಅವ್ವನಿಗೆ ಆಗಲೇ ಅಸಲು ಬಡ್ಡಿಗಳ ಬಗ್ಗೆ ಅರಿವಿತ್ತು. ಪ್ರತಿವರ್ಷ ಬೆಳೆಸಾಲ ಎಂದು ಯಾವುದೇ ಅಡಮಾನವಿಲ್ಲದೇ ಸಾಲದ ವ್ಯವಸ್ಥೆ ಇತ್ತು. ಅದಕ್ಕೆ ಸಂಘದ ಎಲ್ಲ ಸದಸ್ಯರೂ ಪಾಲುದಾರರಾಗಿರುತ್ತಿದ್ದರು. ಕುಟುಂಬದ ಭದ್ರತೆಗಾಗಿ, ಕೆಲವು ನಿಮಯಗಳ ಅಡಿಯಲ್ಲಿ ಆ ಸಾಲದ ಹಣವನ್ನು ಬಳಸಬೇಕೆಂಬುದನ್ನು ಸಂಘದಿಂದ ಕಲಿತಿದ್ದರು. ಬಸ್ಸಿಗಾಗಿ, ರಸ್ತೆಗಾಗಿ, ಬಾಲ್ಯವಿವಾಹದ ತಡೆಗಾಗಿ ಆ ಕಾಲದಲ್ಲೆ ನನ್ನವ್ವ ಹೋರಾಟಗಳನ್ನು ಮಾಡಿದ್ದಳು. ಒಗ್ಗಟ್ಟಿನಲ್ಲಿರುವ ಶಕ್ತಿ ಎಂತದ್ದು ಎಂದು ಆ ಊರಿನ ಸಂಘದ ಮಹಿಳೆಯರಿಗೆ ಬಲವಾಗಿ ಗೊತ್ತಿತ್ತು. ಅದರ ಪ್ರತಿಫಲವಾಗಿ ಇವತ್ತು ನಮ್ಮೂರಿಗೆ ಬಸ್ ಬಂದಿದೆ. ಅವರ ಆ ದಿನದ ಹೋರಾಟದಿಂದ ಇಂದು ನಾವೆಲ್ಲರೂ ಕಾಲೇಜು ಮೆಟ್ಟಿಲೇರಲು, ಉದ್ಯೋಗಗಳನ್ನು ಹುಡುಕಲು ಸಾಧ್ಯವಾಗಿದೆ. ಅವರ ಋಣ ಇನ್ನೂ ನಮ್ಮ ಮೇಲಿದೆ.
ಆದರೆ, ಇಂದು ಆ ರೀತಿಯ ಸಂಘ ಒಗಟ್ಟು, ಹೋರಾಟಗಳನ್ನು ಈಗಿನ ಪೀಳಿಗೆಗೆ ತೋರಿಸಲು ಸಾಧ್ಯವಾಗುತ್ತಿಲ್ಲ. ಎಲ್ಲಿ ಹೋದವು ಆ ದಿನಗಳು? ಎಲ್ಲಿ ಹೋದವು ಅಂತಹಾ ಸಂಘಗಳು? ಮಹಿಳಾ ಸಬಲೀಕರಣದ ಹಾದಿ ಮಸುಕಾಗಿದೆಯಾ? ಈ ಪ್ರಶ್ನೆಗಳು ಜಟಿಲವಾಗಿವೆ. ಯಾಕೆಂದರೆ, ಬಡವರಿಗೆ ಸಾಲ ಸಿಗುವ ವ್ಯವಸ್ಥೆಗಳು ಆಗ ಇರಲಿಲ್ಲ. ಬಡವರು ಅಥವಾ ತಳ ಸಮುದಾಯದ ಜನತೆ ಹಣದ ಅವಶ್ಯಕತೆ ಇದ್ದಾಗ ಕುಟುಂಬದ ನೆರವಿಗೆ ಇದ್ದ ಸಣ್ಣ ತುಣುಕು ಜಮೀನನ್ನು ಉಳ್ಳವರ ಬಳಿ ಅಡವಿಟ್ಟು ಸಾಲ ಪಡೆಯಬೇಕಿತ್ತು. ನಿಯಂತ್ರಣವಿಲ್ಲದ ಬಡ್ಡಿ- ಅಸಲು ಕಟ್ಟಲಾಗದ ಎಷ್ಟೋ ಜಮೀನು ಉಳ್ಳವರ ಪಾಲಾಯಿತು. ಅಂತಹ ಸಮಯದಲ್ಲಿ ಸ್ವ ಸಹಾಯ ಸಂಘಗಳು ತಳ ಸಮುದಾಯದ ಏಳಿಗೆಗೆ ಸಾಲ ನೀಡುವ ಮುಖಾಂತರ ಸಾಕಷ್ಟು ಹೆಣ್ಣು ಮಕ್ಕಳು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ, ಹಸು ಕುರಿ ಕೊಂಡುಕೊಂಡು ಜೀವನ ಕೌಶಲ್ಯವನ್ನು ಕಲಿತು ಉತ್ತಮ ಜೀವನ ನಡೆಸಲು ಮುಂದಾದ ಮಹಿಳೆಯರು ಸಾಕಷ್ಟು ಮಂದಿ ಇದ್ದರು.
ಇನ್ನು ಆ ಒಗಟ್ಟಿನಲ್ಲಿದ್ದ ಕ್ರಿಯಾಶೀಲತೆಗೇನೂ ಕೊರತೆ ಇರಲಿಲ್ಲ. ಒಟ್ಟಿಗೇ ಸೇರಿ, ಹಪ್ಪಳ, ಉಪ್ಪಿನಕಾಯಿ ಮಾಡುವ, ಬೇರೆ ಬೇರೆ ಕಡೆ ಕಲಿಕಾ ಪ್ರವಾಸಗಳನ್ನು ಕೈಗೊಂಡು ಬೇರೆ ಸಂಘಗಳ ಬಗ್ಗೆ ತಿಳಿಯುವ, ಅವರೊಂದಿಗೆ ಬೆರೆಯುವ ಎಲ್ಲ ಚಟುವಟಿಕೆಗಳನ್ನು ನೆನೆಸಿಕೊಂಡರೆ ಈಗಲೂ ಮೈ ನವಿರೇಳುತ್ತದೆ. ಯಾವುದೇ ಸಂಗೀತ ತರಬೇತಿ ಪಡೆಯದ ನಮ್ಮ ಅಜ್ಜಿಯಂದಿರು ಹಾಡುತಿದ್ದ ಸೋಬಾನೆ, ಜೋಗುಳ ಪದ, ನಾಟಿ ಹಾಕುವಾಗ ಸೊಲ್ಲು ಪದ ಸೇರಿ ಹಾಡುತಿದ್ದ ಉತ್ತರದೇವಿ ಪದಗಳು ಈ ದಿನ ಹುಡುಕಿದರೂ ಸಿಗದೆ ಮೂಲೆ ಸೇರಿವೆ. ವೇದಿಕೆಯ ಮೇಲೆ ನಾವು ಮಾತನಾಡಲು ಹೋದರೆ ಕೈ ಕಾಲು ನಡುಗುತ್ತದೆ. ಆದರೆ, ಅವರು ಪ್ರತಿ ಸಭೆಯಲ್ಲಿ ಸ್ವಾಗತ, ಪ್ರಾರ್ಥನೆ, ವಿಷಯಗಳ ಬಗ್ಗೆ ಚರ್ಚೆ ಮಾಡುತಿದ್ದ ಪರಿ ಅವಿಸ್ಮರಣೀಯ. ಇದನ್ನೆಲ್ಲ ಹೇಳಿಕೊಡಲು ಈಗ ಯಾರೂ ಇಲ್ಲ. ಅಂತಹ ಸದಸ್ಯೆಯರು ಮರೆಯಾಗಿದ್ದಾರೆ. ಸಮಾಜ ಅವರನ್ನ ಗುರುತಿಸಲಾಗದ ಮಟ್ಟಕ್ಕೆ ಅವರು ತಳ ಸೇರಿದ್ದಾರೆ.
ಇಷ್ಟೆಲ್ಲ ನೋಡಿದಾಗ ಏನಾಯಿತು ಸಂಘಗಳಿಗೆ? ಎಂಬ ಆತಂಕದ ಪ್ರಶ್ನೆ ಎದುರಾಗದೆ ಇರದು. ಈದಿನ ಸಂಘ, ಒಗ್ಗಟ್ಟು, ಎಲ್ಲವೂ ನಿಧಾನವಾಗಿ ಹಿಂದೆ ಸರಿಯೋದಕ್ಕೆ ಕಾರಣವೇ ಇತ್ತೀಚೆಗೆ ಅಣಬೆಗಳಂತೆ ತಲೆ ಎತ್ತಿದ ಮೈಕ್ರೋ ಫೈನಾನ್ಸ್ ವ್ಯವಸ್ಥೆಗಳು. ಹಾಗಂತ ಮಹಿಳೆಯರಿಗೆ ಇದರಿಂದ ಉಪಯೋಗವೇ ಆಗಿಲ್ಲವೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ಅನುಕೂಲಗಳು ಇದ್ದರೂ ಇದು ಸಂಘದ ಮೌಲ್ಯಗಳಿಗೆ, ಸಂಘದ ಗೌರವಕ್ಕೆ ತೆರೆ ಎಳೆದು ಬಿಟ್ಟಿತು ಎಂದರೆ ತಪ್ಪಾಗಲಾರದು. ಫೈನಾನ್ಸ್ ವ್ಯವಸ್ಥೆ ಮಹಿಳೆಯರ, ಮಾನಸಿಕ, ಸಾಮಾಜಿಕ ಸ್ಥಿತಿಯನ್ನು ತೀರಾ ಕೆಳಮಟ್ಟಕ್ಕೆ ಇಳಿಯುವಂತೆ ಮಾಡಿರುವುದು ಎಲ್ಲರ ಗಮನಕ್ಕೂ ಬಂದಿದೆ. ಮಹಿಳೆ ದಿನ ಪೂರ್ತಿ ದುಡಿದು, ಅಥವಾ ನಾಲ್ಕು ಗೋಡೆಯೊಳಗೆ ಇದ್ದಂತಹ ಹೆಣ್ಣುಮಕ್ಕಳು ಒಂದೆಡೆ ಸೇರಿ, ಸುಖದುಃಖ, ಭಾವನೆಗಳನ್ನು ಹಂಚಿಕೊಳ್ಳಲು, ವೇದಿಕೆಯಾಗಿದ್ದ ಸಂಘಗಳು ಇಂದು ಹೊರೆಯಾಗಿ ಮಹಿಳೆಯರ ಮೇಲೆರಗಿದೆ. ಒಂದು ದಿನ ಕೂಲಿ ಸಿಗದಿದ್ದರೆ ಸಂಘಕ್ಕೆ ಹಣ ಹೇಗೆ ಕಟ್ಟುವುದು ಎಂಬುದರ ಬಗ್ಗೆ ಮಹಿಳೆ ಚಿಂತೆಗೊಳಗಾಗುತ್ತಿದ್ದಾಳೆ. ಅಗೌರವದ ಮಾತುಗಳಿಗೆ ಈಡಾಗುತ್ತಿದ್ದಾಳೆ. ಪರಿಸ್ಥಿತಿ ಕೈ ಮೀರಿದಾಗ ಸಾವನ್ನು ಮುಟ್ಟಿದ ಉದಾಹರಣೆಗಳು ಸಾಕಷ್ಟಿವೆ. ಹಾಗಾದರೆ ಮಹಿಳೆಯರಿಗೆ ಅರಿವಿರಲಿಲ್ಲವೇ ಎಂಬ ಪ್ರಶ್ನೆಗಳು ಹಲವರಲ್ಲಿ ಮೂಡಬಹುದು. ಆದರೆ ಅವಕಾಶಗಳು ಇದೆ ಎಂದಾಗ ತಾನು ಅದರಲ್ಲಿ ಪಾಲುದಾರಳಾ/ನಾಗಬೇಕು ಎಂಬ ಭಾವನೆ ಯಾರಿಗೆ ತಾನೆ ಬರಲ್ಲ?
ಮೊದಲಿನ ಸ್ವ ಸಹಾಯ ಗುಂಪುಗಳಿಗೆ ಅವರ ಆದಾಯಕ್ಕನುಗುಣವಾಗಿ ಸಾಲವನ್ನು ನಿಗದಿ ಮಾಡಲಾಗುತ್ತಿತ್ತು. ಬಡ್ಡಿ ಕಡಿಮೆ ದರದಲ್ಲಿ ಹೊರೆಯಾಗದಂತೆ ಇತ್ತು. ಆದರೆ, ಈ ಫೈನಾನ್ಸ್ ಸಂಘಕ್ಕೆ ಸಾಲ ಕೊಡುವ ಬದಲಾಗಿ ವ್ಯಕ್ತಿಗೆ ಸಾಲ ಕೊಡಲು ಮುಂದಾಯಿತು. ಇದರಿಂದ ಒಗ್ಗಟ್ಟಿನ ಮೇಲೆ ಬಲವಾದ ಪೆಟ್ಟು ಬಿತ್ತು. ಮಹಿಳೆಯರು ಒಟ್ಟಾಗಿ ಕೂತು ಮಾತಾಡುವ, ಸಮಸ್ಯೆಗಳನ್ನು ಹಂಚಿಕೊಳ್ಳುವ ಅವಕಾಶವನ್ನು ಕೈ ಚೆಲ್ಲುವಂತಾಯ್ತು.. ಸಾಲ ಮರುಪಾವತಿ ಶಕ್ತಿ ಇದೆ ಎಂದು ಮೂರು ನಾಲ್ಕು ಸಂಘದಲ್ಲಿ ಸಾಲ ಪಡೆದ ಮಹಿಳೆಗೆ ಕುಟುಂಬದ ಸಹಕಾರ ಸಿಗದಿದ್ದಾಗ, ಅದನ್ನು ನಿಭಾಯಿಸಲು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹಣಕಾಸು ವ್ಯವಹಾರವನ್ನು ಮಾಡಲು ಹೋಗಿ, ಇನ್ನೂ ಅಧಿಕ ಸಾಲವನ್ನು ತಲೆ ಮೇಲೆ ಹೊತ್ತುಕೊಳ್ಳುವಂತಾಯ್ತು. ಒಗ್ಗಟ್ಟು ಇದ್ದಿದ್ದರೆ ಅವಳಿಗೆ ಅಷ್ಟು ಹಣ ನಿಭಾಯಿಸುವ ಸಾಮರ್ಥ್ಯ ಇದೆಯಾ? ಎಂದು ಚರ್ಚಿಸಿ ಸಾಲದ ಹೊರೆ ಕಡಿಮೆ ಮಾಡುವ ಶಕ್ತಿ ಸಂಘಕ್ಕೆ ಇತ್ತು. ಆದರೆ ಈಗ ಮಹಿಳೆ ಒಂಟಿಯಾಗಿದ್ದಾಳೆ. ಆದಾಯ ಬರುವ ಚಟುವಟಿಕೆಗಳಿಗೆ ಸಾಲ ತೆಗೆದುಕೊಳ್ಳಿ ಎಂಬ ಅರಿವಿದ್ದ ಸಂಘದ ಪರಿಕಲ್ಪನೆ ಹೋಗಿ, ಐಷಾರಾಮಿ ಜೀವನಕ್ಕೂ ಸಾಲ ಮಾಡಿ ಅದನ್ನು ತೀರಿಸಲು ಹೆಣಗಾಡುವಂತಾಗಿದೆ. ದುಡಿದ ಕೂಲಿ ಹಣವನ್ನೆಲ್ಲ ಫೈನಾನ್ಸ್ ಗೆ ಕಟ್ಟಬೇಕಾದ ಪರಿಸ್ಥಿತಿಗೆ ತಲುಪಿದ್ದಾಳೆ.
ಮಹಿಳೆಯರ ಸ್ವ ಸಹಾಯ ಸಂಘಗಳನ್ನು ಹಿಂತಿರುಗಿ ನೋಡಬೇಕಾದ ಅನಿವಾರ್ಯತೆ ಇಂದು ಬಂದಿದೆ. ಸಬಲೀಕರಣಕ್ಕಾಗಿ, ತನ್ನ ದು:ಖ ದುಮ್ಮಾನಗಳನ್ನು ಹಂಚಿಕೊಳ್ಳಲು ಹೆಣ್ಣು ಮಕ್ಕಳ ಹೆಗಲುಗಳು ಬೇಕಾಗಿವೆ. ವಯಸ್ಸಿನ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಸೆದೆಬಡಿಯಲು ಮಹಿಳೆಯರು ದೃಢವಾಗಿ ನಿಲ್ಲಬೇಕಿದೆ. ಸ್ವ ಸಹಾಯ ಸಂಘಗಳ ಪರಿಕಲ್ಪನೆಯನ್ನು ಅರ್ಥಮಾಡಿಕೊಂಡು ಮತ್ತೊಮ್ಮೆ ಅದನ್ನೇ ಅನುಸರಿಸಬೇಕಿದೆ,
ಮಂಗಳ ಎಸ್ – ಯಶವಂತಪುರ
ಇದನ್ನೂ ಓದಿ – ಒಳಮೀಸಲಾತಿ: ಅಲೆಮಾರಿಗಳಿಗೂ ಇತರರಿಗೂ ಒಂದೇ ಮಾನದಂಡ ಸಲ್ಲದು