“ಮಾತು ಮಾನ ಕಳೆದುಕೊಂಡಾಗ…”

Most read

ಕೆಲವು ದಿನಗಳ ಹಿಂದೆ ಕನ್ನಡ ಪ್ರಮುಖ ಸುದ್ದಿವಾಹಿನಿಯೊಂದು ತನ್ನ ಫೇಸ್ಬುಕ್ ಪೇಜಿನಲ್ಲಿ, ಸುದ್ದಿಯ ರೂಪದಲ್ಲಿ ಅಪಸವ್ಯವೊಂದನ್ನು ಪ್ರಕಟಿಸಿತ್ತು. “ಮುದ್ದಾಡುವಾಗ ಸಿಕ್ಕಿಬಿದ್ದ ಕನ್ನಡ ಕಿರುತೆರೆಯ ಮಹಿಳಾ ಸೆಲೆಬ್ರಿಟಿ” ಎಂಬರ್ಥದ ಶೀರ್ಷಿಕೆಯಲ್ಲಿ ಅದು ಪ್ರಕಟವಾಗಿತ್ತು.

ದೀರ್ಘ ಲೇಖನ ರೂಪದಲ್ಲಿರುವ ಈ ಬರಹವು ಶುರುವಾಗುವುದು ಹೀಗೆ: “ಇವರು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ತೊಡಗಿಸಿಕೊಂಡಿರುವ ಪ್ರಖ್ಯಾತ ಮಹಿಳಾ ಸೆಲೆಬ್ರಿಟಿ. ಇದು ಇವರ ಹೆಸರು. ಇವರಿಗೆ ಇಂತಿಂಥಾ ಕೌಟುಂಬಿಕ ಹಿನ್ನೆಲೆಯಿದೆ. ಇವರು ಯಾರೆಂದು ತಿಳಿದಿಲ್ಲದವರು ಇಡೀ ಕರ್ನಾಟಕದಲ್ಲಿ ಒಬ್ಬರೂ ಇರಲಿಕ್ಕಿಲ್ಲ. ಅಷ್ಟು ಪ್ರಖ್ಯಾತರಿವರು.

“ಕಿರುತೆರೆಯ ಪರದೆಯಲ್ಲಿ ಇವರು ಬಂದುಬಿಟ್ಟರೆ ಎಲ್ಲಿಲ್ಲದ ಎನರ್ಜಿಯನ್ನು ತಂದುಬಿಡುತ್ತಾರೆ. ಇವರ ಪರ್ಫಾಮೆನ್ಸ್ ಹೇಗಿರುತ್ತದೆಂದರೆ ನಮ್ಮ ಕನ್ನಡದ ವೀಕ್ಷಕರನ್ನು ಇವರು ಇನ್ನಿಲ್ಲದಂತೆ ಮನರಂಜಿಸಬಲ್ಲರು. ಇವರ ಮಗು ಮನಸ್ಸು ಅದೆಷ್ಟು ಮೃದುವೆಂದರೆ ತಮ್ಮ ಶೋಗಳಲ್ಲಿ ಭಾವನಾತ್ಮಕ ಕ್ಷಣಗಳು ಬಂದಾಗಲೆಲ್ಲ ಇವರು ನಿಂತಲ್ಲೇ ಕಣ್ಣೀರಾಗಿ ಬಿಡುತ್ತಾರೆ. ಅಷ್ಟೇ ಅಲ್ಲ, ನಮ್ಮ ವೀಕ್ಷಕರ ಕಣ್ಣನ್ನೂ ಮಂಜಾಗಿಸಿ ಬಿಡುತ್ತಾರೆ.

“ಇವರು ಯಾವಾಗ ಮದುವೆಯಾಗುತ್ತಾರೆ ಎಂಬುದು ಇವರ ಅಭಿಮಾನಿಗಳೆಲ್ಲರ ಪ್ರಶ್ನೆ. ಆದರೆ ಇವರು ಈ ಬಗ್ಗೆ ಈವರೆಗೂ ಗುಟ್ಟು ಬಿಟ್ಟುಕೊಂಡಿಲ್ಲ. ಈ ಮೊದಲು ಇವರ ಹೆಸರು ಕೆಲವರ ಜೊತೆ ಕೇಳಿಬಂದಿದ್ದವು. ಆದರೆ ಇವರು ಯಾವುದನ್ನೂ ಕನ್ಫರ್ಮ್ ಮಾಡಿಲ್ಲ. ಇವರ ಹೆಸರು ಕೆಲವು ಗಂಭೀರ ವಿವಾದಗಳಲ್ಲೂ ಕೇಳಿಬಂದಿತ್ತು. ಆದರೆ ಇವರು ಅವುಗಳನ್ನೂ ಮೆಟ್ಟಿ ನಿಂತ ಗಟ್ಟಿಗಿತ್ತಿ. ಇಷ್ಟೆಲ್ಲಾ ಆದರೂ ಇವರ ಜನಪ್ರಿಯತೆಯು ಒಂದಿಷ್ಟೂ ಕುಗ್ಗಿಲ್ಲ. ಇವರೆಂದರೆ ಎಲ್ಲರಿಗೂ ಅಷ್ಟು ಅಚ್ಚುಮೆಚ್ಚು.

“ಆದರೆ ಈ ಬಾರಿ ಮಾತ್ರ ಇವರ ಖಾಸಗಿ ಕ್ಷಣಗಳು ಎಲ್ಲರೆದುರಿಗೆ ಬಯಲಾಗಿಬಿಟ್ಟಿವೆ. ಶೋ ಒಂದರ ಚಿತ್ರೀಕರಣವು ನಡೆಯುತ್ತಿದ್ದಾಗ ಇವರು ಶೂಟಿಂಗ್ ಸೆಟ್ ನಲ್ಲಿ ತನ್ನ ಪ್ರೀತಿಪಾತ್ರರೊಬ್ಬರನ್ನು ಸಿಕ್ಕಾಪಟ್ಟೆ ಮುದ್ದಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಇದರೊಂದಿಗೆ ಇವರ ಖಾಸಗಿ ಜಗತ್ತಿನ ಒಂದು ಝಲಕ್ ಅಭಿಮಾನಿಗಳಿಗೂ ದೊರಕಿದಂತಾಗಿದೆ. ಈ ಸುದ್ದಿಯನ್ನು ಓದಿದ ನಂತರ ಇವರ ಅಭಿಮಾನಿಗಳು ಥ್ರಿಲ್ ಆಗುವುದರಲ್ಲಿ ಸಂದೇಹವೇ ಇಲ್ಲ.

“ಅಷ್ಟಕ್ಕೂ ಈ ನಟಿ ಹೀಗೆ ಕುಚುಕುಚು ಅಂತೆಲ್ಲ ಮುದ್ದಿಸುತ್ತಿದ್ದಿದ್ದು ಯಾರನ್ನು ಗೊತ್ತಾ? ಅದು ಇನ್ಯಾರೂ ಅಲ್ಲ. ಅವರ ಅಚ್ಚುಮೆಚ್ಚಿನ ನಾಯಿ ಮರಿಯನ್ನು. ಈ ನಾಯಿಮರಿಯೆಂದರೆ ಅವರಿಗೆ ಜೀವವಂತೆ. ಮೊನ್ನೆ ಶೂಟಿಂಗ್ ನಡುವಿನ ಬಿಡುವಿನಲ್ಲಿ ತಮ್ಮ ಅಮೂಲ್ಯ ಕ್ಷಣಗಳನ್ನು ಅವರು ತನ್ನ ನಾಯಿಮರಿಯೊಂದಿಗೆ ಕಳೆದರು. ಹಿಂದೆಯೂ ಅವರು ನಾಯಿಮರಿಯೊಂದಿಗೆ “ಲಿಪ್ ಟು ಲಿಪ್” ಮುತ್ತಿಕ್ಕಿ ಅದರ ಫೋಟೋಗಳನ್ನು ಶೇರ್ ಮಾಡಿದ್ದುಂಟು. ಈ ಚಿತ್ರಗಳನ್ನು ನೋಡಿದರೆ ನಿಮ್ಮಲ್ಲೂ ಮುದ್ದು ಉಕ್ಕಿಬಂದಲ್ಲಿ ಅಚ್ಚರಿಯೇನಿಲ್ಲ…”

ಹೀಗೆ ಅನಗತ್ಯ ಮುಖಸ್ತುತಿಯೊಂದಿಗೆ ಆರಂಭವಾಗುವ ಈ ಬರಹವು ಮತ್ತೆಲ್ಲೋ ನೆಲಕಚ್ಚಿ ಕೊನೆಯಾಗುವುದು ಹೀಗೆ. ಇದನ್ನು ಸುದ್ದಿಯೆಂದು ಕರೆದರೆ “ಸುದ್ದಿ” ಎಂಬ ಪದಕ್ಕೇ ಅವಮಾನ. ಇದೊಂದು ಟೈಂಪಾಸ್ ಕತೆಯಾದರೆ ಇದು ಸುದ್ದಿವಾಹಿನಿಯಲ್ಲಿ ಏಕೆ ಬಂತು ಎಂಬ ಪ್ರಶ್ನೆ ಮೂಡುತ್ತದೆ. ನನಗನಿಸುವಂತೆ ಒಂದಿಷ್ಟು ಶಿಸ್ತು ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮ ಮಾಡಿರುವ ಅನುಭವವುಳ್ಳವರು ಇದನ್ನು ಲೇಖನವೆಂದು ಕರೆಯುವ ಸಾಧ್ಯತೆ ಕೂಡ ಕಮ್ಮಿ. ಒಟ್ಟಿನಲ್ಲಿ ಒಂದು ವಾಕ್ಯದಲ್ಲಿ ಹೇಳಬಹುದಾದ ಸಂಗತಿಯನ್ನು, ಎರಡು ಪುಟಗಳ ಪುರಾಣವಾಗಿಸಿರುವ “ಅಸಾಮಾನ್ಯ ಪ್ರತಿಭೆ” ಈ ಸೋಕಾಲ್ಡ್ ಪತ್ರಕರ್ತರದ್ದು. ಸಾಲದ್ದೆಂಬಂತೆ ಇದನ್ನು ಪ್ರಕಟಣೆಗೂ ಯೋಗ್ಯವೆಂದು ಪರಿಗಣಿಸಿ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಹೆಮ್ಮೆಯಿಂದ ಪ್ರಕಟಿಸಿದ ಖ್ಯಾತ ಸುದ್ದಿವಾಹಿನಿಗೂ ಒಂದು ಸಾಷ್ಟಾಂಗ ಹೊಡೆಯಬೇಕು. ಇನ್ನು ಇದಕ್ಕೆ ನೆಟ್ಟಿಗರಿಂದ ಬರುತ್ತಿದ್ದ ಕಾಮೆಂಟುಗಳ ಗುಣಮಟ್ಟ ಹೇಗಿತ್ತೆಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಅಂದುಕೊಂಡಿದ್ದೇನೆ.

“ಇಂದಿನ ಸುದ್ದಿ ನಾಳೆಗೆ ರದ್ದಿ” ಎಂಬ ಮಾತನ್ನು “ಲಿಟರಲಿ” ತೆಗೆದುಕೊಂಡಾಗ ಹೀಗೆಲ್ಲಾ ಆಗುತ್ತೇನೋ! ಬಲ್ಲವರೇ ಹೇಳಬೇಕು. ರಾಜಕೀಯ ಮತ್ತು ಮಾಧ್ಯಮ ಜಗತ್ತನ್ನು ಅಧ್ಯಯನ ಮಾಡುವಾಗ ನನ್ನಂತಹ ಹಲವು ಆಸಕ್ತರು ಒಂದು ಮಟ್ಟಿಗೆ ಹೆಸರು ಮಾಡಿರುವ ಪತ್ರಿಕೆ, ಪುರವಣಿಗಳು ಮತ್ತು ವಾಹಿನಿಗಳ ಹಳೆಯ ಆರ್ಕೈವ್ ಗಳನ್ನು ನೋಡುವುದು ಒಂದು ವಾಡಿಕೆ. ಐವತ್ತು ವರ್ಷಗಳ ಹಿಂದಿನ ಟೈಮ್ಸ್ ಪತ್ರಿಕೆಯು ಭಾರತದ ಪ್ರಮುಖ ಘಟನೆಯೊಂದನ್ನು ಹೇಗೆ ದಾಖಲಿಸಿತ್ತು ಎಂಬುದನ್ನು ಇವತ್ತು ನೋಡುವುದು ಕುತೂಹಲಕಾರಿಯೂ ಹೌದು. ಇನ್ನೊಂದೈವತ್ತು ವರ್ಷಗಳ ನಂತರ ನಮ್ಮದೇ ಭಾಷೆಯ ಸುದ್ದಿವಾಹಿನಿಯೊಂದರ ಆನ್ಲೈನ್ ಆರ್ಕೈವ್ ಪುಟಗಳನ್ನು ಮಗುಚಿದರೆ, ಇಂಥದ್ದೇ ಕೊಚ್ಚೆಯ ರಾಶಿ ಬಂದು ತಲೆಯ ಮೇಲೆ ಬೀಳಲಿದೆ ಎಂದು ಯೋಚಿಸಿದಾಗ ಭಯವಾಗುತ್ತದೆ. 

ಅಂದಹಾಗೆ ಇದು ಮಾಧ್ಯಮಗಳಿಗಷ್ಟೇ ಸೀಮಿತವಲ್ಲ. ಇದು ಚುನಾವಣಾ ಋತುವಾಗಿರುವುದರಿಂದ ನಮ್ಮ ನಡುವಿನ ಅನುಭವಿ ರಾಜಕಾರಣಿಗಳು ಏನೆಲ್ಲಾ ಮಾತಾಡುತ್ತಿದ್ದಾರೆ, ಸಾರ್ವಜನಿಕ ವೇದಿಕೆಗಳಲ್ಲಿ ಎಂತೆಂಥಾ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂಬ ಬಗ್ಗೆ ಎಲ್ಲರಿಗೂ ಕುತೂಹಲಗಳಿರುತ್ತವೆ. ಈ ಮಾತುಗಳು ಆಯಾ ರಾಜಕೀಯ ನಾಯಕರ ಮತ್ತು ಅವರುಗಳು ಪ್ರತಿನಿಧಿಸುವ ಪಕ್ಷದ ಅಭಿಪ್ರಾಯಗಳೂ ಹೌದು ಎಂಬಂತೆ ಅವುಗಳು ಸಹಜವಾಗಿ ಸಾರ್ವಜನಿಕರ ಮನದಲ್ಲಿ ನೆಲೆಯೂರುತ್ತವೆ. ಅಂದಹಾಗೆ ಬೇಕಾಬಿಟ್ಟಿ ಎಡವಟ್ಟು ಹೇಳಿಕೆಗಳನ್ನು ಕೊಟ್ಟು ಈ ಬಾರಿಯ ಲೋಕಸಭಾ ಚುನಾವಣೆಯ ಟಿಕೆಟ್ ಕಳೆದುಕೊಂಡ ನತದೃಷ್ಟರು ಮತ್ತು ಅವರ ಗೋಳಾಟಗಳನ್ನು ನಾವು ಕಂಡಿದ್ದೇವೆ. ಆದರೆ ಸದ್ಯ ಪಶ್ಚಾತ್ತಾಪಕ್ಕಂತೂ ಕಾಲ ಮಿಂಚಿಹೋಗಿದೆ.

ಅಸಲಿಗೆ ತಾವು ವರ್ತಮಾನದಲ್ಲಿ ಸಾರ್ವಜನಿಕವಾಗಿ ಆಡುವ ಮಾತುಗಳು ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗಲಿವೆ ಎಂಬ ಸತ್ಯವನ್ನೇ ನಮ್ಮ ರಾಜಕೀಯ ಧುರೀಣರು ಮರೆತು ಬಿಟ್ಟಂತಿದೆ. ಬಹುಷಃ ಹೀಗಾಗಿಯೇ ಹಲವು ನಾಯಕರು ಬಾಯಿ ತೆರೆದಾಕ್ಷಣ ಬೆತ್ತಲಾಗಿ ಬಿಡುತ್ತಾರೆ. ತಮ್ಮನ್ನೂ, ತಮ್ಮ ಪಕ್ಷವನ್ನೂ ತೀವ್ರ ಮುಜುಗರಕ್ಕೆ ತಳ್ಳಿಬಿಡುತ್ತಾರೆ. ಇಂತಹ ಬಾಯಿಬಡುಕ ನಾಯಕರು ಮಾತನಾಡಿ ತಮ್ಮ ಪಕ್ಷಕ್ಕೆ ಲಾಭ ಮಾಡಿದ್ದಕ್ಕಿಂತ ಭಯಂಕರ ನಷ್ಟವುಂಟುಮಾಡಿದ್ದೇ ಹೆಚ್ಚು. ಕೆಲವು ತಿಂಗಳುಗಳ ಹಿಂದೆ ರಾಜಕೀಯ ಧುರೀಣರೊಬ್ಬರು ಮಾತನಾಡುತ್ತಾ “ನೀವು ಬಹಳ ಪ್ರಶ್ನೆ ಕೇಳುತ್ತೀರಪ್ಪ” ಎಂದು ಪತ್ರಕರ್ತರನ್ನು ಟೀಕಿಸಿದ್ದರು. ತಾವು ಪ್ರಶ್ನಾತೀತರೆಂದು ಬಹುಷಃ ಅವರು ತಿಳಿದುಕೊಂಡಿರಬಹುದು. ಇನ್ನೊಬ್ಬರು “ಉದ್ಯೋಗ, ಅಭಿವೃದ್ಧಿ, ಶಿಕ್ಷಣ, ಆರೋಗ್ಯ… ಇತ್ಯಾದಿಗಳ ಬಗ್ಗೆ ಮಾತಾಡಲೇಬೇಡಿ. ನಮ್ಮ ಆದ್ಯತೆಯ ಟಾಪಿಕ್ಕೇ ಬೇರೆ” ಎಂದು ಮುಕ್ತವಾಗಿ ಹೇಳಿದ್ದರು. ಇವರೆಲ್ಲ ನಮ್ಮನ್ನು ಆಳುವ ನಾಯಕರು ಎಂಬುದು ವೈಚಿತ್ರ್ಯ.

ಇಂಥವೆಲ್ಲ ಮೊದಲು ಇರಲಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಈ ಬಗೆಯ ಅಭ್ಯಾಸಗಳನ್ನು ಮುಖ್ಯವಾಹಿನಿಗೆ ತಂದುಬಿಟ್ಟ ಪಾಪದ ಹೆಣಭಾರವನ್ನು ಈ ದಶಕವು ಹೊರಬೇಕಾಗುತ್ತದೆ. ಕಳೆದ ಒಂದು ದಶಕದಲ್ಲಿ ಪ್ರಚೋದನಕಾರಿ ಭಾಷಣಗಳು, ದ್ವೇಷಪೂರಿತ ಮಾತುಗಳು ಸಾರ್ವಜನಿಕ ವಲಯದಲ್ಲಿ ಬಲುಸಾಮಾನ್ಯ ಎಂಬ ಮಟ್ಟಿಗೆ ಬದಲಾಯಿತು. ಕೆಲವೇ ಕೆಲವು ಆಯ್ದ ಮಂದಿಯ ಮೇಲೆ ಸೆಡಿಷನ್ ಪ್ರಹಾರ ಬಿದ್ದರೆ, ಉಳಿದವರು ಇಂತಹ ಮಾತುಗಳನ್ನೇ ಆಡಿಲ್ಲವೆಂಬಂತೆ ಜಾಣಕುರುಡನ್ನು ಪ್ರದರ್ಶಿಸಲಾಯಿತು. ಎಲ್ಲದಕ್ಕಿಂತ ಹೆಚ್ಚಾಗಿ “ಹೇಟ್ ಸ್ಪೀಚ್” ಅನ್ನುವುದಕ್ಕೆ ವಿಚಿತ್ರ ಗ್ಲಾಮರ್ ಒಂದನ್ನು ತೊಡಿಸಿ, ಇವರಿಗೆ ವೀರ-ಶೂರ-ಸಾಮ್ರಾಟರೆಂಬ ಬಿರುದುಗಳನ್ನೂ ನೀಡಲಾಯಿತು. ಹೀಗೆ ರಾಜಕೀಯ ನಾಯಕನೊಬ್ಬನ ವರ್ಚಸ್ಸು ಹೆಚ್ಚಾಗಲು ಆಗಾಗ ಬೆಂಕಿ ಉಗುಳಲೇಬೇಕು ಎಂಬ ಹೊಸದೊಂದು ಟ್ರೆಂಡ್ ಸೃಷ್ಟಿಯಾಯಿತು.

ಹಾಗಂತ ಈ ನಡುವೆ ಮೈಕಿನೆದುರು ಏನೇನೋ ಮಾತಾಡಿ ನಗೆಪಾಟಲಾದವರು ಕೂಡ ಕಮ್ಮಿಯೇನಿಲ್ಲ. “ನಮ್ಮ ಉತ್ತರಪ್ರದೇಶದಲ್ಲಿ ಶಾಪಿಂಗ್ ಮಾಲ್ ಗಳು ತೆರೆದಿರಲಿವೆ. ಆದರೆ ಅದರೊಳಗಿರುವ ಅಂಗಡಿಗಳು ತೆರೆದಿರುವುದಿಲ್ಲ”, ಎಂದು ಕೋವಿಡ್ ಅವಧಿಯಲ್ಲಿ ಓರ್ವ ಹಿರಿಯ ರಾಷ್ಟ್ರೀಯ ನಾಯಕರೊಬ್ಬರು ಹೇಳಿದ್ದರು. “ಚೌಮೀನ್ ತಿಂದರೆ ಹಾರ್ಮೋನ್ ವ್ಯತ್ಯಯಗಳಾಗುತ್ತವೆ. ನನಗನಿಸುವಂತೆ ಫಾಸ್ಟ್ ಫುಡ್ ತಿಂದಾಗ ಅತ್ಯಾಚಾರವನ್ನು ಪ್ರಚೋದಿಸುವ ಮನೋಭಾವಕ್ಕೆ ಇಂಬು ನೀಡಿದಂತಾಗುತ್ತದೆ”, ಎಂದು ಖಾಪ್ ನ್ಯಾಯಾಲಯದ ನಾಯಕರೊಬ್ಬರು ಹೇಳಿದ್ದರು. “ಸಲಿಂಗಕಾಮ ಅನ್ನುವುದೊಂದು ವ್ಯಸನ. ನಾನು ಈ ಖಾಯಿಲೆಯನ್ನು ಗುಣಪಡಿಸಬಲ್ಲೆ”, ಎಂದು ಬಾಬಾ ರಾಮದೇವ್ ಒಮ್ಮೆ ಸ್ವತಃ ಹೇಳಿಕೆಯನ್ನು ನೀಡಿದ್ದರು. ಇನ್ನು ಸಲಿಂಗಕಾಮವು ಒಂದು “ಖಾಯಿಲೆ” ಎಂಬುದನ್ನು ಸಾಬೀತುಪಡಿಸಲು ಅವರು ಪತಂಜಲಿ ಮಹರ್ಷಿಯನ್ನು ಎಳೆದು ತರದೇ ಇದ್ದಿದ್ದು ಪತಂಜಲಿಯ ಪುಣ್ಯ. 

ಹಾಗಂತ ಅಸಂಬದ್ಧ ಮಾತಾಡುತ್ತಿದ್ದ ರಾಜಕಾರಣಿಗಳು ಹಿಂದೆ ಇರಲಿಲ್ಲವೇ? ಖಂಡಿತ ಇದ್ದರು. ಒಂದೇ ವ್ಯತ್ಯಾಸವೆಂದರೆ ಈಗಿನ ಆಧುನಿಕ ಯುಗದಲ್ಲಿ ಇವರು ತಮ್ಮ ಮನೆಯ ಜಗಲಿಯಲ್ಲಿ ಪಿಸುಗುಟ್ಟಿದ ಮಾತು, ಈಗ ನಮ್ಮ ಬೆಡ್ರೂಮಿಗೆ ಬಂದು ಬೀಳುತ್ತದೆ. ಯಾವ ಇಂಟರ್ನೆಟ್ ಅನ್ನು ಬಳಸಿಕೊಂಡು ಫೇಕ್ ಸುದ್ದಿಗಳನ್ನು ಉದ್ದೇಶಪೂರ್ವಕವಾಗಿ ಮತ್ತು ವ್ಯವಸ್ಥಿತವಾಗಿ ಹಬ್ಬಿಸಲಾಗುತ್ತದೆಯೋ, ಅದೇ ಇಂಟರ್ನೆಟ್ ಆಗಾಗ ಹೀಗೆ ಇವರೆಲ್ಲರನ್ನು ಫಜೀತಿಗೀಡುಮಾಡುತ್ತದೆ. ನಾಯಕನನ್ನಾಗಿಸುವ ಜೊತೆಗೇ ನಗೆಪಾಟಲಿನ ವಸ್ತುವನ್ನಾಗಿಸಿಬಿಡುತ್ತದೆ. ಇದು ಅಂತರ್ಜಾಲವೆಂಬ ಭಸ್ಮಾಸುರನ ಮಹಿಮೆ. 

ಅಂದಹಾಗೆ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶವು ಹೊರಬೀಳಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ನಮ್ಮ ಕೆಲವು ಜನಪ್ರಿಯ ಜನನಾಯಕರು ಮತ್ತೊಮ್ಮೆ ವಾಚಾಳಿತನದ ಮೊರೆ ಹೋಗಿದ್ದಾರೆ. ಏನಾದರೊಂದು ಮಾತಾಡುತ್ತಿರಬೇಕು, ಸದ್ದು ಮಾಡುತ್ತಲಿರಬೇಕು ಎಂದು ಹಟಕ್ಕೆ ಬಿದ್ದವರಂತೆ ಮುಂದುವರಿಯುತ್ತಿದ್ದಾರೆ. ಇದು ಎರಡಲಗಿನ ಕತ್ತಿಯೆಂಬುದು ಅವರಿಗೂ ಗೊತ್ತು. ಮಾಡಿದರೆ ಸಂಕಷ್ಟ ತಪ್ಪಿದ್ದಲ್ಲ. ಆದರೆ ಮಾಡದೆ ಸುಮ್ಮನಿರುವಂತೆಯೂ ಇಲ್ಲ. ಅಷ್ಟಕ್ಕೂ ನಮ್ಮ ಕಾಲದ ರಾಜಕಾರಣಿಗಳಿಗಿರುವ ದೊಡ್ಡ ಸವಾಲೆಂದರೆ ಸಂಸತ್ತಿನೊಳಗೆ ಕಾಲಿಡುವುದಲ್ಲ. ಬದಲಾಗಿ ಪ್ರತಿಯೊಬ್ಬ ಮತದಾರನ ಮನಸ್ಸಿನಲ್ಲಿ ತನ್ನ ವರ್ಚಸ್ಸಿನ ಛಾಪೊತ್ತುವುದು.

ಏಕೆಂದರೆ ಕೊನೆಗೂ ಇವರೆಲ್ಲರ ಹಣೆಬರಹ ನಿರ್ಧರಿಸುವವನು ಕಟ್ಟಕಡೆಯ ಒಬ್ಬ ಮತದಾರನೇ ಆಗಿರುತ್ತಾನೆ.

ಪ್ರಸಾದ್‌ ನಾಯ್ಕ್‌, ದೆಹಲಿ  

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

ಇದನ್ನೂ ಓದಿ- http://“ಮೀ ಟೈಂ ಎಂಬ ಫ್ರೀ ಟೈಂ” https://kannadaplanet.com/free-time-called-me-time/

More articles

Latest article