ಈಗ ಮುಂದಿನ ಪ್ರಶ್ನೆಯಿರುವುದು ಸಂಘಪರಿವಾರದ ಬಹುದೊಡ್ಡ ಹೋರಾಟ ಇವತ್ತಿಗೆ ತಾರ್ಕಿಕವಾಗಿ ಗುರಿ ಮುಟ್ಟಿರುವುದರಿಂದ ಅದು ಇನ್ನು ಮುಂದೆ ಸುಮ್ಮನಾಗಿ, ದೇಶದ ಆರ್ಥಿಕ ಪ್ರಗತಿ, ಮತ್ತೊಂದರ ಕಡೆ ವಾಲಿಕೊಳ್ಳುವುದೇ? ಖಂಡಿತ ಇಲ್ಲ. ಜನಾಂಗೀಯ ದ್ವೇಷದ ಬೀಜಗಳನ್ನು ನೀವು ಬಿತ್ತುತ್ತ ಹೋದ ಮೇಲೆ ಅದು ಎಲ್ಲೆಡೆ ಹೆಮ್ಮರವಾಗಿ ಬೆಳೆಯುತ್ತಲೇ ಇರುತ್ತದೆ. ಯಾರು ಈ ಬೀಜಗಳನ್ನು ನೆಟ್ಟರೋ ಅವರೇ ಬಂದರೂ ಇದನ್ನು ಕಿತ್ತುಹಾಕಲು ಸಾಧ್ಯವಿಲ್ಲ. ಹೀಗೆ, ಜನಾಂಗೀಯ ದ್ವೇಷದ ರೋಗಕ್ಕೆ ಸಿಲುಕಿದ ದೇಶಗಳಲ್ಲಿ ಏನೇನೆಲ್ಲ ಆದವು ಎಂಬುದಕ್ಕೆ ಇತಿಹಾಸ ಸಾವಿರ ಸಾಕ್ಷಿಗಳನ್ನು ಕೊಡುತ್ತದೆ. ನಾವು ಇತಿಹಾಸದಿಂದ ಪಾಠ ಕಲಿಯುವವರಂತೂ ಅಲ್ಲ-ದಿನೇಶ್ ಕುಮಾರ್ ಎಸ್.ಸಿ
ಕೊನೆಗೂ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿದೆ. ಅಲ್ಲಿಗೆ ಸಂಘಪರಿವಾರ ನಿಸ್ಸಂಶಯವಾಗಿ ಬಹುದೊಡ್ಡ ದಿಗ್ವಿಜಯವನ್ನು ಸಾಧಿಸಿದಂತಾಗಿದೆ. ಪರಿವಾರವರು ಹೇಳಿಕೊಳ್ಳುವ ಪ್ರಕಾರ ಇದು ಐನೂರು ವರ್ಷಗಳ ಹೋರಾಟ. ಇವತ್ತಿನಿಂದ ಅವರ ಅರ್ಥದ ನಿಜವಾದ ರಾಮರಾಜ್ಯ ಆರಂಭಗೊಂಡಿದೆ. ಪರಿವಾರದ ದೃಷ್ಟಿಯಲ್ಲಿ ನೂರಾರು ವರ್ಷಗಳ ಗುಲಾಮಗಿರಿಯಿಂದ ಭಾರತ ಇಂದು ಮುಕ್ತಿಗೊಂಡಿದೆ.
ಒಂದಂತೂ ನಿಜ, ಸಂಘ ಪರಿವಾರ ಬಹಳ ಸುಲಭವಾಗಿ ಇದನ್ನು ಸಾಧಿಸಲಿಲ್ಲ. ಅದಕ್ಕೆ ಹಲವು ದಶಕಗಳ ಕಾಲ ವ್ಯವಸ್ಥಿತ ಕೆಲಸಗಳು ನಡೆದವು. ಎಲ್ಲವೂ ಸಂಯೋಜಿತ, ಸಂಘಟಿತ, ವ್ಯವಸ್ಥಿತ ಕಾರ್ಯತಂತ್ರಗಳು. ಇದನ್ನೆಲ್ಲ ಆಗುಮಾಡಲು ಲಕ್ಷಗಟ್ಟಲೆ ಸಂಖ್ಯೆಯ ಕಾರ್ಯಕರ್ತರನ್ನು ನಿಯೋಜಿಸುವುದೂ ಅಷ್ಟು ಸುಲಭವಾಗಿರಲಿಲ್ಲ. ಆದರೆ ಅವರು ಹಠ ಬಿಡಲಿಲ್ಲ. ಅಂದುಕೊಂಡಿದ್ದನ್ನು ಸಾಧಿಸಿದರು. ಹಳ್ಳಿಹಳ್ಳಿಗೂ ತಲುಪಿದರು. ವಾಟ್ಸಾಪ್ ನಂಥ ಆಧುನಿಕ ಸಂವಹನದ ಮಾಧ್ಯಮಗಳು ಬಂದ ಮೇಲಂತೂ ಅವರ ಕೆಲಸ ಸುಲಭವಾಗುತ್ತ ಹೋಯಿತು. ನರೇಂದ್ರ ಮೋದಿ ಯುಗ ಆರಂಭವಾದ ಮೇಲಂತೂ ಅವರಿಗೆ ಭಕ್ತರ ಪ್ರವಾಹವೇ ಹರಿದು ಬಂದು ಸಂಘಪರಿವಾರದ ಬಾಹುಗಳು ಬಲಶಾಲಿಯಾದವು. ಮಾಧ್ಯಮಗಳು ಸಂಘಿಗಳ ತವರುಮನೆಯಾಗಿ ಹೋದವು. ಪೊಲೀಸ್ ವ್ಯವಸ್ಥೆಯಿಂದ ಹಿಡಿದು ನ್ಯಾಯಾಂಗದವರೆಗೆ ಎಲ್ಲೆಡೆ ಪ್ರಚಾರಕರು, ಕಾಲಾಳುಗಳು ತೂರಿಕೊಂಡರು.
ಬಾಬರಿ ಮಸೀದಿ ಒಡೆದು ರಾಮಮಂದಿರ ಕಟ್ಟುತ್ತೇವೆಂದು ಹೊರಟ ಒಂದು ಯೋಜಿತ ಕಾರ್ಯಕ್ರಮದಲ್ಲಿ ಏನೆಲ್ಲ ಆಗಿಹೋದವು? ಚೋದ್ಯವೆಂದರೆ, ಅಂದು ಇದರ ನೇತೃತ್ವ ವಹಿಸಿದ್ದ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಮಂದಿರ ಉದ್ಘಾಟನೆಯ ಕಾರ್ಯಕ್ರಮಕ್ಕೆ ಬರಲೇಬೇಡಿ ಎಂದು ಸ್ಪಷ್ಟವಾಗಿ ಹೇಳಲಾಯಿತು. ಬಿಜೆಪಿಯಲ್ಲಿ ಅಡ್ವಾಣಿಯ ನಂತರದ ಎರಡನೇ ನಾಯಕನಂತಿದ್ದ ಮುರುಳಿ ಮನೋಹರ ಜೋಷಿಯವರಿಗೂ ಇದೇ ಸಂದೇಶ ತಲುಪಿಸಲಾಯಿತು. ಆಗಿನ ಫೈರ್ ಬ್ರಾಂಡ್ ನಾಯಕಿಯರಾದ ಉಮಾ ಭಾರತಿ, ಸಾಧ್ವಿ ಋತುಂಬರ ಅಯೋಧ್ಯೆಯಲ್ಲಿ ಕಾಣಿಸಿಕೊಂಡರಾದರೂ ಅವರನ್ನು ಲೆಕ್ಕಕ್ಕೆ ಇಡುವವರೂ ಕಾಣಿಸಲಿಲ್ಲ. ಇನ್ನು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ತೀರಿಹೋದರು, ಹಾಗೆಯೇ ವಿಶ್ವಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಅಶೋಕ್ ಸಿಂಘಾಲ್ ಕೂಡ ಬದುಕಿಲ್ಲ. ಇನ್ನು ಪ್ರವೀಣ್ ತೊಗಾಡಿಯಾ, ವಿನಯ್ ಕಟಿಯಾರ್ ಹೆಸರುಗಳನ್ನು ಈ ತಲೆಮಾರಿನ ಉಗ್ರ ಹಿಂದುತ್ವದ ಎಳೆಯ ಬಾಲಕರು ಕೇಳಿರುವ ಸಾಧ್ಯತೆಯೂ ಕಡಿಮೆ.
ಅಯೋಧ್ಯೆಯ ರಾಮಮಂದಿರದ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಲ್ಲಿ ಶಾಸ್ತ್ರಗಳ ಪ್ರಕಾರ ಮುಖ್ಯ ಯಜಮಾನರಾಗಿ ಕಾಣಿಸಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ. ಮೋದಿಗೆ ಹೊರತಾಗಿ ಉಳಿದ ಯಜಮಾನರುಗಳು ಹೆಸರಿಗೆ ಮಾತ್ರ. ಅಯೋಧ್ಯೆಯಲ್ಲಿ ಕಾಣಿಸಿದ್ದು ಮಂದಸ್ಮಿತ ರಾಮನ ಮೂರ್ತಿ ಮತ್ತು ಬಾಲರಾಮನನ್ನು ಕೈಹಿಡಿದು ಕರೆತಂದ ನರೇಂದ್ರ ಮೋದಿ ಮಾತ್ರ. ರಾಷ್ಟ್ರಪತಿಗಳನ್ನು ಯಾಕೆ ಕರೆಯಲಿಲ್ಲ ಎಂದು ಕೆಲವರು ಮುಗ್ಧ ಪ್ರಶ್ನೆ ಕೇಳುತ್ತಿದ್ದರು. ಭಾರತೀಯ ಸಂವಿಧಾನದ ಪ್ರಕಾರ ಪ್ರಧಾನಿಗಿಂತ ಉನ್ನತ ಹುದ್ದೆ ರಾಷ್ಟ್ರಪತಿಯದ್ದು. ಮೋದಿಯವರು ಮುಖ್ಯ ಯಜಮಾನರಾಗಿರುವಲ್ಲಿ ಬೇರೆಯವರಿಗೆ ಕೆಲಸವಿರಲು ಸಾಧ್ಯವೇ?
ಸಂಘಪರಿವಾರದ ಇಂದಿನ ದಿಗ್ವಿಜಯ ಭವಿಷ್ಯದ ಭಾರತ ಹೇಗಿರಲಿದೆ ಎಂಬುದಕ್ಕೆ ಒಂದು ಮುನ್ನುಡಿಯನ್ನು ಬರೆದಿದೆ. ನರೇಂದ್ರ ಮೋದಿಯವರು ಹೊಸ ಸಂಸತ್ ಭವನವನ್ನು ನಿರ್ಮಿಸಿದಾಗ ಅದರ ಉದ್ಘಾಟನೆಯನ್ನು ಸಾಧು ಸಂತರಿಂದ ಮಾಡಿಸಲಾಯಿತು. ಈಗ ರಾಮಮಂದಿರದ ಉದ್ಘಾಟನೆ ಅಪ್ಪಟ ರಾಜಕಾರಣಿಯಾದ ನರೇಂದ್ರ ಮೋದಿಯವರಿಂದ ಆಗಿದೆ. ವಿಷಯ ಬಹಳ ಸ್ಪಷ್ಟವಾಗಿದೆ. ರಾಜಕೀಯ ಮತ್ತು ಧರ್ಮದ ನಡುವಿನ ಅಂತರ ಕಡಿಮೆಯಾಗುತ್ತ ಬಂದಿದ್ದನ್ನು ನಾವೆಲ್ಲ ಗಮನಿಸುತ್ತಿದ್ದೆವು. ಮೋದಿಯವರು ಆ ರೇಖೆಯನ್ನು ಅಳಿಸಿಹಾಕಿದ್ದಾರೆ. ಇಲ್ಲಿ ಈಗ ಧರ್ಮವೇ ರಾಜಕಾರಣ, ರಾಜಕಾರಣವೇ ಧರ್ಮ.
ಸುಪ್ರೀಂ ಕೋರ್ಟ್ ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇದ್ದ ಎಲ್ಲ ತೊಡಕುಗಳನ್ನು ಕೊನೆಗೊಳಿಸಿದಾಗಲೇ ದೇಶ ಮುಂದೆ ಎತ್ತ ಸಾಗಲಿದೆ ಎಂಬುದರ ಮುನ್ಸೂಚನೆ ಸಿಕ್ಕಿತ್ತು. ಈಗ ಅದು ಬಹಳ ಸ್ಪಷ್ಟವಾಗಿ ಕಾಣಿಸುತ್ತಿದೆ. ಭಾರತ-ಪಾಕಿಸ್ತಾನ ವಿಭಜನೆ ಮತ್ತು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಾಗಿನಿಂದ ಒಂದು ವರ್ಗದ ಜನರಿಗೆ ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿರುವುದು ಇಷ್ಟವಿರಲಿಲ್ಲ. ಆದರೆ ಅವರನ್ನು ಬೆಂಬಲಿಸುವವರ ಸಂಖ್ಯೆ ಹೆಚ್ಚಿರಲಿಲ್ಲ. ಹೀಗಾಗಿ ಕಳೆದ ಎಪ್ಪತ್ತು ವರ್ಷಗಳಲ್ಲಿ ಈ ವರ್ಗದ ಜನರು ನಿರಂತರವಾಗಿ ತಮ್ಮ ಅಜೆಂಡಾಗಳನ್ನು ಮುಂದಿಟ್ಟುಕೊಂಡು ಜೀವ ಸವೆಸಿದರು. ಊರೂರು ಅಲೆದರು. ತಲೆಮಾರುಗಳು ಹೋದರೂ ಈ ಪ್ರಯತ್ನಗಳು ನಡೆಯುತ್ತಲೇ ಹೋದವು. ಕೊನೆಗೂ ಅವರು ಯಶಸ್ವಿಯಾದರು. ಆಗ ಇಟ್ಟಿಗೆ ಕೊಡಿ ಎಂದು ಬಂದವರೇ ಇಂದು ಅಕ್ಷತೆ ಹಂಚಿಕೊಂಡು ತಿರುಗಿದರು.
ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ಈಗಲೂ ಭಾರತವನ್ನು ಜಾತ್ಯತೀತ ಒಕ್ಕೂಟ ಎಂದೇ ಹೇಳಲಾಗಿದೆ. ಆದರೆ ಈಗ ಆ ಪದಕ್ಕೆ ಯಾವ ಅರ್ಥವೂ ಉಳಿದಿಲ್ಲ. ಜಾತ್ಯತೀತತೆಯ ಅಡಿಪಾಯವನ್ನು ಸಂಪೂರ್ಣ ಧ್ವಂಸಗೊಳಿಸಲಾಗಿದೆ. 1992ರಲ್ಲಿ ಬಾಬರಿ ಮಸೀದಿ ಒಡೆಯುವ ಸಂದರ್ಭದಲ್ಲೇ ಈ ದೇಶವನ್ನು ಹಿಂದೂ-ಮುಸ್ಲಿಂ ಎಂದು ಮಾನಸಿಕವಾಗಿ ವಿಭಜಿಸಲಾಗಿತ್ತು. ಈ ವಿಭಜನೆಯನ್ನು ಇನ್ನಷ್ಟು, ಮತ್ತಷ್ಟು ಆಳಗೊಳಿಸುತ್ತಲೇ ಬರಲಾಗಿದೆ.
ರಾಮಮಂದಿರಕ್ಕೆ ಯಾರ ವಿರೋಧವೂ ಇರಲಿಲ್ಲ. ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳಿವೆ, ಹೊಸ ಹೊಸ ದೇವಸ್ಥಾನಗಳು ಕಟ್ಟಲ್ಪಡುತ್ತಲೇ ಇರುತ್ತವೆ, ಪ್ರಾಣ ಪ್ರತಿಷ್ಠಾಪನೆಗಳೂ ನಡೆಯುತ್ತಲೇ ಇರುತ್ತವೆ. ಆದರೆ ಇನ್ಯಾರದೋ ಪ್ರಾರ್ಥನಾ ಮಂದಿರವನ್ನು ಒಡೆದು ಕಟ್ಟಿದ ಮಂದಿರ ನಮ್ಮ ಸಾಮಾನ್ಯ ಜನರಲ್ಲಿ ಯಾಕಿಷ್ಟು ಸಂಭ್ರಮ ಮೂಡಿಸುತ್ತಿದೆ? ದೇಶದ ಬಹುಸಂಖ್ಯಾತ ಹಿಂದೂಗಳು ಇಂದು ಎಲ್ಲ ಕಡೆ ದೊಡ್ಡ ಹಬ್ಬದಂತೆ ರಾಮಮಂದಿರ ಉದ್ಘಾಟನೆಯನ್ನು ಸಂಭ್ರಮಿಸುತ್ತಿರುವುದಕ್ಕೆ ಕಾರಣಗಳಿವೆ. ಕಳೆದ ಎಪ್ಪತ್ತು ವರ್ಷಗಳಿಂದ ಸಂಘಪರಿವಾರ ಮೆದುಳು ತೊಳೆಯುವ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಕಳೆದ ಮೂರು ದಶಕಗಳಲ್ಲಿ ಇದು ತೀವ್ರವಾಗಿ ನಡೆದಿದೆ. ʻಮುಸ್ಲಿಮರು ಹೊರಗಿನಿಂದ ಬಂದ ದಾಳಿಕೋರರು, ಇನ್ನು ಕೆಲವು ವರ್ಷಗಳಲ್ಲಿ ಅವರೇ ಬಹುಸಂಖ್ಯಾತರಾಗುತ್ತಾರೆ. ಮುಸ್ಲಿಮರು ಜೆಹಾದಿಗಳುʼ ಇತ್ಯಾದಿ ಇಸ್ಲಾಮೋಫೋಬಿಯಾವನ್ನು ಎಷ್ಟು ಚೆನ್ನಾಗಿ ಹಳ್ಳಿಹಳ್ಳಿಯಲ್ಲೂ ಹರಡಿಸಲಾಯಿತೆಂದರೆ, ಒಂದೇ ಒಂದು ಮುಸ್ಲಿಂರ ಮನೆಯೂ ಇಲ್ಲದ ಹಳ್ಳಿಗಳಲ್ಲೂ ಹಿಂದೂಗಳು ಅಭದ್ರತೆಯಿಂದ ನರಳಿದರು. ನಮ್ಮ ನೆಲದಲ್ಲಿ ರಾಮನ ದೇವಾಲಯ ಕಟ್ಟಲು ಸಾಧ್ಯವಿಲ್ಲದಂತಾಗಿದೆ ನೋಡಿ ಎಂದು ಪದೇಪದೇ ಹೇಳಿದ್ದು ಸಾಮಾನ್ಯ ಜನರ ಎದೆಗೆ ನಾಟುತ್ತ ಹೋಯಿತು. ನಂಜು ಹರಡುವುದಕ್ಕೆ ಎಷ್ಟು ಕಾಲ ಬೇಕು? ಏನಾಗಬೇಕೆಂದು ಅವರು ಬಯಸಿದ್ದರೋ ಅದು ಆಗಿದೆ. ಯಾವತ್ತಿಗೂ ಮತಾಂಧರಾಗದ, ಪರಧರ್ಮಗಳ ಕುರಿತು ಅಸಹಿಷ್ಣುತೆ ಹೊಂದದ ಸಾಮಾನ್ಯ ಜನರೂ ಈಗ ಬದಲಾಗಿದ್ದಾರೆ.
ಈಗ ಮುಂದಿನ ಪ್ರಶ್ನೆಯಿರುವುದು ಸಂಘಪರಿವಾರದ ಬಹುದೊಡ್ಡ ಹೋರಾಟ ಇವತ್ತಿಗೆ ತಾರ್ಕಿಕವಾಗಿ ಗುರಿ ಮುಟ್ಟಿರುವುದರಿಂದ ಅದು ಇನ್ನು ಮುಂದೆ ಸುಮ್ಮನಾಗಿ, ದೇಶದ ಆರ್ಥಿಕ ಪ್ರಗತಿ ಮತ್ತೊಂದರ ಕಡೆ ವಾಲಿಕೊಳ್ಳುವುದೇ? ಖಂಡಿತ ಇಲ್ಲ. ಜನಾಂಗೀಯ ದ್ವೇಷದ ಬೀಜಗಳನ್ನು ನೀವು ಬಿತ್ತುತ್ತ ಹೋದ ಮೇಲೆ ಅದು ಎಲ್ಲೆಡೆ ಹೆಮ್ಮರವಾಗಿ ಬೆಳೆಯುತ್ತಲೇ ಇರುತ್ತದೆ. ಯಾರು ಈ ಬೀಜಗಳನ್ನು ನೆಟ್ಟರೋ ಅವರೇ ಬಂದರೂ ಇದನ್ನು ಕಿತ್ತುಹಾಕಲು ಸಾಧ್ಯವಿಲ್ಲ. ಹೀಗೆ ಜನಾಂಗೀಯ ದ್ವೇಷದ ರೋಗಕ್ಕೆ ಸಿಲುಕಿದ ದೇಶಗಳಲ್ಲಿ ಏನೇನೆಲ್ಲ ಆದವು ಎಂಬುದಕ್ಕೆ ಇತಿಹಾಸ ಸಾವಿರ ಸಾಕ್ಷಿಗಳನ್ನು ಕೊಡುತ್ತದೆ. ನಾವು ಇತಿಹಾಸದಿಂದ ಪಾಠ ಕಲಿಯುವವರಂತೂ ಅಲ್ಲ. ಎಂದೋ ಇತಿಹಾಸದಲ್ಲಿ ಆಗಿ ಹೋಗಿರಬಹುದಾದ ಘಟನೆಗಳಿಗೆ ಸೇಡು ತೀರಿಸಿಕೊಳ್ಳಲು ಹವಣಿಸುವವರು. ಹೀಗಾಗಿ ಭವಿಷ್ಯದ ದಿನಗಳು ನಿಜಕ್ಕೂ ಅಪಾಯಕಾರಿಯಾಗಿ ಕಾಣಿಸುತ್ತಿದೆ.
ಎಲ್ಲಕ್ಕಿಂತ ದೊಡ್ಡ ಘೋರವೆಂದರೆ ಇನ್ನು ಮುಂದೆ ನಾವು ಇದನ್ನು ಬಹುತ್ವ ಭಾರತ, ಎಲ್ಲರ ಭಾರತ ಎಂದು ಕರೆಯಲು ಕಷ್ಟಕರವಾಗಲಿದೆ. ಎಲ್ಲವೂ ಏಕತ್ರಗೊಳ್ಳುತ್ತಿರುವಾಗ ಬಹುತ್ವ ಎಲ್ಲಿರಲು ಸಾಧ್ಯ? ಬೆಂಗಳೂರಿನಲ್ಲಿ ಇಂದು ಬಹುತೇಕ ಕೇಸರಿ ಧ್ವಜಗಳಲ್ಲಿ ಹಿಂದಿಯಲ್ಲಿ ಜೈ ಶ್ರೀರಾಮ್ ಇತ್ಯಾದಿ ಬರೆಯಲಾಗಿತ್ತು. ದೇಶಕ್ಕೊಬ್ಬನೇ ದೇವರನ್ನು ಪರಿಚಯಿಸಿದ ಮೇಲೆ ದೇಶಕ್ಕೊಂದೇ ಭಾಷೆಯನ್ನೂ ಕೊಡಬೇಕಲ್ಲವೇ? ಒಂದಕ್ಷರ ಹಿಂದಿ ಓದಲು ಬಾರದವರೂ ಇಂದು ಇದೇ ಬಾವುಟವನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಾಡಿದರು. ಇದೊಂದು ಸಣ್ಣ ಉದಾಹರಣೆ ಅಷ್ಟೆ. ಭಾರತದಲ್ಲಿ ಉಂಟಾಗಲಿರುವ ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳು ಒಂದೆರಡಾಗಿರಲು ಸಾಧ್ಯವಿಲ್ಲ.
ಜರ್ಮನ್ ನಾಜಿ ಆಡಳಿತದಲ್ಲಿ ಲಕ್ಷಗಟ್ಟಲೆ ಯಹೂದಿಗಳನ್ನು ಕಾನ್ಸನ್ ಟ್ರೇಷನ್ ಕ್ಯಾಂಪ್ ಗೆ ಹಾಕಿ ಕೊಲ್ಲಲಾಯಿತು. ಯಹೂದಿಗಳನ್ನು ಕೊಲ್ಲಲೆಂದು ಕಾನ್ಸನ್ ಟ್ರೇಷನ್ ಕ್ಯಾಂಪ್ ಗೆ ಹಿಟ್ಲರನ ನಾಜಿ ಸೈನ್ಯ ಕರೆದೊಯ್ಯುವಾಗ ರಸ್ತೆಯ ಎರಡೂ ಭಾಗಗಳಲ್ಲಿ ನಿಂತ ಜನರು ಚಪ್ಪಾಳೆ ಹೊಡೆಯುತ್ತಿದ್ದರಂತೆ. ಹಾಗೆ ನೋಡಿದರೆ ಚಪ್ಪಾಳೆ ಹೊಡೆಯುವವರಿಗೆ ಸಾಯಲಿದ್ದ ಯಹೂದಿಗಳು ಯಾವ ತೊಂದರೆಯನ್ನೂ ಮಾಡಿರಲಿಲ್ಲ. ಆದರೆ ಅವರು ನಾಜಿ ರಕ್ತವನ್ನು ಹೊಂದಿರಲಿಲ್ಲ ಎಂಬುದೊಂದೇ ಅವರ ತಪ್ಪಾಗಿತ್ತು. ಜನಾಂಗೀಯ ದ್ವೇಷ ಎಂಬುದು ಎಲ್ಲಿಗೆ ಹೋಗಿ ತಲುಪುತ್ತದೆ ನೋಡಿ.
ಯುಗೋಸ್ಲೋವಿಯಾ ಒಡೆದು ಚೂರಾದಾಗ ಬೋಸ್ನಿಯಾದಲ್ಲಿ ಇದ್ದ ಆಟೋಮನ್ ಟರ್ಕಿಷ್ ಜನರನ್ನು ಹೀಗೇ ನಾಶಪಡಿಸಲಾಯಿತು. ಹದಿನಾಲ್ಕನೇ ಶತಮಾನದಲ್ಲಿ ಈ ಜನರು ಯುಗೋಸ್ಲೋವಿಯಾವನ್ನು ಆಳಿದ್ದರು. ಆ ನಂತರ ಅಲ್ಲೇ ಉಳಿದುಕೊಂಡ ಈ ಮುಸ್ಲಿಂ ಸಮುದಾಯವನ್ನು ದಹಿಗಳೆಂದು ಕರೆಯಲಾಗುತ್ತಿತ್ತು. ಸುಮಾರು ಮೂವತ್ತು ಸಾವಿರ ಜನರನ್ನು ಹುಳಗಳಂತೆ ಹೊಸಕಿ ಹಾಕಲಾಯಿತು. ಇದೆಲ್ಲ ತೀರಾ ಹಳೆಯ ಕಥೆಯೇನೂ ಅಲ್ಲ. 1995ರಲ್ಲಿ ನಡೆದಿದ್ದು, ಈ ನರಮೇಧದ ಸಂದರ್ಭದಲ್ಲಿ ಬದುಕುಳಿದ ಸಲಿಹೋವಿಕ್ ಎಂಬ ಹುಡುಗಿಯೊಬ್ಬಳು ಆ ದಾರುಣ ಘಟನೆಗಳನ್ನು ನೆನಪಿಸಿಕೊಂಡು ಮಾತನಾಡಿದ್ದಳು. ಅವಳ ಕಥೆ ನಿಜಕ್ಕೂ ಎದೆ ಒಡೆದುಹಾಕುತ್ತದೆ.
ಜುಲೈ 13ರಂದು ಸೆರ್ಬ್ ಸೈನಿಕರು ಹತ್ತಾರು ಟ್ರಕ್ ಗಳನ್ನು ಸಾಲುಸಾಲಾಗಿ ತಂದು ನಿಲ್ಲಿಸಿದರು. ನಿಮ್ಮನ್ನೆಲ್ಲ ಈ ಪ್ರಾಂತ್ಯದಿಂದ ಹೊರಗೆ ಅಲೀಜಾ (ಬೋಸ್ನಿಯಾದ ಮೊದಲ ಅಧ್ಯಕ್ಷ) ಪ್ರಾಂತ್ಯಕ್ಕೆ ಶಿಫ್ಟ್ ಮಾಡಲಾಗುವುದು ಎಂದು ಹೇಳಲಾಯಿತು. ಮೊದಲು ಹೆಂಗಸರು ಮತ್ತು ಮಕ್ಕಳು ಬನ್ನಿ. ನಂತರ ಉಳಿದ ಗಂಡಸರು ಬಂದು ನಿಮ್ಮನ್ನು ಕೂಡಿಕೊಳ್ಳುತ್ತಾರೆ ಎಂದು ಘೋಷಿಸಲಾಯಿತು. ಸೆರ್ಬ್ ಯೋಧರು, ಅಳಿದುಳಿದ ಗಂಡು ಸಂತಾನಗಳನ್ನು ಬೇಟೆಯಾಡುವ ತವಕದಲ್ಲಿದ್ದರು. ವಿಶ್ವಸಂಸ್ಥೆಯ ಪಡೆಗಳ ಎದುರೇ ಮಹಿಳೆಯರನ್ನು ಪುರುಷರನ್ನು ಬೇರೆ ಬೇರೆ ಮಾಡುತ್ತಿದ್ದರು. ನಿಶ್ಚಿತವಾಗಿ ವಿಶ್ವಸಂಸ್ಥೆಯ ಯೋಧರಿಗೆ ಮುಂದೆ ಏನಾಗಲಿದೆ ಎಂಬುದು ಗೊತ್ತಿತ್ತು, ಮಾತ್ರವಲ್ಲ ತಮ್ಮ ರಕ್ಷಣೆಯಲ್ಲಿ ಫ್ಯಾಕ್ಟರಿ ಒಳಗಿರುವವರಿಗೆ ಏನಾಗಲಿದೆಯೆಂದೂ ಗೊತ್ತಿತ್ತು! ಆದರೆ ಅವರು ಏನೂ ಮಾತನಾಡಲಿಲ್ಲ.
ಬ್ರಾಟುನಾಕ್ ಎಂಬ ಪಟ್ಟಣವನ್ನು ಟ್ರಕ್ ಗಳು ದಾಟಿಹೋಗುವಾಗ ಈ ಪುಟ್ಟ ಬಾಲಕಿ ಸಲಿಹೋವಿಕ್ ಮನುಷ್ಯನ ಅತ್ಯಂತ ಕರಾಳ ರೂಪವನ್ನು ಕಂಡಳು. ಜನಾಂಗೀಯ ಹಿಂಸೆ ಎಂಬುದು ಕೇವಲ ಬಂದೂಕುಗಳಿಂದ ಸಿಡಿಯುವುದಿಲ್ಲ, ಜತೆಗೆ ಬದುಕಿದವರ ತಿರಸ್ಕಾರ ಮತ್ತು ಕಾರಣವಿಲ್ಲದ ದ್ವೇಷವಿದೆಯಲ್ಲ ಅದನ್ನು ಹೇಗೆ ನುಂಗುವುದು? ಬ್ರಾಟುನಾಕ್ ಪಟ್ಟಣದ ರಸ್ತೆಯ ಇಕ್ಕೆಲಗಳಲ್ಲಿ ಸೆರ್ಬಿಯನ್ ನಾಗರಿಕರು ನೆರೆದು ಮುಸ್ಲಿಂ ಮಹಿಳೆಯರು, ಮಕ್ಕಳನ್ನು ಕರೆದೊಯ್ಯುತ್ತಿದ್ದ ಟ್ರಕ್ ಗಳ ಮೇಲೆ ಕಲ್ಲುಗಳನ್ನು ಎಸೆದರು. ಸಣ್ಣ ಮಕ್ಕಳಿಂದ ಹಿಡಿದು ಮಹಿಳೆಯರವರೆಗೆ ಎಲ್ಲರೂ ಟ್ರಕ್ ಗಳ ಮೇಲೆ ಉಗಿದರು, ಶಾಪ ಹಾಕಿದರು. ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ತೂರಿದರು.
ಅವರು ಯಾರೂ ಶತ್ರುಗಳಾಗಿರಲಿಲ್ಲ. ಯಾವತ್ತೂ ಯಾವ ಜಗಳವೂ ಇರಲಿಲ್ಲ. ಈ ಪ್ರಮಾಣದ ದ್ವೇಷ ಅವರಲ್ಲಿ ಇರಬಹುದೆಂಬ ಕಲ್ಪನೆಯೂ ಇರಲಿಲ್ಲ. ಆದರೆ ಅದೆಲ್ಲ ಅವತ್ತು ಘಟಿಸಿತ್ತು. ಸಲಿಹೋವಿಕ್ ಗೆ ಈಗಲೂ ಅದನ್ನು ಅರಗಿಸಿಕೊಳ್ಳುವುದಕ್ಕೆ ಆಗಿಲ್ಲ. ನಿಷ್ಕಾರಣವಾಗಿ ಸಹಮನುಷ್ಯರನ್ನು ದ್ವೇಷಿಸುವುದು ಹೇಗೆ ಸಾಧ್ಯ?
ಜನಾಂಗೀಯ ದ್ವೇಷದ ದಳ್ಳುರಿಯಲ್ಲಿ ಜಗತ್ತಿನ ನಾನಾ ದೇಶಗಳು ಬೆಂದುಹೋಗಿವೆ. 2002ರ ಗುಜರಾತ್ ಹತ್ಯಾಕಾಂಡದ ಉದಾಹರಣೆಯೂ ನಮ್ಮ ಮುಂದಿದೆ. ದೇಶದ ಸಾಮಾನ್ಯ ಜನರ ಮೆದುಳಿಗೆ ದ್ವೇಷದ ವಿಷವನ್ನು ತುಂಬಿದರೆ ಏನಾಗಬಹುದು ಎಂಬುದಕ್ಕೆ ಸಾಲುಸಾಲು ಸಾಕ್ಷಿಗಳಿವೆ.
ಹುಚ್ಚು ಸನ್ನಿ ವ್ಯಾಪಕವಾಗಿ ಹರಡುತ್ತಲೇ ಇದೆ. ದೇಶವನ್ನು ಕಾಪಾಡುವ ಕೈಗಳು ಎಲ್ಲಿವೆ?
ದಿನೇಶ್ ಕುಮಾರ್ ಎಸ್ ಸಿ