ಚನ್ನಪಟ್ಟಣಕ್ಕೆ ‘ಯೋಗ’ : ಕೈ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಕಣಕ್ಕೆ, ಏನಿವರ ಇತಿಹಾಸ?

Most read

ಸಿ.ಪಿ.ಯೋಗೇಶ್ವರ್‌ ಕೇವಲ ಸಿನಿಮಾದಲ್ಲಿ ಮಾತ್ರ ವರ್ಣರಂಜಿತ ನಟ ಅಲ್ಲ, ರಾಜಕೀಯ ಜೀವನದಲ್ಲೂ ಕಲರ್‌ ಫುಲ್‌ ರಾಜಕಾರಣಿ. ಸದಾ ಪಕ್ಷಗಳನ್ನು ಬದಲಿಸುವುದರಲ್ಲಿ ಎತ್ತಿದ ಕೈ. ಅವರೇ ಈ ಮಾತನ್ನು ಹೇಳಿಕೊಂಡಿದ್ದಾರೆ.

ಚನ್ನಪಟ್ಟಣದಲ್ಲಿ ನಡೆದ ಆಯಾ ಚುನಾವಣೆಗೆ ತಕ್ಕಂತೆ ಅವರು ಪಕ್ಷವನ್ನು ಬದಲಾಯಿಸುತ್ತಾ ಬಂದಿದ್ದಾರೆ. ಹಾಗೆಯೇ ಗೆಲುವು ಸಾಧಿಸುತ್ತಲೂ ಇದ್ದಾರೆ. ಪಕ್ಷದ ಬಲದಿಂದ ಗೆದ್ದಿರುವುದಕ್ಕಿಂತ ಸ್ವಂತ ಬಲದಿಂದ ಗೆಲ್ಲುತ್ತಿದ್ದರು ಎನ್ನುವುದನ್ನು ಅವರ ವಿರೋಧಿಗಳೂ ಒಪ್ಪುತ್ತಾರೆ. ಇಲ್ಲವಾದಲ್ಲಿ ಪಕ್ಕಾ ಒಕ್ಕಲಿಗರ ಮತಕ್ಷೇತ್ರವಾದ ಚನ್ನಪಟ್ಟಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ, ಸಮಾಜವಾದಿ ಪಕ್ಷದ ಚಿನ್ಹೆಯಿಂದ ಗೆಲುವು ದಾಖಲಿಸಿರುವುದೇ ಸಾಕ್ಷಿ.

ಮೂಲತಃ ರಿಯಲ್‌ ಎಸ್ಟೇಟ್‌ ಉದ್ಯಮಿಯಾದ ಯೋಗೇಶ್ವರ್‌ ಮೆಗಾ ಸಿಟಿ ಎಂಬ ರಿಯಲ್‌ ಎಸ್ಟೇಟ್‌ ಎಂಬ ಕಂಪನಿ ಸ್ಥಾಪಿಸಿ ನಡೆಸಿದ್ದರು. ನಂತರ ಸಿನಿಮಾ ಗೀಳು ಹಿಡಿಸಿಕೊಂಡು ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ನಂತರ ತಾವೇ ಬಂಡವಾಳ ಹೂಡಿ ಸೈನಿಕ ಮೊದಲಾದ ಚಿತ್ರಗಳಲ್ಲಿ ನಾಯಕ ನಟನಾಗಿಯೂ ಅಭಿನಯಿಸಿದ್ದರು. ನಂತರ 1999ರಲ್ಲಿ ರಾಜಕಾರಣ ಪ್ರವೇಶಿಸಿ ಸಿನಿಮಾ ಗೀಳನ್ನು ಕಡಿಮೆ ಮಾಡಿಕೊಂಡರು. ಅಲ್ಲಿಂದೀಚೆಗೆ ರಾಜಕೀಯದಲ್ಲಿ ಏಳು ಬೀಳುಗಳನ್ನು ಕಾಣುತ್ತಾ ಬಂದಿದ್ದಾರೆ. 2019ರಲ್ಲಿ ಮತ್ತೊಮ್ಮೆ ಅಪರೇಷನ್‌ ಕಮಲ ನಡೆಸಿ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಶಾಸಕರ ಆಪರೇಷನ್‌ ಗಾಗಿ ಬಂಡವಾಳವನ್ನೂ ಹೂಡಿದ್ದರು ಎಂದು ಅವರ ಆಪ್ತರು ಹೇಳುತ್ತಾರೆ. ಆಗ ಯಡಿಯೂರಪ್ಪ ಸಂಪುಟದಲ್ಲಿ ಸಚಿವರೂ ಆಗಿದ್ದರು.

ಯೋಗೇಶ್ವರ್‌ 1999ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಯೋಗೇಶ್ವರ್‌ ಗೆ ಯೋಗಾಯೋಗ ಕೂಡಿ ಬಂದಿತ್ತು. ಆಗ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದರು. ನಂತರ ಕಾಂಗ್ರೆಸ್‌ ಸೇರ್ಪಡೆಯಾಗಿ 2004 ಮತ್ತು 2008ರಲ್ಲಿ ಗೆಲುವು ದಾಖಲಿಸಿದ್ದರು. ಆಗ ಜೆಡಿಎಸ್‌ ನ ಎಂ.ಪಿ.ಅಶ್ವಥ್‌ ಅವರನ್ನು ಮಣಿಸಿದ್ದರು. 2011ರಲ್ಲಿ ಅಶ್ವಥ್‌ ಆಪರೇಷನ್‌ ಕಮಲದ ಪರಿಣಾಮ ಬಿಜೆಪಿ ಸೇರಿದ್ದರು. ಆಗ ಎದುರಾದ ಉಪ ಚುನಾವಣೆಯಲ್ಲಿ ಯೋಗೇಶ್ವರ್‌ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. 2009ರಲ್ಲಿಯೂ ಬಿಜೆಪಿಯಿಂದ ಗೆದ್ದಿದ್ದರು. 2013ರಲ್ಲಿ ಸಮಾಜವಾದಿ ಪಕ್ಷಕ್ಕೆ ಹಾರಿ ಆಗಲೂ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದರು ಎಂದರೆ ಕ್ಷೇತ್ರದ ಮೇಲೆ ಇವರಿಗಿರುವ ಹಿಡಿತ ಎಷ್ಟು ಎಂದು ಅರ್ಥವಾದೀತು. 2018ರ ಚುನಾವಣೆಯ ವೇಳೆಗೆ ಬಿಜೆಪಿಗೆ ಮರಳಿದ್ದರು. 2018 ಮತ್ತು 2023ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಯೋಗೇಶ್ವರ್‌ ಜೆಡಿಎಸ್‌ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರ ಎದುರು ಸೋಲು ಕಾಣಬೇಕಾಯಿತು. ನಂತರ ಅವರು ವಿಧಾನಪರಿಷತ್‌ ಸದಸ್ಯರಾಗಿ ಸಚಿವರಾಗಿದ್ದು ಇತಿಹಾಸ.

ಯೋಗೇಶ್ವರ್‌ ಕಾಂಗ್ರೆಸ್‌ ಬಿಟ್ಟ ನಂತರ ಅಲ್ಲಿ ಕಾಂಗ್ರೆಸ್‌ ಗೆ ನೆಲೆಯೇ ಇಲ್ಲವಾಗಿತ್ತು. ಯಾರೊಬ್ಬರೂ ಕೈ ಚಿನ್ಹೆಯಿಂದ ಗೆಲ್ಲು ಆಗಿರಲಿಲ್ಲ. ಎರಡು ಬಾರಿ ಕುಮಾರಸ್ವಾಮಿ ಗೆಲ್ಲಲು ಹಲವಾರು ಕಾರಣಗಳಿವೆ. ಈಗ ಆ ಕಾರಣಗಳೆಲ್ಲವೂ ಈಗ ಅವರಿಗೆ ತಿರುಗು ಬಾಣವಾಗುತ್ತಿವೆ. ತಮ್ಮ ಪುತ್ರ ನಿಖಿಲ್‌ ಅವರನ್ನು ನಿಲ್ಲಿಸಿ ಗೆಲ್ಲಿಸಿಕೊಲ್ಳಲು ಸಾಧ್ಯವಾಗದಷ್ಟು ಅಸಹಾಯಕರಾಗಿದ್ದಾರೆ ಕೇಂದ್ರ ಸಚಿವ ಕುಮಾರಸ್ವಾಮಿ.

ಇನ್ನು ಕ್ಷೇತ್ರದ ಯೋಗೇಶ್ವರ್‌ ಅವರಿಗೆ ಇರುವ ಹಿಡಿತ ಪ್ರಬಲವಾಗಿದೆ. ಮೊದಲನೆಯದಾಗಿ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು. ಯೋಗೇಶ್ವರ್‌ ಹತ್ತಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸಿ ಚನ್ನಪಟ್ಟಣದ ಭಗೀರಥ ಎಂದೇ ಹೆಸರುವಾಸಿಯಾಗಿದ್ದಾರೆ. ಎರಡನೆಯದಾಗಿ ಕ್ಷೇತ್ರದ ಜನರ ಜತೆ ಇರುವ ಒಡನಾಟ ಮತು ಬಾಂಧವ್ಯ ಅವರಿಗೆ ಹೆಚ್ಚಿನ ಮತಗಳನ್ನು ತಂದುಕೊಡುವುದರಲ್ಲಿ ಸಸಂದೇಹ ಇಲ್ಲ. ಮೂರನೆಯದಾಗಿ ಅಲ್ಪಸಂಖ್ಯಾತ ಮುಸಲ್ಮಾನ ಮತು ಹಿಂದುಳಿದ ವರ್ಗಗಳೊಂದಿಗೆ ಇಟ್ಟುಕೊಂಡಿರುವ ಒಡನಾಟ. ಈಗ ಕಾಂಗ್ರೆಸ್‌ ಸೇರ್ಪಡೆಯಾಗಿದ್ದು ಸಿದ್ದರಾಮಯ್ಯ ಶಿವಕುಮಾರ್‌ ಜಮೀರ್‌ ಅಹ್ಮದ್‌ ಕಾರಣಗಳಿಗಾಗಿ ಈ ಮತಗಳು ಮತ್ತಷ್ಟು ಕ್ರೋಢೀಕರಣಗೊಳ್ಳುತ್ತವೆ ಎಂದು ಯೋಗೇಶ್ವರ್‌ ಆಪ್ತರು ಹೇಳುತ್ತಾರೆ.

ರಾಜಕೀಯ ನಿಂತ ನೀರಲ್ಲ. ಸದಾ ಹರಿಯುತ್ತಲೇ ಇರುತ್ತದೆ. ಒಂದೊಂದು ಚುನಾವಣೆಗೆ ಒಂದೊಂದು ಚಿನ್ಹೆಯಿಂದ ಸ್ಪರ್ಧಿಸುತ್ತಿರುವ ಯೋಗೇಶ್ವರ್‌ ಅವರು ಮುಂದಿನ ಚುನಾವಣೆಯ ಹೊತ್ತಿಗೆ ಮತ್ತೊಂದು ಪಕ್ಷದಿಂದ ಕಣಕ್ಕಳಿಯಲೂಬಹುದು. ಡಿಕೆ ಶಿವಕುಮಾರ್‌ ಅವರ ಜತೆ ಸಾಗುವುದು ಅಷ್ಟೊಂದು ಸುಲಭ ಅಲ್ಲ ಎನ್ನುವುದು ಯೋಗೇಶ್ವರ್‌ ಅವರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಈ ಹೊತ್ತಿಗೆ ಯೋಗೇಶ್ವರ್‌ ಅವರಿಗೆ ಕಾಂಗ್ರೆಸ್‌, ಕಾಂಗ್ರೆಸ್‌ ಗೆ ಯೋಗೇಶ್ವರ್‌ ಅನಿವಾರ್ಯ ಎನ್ನುವುದು ಈ ಕ್ಷಣದ ಸತ್ಯ.

More articles

Latest article