ಇಸ್ರೇಲ್, ಇರಾನ್ ವಿಷಯದಲ್ಲಿ ಸಹ ಭಾರತದ ನಿಲುವು ಅಸ್ಪಷ್ಟ. ಜೊತೆಗೆ ಇತ್ತೀಚೆಗೆ ಪಾಕಿಸ್ತಾನದೊಂದಿಗಿನ ಸಂಘರ್ಷದಲ್ಲಿ ಸಹ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಮಾಲ್ಡಿವ್ಸ್ ಅಂತ ನೆರೆಹೊರೆ ರಾಷ್ಟ್ರಗಳು ಸಹ ನಮ್ಮೊಂದಿಗೆ ಸ್ಪಷ್ಟವಾಗಿ ನಿಲ್ಲಲಿಲ್ಲ. ಇದನ್ನು ಗಮನಿಸಿಯೇ ಭಾರತದ ವಿದೇಶಾಂಗ ನೀತಿ ದಿಕ್ಕು ತಪ್ಪುತ್ತಿದೆ ಎಂದು ಹೇಳುವುದು – ವಿವೇಕಾನಂದ ಎಚ್ ಕೆ.
78 ವರ್ಷಗಳ ಹಿಂದೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದ ಪರಿಸ್ಥಿತಿ ಒಂದು ರೀತಿಯಲ್ಲಿ ಶೋಚನೀಯ ಸ್ಥಿತಿಯಲ್ಲಿತ್ತು. ಅಂದರೆ ಸಾಮಾಜಿಕವಾಗಿ ಅತ್ಯಂತ ಅಸಮಾನತೆಯ, ಅಮಾನವೀಯ ಜಾತಿ ವ್ಯವಸ್ಥೆ ಎಲ್ಲಾ ಜನರನ್ನು ವಿಭಜಿಸಿತ್ತು. ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಹಸಿವಿನಿಂದ ನೂರಾರು ಜನರು ಪ್ರತಿನಿತ್ಯ ಸಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಶೈಕ್ಷಣಿಕವಾಗಿ ಅನಕ್ಷರಸ್ಥರ ಸಂಖ್ಯೆ 80% ಗೂ ಹೆಚ್ಚಿತ್ತು.
ಇಂತಹ ಪರಿಸ್ಥಿತಿಯಲ್ಲಿ ದೇಶವನ್ನು ಸಮಗ್ರವಾಗಿ ಕಟ್ಟುವುದು ಬಹಳ ಮುಖ್ಯವಾಗಿತ್ತು. ಆಗ ನಮಗೆ ಯಾವುದೇ ರೀತಿಯ ಅಂತಾರಾಷ್ಟ್ರೀಯ ಗೊಡವೆಯೇ ಬೇಡವೆಂದು ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಅಂತಾರಾಷ್ಟ್ರೀಯವಾಗಿ ಅಲಿಪ್ತ ನೀತಿಯನ್ನು ಅಳವಡಿಸಿಕೊಂಡರು. ಏಕೆಂದರೆ ಭಾರತಕ್ಕೆ ಸ್ವಾತಂತ್ರ್ಯ ಬರುವ ಹೊತ್ತಿಗೆ ವಿಶ್ವ ಎರಡು ಮಹಾ ಯುದ್ಧಗಳನ್ನು ಅನುಭವಿಸಿತ್ತು. ಅದರಲ್ಲೂ ಎರಡನೇ ಮಹಾಯುದ್ಧ ಆಗತಾನೇ ಮುಗಿದಿತ್ತು. ಇಂತಹ ಸಂದರ್ಭದಲ್ಲಿ ದೇಶ ಕಟ್ಟುವುದು ನೆಹರು ಅವರಿಗೆ ಬಹಳ ಮುಖ್ಯವಾಗಿತ್ತು. ಏಕೆಂದರೆ ನೆರೆಯ ಚೀನಾ ಮತ್ತು ನಮ್ಮಿಂದ ಬೇರ್ಪಟ್ಟು ಹೊಸದಾಗಿ ನಿರ್ಮಿತವಾದ ಪಾಕಿಸ್ತಾನ ಒಂದು ರೀತಿ ದಾಯಾದಿಗಳಂತೆ ವರ್ತಿಸುತ್ತಿದ್ದವು. ಆದ್ದರಿಂದ ಮುಖ್ಯವಾಗಿ ರಷ್ಯಾ ಮತ್ತು ಅಮೆರಿಕಾದ ಶೀತಲ ಸಮರದಲ್ಲಿ ಅಲಿಪ್ತ ನೀತಿ ಅವಶ್ಯವಾಗಿತ್ತು. ಆದರೂ ಒಳಗೊಳಗೆ ರಷ್ಯಾದೊಂದಿಗೆ ನಮ್ಮ ಬಾಂಧವ್ಯ ಉತ್ತಮವಾಗಿತ್ತು. ರಷ್ಯಾ ನಮ್ಮೊಂದಿಗೆ ಅಂದಿನಿಂದ ಇಂದಿನವರೆಗೂ ಒಳ್ಳೆಯ ಸಂಬಂಧವನ್ನು ಹೊಂದಿದೆ.
ಇದು ಬಹುತೇಕ ಎಲ್ಲಾ ಪ್ರಧಾನ ಮಂತ್ರಿಗಳ ಕಾಲದಲ್ಲೂ, ಕಾಂಗ್ರೆಸ್ ಹೊರತುಪಡಿಸಿ ವಿಪಕ್ಷಗಳು ಆಡಳಿತ ನಡೆಸಿದ ಸಂದರ್ಭದಲ್ಲೂ, ಅಂದರೆ ವಾಜಪೇಯಿ ಮುಂತಾದವರ ಸಮಯದಲ್ಲೂ ಇದೇ ನೀತಿಯೇ ಹೆಚ್ಚು ಕಡಿಮೆ ಜಾರಿಯಲ್ಲಿತ್ತು, ಆದರೆ ಕಳೆದ 11 ವರ್ಷಗಳ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತ ಬಹುತೇಕ ಅಲಿಪ್ತ ನೀತಿಯಿಂದ ದೂರ ಸರಿಯುತ್ತಿದೆ.
ಹಾಗಾದರೆ ರಷ್ಯಾ ಅಥವಾ ಅಮೆರಿಕಾ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡಿದ್ದೇವೆಯೇ ಎಂದರೆ ಅದು ಸಹ ಸ್ಪಷ್ಟವಾಗಿಲ್ಲ. ಭಾರತ ಮೂಲಭೂತವಾಗಿ ಈಗಲೂ ಅಲಿಪ್ತ ನೀತಿಯನ್ನೇ ಅಳವಡಿಸಿಕೊಂಡಿದೆ. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅನುಕೂಲಕ್ಕೆ ಮತ್ತು ಮನೋಭಾವಕ್ಕೆ ತಕ್ಕಂತೆ ವ್ಯಾವಹಾರಿಕ ಮತ್ತು ಸೈನಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಈ ನೀತಿಯನ್ನು ವೈಯಕ್ತಿಕ ಮಟ್ಟದಲ್ಲಿ ಬದಲಾಯಿಸಿಕೊಂಡು ಬರುತ್ತಿದ್ದಾರೆ. ಒಮ್ಮೆ ನಮ್ಮ ದೇಶದ ವಿದೇಶಾಂಗ ನೀತಿಗೆ ವಿರುದ್ಧವಾಗಿ ಅಮೆರಿಕ ಚುನಾವಣೆಯ ಸಂದರ್ಭದಲ್ಲಿ ಸ್ವತಃ ಪ್ರಧಾನಿ ಮೋದಿ ಅವರೇ ಖುದ್ದು ಪ್ರಚಾರ ಮಾಡಿದ ಅತ್ಯಂತ ಬಾಲಿಶ ನಡವಳಿಕೆಯನ್ನು ಪ್ರದರ್ಶಿಸಿದರು.
” ಅಬ್ ಕಿ ಬಾರ್ ಟ್ರಂಪ್ ಕಿ ಸರ್ಕಾರ್ “
ಹೀಗೆ 2020 ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಅಮೆರಿಕದಲ್ಲಿಯೇ ಒಂದು ಚುನಾವಣಾ ಭಾಷಣ ಮಾಡಿದರು. ಮೂಲಭೂತವಾಗಿ ಈ ಭಾಷಣ ಭಾರತದ ಅಲಿಪ್ತ ನೀತಿಗೆ ವಿರುದ್ಧವಾಗಿತ್ತು. ಹಾಗೆಯೇ ಭಾರತದಂತ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ ಇನ್ನೊಂದು ರಾಷ್ಟ್ರದ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುವುದು ಉತ್ತಮ ನಡೆಯಾಗಿರಲಿಲ್ಲ. ಜೊತೆಗೆ ಇದು ಮೋದಿಯವರ ವಿದೇಶಾಂಗ ನೀತಿಯ ದೂರದೃಷ್ಟಿತ್ವ ಮತ್ತು ಗ್ರಹಿಕೆಯ ಕೊರತೆಯಲ್ಲಿನ ತಪ್ಪು ತೀರ್ಮಾನವಾಗಿತ್ತು. ಈಗ ಅದು ನಿಜವಾಗಿದೆ.
ಕೊನೆಗೂ ಆ ಚುನಾವಣೆಯಲ್ಲಿ ಟ್ರಂಪ್ ಸೋತು ಜೋ ಬೈಡನ್ ಅಧ್ಯಕ್ಷರಾಗುತ್ತಾರೆ. ಅಲ್ಲಿಂದಲೇ ಭಾರತ ಅಮೆರಿಕಾದ ನಡುವಿನ ಸಂಬಂಧ ಸ್ವಲ್ಪ ಮಟ್ಟಿಗೆ ಕುಸಿಯತೊಡಗಿತು. ವಾಸ್ತವವಾಗಿ ಅಮೆರಿಕಾದ ಅಧ್ಯಕ್ಷರಲ್ಲಿಯೇ ಅತ್ಯಂತ ಕೆಳಮಟ್ಟದ ನೈತಿಕತೆಯನ್ನು ಹೊಂದಿರುವವರು ಡೊನಾಲ್ಡ್ ಟ್ರಂಪ್. ಅಮೆರಿಕಾದ ಘನತೆಯನ್ನು ಮಣ್ಣು ಪಾಲು ಮಾಡುತ್ತಿರುವವರು. ಅಮೆರಿಕಾದ ಶ್ರೇಷ್ಠತೆಯನ್ನು ಪ್ರಶ್ನಿಸುವಂತೆ ಮಾಡುತ್ತಿರುವವರು. ಅಮೆರಿಕಾದ ನಾಯಕತ್ವವನ್ನು, ವಿಶ್ವದ ದೊಡ್ಡಣ್ಣ ಎಂಬ ಬಿರುದನ್ನು ಕಳೆದುಕೊಳ್ಳುವಂತೆ ಮಾಡುತ್ತಿರುವವರು. ಅಂತಹ ವ್ಯಕ್ತಿಯನ್ನು ನರೇಂದ್ರ ಮೋದಿಯವರು ಬೆಂಬಲಿಸಿದ್ದು ಸರಿಯಾದ ನಡೆ ಆಗಿರಲಿಲ್ಲ.
ಇದೀಗ ಅಮೆರಿಕ ವಿರುದ್ಧ ರಷ್ಯಾ ಚೀನಾದೊಂದಿಗೆ ಖಾಸಗಿ ಎನ್ನುವಂತ ರೀತಿಯ ಮಾತುಕತೆಗಳನ್ನು ನಡೆಸುತ್ತಿದ್ದಾರೆ. ಆದರೆ ಅದಕ್ಕೆ ವಿರುದ್ಧವಾಗಿ ಅಮೆರಿಕಾದಲ್ಲಿ ಟ್ರಂಪ್ ಎಂಬ ಮಾನಸಿಕವಾಗಿ ಅಷ್ಟೇನೂ ಉತ್ತಮ ಗುಣಮಟ್ಟ ಹೊಂದದ ವ್ಯಕ್ತಿ ಅಧಿಕಾರದಲ್ಲಿ ಇರುವಾಗ ಭಾರತದ ಈ ಪರೋಕ್ಷ ಜಗಳಗಂಟತನ ಯಾವ ರೀತಿ ಪರಿಣಾಮ ಬೀರಬಹುದು ಎಂಬುದು ಕುತೂಹಲಕರವಾಗಿದ್ದರೂ ಭಾರತ ವಿದೇಶಾಂಗ ನೀತಿ ದಾರಿ ತಪ್ಪುತ್ತಿದೆ ಎಂದು ಈ ಕ್ಷಣದಲ್ಲಿ ಸ್ಪಷ್ಟವಾಗಿ ಅಭಿಪ್ರಾಯಪಡಬಹುದು.
ಭಾರತ ಸ್ವಾತಂತ್ರ್ಯ ಕಾಲದಿಂದಲೂ ಅಮೇರಿಕಾ ಮತ್ತು ಇತರ ಪಾಶ್ಚಾತ್ಯ ದೇಶಗಳೊಂದಿಗೆ ಅತ್ಯುತ್ತಮ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಭಾವನಾತ್ಮಕ ಸಂಬಂಧವನ್ನು ಹೊಂದಿದೆ. ರಷ್ಯಾ ಚೀನಾದೊಂದಿಗೆ ವ್ಯಾವಹಾರಿಕವಾಗಿ ಎಷ್ಟೇ ವಾಣಿಜ್ಯ ವ್ಯಾಪಾರಗಳು ಅಭಿವೃದ್ಧಿ ಹೊಂದಿದ್ದರೂ ಅಮೆರಿಕದೊಂದಿಗೆ ತನ್ನ ಬಾಂಧವ್ಯಕ್ಕೆ ಒಂದು ರೀತಿಯ ವಿಶೇಷ ಮಾನ್ಯತೆ ಇದೆ. ಇದನ್ನು ನಾವು ಗಮನಿಸಬೇಕಿದೆ. ಇಂದು ಡೊನಾಲ್ಡ್ ಟ್ರಂಪ್ ಕಾರಣಕ್ಕಾಗಿ ಅಥವಾ ಪಾಕಿಸ್ತಾನದೊಂದಿಗಿನ ಅವರ ನಡವಳಿಕೆಗಾಗಿ ಅಮೆರಿಕವನ್ನು ವಿರೋಧಿ ದೇಶ ಎಂದು ಗುರುತಿಸುವುದು ಉತ್ತಮ ನಡೆಯಲ್ಲ. ವಿಶ್ವದಲ್ಲಿ ಅಮೆರಿಕ ಸ್ವಾತಂತ್ರ್ಯ, ಸಮಾನತೆಯನ್ನು ಎತ್ತಿ ಹಿಡಿಯುವ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸುವ ವ್ಯವಸ್ಥೆ ಹೊಂದಿದೆ. ಅದು ಬಂಡವಾಳಶಾಹಿ ವ್ಯವಸ್ಥೆ ಮತ್ತು ದಗಲ್ಬಾಜಿತನದ ಪರೋಕ್ಷ ಭಯೋತ್ಪಾದಕನಂತೆ ಕೆಲವು ಬಾರಿ ವರ್ತಿಸಿದರು. ಅಲ್ಲಿನ ಜನರಲ್ಲಿ ಈಗಲೂ ಅಭಿವ್ಯಕ್ತಿ ಸ್ವಾತಂತ್ರ್ಯ ಜೀವಂತವಿದೆ ಮತ್ತು ಅದಕ್ಕೆ ಬೆಲೆ ಇದೆ. ಜೊತೆಗೆ ಅದೊಂದು ಶ್ರೀಮಂತ ರಾಷ್ಟ್ರ. ಅದರೊಂದಿಗಿನ ಘರ್ಷಣೆ ಭಾರತಕ್ಕೆ ಕಳವಳಕಾರಿಯಾಗಬಹುದು.
ಹಿಂದೆ ಶ್ರೀಮತಿ ಇಂದಿರಾಗಾಂಧಿಯವರ ಕಾಲದಲ್ಲಿ ಕೆಲವು ವಿಷಯದಲ್ಲಿ ಅಮೆರಿಕಾಗೆ ಸೆಡ್ಡು ಹೊಡೆದು ಹಸಿರು ಕ್ರಾಂತಿಯ ಮುಖಾಂತರ ಆಹಾರ ಸ್ವಾತಂತ್ರ್ಯದ ಸ್ವಾವಲಂಬನೆ ಸಾಧಿಸಿದ್ದು ನಿಜ. ಆದರೆ ಆಗ ಅದು ಘರ್ಷಣೆಯ ರೂಪದಲ್ಲಿರಲಿಲ್ಲ. ಸ್ವಾಭಿಮಾನದ ರೂಪದಲ್ಲಿತ್ತು. ಆದರೆ ಈಗಿನ ತಂತ್ರಜ್ಞಾನದ ಕಾಲದಲ್ಲಿ ಮೋದಿ ಮತ್ತು ಟ್ರಂಪ್ ವೈಯಕ್ತಿಕ ಸಂಘರ್ಷದಲ್ಲಿರುವಂತೆ ಕಾಣುತ್ತಿದೆ. ಇದು ವಿದೇಶಾಂಗ ನೀತಿ ದಿಕ್ಕು ತಪ್ಪಲು ಕಾರಣವಾಗಿದೆ. ಆದಷ್ಟು ಬೇಗ ಈ ಸಂಘರ್ಷವನ್ನು ಕೊನೆಗಾಣಿಸಿಕೊಳ್ಳಬೇಕು. ಏಕೆಂದರೆ ಸಂಘರ್ಷಗಳು ಪ್ರಾರಂಭವಾಗುವುದು ಸಣ್ಣ ಮಟ್ಟದಲ್ಲಿ ಆದರೂ ಅದರ ಪರಿಣಾಮಗಳು ದೀರ್ಘವಾಗಿರುತ್ತವೆ. ಕೆಲವೊಮ್ಮೆ ಭೀಕರವಾಗಿರುತ್ತವೆ. ಅದಕ್ಕೆ ಅವಕಾಶ ಕೊಡಬಾರದು. ಇದೇನು ಯಾರೋ ಒಬ್ಬರ ಖಾಸಗಿ ಆಸ್ತಿಯಲ್ಲ. ಇವತ್ತು ಟ್ರಂಪ್ ಇದ್ದರೆ ಅಥವಾ ಮೋದಿ ಇದ್ದರೆ ನಾಳೆ ಮತ್ತೊಬ್ಬರು ದೇಶಗಳನ್ನು ಮುನ್ನಡೆಸುತ್ತಾರೆ. ಆದರೆ ದೇಶದ ಜನರಿಗೆ ತೊಂದರೆ ಆಗಬಾರದು. ಅದು ಮುಖ್ಯವಾಗಬೇಕು.
ಇಸ್ರೇಲ್, ಇರಾನ್ ವಿಷಯದಲ್ಲಿ ಸಹ ಭಾರತದ ನಿಲುವು ಅಸ್ಪಷ್ಟ. ಜೊತೆಗೆ ಇತ್ತೀಚೆಗೆ ಪಾಕಿಸ್ತಾನದೊಂದಿಗಿನ ಸಂಘರ್ಷದಲ್ಲಿ ಸಹ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಮಾಲ್ಡಿವ್ಸ್ ಅಂತ ನೆರೆಹೊರೆ ರಾಷ್ಟ್ರಗಳು ಸಹ ನಮ್ಮೊಂದಿಗೆ ಸ್ಪಷ್ಟವಾಗಿ ನಿಲ್ಲಲಿಲ್ಲ. ಇದನ್ನು ಗಮನಿಸಿಯೇ ಭಾರತದ ವಿದೇಶಾಂಗ ನೀತಿ ದಿಕ್ಕು ತಪ್ಪುತ್ತಿದೆ ಎಂದು ಹೇಳುವುದು. ಇನ್ನು ಮುಂದಾದರೂ ಭಾರತ ಈ ನೆಲದ ಮಣ್ಣಿನ ಗುಣಕ್ಕೆ ಅನುಕೂಲಕರವಾದ ಅಲಿಪ್ತ ನೀತಿಯನ್ನು ಮುಂದುವರಿಸಿಕೊಂಡು ಅಲಿಪ್ತ ರಾಷ್ಟ್ರಗಳ ನಾಯಕನಾಗಿ ಮತ್ತೆ ಮುನ್ನಡೆಯೋಣ…..
(ಮನಸ್ಸುಗಳ ಅಂತರಂಗದ ಚಳವಳಿ)
ವಿವೇಕಾನಂದ. ಎಚ್. ಕೆ
ಪತ್ರಕರ್ತರು, ಬರಹಗಾರರು.
ಇದನ್ನೂ ಓದಿ- http://ಅದೊಂದು ದೊಡ್ಡ ಕತೆ-ಆತ್ಮಕಥನ ಸರಣಿ -3 https://kannadaplanet.com/its-a-big-story-autobiography-series-part-3/