ಚೆಂದದ ಬದುಕಿಗೆ ಬೇಕಿರುವುದೇನು?

Most read

ಪ್ರೀತಿ, ಪ್ರೇಮ, ಸ್ನೇಹ, ಕರುಣೆ, ಮೈತ್ರಿ ಮತ್ತು ಸಹನೆಯಿಂದ ಮಾತ್ರ ಬದುಕನ್ನ ಚಂದವಾಗಿ ಕಟ್ಟಿಕೊಳ್ಳುವುದಕ್ಕೆ ಸಾಧ್ಯ. ಕೊನೆಯವರೆಗೂ ನಮ್ಮೊಂದಿಗೆ ನಮ್ಮನ್ನ ಉಳಿಯುವಂತೆ ಮಾಡುವುದು ನಮ್ಮ ಒಳ್ಳೆಯತನ ಮತ್ತು ಮಾನವೀಯ ಮೌಲ್ಯಗಳು ಅಷ್ಟೇ. ಬಣ್ಣಗಳು ಮಾಸುತ್ತವೆ, ಸುಂದರವಾದ ದೇಹ ಸುಕ್ಕುಗಟ್ಟುತ್ತದೆ – ಶೃಂಗಶ್ರೀ ಟಿ, ಉಪನ್ಯಾಸಕಿ

ಮೊನ್ನೆ ನನ್ನ ಗೆಳತಿಯ ನಿಶ್ಚಿತಾರ್ಥದ ಫೋಟೋಗಳನ್ನ ವಿಷ್ ಮಾಡುವ ಸಲುವಾಗಿ ಸ್ಟೇಟಸ್‌ ಗೆ ಹಾಕಿದ್ದೆ. ಆ ಸ್ಟೇಟಸ್‌ ಗೆ ಅವಳಿಗೆ ಪರಿಚಯ ಇದ್ದವರು ಇಲ್ಲದವರೂ ಕೂಡ ಬಹಳಷ್ಟು ಕಾಮೆಂಟ್ ಗಳನ್ನ ಮಾಡಿದ್ದರು.

ಕೆಲವರ ಕಾಮೆಂಟ್ ಗಳು ಕುಹಕವಾಗಿ, ನೋವುಂಟು ಮಾಡುವ ಹಾಗಿದ್ದವು. ಹುಡುಗಿಗಿಂತ ಹುಡುಗ ದಪ್ಪವಿರುವ ಕಾರಣಕ್ಕೆ. ಅವಳ ಬದುಕೇ ಮುಗಿಯಿತು ಅನ್ನುವ ಹಾಗೆ ಕಾಮೆಂಟ್ ಮಾಡುತ್ತಿದ್ದರು. ಕೆಲವರು ಅವಳ ಮೇಲೆ ಅವನು ಬಿದ್ದರೆ ಅವಳು ಅಪ್ಪಚ್ಚಿ ಆಗ್ತಾಳೆ ಪಾಪ, ಏನ್ ಮ್ಯಾಡಮ್ ಹುಡುಗನಿಗೆ ಗವರ್ನ್‌ ಮೆಂಟ್ ಕೆಲಸಾನ ? ಒಳ್ಳೆ ಕುಳಾನ ? ಹುಡುಗ ಫುಲ್ ರಿಚ್ ಆ ? ಅಂತೆಲ್ಲಾ ತರಹೇವಾರಿ ತಲೆಗೆ ಬಂದದ್ದನ್ನ ಕಾಮೆಂಟ್ ಮಾಡುತ್ತಿದ್ದರು. ಕೆಲವರು ದೇಹದ ಬಗ್ಗೆ, ಸೌಂದರ್ಯದ ಬಗ್ಗೆ, ದೇಹದ ಗಾತ್ರದ ಬಗೆಗೆ ಬಹಳ ಕಾನ್ಷಿಯಸ್ನೆಸ್ ಆಗಿ ವಾದ ಮಾಡುತ್ತಿದ್ದರು.  

ಅವಳಿಗೆಷ್ಟವಿಲ್ಲದ ಮದುವೆಯಾ,‌ಮನೆಯಲ್ಲಿ ಹಿಂಸೆಯಾ ? ಅಂತೆಲ್ಲಾ ಕೇಳುತ್ತಿದ್ದರು. ನನಗೇ ಆ ಕಾಮೆಂಟ್ ಗಳಿಗೆ ಉತ್ತರಿಸುವಷ್ಟರಲ್ಲಿ ಸಾಕು ಸಾಕಾಯಿತು. ಇನ್ನು ಅವಳ ಕತೆ ಕೇಳಬೇಡಿ. ನಿಶ್ಚಿತಾರ್ಥ ಮುಗಿಸಿ ಆಫೀಸಿಗೆ ತೆರಳಿದ ಬಳಿಕ ಅವಳಿಗಂತೂ ಸಾವಿರ ಸಾವಿರ ಪ್ರಶ್ನೆಗಳು. ತಲೆಗೊಂದು ಮಾತುಗಳು, ಕಾಮೆಂಟ್‌ಗಳು.

ಅವಳೇ ಇಷ್ಟ ಪಟ್ಟು ಆ ಹುಡುಗನ ಒಳ್ಳೆಯ ಗುಣಗಳನ್ನು, ಅವರ ಸಪೋರ್ಟಿವ್, ಲಿಬರಲ್ ಮೈಂಡ್ ಸೆಟ್ ಗಮನಿಸಿ ಮನಸಾರೆ ಮೆಚ್ಚಿ ಮದುವೆಗೆ ಒಪ್ಪಿದ್ದಾಳೆ. ದುಡ್ಡಿನ ಮೋಹಕ್ಕಾಗಿಯೋ, ಗವರ್ನ್‌ ಮೆಂಟ್ ಉದ್ಯೋಗವಂತಲೋ ಅಲ್ಲ.

ಹೀಗೆಲ್ಲಾ ಬೇಕಾಬಿಟ್ಟಿ ಕಾಮೆಂಟ್ ಮಾಡುವ ಮುಂಚೆ, ಹೆಣ್ಣಿನ ಪರಿಸ್ಥಿತಿಯನ್ನೂ, ಅವಳ ಮನಸ್ಸಿಗೆ ಆಗಬಹುದಾದ ನೋವನ್ನೂ  ಕಿಂಚಿತ್ತೂ ಗಮನಿಸದೆ,  ಯೋಚಿಸದೆ ಮಾತನಾಡುವುದನ್ನು ನಮಗೆ ನಾವೇ ಅವಲೋಕಿಸಿಕೊಳ್ಳಬೇಕು.

 ಇದೇ ವಿಷಯಕ್ಕೆ ರಿಲೇಟ್ ಆಗುವಂತೆ ಈ ಹಿಂದೆ ಹೊಸದಾಗಿ ಮದುವೆಯಾದ ಸಣ್ಣ ವಯಸ್ಸಿನಿಂದಲೂ ಒಳ್ಳೆಯ ಸ್ನೇಹ ಸಂಬಂಧವನ್ನ ಇರಿಸಿಕೊಂಡಿದ್ದ ಪ್ರೀತಿಸಿ ಮದುವೆಯಾದ ಅನಂತ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ರ ಜೋಡಿಯ ಬಗೆಗೆ ಬಹಳಷ್ಟು ಕೆಟ್ಟದಾಗಿ ಕಾಮೆಂಟ್‌ ಗಳನ್ನು ಜನರು ಮಾಡಿದ್ದರು. ಅದರಲ್ಲಿ ಮುಖ್ಯವಾಗಿ ಅವರ ಲೈಂಗಿಕ ಬದುಕಿನ ಬಗ್ಗೆ ಅವನು ಅವಳ ದೇಹದ ಮೇಲೆ ಬಿದ್ದರೆ ಅವಳು ಅಪ್ಪಚ್ಚಿಯೇ ಎಂಬಂತೆ ಮಾತನಾಡಿದವರಿಗೆ ನನ್ನದೊಂದು ಪ್ರಶ್ನೆ.

ಇಲ್ಲಿ ಹೆಣ್ಣು ಕೇವಲ ಆಸ್ತಿಗಾಗಿ, ಅಂತಸ್ತಿಗಾಗಿ ಅಷ್ಟೇ ಮದುವೆಯಾದದ್ದೇ?  ಬಹಳ ವರ್ಷಗಳಿಂದ ಪ್ರೀತಿಸಿ ಮದುವೆಯಾಗುವ ಸಮಯದಲ್ಲಿ ಅನಾರೋಗ್ಯದಿಂದಲೋ, ಮಾನಸಿಕ ಒತ್ತಡದಿಂದಲೋ, ಹೆರಿಡಿಟರಿಯ ಕಾರಣಗಳಿಂದಲೋ ಹುಡುಗ ಅಥವಾ ಹುಡುಗಿ ದಪ್ಪವಾಗಿ ಅಸಹ್ಯವಾಗಿ ಕಾಣುವಂತಾದರೆ ಆ ಹುಡುಗನನ್ನ ಅಥವಾ ಹುಡುಗಿಯನ್ನ ಬಿಟ್ಟುಬಿಡುವುದಾ???  ಅಥವಾ ಮದುವೆಯಾದ ಮೇಲೆ ಆ ಹುಡುಗ/ಹುಡುಗಿ ಧಡೂತಿ ದೇಹ ಪಡೆದರೆ ಡೈವರ್ಸ್ ಕೊಡುವುದಾ  ಹೇಗೆ !? ಉತ್ತರಿಸಿ.

 ನಂತರ ನನ್ನ ಬಹಳ ಮುಖ್ಯವಾದ ಪ್ರಶ್ನೆ ಗಂಡ ಏಕೆ ಹೆಣ್ಣಿನ ಮೇಲೆ ಬೀಳಬೇಕು ಅಥವಾ ಇನ್ನೇನೋ.  ಯಾಕೆ ಗಂಡಿನ ಮೇಲೆ ಹೆಣ್ಣು ಬಿದ್ದರೆ ಅಥವಾ‌ ಮಲಗಿದರೆ ಅಪರಾಧವೇ ? ಖಂಡಿತ ಅಪರಾಧ  ಯಾಕೆಂದರೆ ಇದು ಪುರುಷ ಪ್ರಧಾನ ಸಮಾಜ. ಈ ಪುರುಷ ಪ್ರಧಾನ ಸಮಾಜದಲ್ಲಿ ಗಂಡೇ ಮೇಲು ಹೆಣ್ಣು ಕೀಳು.  ಅವಳು ಯಾವುದೇ ಕಾರಣಕ್ಕೂ ಗಂಡಿನ ಸರಿಸಾಟಿ ನಿಲ್ಲುವ, ಕೂರುವ, ಮಲಗುವ ಹಾಗಿಲ್ಲ.

ಸಂಭೋಗದ ಸಮಯದಲ್ಲೂ ಕೂಡ ಗಂಡ-ಹೆಣ್ಣಿನ ಮೇಲೆ ಮಲಗುವುದು ಒಂದು ರೀತಿಯ ಲಾ ಇದ್ದ ಹಾಗೆ. ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರವೇ ಇದರೊಳಗೆ ಅಡಗಿರುವ ರಾಜಕೀಯ ಲಿಂಗ-ತಾರತಮ್ಯ ತಿಳಿಯುವುದಕ್ಕೆ ಸಾಧ್ಯ. ಇದು  ಪುರುಷರ ಆಧಿಪತ್ಯವನ್ನೂ ಮಹಿಳೆಯರ ಮೇಲಿನ ನಿಯಂತ್ರಣವನ್ನೂ ತೋರಿಸುತ್ತದೆ. ಈ ವಿಷಯದ ಕುರಿತು ಸೆಕ್ಸ್ ಪಾಸಿಟಿವ್ ಫೆಮಿನಿಸಂ ಕೂಡ ಶ್ರೇಣೀಕರಣ ಅಥವಾ ಆಧಿಪತ್ಯವನ್ನು ಪ್ರಶ್ನಿಸಿ ಪರಸ್ಪರ ಗಂಡು ಹೆಣ್ಣಿನ ನಡುವೆ ತೃಪ್ತಿ ಮತ್ತು ಒಪ್ಪಿಗೆಯಷ್ಟೇ ಮುಖ್ಯ ಎಂಬುದನ್ನು ಮಾತನಾಡುತ್ತದೆ.

ಇನ್ನು ಮುಂದುವರಿದು ಸಿಮೋನ್ ದಿ ಬೋವೊರ್ ತನ್ನ “ದಿ ಸೆಕೆಂಡ್ ಸೆಕ್ಸ್” ಎಂಬ ಪುಸ್ತಕದಲ್ಲಿ ಮಹಿಳೆಯ ಲೈಂಗಿಕತೆಯನ್ನು ಪುರುಷ ಸಂತೋಷದ ಕಡೆಗೆ ಹೊಂದಿಸಲು ಪಿತೃಸತ್ತೆ ಹೇಗೆ ಪ್ರಭಾವಿಸುತ್ತದೆ ಎಂಬುದರ ಕುರಿತು ಚರ್ಚಿಸಿದ್ದಾರೆ.

 ಬೆಲ್ ಹುಕ್ಸ್, “The Will to Change” ಕೃತಿಯಲ್ಲಿ, ಪಿತೃಸತ್ತೆಯು ಪುರುಷರನ್ನು ಹೇಗೆ ಪ್ರಭಾವಿಸುತ್ತದೆ ಎಂಬುದರ ಕುರಿತಾದ ಚರ್ಚೆಯನ್ನು ಮುಂದುವರಿಸುತ್ತಾರೆ. ಅವರು ಪುರುಷರ ಮತ್ತು ಮಹಿಳೆಯರ ನಡುವಿನ ಸಮಾನತೆಯನ್ನು ಉತ್ತೇಜಿಸುವ ಸಂಬಂಧಗಳ ಅಗತ್ಯವಿದೆ ಎಂದು ಹೇಳಿರುವುದನ್ನು ನೋಡಬಹುದು. ಇನ್ನೂ ಸರಳವಾಗಿ ಹೇಳುವುದಾದರೆ ಗಂಡು ಮತ್ತು ಹೆಣ್ಣಿನ ನಡುವೆ ಪರಸ್ಪರ ಗೌರವ ಸಮಾನತೆ ಪರಸ್ಪರ ಸಮ್ಮತಿಯಿದ್ದರೆ ಸಾಕು. ಸಮಾಜವನ್ನ ಒಪ್ಪಿಸುವ ಅಗತ್ಯವಿಲ್ಲ. ಇನ್ನೊಬ್ಬರ ದೇಹದ ಭಾಗಗಳ ಕುರಿತು ಕೆಟ್ಟದಾಗಿ ಕಾಮೆಂಟ್‌ ಗಳನ್ನ ಮಾಡುವುದಕ್ಕೆ ನಮಗೆ ಯಾವ ಹಕ್ಕು ಇಲ್ಲ. ಅದು ಮನುಷ್ಯತ್ವವೂ ಅಲ್ಲ.

ಪ್ರೀತಿ, ಪ್ರೇಮ, ಸ್ನೇಹ, ಕರುಣೆ, ಮೈತ್ರಿ ಮತ್ತು ಸಹನೆಯಿಂದ ಮಾತ್ರ ಬದುಕನ್ನ ಚಂದವಾಗಿ ಕಟ್ಟಿಕೊಳ್ಳುವುದಕ್ಕೆ ಸಾಧ್ಯ. ಕೊನೆಯವರೆಗೂ ನಮ್ಮೊಂದಿಗೆ ನಮ್ಮನ್ನ ಉಳಿಯುವಂತೆ ಮಾಡುವುದು ನಮ್ಮ ಒಳ್ಳೆಯತನ ಮತ್ತು ಮಾನವೀಯ ಮೌಲ್ಯಗಳು ಅಷ್ಟೇ. ಬಣ್ಣಗಳು ಮಾಸುತ್ತವೆ, ಸುಂದರವಾದ ದೇಹ ಸುಕ್ಕುಗಟ್ಟುತ್ತದೆ…

ಕೊನೆಯದಾಗಿ ಮದುವೆಯು ಮದುವೆಯಾಗುವ ಗಂಡು ಹೆಣ್ಣಿಗೆ ಬಿಟ್ಟಿದ್ದು. ಅವರವರ ಆಯ್ಕೆ ಮತ್ತು ನಿರ್ಧಾರದ ಮೇಲೆ ಬದುಕು ಸಾಗಬೇಕು. ಉಳಿದವರ ಚಪಲಗಳು ಸೌಂದರ್ಯದ  ಬಗೆಗಿನ ಹುಚ್ಚುತನಗಳು ಪ್ರೀತಿಸುವ ಹೃದಯಗಳಿಗೆ ಎಂದೂ ಅಡ್ಡಿಯಾಗಬಾರದು. ಇಲ್ಲಿ ಕೊನೆಯವರೆಗೂ ಉಳಿಯುವುದು ನಿಷ್ಕಲ್ಮಶ ಪ್ರೀತಿ ಮಾತ್ರ.

ಇವರು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ.

ಇದನ್ನೂ ಓದಿ- ಕಪ್ಪು ಬಣ್ಣದ ಹೆಣ್ಣು ಅಲಂಕಾರಕ್ಕೆ ಅನರ್ಹಳೇ?

More articles

Latest article