ಬೆಂಗಳೂರು: ಇತ್ತೀಚೆಗೆ ಹೆಚ್ಚಾಗುತ್ತಿರುವ “ಡಿಜಿಟಲ್ ಅರೆಸ್ಟ್” ಹೆಸರಿನ ಆನ್ಲೈನ್ ವಂಚನೆ ಪ್ರಕರಣಗಳ ತಡೆಗೆ ಮುಂದಾಗಿರುವ ರಾಜ್ಯ ಪೊಲೀಸ್ ಇಲಾಖೆ ಈ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಅತ್ಯಂತ ಸರಳವಾಗಿ ವಿವರಣೆಗಳುಳ್ಳ ವಿಡಿಯೋ ಪೋಸ್ಟರ್ ನ್ನು ಬಿಡುಗಡೆ ಮಾಡಿದೆ.
“ಡಿಜಿಟಲ್ ಅರೆಸ್ಟ್” ಎಂಬ ಸೈಬರ್ ವಂಚನೆಯ ಬಗ್ಗೆ ಜಾಗರೂಕರಾಗಿರಿ ಎನ್ನುವ ಶೀರ್ಷಿಕೆಯಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್ ಅವರು ತಮ್ಮ ತಮ್ಮ ಅಧಿಕೃತ “X” ಖಾತೆ @DgpKarnataka ದಲ್ಲಿ ಹಂಚಿಕೊಂಡಿದ್ದಾರೆ.
“ಡಿಜಿಟಲ್ ಅರೆಸ್ಟ್” ಎಂದರೆ ಏನು, ಇದು ನಿಜವೇ ಮತ್ತು ಡಿಜಿಟಲ್ ಅರೆಸ್ಟ್ ಬಳಸಿಕೊಂಡು ಆನ್ಲೈನ್ ವಂಚಕರು ಜನರ ಹಣವನ್ನು ಹೇಗೆ ದೋಚುತ್ತಾರೆ ಎನ್ನುವ ಕುರಿತು ತಿಳಿದುಕೊಂಡು ಜಾಗರೂಕರಾಗಲು ಪೊಲೀಸ್ ಇಲಾಖೆ ಈ ಮೂಲಕ ಕರೆ ನೀಡಿದೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚಕರು ಮುಗ್ಧ ಜನತೆಯನ್ನು ತಮ್ಮ ವಂಚನೆಯ ಜಾಲದಲ್ಲಿ ಬೀಳಿಸಲು ಅನುಸರಿಸುವ ಪ್ರಕ್ರಿಯೆಗಳ ಕುರಿತು ಉದಾಹರಣೆ ಸಮೇತವಾಗಿ ಈ ವಿಡಿಯೋದಲ್ಲಿ ವಿವರಿಸಲಾಗಿದೆ.
ಮೊಬೈಲ್ ಸಂಖ್ಯೆಗೆ ಐವಿಆರ್ ಸಂಸ್ಥೆಯಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ಕೊರಿಯರ್ ಕಂಪನಿ ಅಥವಾ ಕಸ್ಟಮ್ ಇಲಾಖೆಯವರು ಇಲ್ಲವೇ ಪೊಲೀಸ್ ಅಧಿಕಾರಿಗಳೆಂದು ಬಿಂಬಿಸಿ, ವ್ಯಕ್ತಿಗಳನ್ನು ನಂಬಿಸಲು ಪ್ರಯತ್ನಿಸುತ್ತಾರೆ. ಜೊತೆಗೆ ನಿಮ್ಮ ಹೆಸರಿನಲ್ಲಿ ಪಾರ್ಸಲ್ ಅಥವಾ ಕೊರಿಯರ್ ಬಂದಿದೆ. ಅದರಲ್ಲಿ ಮಾದಕ ದ್ರವ್ಯಗಳಿವೆ ಅಥವಾ ನಕಲಿ ಪಾಸ್ ಪೋರ್ಟ್ ಗಳು ಸೇರಿದಂತೆ ಕಾನೂನು ಬಾಹಿರ ವಸ್ತುಗಳು ಇವೆ ಎಂದು ಆ ವ್ಯಕ್ತಿಯನ್ನು ಬೆದರಿಸುತ್ತಾರೆ. ಮುಂದುವರಿದು ಸೈಬರ್ ಕ್ರೈಂ ಮೂಲಕ ಈಗಾಗಲೇ ಕದ್ದಿರುವ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳಾದ ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಹಂಚಿಕೊಂಡು ವ್ಯಕ್ತಿ ತಮ್ಮನ್ನು ಬಲವಾಗಿ ನಂಬುವಂತೆ ಮಾಡುತ್ತಾರೆ.
ಮುಂದುವರಿದು, ಈ ಆರೋಪದ ಹಿನ್ನೆಲೆಯಲ್ಲಿ ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ಆವ್ಯಕ್ತಿಯನ್ನು ಹೆದರಿಸುತ್ತಾರೆ. ಈ ಪ್ರಕರಣವನ್ನು ಕೈಬಿಡಲು ವ್ಯಕ್ತಿಯ ಖಾತೆಯಿಂದ ತಕ್ಷಣ ತಮ್ಮ ಖಾತೆಗೆ ಹಣ ವರ್ಗಾಯಿಸುವಂತೆ ಬೇಡಿಕೆ ಇಡುತ್ತಾರೆ. ಹೀಗೆ ವಂಚಕನ ಜಾಲಕ್ಕೆ ಮುಗ್ಧ ಜನತೆ ಹೇಗೆ ಬಲಿಯಾಗುತ್ತಾರೆ ಎನ್ನುವ ಕುರಿತು ಈ ವಿಡಿಯೋದಲ್ಲಿ ಇಂಚಿಂಚೂ ವಿವರಿಸಲಾಗಿದೆ.
ಡಿಜಿಟಲ್ ಅರೆಸ್ಟ್ ನಿಜವೇ?
ಡಿಜಿಟಲ್ ಅರೆಸ್ಟ್ ಎನ್ನುವುದು ಆನ್ಲೈನ್ ವಂಚಕರು ನಡೆಸುವ ವಂಚನೆಯ ಮತ್ತೊಂದು ಹಾದಿ. ಡಿಜಿಟಲ್ ಅರೆಸ್ಟ್ ಎನ್ನುವ ಪ್ರಕ್ರಿಯೆ ಕಾನೂನು ವ್ಯವಸ್ಥೆಯಲ್ಲಿ ಇಲ್ಲವೇ ಇಲ್ಲ ಎನ್ನುತ್ತದೆ ಪೊಲೀಸ್ ಇಲಾಖೆ.
ಇದಕ್ಕೆ ನಾವೇನು ಮಾಡಬೇಕು?
ಇಂತಹ ಕರೆಗಳ ಮೂಲಕ ಯಾರಿಗಾದರೂ ಬೆದರಿಕೆಗಳು ಬಂದಲ್ಲಿ, ಹೆದರದೆ, ಧೈರ್ಯದಿಂದ “ಬೇಕಿದ್ದರೆ ನಾವೇ ಪೊಲೀಸ್ ಠಾಣೆಗೆ ಬರುತ್ತೇವೆ” ಎಂದು ತಿಳಿಸಬೇಕು. ಆದರೆ ಯಾವುದೇ ಕಾರಣಕ್ಕೂ ಅಪರಿಚಿತರಿಗೆ ಹಣ ವರ್ಗಾಯಿಸಬಾರದು. ಹೀಗೆ ಅನುಮಾನಾಸ್ಪದವಾದ ಕರೆಗಳು ಬಂದಲ್ಲಿ ಅಂತಹ ಸಂಖ್ಯೆಗಳನ್ನು ಬ್ಲಾಕ್ ಮಾಡಬೇಕು. ಕೂಡಲೇ 1930 ಸಹಾಯವಾಣಿಗೆ ಕರೆ ಮಾಡುವುದು ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ದಾಖಲಿಸುವಂತೆ ಪೊಲೀಸ್ ಇಲಾಖೆ ವಿಡಿಯೋ ಮೂಲಕ ತಿಳಿಸಿದೆ.