DNA ಅಧ್ಯಯನವು  ಕೊರಗರ ಕ್ಷೀಣಿಸುತ್ತಿರುವ ಜನಸಂಖ್ಯೆಯ ಬಗ್ಗೆ ಏನು ಹೇಳುತ್ತದೆ?

Most read

ಕರ್ನಾಟಕದ ಮೂಲ ನಿವಾಸಿಗಳಾದ ಕೊರಗರು ಸುಮಾರು ಕ್ರಿಸ್ತಪೂರ್ವ 30ಸಾವಿರಕ್ಕೂ ಹಿಂದಿನ ಇತಿಹಾಸವಿರುವ ಬುಡಕಟ್ಟು ಸಮುದಾಯ. ಉತ್ತರ ದ್ರಾವಿಡ ಭಾಷೆಯನ್ನು ಆಡುವ ಕೊರಗರು ಮೂಲತಃ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನಿವಾಸಿಗಳು. ಪ್ರಸ್ತುತ ಜನಗಣತಿಯ ಪ್ರಕಾರ ಕೇವಲ ಇವರು 11,000 ಜನಸಂಖ್ಯೆ ಯನ್ನು ಹೊಂದಿದ್ದು, ದಿನೇ ದಿನೇ ಜನಸಂಖ್ಯೆ ನಶಿಸುತ್ತಿದೆ. ಈ ಸಮಸ್ಯೆಯ ಮೂಲವನ್ನು ಹುಡುಕಲು ಸರಕಾರ, ಸಂಘ ಸಂಸ್ಥೆಗಳು ಸತತ ಪ್ರಯತ್ನ ಮಾಡಿದ್ದರೂ ಯಾವುದೇ ಸುಳಿವು ದೊರೆಯದಿರುವುದು ಮತ್ತು ವಿಸ್ತಾರವಾದ ಅಧ್ಯಯನ ಕೈಗೊಳ್ಳದೆ ಇರುವುದನ್ನು ಕಾಣಬಹುದು.

ಮಂಗಳೂರು ವಿಶ್ವ ವಿದ್ಯಾನಿಲಯದ DNA ಅಧ್ಯಯನವು ಕೊರಗರ ಪಿತೃ ವಂಶ ವಾಹಿನಿಯು ಸುಮಾರು 30,000ಕ್ಕೂ ಹಿಂದಿನದು ಮತ್ತು ಮಾತೃ ವಂಶ ವಾಹಿನಿಯು ಸುಮಾರು 16,000 ವರ್ಷಕ್ಕೂ ಹಿಂದಿನದ್ದು ಎಂದು ದೃಢ ಪಡಿಸಿದೆ. ಹಾಗೂ ಈ ಅಧ್ಯಯನವು ಕೊರಗರು ಈ ಜಿಲ್ಲೆಯ ಮೂಲ ನಿವಾಸಿಗಳು ಎಂಬ ವಿಷಯವನ್ನು ಇನ್ನಷ್ಟು ಪುಷ್ಟೀಕರಿಸಿದೆ. ಅದಾಗಿಯೂ ಕೂಡ ದಿನೇ ದಿನೇ ಸಮುದಾಯದ ಜನ ಮರಣಿಸುತ್ತಿರುವ  ವಾಸ್ತವ ಸಮುದಾಯಕ್ಕೆ ಆತಂಕವನ್ನು ತಂದೊಡ್ಡಿದೆ. ಮೇಲ್ನೋಟಕ್ಕೆ ಇದು ಅವರೊಳಗಿನ ಆರೋಗ್ಯದ ಸಮಸ್ಯೆಯಾಗಿ ಕಂಡರೂ ಇದರ ಹಿಂದೆ ದೊಡ್ಡದಾದ ಸಾಮಾಜಿಕ ರಚನಾತ್ಮಕ ಸಮಸ್ಯೆ ಇದೆ.

ಉದಾರಣೆಗೆ 21ನೇ ಶತಮಾನದಲ್ಲಿರುವ ಕೊರಗರು ಸಾಮಾಜಿಕ ಅನಿಷ್ಟ ಗಳಾದ ಅಜಲು ಮತ್ತು ಅಸ್ಪೃಶ್ಯತೆಯ ಸಮಸ್ಯೆಯಿಂದಾಗಿ ಸಾಮಾಜಿಕ ಜೀವನದಿಂದ ಪ್ರತ್ಯೇಕಿಸಲ್ಪಟ್ಟಿರುವುದು. ಜಾಗತೀಕರಣದ ಅಭಿವೃದ್ಧಿಯ ಪ್ರಭಾವಕ್ಕೆ ತೆರೆದು ಕೊಳ್ಳದ ಕೊರಗರು ಅತ್ತ ತಮ್ಮ ಸಮುದಾಯದ ಪದ್ಧತಿಯನ್ನು ಉಳಿಸಿಕೊಳ್ಳಲೂ ಆಗದೆ ಇತ್ತ ಅಭಿವೃದ್ಧಿಯೂ ಕಾಣದೆ ಅತಂತ್ರ ಜೀವನ ಶೈಲಿ ಯನ್ನು ಹೊಂದಿದ್ದಾರೆ. ಇವರ ಈ ಜೀವನ ಶೈಲಿಯಿಂದಾಗಿ ಇವತ್ತು ಅವರ ಜನಸಂಖ್ಯೆ ಇಳಿಮುಖವಾಗಲು ಕಾರಣವಾಗಿದೆ ಎಂಬ ಅಂಶ ಈ DNA ಅಧ್ಯಯನದಿಂದ ಬೆಳಕಿಗೆ ಬಂದಿದೆ. ಅಂದರೆ ಕೊರಗರು ತಮ್ಮ ಕೂಡು ಕಟ್ಟು ಕುಟುಂಬ ಪದ್ಧತಿ ಯನ್ನು ಹೊಂದಿದ್ದಾರೆ. ತಮ್ಮ ಮದುವೆ ಸಂಬಂಧಗಳು ತಮ್ಮ ತಮ್ಮ ಸೋದರ ಮಾವನ ಮಕ್ಕಳ ಜೊತೆಗೆ ಇರುವುದರಿಂದ ಸಂಬಂಧಗಳ ಚಲನೆ ಸ್ಥಳೀಯವಾಗಿದೆ. ಇದು ಕೂಡ ಜನಸಂಖ್ಯೆ ನಶಿಸಲು ಕಾರಣವಾಗುತ್ತದೆ. ಜೊತೆಗೆ ಅಜಲು ಮತ್ತು ಅಸ್ಪೃಶ್ಯತೆಯ ಕಾರಣದಿಂದ ಕೊರಗರು ಪ್ರತ್ಯೇಕವಾಗಿ ಇರುವುದರಿಂದ ಮುಖ್ಯ ವಾಹಿನಿ ಸಮಾಜದೊಂದಿಗೆ ಯಾವುದೇ ಮದುವೆ ಸಂಬಂಧಗಳು ನಡೆಯುವುದಿಲ್ಲ. ಜೊತೆಗೆ ಸಮಾಜ ಇಂತಹ ಆಚರಣೆಗಳನ್ನು ಜೀವಂತವಿಟ್ಟು ಕೊಂಡಿದೆ. ಈ ಕಾರಣದಿಂದ ಸಮುದಾಯದ ಜನರಲ್ಲಿ ಕೀಳರಿಮೆ ಹುಟ್ಟಿ ಜೀವ ವಿಕಸನವನ್ನೇ ಕಳೆದು ಕೊಂಡಿದೆ.

ಶಾಲಾ ಶಿಕ್ಷಣ ಪಡೆದ ಹಲವಾರು ವಿದ್ಯಾವಂತ ಯುವಕ ಯುವತಿಯರು ಈ ಮೂಢನಂಬಿಕೆಗಳಿಗೆ ಬಲಿಯಾಗಿ ಗುಲಾಮಗಿರಿ ಪದ್ಧತಿಗೆ ಒಳಗಾಗಿದ್ದಾರೆ. ಅಜಲು ಅಸ್ಪೃಶ್ಯತೆ ಕೊರಗರಲ್ಲಿ ಭಯ ಮತ್ತು ಭ್ರಮೆಯನ್ನು ಹೆಚ್ಚಿಸಿ ಮಾನಸಿಕವಾಗಿ ಅವರನ್ನು ಕುಜ್ಜರನ್ನಾಗಿ ಮಾಡುತ್ತದೆ. ಜೊತೆಗೆ ಜಾಗತಿಕ ಮಾರುಕಟ್ಟೆಗೆ ತೆರೆದುಕೊಂಡು ಮದ್ಯ ಮತ್ತು ಚಟಗಳ ವ್ಯಸನಿಗಳನ್ನಾಗಿ ಮಾಡುತ್ತದೆ. ಇದರಿಂದ ಕೊರಗ ಯುವ ಜನರು ಕ್ಷಯ, ರಕ್ತ ಹೀನತೆ, ಬಂಜೆತನದಂತಹ ಸಮಸ್ಯೆಗೆ ಒಳಗಾಗುತ್ತಾರೆ. ಇದರ ಪರಿಣಾಮವಾಗಿ ಕೊರಗ ಸಂತತಿ ನಾಶವಾಗಿದೆ. ಉದಾಹರಣೆಗೆ ಇರಾ ಕೊರಗ ಗುಂಪು, ದ. ಕ. ಬಾಳೆಕುದ್ರು ಕೊರಗ ಗುಂಪು, ಉಡುಪಿ ಗುಂಪು…..ಇಂತಹ ರಚನೆಯಿಂದಾಗಿ ಕೊರಗರು ಸ್ಥಳೀಯವಾಗಿ ಜೀವನ ನಡೆಸುತ್ತಾರೆ ಆದರೆ ಜನಾಂಗೀಯ ಅಧ್ಯಯನದ ಪ್ರಕಾರ ತಮ್ಮ ತಮ್ಮ ಸಹೋದರ ಸಂಬಂಧಗಳನ್ನು ಬಿಟ್ಟು ಕೊರಗರು ಭೌಗೋಳಿಕವಾಗಿ ಅಥವಾ ಹೊರಗಿನ ಇತರ ಜಾತಿಗಳೊಂದಿಗೆ ಮದುವೆ ಸಂಬಂಧಗಳನ್ನು ಹೊಂದಿದರೆ ಜನಸಂಖ್ಯೆ ಇಳಿಕೆ ಸಮಸ್ಯೆಯು ನಿಯಂತ್ರಣಕ್ಕೆ ಬರುತ್ತದೆ ಎಂಬ ಅಭಿಪ್ರಾಯವನ್ನು DNA ಅಧ್ಯಯನ ನೀಡುತ್ತದೆ.

ಡಾ. ಸಬಿತಾ ಕೊರಗ

ಮಂಗಳೂರು ವಿಶ್ವ ವಿದ್ಯಾನಿಲಯ

More articles

Latest article