Sunday, September 8, 2024

SCSP/TSP ‘7C’ ಸೆಕ್ಷನ್ ಏನು ಹೇಳುತ್ತದೆ?

Most read

SCSP/TSP ಯೋಜನೆಯ ಪರಿಶಿಷ್ಟರ 14,282 ಕೋಟಿ ಹಣವನ್ನು 5 ಗ್ಯಾರಂಟಿಗಳಿಗಾಗಿ ಬಳಸಿಕೊಂಡಿರುವುದನ್ನು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳೂ ಸೇರಿದಂತೆ, ದಲಿತ ಸಮಾಜಕ್ಕೆ ಸೇರಿದ ಸಚಿವರಾದ ಹೆಚ್.ಸಿ.ಮಹದೇವಪ್ಪ ಹಾಗೂ ಪ್ರಿಯಾಂಕ್ ಖರ್ಗೆಯವರು ಸಮರ್ಥಿಸಿ ಕೊಂಡಿದ್ದಾರೆ. ಇವರು ಸಮರ್ಥಿಸಿಕೊಳ್ಳಲು SCSP/TSP ಕಾಯ್ದೆಯ 7C ಸೆಕ್ಷನ್ ಅನ್ನೇ ಬಳಸಿ ಕೊಂಡಿದ್ದಾರೆ. ಈ ಸೆಕ್ಷನ್ ಮೂಲಕ SCSP/TSP ಮೀಸಲು ಹಣವನ್ನು ಇತರೆ ಯೋಜನೆಗಳ SC ಮತ್ತು ST ಫಲಾನುಭವಿಗಳಿಗೆ ಬಳಸಿ ಕೊಳ್ಳಬಹುದಾಗಿದೆ ಎಂಬ ಕಾರಣ  ನೀಡಿ ಸಮರ್ಥಿಸಿ ಕೊಂಡಿದ್ದಾರೆ. ಹಾಗಾದರೆ ಇವರು ಹೇಳುತ್ತಿರುವುದು ಸರಿಯೇ? ಬನ್ನಿ ಕಾಯ್ದೆಯ 7C ಸೆಕ್ಷನ್ ಏನು ಹೇಳುತ್ತದೆ ನೋಡೋಣ.

7(C): for general social sector schemes, that is education, health, women and child, labour, physically handicapped included in the Sub-Plans, benefiting the Scheduled Castes or Scheduled Tribes individuals or the Scheduled Castes or Scheduled Tribes households, along with others, the scheme cost shall be allocated and accounted for under Scheduled Castes Sub-Plan or Tribal Sub-Plan, in proportion to the Scheduled Castes or Scheduled Tribes population;

ಈ ಸೆಕ್ಷನ್ ಅಲ್ಲಿ ಬಹಳ ಸ್ಪಷ್ಟವಾಗಿ ಹೇಳಿರುವಂತೆ, ಸಾಮಾನ್ಯ ಸಾಮಾಜಿಕ ಯೋಜನೆಗಳಾದ ಶಿಕ್ಷಣ, ಆರೋಗ್ಯ, ಮಹಿಳೆ ಮತ್ತು ಮಕ್ಕಳು, ಕೂಲಿ ಕಾರ್ಮಿಕರು ಹಾಗೂ ವಿಶೇಷ ಚೇತನರಿಗೆ ಸಂಬಂಧಿಸಿದ ಅನುಕೂಲಗಳಿಗೆ ಮಾತ್ರ SCSP/TSP ಹಣವನ್ನು ಬಳಸಿ ಕೊಳ್ಳಬಹುದು. ಅದೂ ಸಹ SC ಮತ್ತು ST ಗಳ ಜನಸಂಖ್ಯೆಗೆ ಅನುಗುಣವಾಗಿ.

ಕಾಂಗ್ರೆಸ್ ಸರ್ಕಾರದ ಸಮರ್ಥಕರು ಹೇಳುತ್ತಿರುವುದನ್ನೇ ಒಪ್ಪಿಕೊಂಡರೂ ಸಹ ದಲಿತರಿಗೆ ಮೋಸವಾಗಿದೆ. 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ, ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆ ಬಿಟ್ಟರೆ ಉಳಿದ 2 ಗ್ಯಾರಂಟಿಗಳಾದ ಗೃಹಜ್ಯೋತಿ, ಯುವನಿಧಿ ಯೋಜನೆಗಳು 7C ವ್ಯಾಪ್ತಿಗೆ ಬರುವುದಿಲ್ಲ. ಸಮಾಜ ಕಲ್ಯಾಣ ಸಚಿವರು ಹೇಳಿರುವಂತೆ ಒಟ್ಟು ಗ್ಯಾರಂಟಿಗಳಿಗೆ ಮೀಸಲಿಟ್ಟಿರುವ ಹಣ 52,009 ಕೋಟಿಯಲ್ಲಿ ಗೃಹಜ್ಯೋತಿಗೆ 9,657 ಕೋಟಿ, ಯುವನಿಧಿ 650 ಕೋಟಿಗೆ ದಲಿತರ ಹಣವನ್ನು 7C ಸೆಕ್ಷನ್ ಅಲ್ಲಿ ಬಳಸಲು ಸಾಧ್ಯವಿಲ್ಲ.

ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದರೆ 5 ಗ್ಯಾರಂಟಿಗಳು ಜನರಲ್ ಸ್ಕೀಮ್ ಕಾರ್ಯಕ್ರಮಗಳಾಗಿವೆ.  ರಾಜ್ಯ ಅಭಿವೃದ್ಧಿ ಮತ್ತು ದಲಿತರ ಅಭಿವೃದ್ಧಿಯ ನಡುವಿನ ಅಂತರವನ್ನು ಕಡಿಮೆ ಮಾಡುವ SCSP/TSP ಯ ಮೂಲ ಉದ್ದೇಶಕ್ಕೆ ಹಿನ್ನಡೆಯಾಗುತ್ತದೆ.

ಈ ವಿಚಾರ ಕಾಂಗ್ರೆಸ್ ಸರ್ಕಾರದ ನಾಯಕರಿಗೇನು ಅರ್ಥವಾಗುವುದಿಲ್ಲ ಎಂದಲ್ಲ. ಆರ್ಥಿಕ ಸಂಕಷ್ಟವನ್ನು ಸರಿದೂಗಿಸಿಕೊಳ್ಳಲು ಯಾರ ಕನಸನ್ನು ಬಲಿ ಪಡೆಯಬಹುದು ಎಂಬುದು ಅವರಿಗೂ ತಿಳಿದಿದೆ. ಯಾರ ಸಹವಾಸಕ್ಕೆ ಹೋದರೆ ಸರ್ಕಾರ ಅಲುಗಾಡುತ್ತದೆ ಎಂಬುದೂ ತಿಳಿದಿದೆ. ಹಾಗಾಗಿ Taken for granted ಗಳಾದ ದಲಿತರು ಬಲಿಯಾಗುತ್ತಾರೆ.

ಹಾಗಾಗಿ ಕುವೆಂಪುರವರ ಕವಿತೆಯನ್ನು ಈ ಕೆಳಗಿನಂತೆ ಬದಲಿಸಿ ಕೊಳ್ಳಬಹುದಾಗಿದೆ.

ಬಲಪಂಥೀಯರದೋ ಗಾಂಧಿವಾದಿಗಳದೋ ಯಾರಾದರೇನು?

ಸಾಮ್ರಾಜ್ಯವಾವಗಂ ಸುಲಿಗೆ ದಲಿತರಿಗೆ

ಕಾಂಗ್ರೆಸ್ಸೋ? ಜೆಡಿಎಸ್ಸೋ? ಬಿಜೆಪಿಯೋ?

ಎಲ್ಲರೂ ಜಿಗಣೆಗಳೆ ನಮ್ಮ ನೆತ್ತರಿಗೆ!

ಕತ್ತಿ ಕೋಮುವಾದಿಗಳದಾದರೆ ಮಾತ್ರ ನೋವೆ?

ಸಮಾಜವಾದಿಗಳು ಹದಹಾಕಿ ತಿವಿದರದು ಹೂವೆ?

ಸಾಕ್ಯ ಸಮಗಾರ

More articles

Latest article