ಬೆಂಗಳೂರು: ಪ್ರಜ್ವಲ್ ಮತ್ತು ರೇವಣ್ಣರ ಇದೇ ರೀತಿಯ ಲೈಂಗಿಕ ಹಗರಣವೊಂದು ಇಂಗ್ಲೆಂಡ್ ನಲ್ಲೂ ನಡೆದಿತ್ತು ಎಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಶಿವರಾಮೇಗೌಡ ಹೇಳಿರುವ ಪ್ರಕರಣ, 30 ವರ್ಷಗಳ ಹಿಂದೆ ತಮ್ಮ ಗಮನಕ್ಕೂ ಬಂದಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಪ್ರಜ್ವಲ್ ಹಾಗೂ ರೇವಣ್ಣರ ಲೈಂಗಿಕ ಹಗರಣಗಳ ಪಟ್ಟಿಗೆ ದಿನೇ ದಿನೇ ಹೊಸ ಪ್ರಕರಣಗಳು ಸೇರುತ್ತಿವ ಹೊತ್ತಿನಲ್ಲಿ ಶಿವರಾಮೇಗೌಡರ ಹೇಳಿಕೆ ಬಿಸಿ ಚರ್ಚೆಗೆ ವೇದಿಕೆ ಒದಗಿಸಿದೆ.
ಈ ಪ್ರಕರಣದ ಕುರಿತು ನಾನೂ ಕೇಳಿದ್ದೇನೆ. ಇಂತಹ ಹಗರಣ ಹೊರಬೀಳುತ್ತಿದ್ದಂತೆ ಆಗ ಪ್ರಧಾನಮಂತ್ರಿಯ ಮಗನನ್ನು ಆತನ ವಸ್ತುಗಳ ಸಮೇತ ತಂಗಿದ್ದ ಹೊಟೇಲ್ ನಿಂದ ಖಾಲಿ ಮಾಡಿಸಿ ಬಿಟ್ಟರು ಎಂದು ನನಗೂ ಆಗ ಯಾರೋ ಕರೆ ಮಾಡಿ ಹೇಳಿದ್ದರು ಎಂದಿದ್ದಾರೆ.
ಮೇ 7 ರ ಬಳಿಕ ತನಿಖೆ ಎಲ್ಲಿಗೆ ಹೋಗುತ್ತೆ ಎಂದು ಕೇಳಿದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ ಅವರು, ಅಲ್ಲಿಯವರೆಗೆ ಸಮಯ ಯಾಕೆ ವ್ಯರ್ಥ ಮಾಡಬೇಕು. ಅಲ್ಲಿಯವರೆಗೆ ಯಾಕೆ ಕಾಯಬೇಕು ಎಂದು ಪ್ರಶ್ನಿಸಿ, ಇದರ ಬಗ್ಗೆ ನಾವು ಬಹಿರಂಗ ಮಾಡೋದೇನಿಲ್ಲ. ಈ ಹಗರಣದ ಯಾರದು, ಎಲ್ಲಿಯದು, ಇದರ ಮೂಲ ಯಾವುದು, ಏನು ಎನ್ನುವ ಎಲ್ಲ ಮಾಹಿತಿಯನ್ನು ಮಾಧ್ಯಮದವರು ಈಗಾಗಲೇ ಬರೆದಿದ್ದಾರಲ್ಲ. ಇದೆಲ್ಲವೂ ಆಂತರಿಕ ವಿಷಯ.
ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹೇಳಿದವರು ನಾವು. ಕುಮಾರಸ್ವಾಮಿಯವರು ಯಾಕೆ ನಿಲುವು ಬದಲಾವಣೆ ಮಾಡಿದ್ದಾರೆ? ಅವರ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ ಎಂದು ಯಾಕೆ ಹೇಳಿದ್ದಾರೆ. ಟಿಕೆಟ್ ಕೊಡಬೇಡಿ ಎಂದು ಹೇಳಿದ್ದರು. ತಪ್ಪಾಯಿತು ಕ್ಷಮಿಸಿ ಎಂದು ಹೇಳಿದ್ದರು. ಇದು ಕುಟುಂಬದ ಆಂತರಿಕ ವಿಷಯ ಎಂದು ಕುಮಾರಸ್ವಾಮಿಯವರನ್ನು ಕುಟುಕಿದ್ದಾರೆ.
ಒಕ್ಕಲಿಗ ನಾಯಕತ್ವಕ್ಕಾಗಿ ಫೈಟ್ ವಿಚಾರವಾಗಿ ಮಾತನಾಡಿ, ನನಗೆ ಒಕ್ಕಲಿಗ ನಾಯಕತ್ವ ಬೇಡ. ಬಿಜೆಪಿಯವರು ಅದನ್ನ ಏನೇನೂ ಕ್ರಿಯೇಟ್ ಮಾಡ್ತಾ ಇದ್ದಾರೆ. ಕಾಂಗ್ರೆಸ್ ನಾಯಕನಾಗಿ ಪಕ್ಷ ಆಯ್ಕೆ ಮಾಡಿದೆ. ಬಿಜೆಪಿಯವರು ಗಂಟೆಗೊಂದು ಘಳಿಗೆಗೊಂದು ಮಾತಾಡುತ್ತಾರೆ. ದಳದವರು ಮಾತಾಡುತ್ತಿದ್ದಾರೆ. ಒಕ್ಕಲಿಗ ನಾಯಕ ಎಂದು ಹೇಳಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿದ್ದೇನೆ, ಆ ಸಮಾಜಕ್ಕೆ ಗೌರವ, ರಕ್ಷಣೆ ಕೊಡಬೇಕು. ಜನ ನನ್ನಿಂದ ಅಪೇಕ್ಷೆ ಪಡುತ್ತಾರೆ. ಖಂಡಿತ ಸಮಾಜದ ಸೇವೆ ಮಾಡಿ ಸ್ವಾಭಿಮಾನ ಉಳಿಸುವ ಕೆಲಸ ಮಾಡ್ತೇನೆ. ಅದು ನನ್ನ ಕರ್ತವ್ಯ ಎಂದರು.