ನವದೆಹಲಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಎದುರಿಸುತ್ತಿರುವ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ನಿವಾಸದಲ್ಲೇ ಕಾರ್ಯ ನಿರ್ವಹಿಸುತ್ತಿರುವುದಾಗಿ ಭಾರತ ಕುಸ್ತಿ ಫೆಡರೇಷನ್‌ನ (ಡಬ್ಲೂಎಫ್‌ಐ) ತಿಳಿಸಿದೆ. ಬ್ರಿಜ್‌ಭೂಷಣ್ ಶರಣ್ ಸಿಂಗ್ ಬಳಸುತ್ತಿದ್ದ ನಿವಾಸದಲ್ಲಿ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದ್ದು, ಮುಂದಿನ ತಿಂಗಳು ಹೊಸ ಕಚೇರಿಗೆ ಸ್ಥಳಾಂತರಗೊಂಡು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಡಬ್ಲ್ಯುಎಫ್‌ಐ ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಸಣ್ಣ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಸ್ಥಳವನ್ನು ಹುಡುಕುತ್ತಿದ್ದೆವು. ಆದರೆ, ಭಾರತ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಸ್ಥಾನದಿಂದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ಸರ್ಕಾರ ಅಮಾನತುಗೊಳಿಸಿದ್ದರಿಂದ ಕಚೇರಿ ಸ್ಥಳಾಂತರ ಪ್ರಕ್ರಿಯೆ ವಿಳಂಬವಾಯಿತು ಎಂದು ಡಬ್ಲ್ಯುಎಫ್‌ಐ ಮೂಲಗಳು ತಿಳಿಸಿವೆ. ಬಸಂತ್ ಪಂಚಮಿಯಂದು ನಾವು ಹೊಸ ಕಚೇರಿಗೆ ಹೋಗುತ್ತೇವೆ. ಬ್ರಿಜ್‌ಭೂಷಣ್ ಅವರನ್ನು ಅಮಾನತುಗೊಳಿಸಿರುವುದರಿಂದ ಉಂಟಾಗಿದ್ದ ಗೊಂದಲಗಳು ನಿವಾರಣೆಯಾಗಿವೆ. ಇನ್ನು ಮುಂದೆ ನಾವು ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇವೆ ಎಂದೂ ಡಬ್ಲ್ಯುಎಫ್‌ಐ ತಿಳಿಸಿದೆ.
ಮಹಿಳಾ ಕುಸ್ತಿಪಟುಗಳ ಮೇಲೆ ಬ್ರಿಜ್‌ಭೂಷಣ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ದೇಶದ ಪ್ರಮುಖ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಸೇರಿದಂತೆ ಅನೇಕ ಕ್ರೀಡಾಪಟುಗಳು ಪ್ರತಿಭಟನೆ ನಡೆಸಿದ್ದರು. ಪ್ರಕರಣದ ತನಿಖೆಗಾಗಿ ಬಾಕ್ಸರ್ ಮೇರಿ ಕೋಮ್ ನೇತೃತ್ವದಲ್ಲಿ 2023ರ ಜನವರಿ 23ರಂದು ಸಮಿತಿ ರಚಿಸಲಾಗಿತ್ತು. ಸದ್ಯ ಇದೇ ಸಮಿತಿಯು ಡಬ್ಲ್ಯುಎಫ್‌ಐನ ದೈನಂದಿನ ವ್ಯವಹಾರ ನೋಡಿಕೊಳ್ಳುತ್ತಿದೆ.