ಬಿಜೆಪಿ ಪಾದಯಾತ್ರೆಯ ಒಂದೊಂದು ದಿನವೂ ಅವರ ಒಂದೊಂದು ಹಗರಣ ಬಯಲು ಮಾಡುತ್ತೇವೆ: ಡಿಸಿಎಂ ಡಿಕೆ ಶಿವಕುಮಾರ್

Most read

ಮುಡಾ ಹಗರಣವನ್ನು ಬಿಟ್ಟು ಬಿಡದೇ ಪ್ರಸ್ತಾಪ ಮಾಡಿ ರಾಜ್ಯ ಸರ್ಕಾರವನ್ನು ನಿದ್ದೆಗೆಡಿಸುವಂತೆ ಮಾಡಿದ ಬಿಜೆಪಿಗೆ ಈಗ ನಿಜ ಸಂಕಷ್ಟ ಶುರುವಾಗಿದೆ. ಬಿಜೆಪಿ ಅವಧಿಯಲ್ಲಿ ಆದ ಅಷ್ಟು ಹಗರಣವನ್ನು ಬಯಲಿಗೆಳೆದು ತನಿಖೆ ಮಾಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಬಿಜೆಪಿ ಪಾದಯಾತ್ರೆಯ ಒಂದೊಂದು ದಿನವೂ ಅವರ ಒಂದೊಂದು ಹಗರಣ ಬಯಲು ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ಜತೆ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಶಿವಕುಮಾರ್ ಅವರು, “ಬಿಜೆಪಿಯವರು ಪಾದಯಾತ್ರೆ ಮಾಡುವ ಮೂಲಕ ಅವರ ಅಕ್ರಮಗಳನ್ನು ಬಯಲು ಮಾಡಲು ನಮಗೆ ಸದಾವಕಾಶವನ್ನು ಒದಗಿಸಿಕೊಟ್ಟಿದ್ದಾರೆ. ಅವರು ಪಾದಯಾತ್ರೆ ಮಾಡುವಾಗ ಒಂದೊಂದು ದಿನವೂ ಅವರ ಅಕ್ರಮಗಳನ್ನು ನಾವು ಬಯಲು ಮಾಡುತ್ತೇವೆ. ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಪ್ರಸ್ತಾಪಿಸಿರುವ ಹಗರಣಗಳನ್ನು ನಿತ್ಯ ಒಂದರಂತೆ ಬಯಲು ಮಾಡುತ್ತೇವೆ” ಎಂದು ತಿಳಿಸಿದರು.

“ಬಿಜೆಪಿಯವರು ಪಾದಯಾತ್ರೆ ಹೋರಾಟ ಮಾಡುವ ಮುನ್ನ, ಅವರ ಕಾಲದಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಮೊದಲು ಉತ್ತರ ನೀಡಲಿ. ಅವರ ಕಾಲದ ಅಕ್ರಮಗಳಲ್ಲಿ ಸಿಎಂ ಆಗಿದ್ದ ಬೊಮ್ಮಾಯಿ ಅವರು ಭಾಗಿಯಾಗಿದ್ದಾರೋ, ಮಂತ್ರಿಗಳು ಭಾಗಿಯಾಗಿದ್ದರೋ, ಅಧಿಕಾರಿಗಳು ಭಾಗಿಯಾಗಿದ್ದಾರೋ ಎಂದು ಉತ್ತರ ನೀಡಲಿ. ಈಗಲೂ ಬಿಜೆಪಿಯವರು ಈ ಅಕ್ರಮಗಳ ಬಗ್ಗೆ ಚರ್ಚೆ ಮಾಡಲು ಯಾವುದೇ ಮಾಧ್ಯಮಗಳಲ್ಲಿ ಅಥವಾ ಸಾರ್ವಜನಿಕ ವೇದಿಕೆಗಳಲ್ಲಿ ಬಹಿರಂಗ ಚರ್ಚೆಗೆ ಬರಲಿ. ಕುಮಾರಸ್ವಾಮಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಆರ್ ಅಶೋಕ್ ಯಾರಾದರೂ ಚರ್ಚೆಗೆ ಬರಲಿ ನಾನು ಚರ್ಚೆ ಮಾಡಲು ಸಿದ್ಧನಿದ್ದೇನೆ” ಎಂದು ಸವಾಲೆಸೆದರು.

More articles

Latest article