ಬೆಂಗಳೂರು : ಸಂವಿಧಾನದ ಬಗ್ಗೆ ಕಾಳಜಿ ಇಟ್ಟುಕೊಂಡು ಕೆಲಸ ಮಾಡುವ ಸರ್ಕಾರ ಕೇಂದ್ರದಲ್ಲಿಲ್ಲ. ಸಂವಿಧಾನದ ಯಾವುದೇ ತಿದ್ದುಪಡಿ ಮಾಡುವುದು ಕೇಂದ್ರ ಸರ್ಕಾರ. ಆದ್ದರಿಂದ ಕೇಂದ್ರ ಸರ್ಕಾರದಿಂದ ಸಂವಿಧಾನವನ್ನು ಉಳಿಸಬೇಕಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ್ ಖರ್ಗೆ ಹೇಳಿದರು.
ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಬದಲಾವಣೆ ಮಾಡಬೇಕು ಅಂತ ಸಾಕಷ್ಟು ಜನರು ಪ್ರಯತ್ನಿಸುತ್ತಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿದರೆ ಮಾತ್ರ ದೇಶದಲ್ಲಿ ಐಕ್ಯತೆ ಉಳಿಯುತ್ತದೆ. ಆದ್ದರಿಂದ ಸಂವಿಧಾನಕ್ಕೆ ದಕ್ಕೆ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದರು.
ತೆರಿಗೆ ಕಟ್ಟುವವರಿಗೆ, ಹೆಚ್ಚಿನ ಭೂಮಿ ಇರುವವರಿಗೆ, ಸರ್ಕಾರಿ ನೌಕರಿಯಲ್ಲಿರುವವರಿಗೆ ಮಾತ್ರ ಮತ ಹಾಕುವ ಹಕ್ಕು ಇದ್ದಿದ್ದನ್ನು, ಬಾಬಾಸಾಹೇಬ್ ಎಲ್ಲರಿಗೂ ಮತದಾನದ ಹಕ್ಕನ್ನು ಸಂವಿಧಾನದ ಮೂಲಕ ಕೊಡಿಸಿದರು ಮತ್ತು ಬಾಬಾಸಾಹೇಬ್ ಅಂಬೇಡ್ಕರ್, ನೆಹರೂ ಎಲ್ಲರು ಸೇರಿ ಯಾವುದೇ ಬೇದಭಾವವಿಲ್ಲದೆ ಹೆಣ್ಣುಮಕ್ಕಳಿಗೆ ಸಮಾನ ಹಕ್ಕನ್ನು ಕೊಡಿಸಿದ್ದಾರೆ ಎಂದರು.
ಬರುವ ಚುನಾವಣೆಯಲ್ಲಿ ಜನರು ಎಚ್ಚೆತ್ತುಕೊಳ್ಳದಿದಾರೆ, ದೇಶದಲ್ಲಿ ಮುಂದೆ ಸರ್ವಾಧಿಕಾರ ಆಡಳಿತ ಬರುವುದು ಖಚಿತ. ಈಗಾಗಲೇ ಅನೇಕ ದೇಶಗಳಲ್ಲಿ ಸರ್ವಾಧಿಕಾರ ಬಂದಿದೆ ಎಂದು ಹೇಳಿದರು.
ಸಂವಿಧಾನವನ್ನು ರಕ್ಷಣೆ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಾರೆ. ಆದರೆ ಸಂವಿಧಾನಕ್ಕೆ ವಿರುದ್ಧವಾಗಿ ಇಡಿ, ಐಟಿಗಳನ್ನು ಸಂವಿಧಾನಕ್ಕೆ ವಿರುದ್ದವಾಗಿ ಪ್ರಯೋಗಿಸುತ್ತಿದ್ದಾರೆ ಎಂದರು. ರಾಜ್ಯಗಳಲ್ಲಿ ಬಹುಸಂಖ್ಯಾತವಾಗಿ ಬೇರೆ ಪಕ್ಷ ಅಧಿಕಾರಕ್ಕೆ ಬಂದರೆ ಇಡಿ ಯನ್ನು ಪ್ರಯೋಗ ಮಾಡಿ ಎಂಎಲ್‌ಎ ಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತಿದ್ದಾರೆ. ಈ ರೀತಿಯ ಪ್ರಯೋಗ, ಕರ್ನಾಟಕದಲ್ಲಿ, ಮಣಿಪುರದಲ್ಲಿ, ಗೋವಾದಲ್ಲಿ, ಉತ್ತರಖಂಡದಲ್ಲಿ ಆಗಿರುವುದನ್ನು ಗಮನಿಸಬೇಕು ಎಂದರು.
ವೇದಿಕೆಯಲ್ಲಿಯೇ ಸೂರಪುರ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.