ಬಿಜೆಪಿ-ಜೆಡಿಎಸ್ ನವರು ಸೇರಿ ಷಡ್ಯಂತ್ರ ರೂಪಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಬೀದಿ- ಬೀದಿಗಳಲ್ಲಿ ಮೋದಿ ಪ್ರಚಾರ ಮಾಡಿದ್ದರು. ಅವರಿಗೆ ದೊಡ್ಡ ಮುಖಭಂಗ ಆಯಿತು. ಮೋದಿ ಹೋದ ಕಡೆ ಬಿಜೆಪಿ ಸೋಲಬೇಕಾಯಿತು. ನಮ್ಮ ಸರ್ಕಾರ ರಾಜ್ಯದ ಹಿತ ಕಾಯುವ ಕೆಲಸ ಮಾಡುತ್ತಿದ್ದೇವೆ, ತೆರಿಗೆ ವಿಚಾರದಲ್ಲಿ ದೇಶದ ಗಮನ ಸೆಳೆಯುವ ಹೋರಾಟ ಮಾಡಿದ್ದೇವೆ. ದೆಹಲಿಯಲ್ಲಿ ಇಡೀ ಸಂಪುಟ ಹೋಗಿ ಪ್ರತಿಭಟನೆ ಮಾಡಿತ್ತು. ಈಗ ಸಿದ್ದರಾಮಯ್ಯ ಅವರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಈ ರಾಜ್ಯಪಾಲ ರಾಜ್ಯ ಬಿಟ್ಟು ಹೋಗುವ ಬಗ್ಗೆ ಹೋರಾಟ ರೂಪಿಸುತ್ತೇವೆ. ನಾವು ಉಪ್ಪು ತಿಂದಿಲ್ಲ, ನೀರೂ ಕುಡಿಯಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬರಗಾಲದ ನ್ಯಾಯಯುತ ಪರಿಹಾರ ನೀಡುವಂತೆ ಕೇಂದ್ರಕ್ಕೆ ಹೋಗಿ ಮನವಿ ಮಾಡಲಾಗಿತ್ತು. ಕಾನೂನು ಹೋರಾಟ ಮಾಡಿ, ಸುಪ್ರೀಂ ಕೋರ್ಟ್ ಗೆ ದಾವೆ ಹಾಕಿ, ನಮ್ಮ ಹಕ್ಕನ್ನ ಪಡೆಯಲಾಯಿತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಾವೆ ಹೂಡಿ, ನಮ್ಮ ಪಾಲನ್ನ ಪಡೆದೆವು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚಸ್ಸು ಕುಗ್ಗಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಸಿದ್ದರಾಮಯ್ಯನವರ ಗಟ್ಟಿಯಾದ ಧ್ವನಿ ಕುಗ್ಗಿಸುವ ಷಡ್ಯಂತ್ರ ಮಾಡಿದ್ದಾರೆ. ಪ್ರಹ್ಲಾದ್ ಜೋಷಿ, ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರ ಎಲ್ಲಾ ಸೇರಿ ಈ ಕುತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಜಯೇಂದ್ರ ಭ್ರಷ್ಟಾಚಾರದಲ್ಲಿ ಪಿ.ಹೆಚ್.ಡಿ ಮಾಡಿದ್ದಾರೆ. ಕುಮಾರಸ್ವಾಮಿ ಬ್ಲಾಕ್ ಮೇಲರ್, ಇವರದ್ದು ದುಷ್ಟ ಕೂಟ. ಕಾನೂನು ಬಾಹಿರ, ಸಂವಿಧಾನ ಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಪ್ರಶ್ನೆ ಮಾಡಲು ಯಾವ ನೈತಿಕತೆ ಇದೆ ಇವರಿಗೆ? ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ಅವರು 0.000001 ರಷ್ಟು ತಪ್ಪು ಮಾಡಿಲ್ಲ. ಕಾನೂನು ಬಾಹಿರ ಎಂದು ಒಂದು ಡಾಕುಮೆಂಟ್ ತೋರಲಿ ಎಂದು ಸವಾಲು ಹಾಕಿದ್ದಾರೆ.
ಈ ಪ್ರಕರಣದ ಮೂಲಕ ರಾಜ್ಯದಲ್ಲಿ ಕೆಟ್ಟ ವಾತಾವರಣ ನಿರ್ಮಾಣ ಮಾಡುತ್ತಿರುವವರು, ಘನತೆ ಇಲ್ಲದ ರಾಜ್ಯಪಾಲರು. ಕುಮಾರಸ್ವಾಮಿದು ತಪ್ಪಿದೆ. ಅವರ ವಿಚಾರಣೆ ಮಾಡಬೇಕು ಎಂದು ಲೋಕಾಯುಕ್ತ ರಿಪೋರ್ಟ್ ನೀಡಿ ಮನವಿ ಮಾಡಿ, 10 ತಿಂಗಳಾಗಿವೆ. ಈ ಅರ್ಜಿ ತೀರ್ಮಾನ ಮಾಡದೇ ಸಿದ್ದರಾಮಯ್ಯ ವಿರುದ್ಧದ ಅರ್ಜಿಗೆ ಅನುಮತಿ ನೀಡಿದ್ದಾರೆ. ಇಂತಹ ನೀಚ ಮಟ್ಟದ ಕೆಲಸ ಮಾಡ್ತಿರುವ ರಾಜ್ಯಪಾಲರನ್ನ ಏನೆಂದು ಕರೆಯಬೇಕು? ಬಿಜೆಪಿ ಏಜೆಂಟ್, 420, ಮೋಸಗಾರ, ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅಪರೂಪದ ರಾಜಕಾರಣಿ, ಬಡ ಜನರ ಧ್ವನಿಯಾಗಿದ್ದಾರೆ. ಯಡಿಯೂರಪ್ಪ, ಕುಮಾರಸ್ವಾಮಿ ಯಾಕ್ರೀ ಬೇಕು ನಿಮಗೆ? ಕುಮಾರಸ್ವಾಮಿ ಮಂತ್ರಿ ಆಗಿದ್ದೀರಿ, ಕೀಳು ಮಟ್ಟದ ರಾಜಕೀಯ ಮಾಡಬೇಡಿ. ಭಷ್ಮಾಸುರನಿಗೆ ಆದ ಗತಿ ತಮಗೂ ಆಗುತ್ತದೆ. ತಮ್ಮ ತಂದೆ ಕಾಂಗ್ರೆಸ್ ಪಕ್ಷ ಮುಗಿಸಲು ಹೋದ್ರು, ಮನೆಗೆ ಬಂದರು. ಕೀಳು ಮಟ್ಟದ ರಾಜಕೀಯ ಮಾಡಿದ್ರೆ, ಜನ ಉಗಿತಾರೆ, ಶಕುನಿಯ ಕೆಲಸ ಬಿಟ್ಟು ಬಿಡಿ.ಭ್ರಷ್ಟಾಚಾರ ವಿಜಯೇಂದ್ರ ಎರಡೂ ಒಂದೇ. ವಿಜಯೇಂದ್ರ ಬಗ್ಗೆ ಎಷ್ಟು ಬೇಕಾದರೂ ಹೇಳಬಹುದು, ಅವರ ಬಗ್ಗೆ ಅವರ ಪಕ್ಷದ ನಾಯಕರೇ ಮಾತಾಡ್ತಾರೆ ಎಂದಿದ್ದಾರೆ.