ಬೆಂಗಳೂರು: ಬಿಸಿಲಿನ ಬೇಗೆಯಿಂದ ಕರ್ನಾಟಕ ತತ್ತರಿಸುತ್ತಿದ್ದು, ಹಲವು ಪ್ರಮುಖ ನಗರಗಳಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದೆ.
ಬೆಂಗಳೂರಿನಲ್ಲಿ ಕಳೆದ ಎಂಟು ವರ್ಷಗಳಲ್ಲಿ ಅತಿಹೆಚ್ಚಿನ ತಾಪಮಾನ ಶನಿವಾರ ದಾಖಲಾಗಿದ್ದು, 37.6 ಡಿಗ್ರಿ ದಾಖಲಾಗಿದೆ. ಇದು ಕಳೆದ ಹದಿನೈದು ವರ್ಷಗಳಲ್ಲಿ ದಾಖಲಾದ ಮೂರನೇ ಅತಿಹೆಚ್ಚಿನ ಪ್ರಮಾಣದ ತಾಪಮಾನವಾಗಿದೆ.
ಐಎಂಡಿ ನೀಡಿರುವ ಮಾಹಿತಿ ಪ್ರಕಾರ ಏ.18ರವರೆಗೆ ಮಳೆ ಬರುವ ಸಂಭವವಿಲ್ಲ. ಏಪ್ರಿಲ್ 13 ಮತ್ತು 14ರಂದು ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆ ಬೆಂಗಳೂರಿನಲ್ಲಿ ಬೀಳುವ ಸಾಧ್ಯತೆ ಇದ್ದು, ಏಪ್ರಿಲ್ ಎರಡನೇ ವಾರದ ನಂತರವಷ್ಟೇ ಗುಡುಗು ಸಹಿತ ಮಳೆಯ ನಿರೀಕ್ಷೆ ಮಾಡಬಹುದಾಗಿದೆ.
ಮಂಗಳವಾರ, ಯುಗಾದಿ ಹಬ್ಬದಂದು ಬೆಂಗಳೂರಿನ ಒಂದೆರಡು ಪ್ರದೇಶದಲ್ಲಿ ತುಂತುರು ಮಳೆ ಬೀಳುವ ಸಂಭವವಿದ್ದರೂ ಮಳೆಗಾಗಿ ಬೆಂಗಳೂರಿಗರು ಏಪ್ರಿಲ್ ಎರಡನೇ ವಾರ ಮುಗಿಯುವವರೆಗೆ ಕಾಯಬೇಕು.
ಬೇಸಿಗೆ ಬಿಸಿಲಿನಲ್ಲಿ ರಾಜ್ಯದ ಬಹುತೇಕ ಎಲ್ಲ ಪ್ರಮುಖ ನಗರಗಳು ತತ್ತರಿಸಿದ್ದು ಇಂದು ಕಲ್ಬುರ್ಗಿಯಲ್ಲಿ 40.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಗದಗ 38.6, ಚಿತ್ರದುರ್ಗ 37.6, ಬೆಳಗಾವಿ 38, ಕಾರವಾರ 36, ಮಂಗಳೂರು 32, ಬೆಂಗಳೂರು 36, ಹೊನ್ನಾವರ 32.4ರಷ್ಟು ತಾಪಮಾನ ಕಂಡಿವೆ.