ಮಣಿಪುರದಲ್ಲಿ ಶಾಂತಿ ನೆಲೆಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ : ಪ್ರಧಾನಿ ಮೋದಿ

Most read

ಮಣಿಪುರದ ಹಿಂಸಚಾರದ ವಿಷಯವಾಗಿ ಪ್ರತಿಪಕ್ಷಗಳ ಟೀಕೆಗೆ ಪದೇ ಪದೇ ಒಳಗಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಡೆಗೂ ಬುಧವಾರ ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ. ಹೌದು, ಮಣಿಪುರದಲ್ಲಿ ಶಾಂತಿ ನೆಲೆಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ, ಎಲ್ಲರೂ ಸಹಕರಿಸುವಂತೆ ಕೇಳಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಮೋದಿ, ರಾಜ್ಯದಲ್ಲಿ ವರ್ಷವಿಡೀ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಸರ್ಕಾರ ನಿರಂತರವಾಗಿ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

ಮಣಿಪುರದಲ್ಲಿ 1,100 ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು 500 ಜನರನ್ನು ಬಂಧಿಸಲಾಗಿದೆ. ಹಿಂಸಾಚಾರದ ಘಟನೆಗಳು ಕಡಿಮೆಯಾಗುತ್ತಿವೆ ಎಂಬುದನ್ನು ನಾವು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಮೋದಿ ಒತ್ತಾಯಿಸಿದ್ದಾರೆ.

ಜೊತೆಗೆ ರಾಜ್ಯದಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿಗಳು ಪರೀಕ್ಷೆ ಬರೆದು ತಮ್ಮ ಪ್ರಗತಿ ಪಯಣವನ್ನು ಮುಂದುವರೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಣಿಪುರವು ಮೇ 2023 ರಿಂದ ಜನಾಂಗೀಯ ಘರ್ಷಣೆಯಲ್ಲಿದೆ. ಹಿಂಸಾಚಾರವು ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಎರಡು ಪ್ರಬಲ ಸಮುದಾಯಗಳಾದ ಕುಕಿ ಮತ್ತು ಮೈತೇಯಿ ನಡುವಿನ ಜನಾಂಗೀಯ ಕಲಹದಿಂದಾಗಿ ರಾಜ್ಯವು ಹತ್ತಿ ಉರಿಯುತ್ತಿದೆ.

ಮಂಗಳವಾರ ಲೋಕಸಭೆಯಲ್ಲಿ ಪ್ರಧಾನಿ ಎರಡು ಗಂಟೆಗಳ ಕಾಲ ನಡೆದ ಭಾಷಣದಲ್ಲಿ, ಮಣಿಪುರದ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಲಿಲ್ಲ. ಇದರಿಂದಾಗಿ ಪ್ರತಿಪಕ್ಷದ ನಾಯಕರಿಂದ “ಮಣಿಪುರಕ್ಕೆ ನ್ಯಾಯ” ಎಂಬ ಘೋಷಣೆಗಳು ಕೂಗಿ ಮೋದಿ ಅವರ ಭಾಷಣಕ್ಕೆ ಅಡ್ಡಿಪಡಿಸಲಾಯಿತು. ಇದರ ಬೆನ್ನಲ್ಲೇ ಇಂದು ಮಣಿಪುರ ವಿಷಯ ಪ್ರಸ್ತಾಪಿಸಿದ್ದಾರೆ.

More articles

Latest article