ವಯನಾಡ್‌ನ ಹಳ್ಳಿಗಳಲ್ಲಿ ಭೂಕುಸಿತದಿಂದ ಬದುಕುಳಿದ ಜನರು ಜುಲೈ 30 ರ ರಾತ್ರಿ ತಮಗಾದ ಆಘಾತಕಾರಿ ಅನುಭವದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಹೆಚ್ಚು ಹಾನಿಗೊಳಗಾದ ಹಳ್ಳಿಗಳಲ್ಲಿ ಒಂದಾದ ಚೂರಲ್‌ಮಲಾದಿಂದ ಬಂದ ಉಬೈದ್ ತಮ್ಮ ದುಃಖದ ಅನುಭವವನ್ನು ಹಂಚಿಕೊಂಡಿದ್ದಾರೆ.
ಜುಲೈ 30 ರಂದು ಜ್ವರದಿಂದ ಬಳಲುತ್ತಿರುವ ತನ್ನ ಇಬ್ಬರು ಮಕ್ಕಳಿಗೆ ಚಿಕಿತ್ಸೆ ನೀಡಲು ಮಧ್ಯರಾತ್ರಿಯಲ್ಲಿ ಎಚ್ಚರಗೊಂಡಾಗ ಇದ್ದಕ್ಕಿದ್ದಂತೆ ಮನೆಗೆ ನೀರು ನುಗ್ಗಿದೆ. ಉಬೈದ್ ಬಲವಾದ ಪ್ರವಾಹಕ್ಕೆ ಕೊಚ್ಚಿಹೋಗಿ ಸುಮಾರು ಒಂದೂವರೆ ಕಿಲೋಮೀಟರ್ ಜಮೀನಿನಲ್ಲಿ ಗಾಯಗೊಂಡು ಬಿದ್ದಿದ್ದನು. ಅದೇ ಜಮೀನಿನ ಬಳಿ ಅವರ ಪತ್ನಿಯೂ ಪತ್ತೆಯಾಗಿದ್ದಾರೆ.
ಘಟನೆಯಲ್ಲಿ ಉಬೈದ್ ತನ್ನ ಅತ್ತೆ ಮತ್ತು ಮಗುವನ್ನು ಕಳೆದುಕೊಂಡಿದ್ದಾನೆ. ಆದರೆ, ಮನೆಯೊಳಗೆ ನೀರು ನುಗ್ಗಿದ್ದರಿಂದ ಅವರ 11 ವರ್ಷದ ಮಗಳು ಸೀಲಿಂಗ್ ಫ್ಯಾನ್ ಹಿಡಿದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ರಾತ್ರಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ಆಕೆ ಕೆಳಗೆ ಇಳಿದಿದ್ದು, ನಂತರ ನೆರೆಹೊರೆಯವರು ರಕ್ಷಿಸಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಅಧಿಕಾರಿಗಳ ಪ್ರಕಾರ, ಜುಲೈ 30 ರಂದು ವಯನಾಡಿನ ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 226ಕ್ಕೆ ಏರಿದೆ. ಭಾರೀ ಭೂಕುಸಿತದ ನಂತರ 138 ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ಬಿಡುಗಡೆ ಮಾಡಿದ ಆರಂಭಿಕ ಅಂಕಿಅಂಶಗಳು ತಿಳಿಸಿವೆ.