ಬೆಂಗಳೂರು: ಆರ್ಥಿಕ ಮುಗ್ಗಟ್ಟಿನಲ್ಲಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರಿನ ದರ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ದರ ಏರಿಕೆಗೆ ಬೆಂಬಲ ನೀಡುವಂತೆ ನಗರ ವ್ಯಾಪ್ತಿಯ ಎಲ್ಲಾ 27 ಮಂದಿ ಶಾಸಕರಿಗೆ ಜಲ ಮಂಡಳಿ ಮನವಿ ಮಾಡಿದೆ. ಎಲ್ಲ ಶಾಸಕರಿಗೆ ಜಲಮಂಡಳಿಯ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಪತ್ರ ಬರೆದಿದ್ದಾರೆ. ಮುಂಬರುವ ವಿಧಾನಸಭೆ ಅಧಿವೇಶನಕ್ಕೆ ಮುಂಚಿತವಾಗಿ ಜಲ ಮಂಡಳಿಯ ಆರ್ಥಿಕ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಶಾಸಕರ ಗಮನ ಸೆಳೆಯುವುದು ಅವರ ಉದ್ದೇಶ ಎನ್ನಲಾಗಿದೆ.
ಈ ಹಿಂದೆ 2014 ರ ನವೆಂಬರ್ನಲ್ಲಿ ನೀರಿನ ದರ ಪರಿಷ್ಕರಣೆ ಮಾಡಲಾಗಿತ್ತು. ಅಲ್ಲೀಂದೀಚೆಗೆ ಹತ್ತು ವರ್ಷಳ ಕಾಲ ದರ ಪರಿಷ್ಕರಣೆ ಮಾಡಿಲ್ಲ. ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿಯ ಜವಬ್ಧಾರಿ ಹೊಂದಿರುವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಜಲ ಮಂಡಳಿ ಸಭೆ ನಡೆಯಲಿದೆ. ಆದ್ದರಿಂದ ದರ ಏರಿಕೆ ಪ್ರಸ್ತಾಪ ಬೆಂಬಲಿಸಬೇಕು ಎಂದು ಶಾಸಕರಿಗೆ ಪತ್ರದಲ್ಲಿ ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿ ಕೊಂಡಿದ್ದಾರೆ. ಎಷ್ಟು ಪ್ರಮಾಣದಲ್ಲಿ ದರ ಏರಿಕೆ ಮಾಡಬೇಕು, ಯಾವಾಗಿನಿಂದ ಜಾರಿಗೆ ತರಬೇಕು ಎಂಬ ನಿರ್ಧಾರ ಮಾಡಿಲ್ಲ.
ಸರ್ಕಾರದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಕಳೆದ ಒಂದು ದಶಕದಲ್ಲಿ ವಿದ್ಯುತ್ ಬಿಲ್ ಸೇರಿದಂತೆ ಇತರ ಅಗತ್ಯ ಸೇವೆ, ಸೌಕರ್ಯಗಳಿಗಾಗಿ ವೆಚ್ಚದಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದೆ. ವಿದ್ಯುತ್ ಬಿಲ್ ವೆಚ್ಚದಲ್ಲಿ ಶೇಕಡಾ 107.3 ರಷ್ಟು ಹೆಚ್ಚಳವಾಗಿದ್ದರೆ ನಿರ್ವಹಣೆ ವೆಚ್ಚ ಶೇ 122.5ರಷ್ಟು ಮತ್ತು ವೇತನ ಮತ್ತು ಪಿಂಚಣಿ ಶೇ. 61.3ರಷ್ಟು ಹೆಚ್ಚಿದೆ ಎಂದು ಎಂದು ಮಂಡಳಿ ಮೂಲಗಳು ತಿಳಿಸಿವೆ. ಜಲ ಮಂಡಳಿಯ ಮಾಸಿಕ ವೆಚ್ಚ 170 ಕೋಟಿ ರೂ. ದಾಟಿದ್ದರೆ ನೀರಿನ ಬಿಲ್ ನಿಂದ ಬರುವ ಆದಾಯ ಕೇವಲ 129 ಕೋಟಿ ರೂ ಮಾತ್ರ. ಉಳಿದ 41 ಕೋಟಿ ರೂ . ಸರಿದೂಗಿಸುವುದು ಮಂಡಳಿಗೆ ಕಷ್ಟವಾಗುತ್ತಿದೆ. ನೀರಿನ ದರ ಪರಿಷ್ಕರಣೆ ಮಾಡದಿದ್ದರೆ ಮುಂದಿನ ಐದು ವರ್ಷಗಳಲ್ಲಿ 4,860 ಕೋಟಿ ರೂ. ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಮನೋಹರ್ ತಿಳಿಸಿದ್ದಾರೆ. ಆದರೆ, ಎಷ್ಟು ಪ್ರಮಾಣದಲ್ಲಿ ದರ ಹೆಚ್ಚಳ ಮಾಡಬೇಕು ಎಂಬುದನ್ನು ಪತ್ರದಲ್ಲಿ ಅವರು ನಮೂದಿಸಿಲ್ಲ. ಮುಂದಿನ ದಿನಗಳಲ್ಲಿ ಈ ವಿಷಯದ ಕುರಿತು ಚರ್ಚೆಯಾಗುವ ನಿರೀಕ್ಷೆ ಇದೆ.