ವಾಷಿಂಗ್ಟನ್‌ನಲ್ಲಿ ವಿಮಾನ ಅಪಘಾತ: 18 ಮೃತ ದೇಹಗಳು ಪತ್ತೆ

Most read

ವಾಷಿಂಗ್ಟನ್: ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಾದೇಶಿಕ ಪ್ರಯಾಣಿಕ ಜೆಟ್ ಮತ್ತು ಹೆಲಿಕಾಪ್ಟರ್ ನಡುವೆ ಡಿಕ್ಕಿ ಸಂಭವಿಸಿದ್ದು, ಕನಿಷ್ಠ 18 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.. 64 ಜನರನ್ನು ಹೊತ್ತೊಯ್ಯುತ್ತಿದ್ದ ವಾಣಿಜ್ಯ ವಿಮಾನವೊಂದು ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ವಾಷಿಂಗ್ಟನ್‌ ನಗರದ ಹೊರವಲಯದ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪೊಟೊಮ್ಯಾಕ್ ನದಿಯಲ್ಲಿ ಪತನವಾಗಿತ್ತು. ಬುಧವಾರ ಸಂಜೆ ಲ್ಯಾಂಡಿಂಗ್ ವೇಳೆ ಈ ದುರ್ಘಟನೆ ಸಂಭವಿಸಿದೆ.

ಈ ದುರಂತದಲ್ಲಿ ಹಲವು ಮಂದಿ ಮೃತಪಟ್ಟಿರುವ ಸಾಧ್ಯತೆಗಳಿವೆ. ಒಬ್ಬ ವ್ಯಕ್ತಿ ಮೃತಪಟ್ಟಾಗ ಅದು ದುರಂತ, ಆದರೆ, ಹಲವರು ಮೃತಪಟ್ಟಾಗ, ಅದು ಅಸಹನೀಯ ದುಃಖವಾಗಿದೆ ಎಂದು ಕಾನ್ಸಾಸ್‌ನ ಅಧಿಕಾರಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಪತನಗೊಂಡಿರುವ ಅಮೆರಿಕ ಏರ್‌ಲೈನ್ಸ್ ವಿಮಾನವು ಬುಧವಾರ ಸಂಜೆ ಕಾನ್ಸಾಸ್‌ನ ವಿಚಿತಾದಿಂದ ಹೊರಟಿತ್ತು ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ತಿಳಿಸಿದೆ. ಸುಮಾರು 300 ಮಂದಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿದ್ದಾರೆ. ಹಲವರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಎಂದು ವಾಷಿಂಗ್ಟನ್‌ನ ಅಗ್ನಿಶಾಮಕ ಮತ್ತು ತುರ್ತು ವೈದ್ಯಕೀಯ ಸೇವೆಗಳ ವಿಭಾಗದ ಮುಖ್ಯಸ್ಥ ಜಾನ್ ಡೊನ್ನೆಲ್ಲಿ ತಿಳಿಸಿದ್ದಾರೆ. ಜೆಟ್ ವಿಮಾನದಲ್ಲಿ 60 ಮಂದಿ ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು ಎಂದು ಅಮೆರಿಕನ್ ಏರ್‌ಲೈನ್ಸ್ ಖಚಿತಪಡಿಸಿದೆ. ಅಮೆರಿಕ ಸೇನೆಯ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ನಲ್ಲಿ ಮೂವರು ಸೇನಾ ಸಿಬ್ಬಂದಿ ಇದ್ದರು ಎನ್ನಲಾಗಿದೆ.

More articles

Latest article